Advertisement

ಜಲಿಯನ್ ವಾಲಾಬಾಗ್ ಎಲ್ಲರಿಗೂ ತಲುಪಲೆಂದೇ ಈ ಸಿನಿಮಾ ಮಾಡಿದ್ದು : ಸೂಜಿತ್ ಸರ್ಕಾರ್

10:47 AM Nov 24, 2021 | Team Udayavani |

ಪಣಜಿ, ನ. 24: ಸರ್ದಾರ್ ಉಧಮ್ ಸಿಂಗ್ ಚಿತ್ರ ಮಾಡಿರುವುದು ಪ್ರತಿಯೊಬ್ಬರೂ ಚಿತ್ರದ ನಂತರವೂ ತಮ್ಮೊಂದಿಗೆ ಜಲಿಯನ್ ವಾಲಾ ಬಾಗ್ ನ್ನು ಕೊಂಡೊಯ್ಯಲೆಂದೇ ಎಂದು ಹೇಳಿದವರು ಆ ಚಿತ್ರದ ನಿರ್ದೇಶಕ ಸೂಜಿತ್ ಸರ್ಕಾರ್.

Advertisement

52 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾಗವಾದ ಮಾಸ್ಟರ್ ಕ್ಲಾಸಸ್ ನಲ್ಲಿ ಪಾಲ್ಗೊಂಡ ಸೂಜಿತ್, ಜಲಿಯನ್ ವಾಲಾ ಬಾಗ್ ನ ಆಘಾತ ಎಲ್ಲರಿಗೂ ತಟ್ಟಬೇಕು ಎಂಬುದು ನನ್ನ ಇರಾದೆ ಎಂಬ ಇಂಗಿತ ವ್ಯಕ್ತಪಡಿಸಿದರು.

ಹಲವಾರು ಮಂದಿಯ ಪ್ರಶ್ನೆಗಳಿಗೆ ಉತ್ತರಿಸುತ್ತ ಮತ್ತು ತಮ್ಮ ಸಿನಿಮಾದ ಒಟ್ಟೂ ಅನುಭವವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಿಕೊಟ್ಟ ಸೂಜಿತ್, ‘ನನಗೆ ಈ ಚಿತ್ರ ಮಾಡುವ ಮೊದಲು ಹೀಗೇ ಮೂಡಿ ಬರಬೇಕು, ಕಲಾವಿದರು ಹೀಗೇ ಅಭಿನಯಿಸಬೇಕು ಎಂದೆಲ್ಲಾ ಲೆಕ್ಕಾಚಾರ ಇಟ್ಟುಕೊಂಡಿದ್ದೆ. ಆದರೆ ಅವೆಲ್ಲವನ್ನೂ ಕಲಾವಿದರಿಗೆ ಯಥಾವತ್ತಾಗಿ ವರ್ಗಾಯಿಸಿರಲಿಲ್ಲ: ಸ್ಥೂಲ ಪರಿಕಲ್ಪನೆಯನ್ನು ಕೊಟ್ಟಿದ್ದೆ ಅಷ್ಟೇ. ಅದರ ಪರಿಣಾಮ ಚಿತ್ರದಲ್ಲಿ ಬಂದಿದೆ’ ಎಂದು ವಿವರಿಸಿದರು.

‘ಸರ್ದಾರ್ ಉಧಮ್ ಒಬ್ಬ ಅಂತರ್ಮುಖಿ ವ್ಯಕ್ತಿತ್ವದವನು. ಅದನ್ನು ಅತ್ಯಂತ ಪ್ರಭಾವಶಾಲಿಯಾಗಿ ಕಟ್ಟಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸಂಗೀತವನ್ನೂ ಪೂರಕವಾಗಿ ಸಂಯೋಜಿಸಿ ಅವನೊಳಗಿನ ಮೌನಕ್ಕೆ ಸಾಥ‍್ ಕೊಟ್ಟಿದ್ದೇವೆ’’ಎಂಬುದು ಪ್ರಶ್ನೆಯೊಂದಕ್ಕೆ ನೀಡಿದ ಸೂಜಿತ್ ರ ವಿವರಣೆಯಾಗಿತ್ತು.

ನಾವು ಸಿನಿಮಾ ಮಾಡುವುದು ಆಲೋಚನೆ ಮತ್ತು ಸಿದ್ಧಾಂತಗಳ ನೆಲೆಯಲ್ಲಿ. ಪುರಸ್ಕಾರ, ಬಹುಮಾನಗಳಿಗೇ ಅಲ್ಲ. ಪ್ರೇಕ್ಷಕರು ಹೆಚ್ಚೆಚ್ಚು ಸಂಖ್ಯೆಯಲ್ಲಿ ನೋಡಬೇಕು ಎಂಬುದು ನಮ್ಮೆಲ್ಲರ ಒತ್ತಾಸೆ ಎನ್ನಲು ಮರೆಯಲಿಲ್ಲ ಸೂಜಿತ್.

Advertisement

‘ಉಧಮ್ ನ ಪಾತ್ರ ನಿರ್ವಹಿಸುವಾಗ ವಿಕ್ಕಿ ಕೌಶಲ್ ಸಾಕಷ್ಟು ಗೊಂದಲದಲ್ಲಿದ್ದರು. ಆ ಗೊಂದಲವೇ ಇಡೀ ಪಾತ್ರ ಸಾವಯವದ ರೀತಿಯಲ್ಲಿ (ಆರ್ಗ್ಯಾನಿಕ್) ಮೂಡಿ ಬರಲು ಕಾರಣವಾಯಿತು. ಇಡೀ ಚಿತ್ರ ಚಿತ್ರೀಕರಿಸುವಾಗ ಅಸಾಧ್ಯವೆನಿಸುವಂಥ ಮಾನಸಿಕ ಒತ್ತಡ ಎಲ್ಲರ ಮೇಲಿತ್ತು’ ಎಂದು ಹೇಳಿದ ಸೂಜಿತ್, ‘ಸರಿಯಾದುದನ್ನು ಸರಿಯಾಗಿದೆ ಎನ್ನುವುದೂ ಸಹ ಹೀರೋಯಿಸಂ’ ಎಂದು ಅಭಿಪ್ರಾಯಪಟ್ಟರು. ಸರ್ದಾರ್ ಉಧಮ್ ಸಿಂಗ್ ನ ನಿರ್ಮಾಪಕರಾದ ರೋನ್ನಿ ಲಹಿರಿ ಸಹ ತಮ್ಮ ಅನುಭವವನ್ನು ಹಂಚಿಕೊಂಡರು. ಸೂಜಿತ್ ಸರ್ಕಾರ್ ಈ ಹಿಂದೆ ‘ಪೀಕು’, ‘ವಿಕ್ಕಿ ಡೋನರ್’ ‘ಕೋಹಿ ಜಿಂದಾ ಹೈ’ ಇತ್ಯಾದಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next