ಮಂಡ್ಯ: ಕಾವೇರಿ ಜಲಾನಯನ ಪ್ರಾಂತ್ಯದ ಕೆಆರ್‌ಎಸ್ ಹಾಗೂ ಹೇಮಾವತಿ ಜಲಾಶಯದ ಎಲ್ಲಾ ನಾಲೆಗಳಿಗೆ ನೀರು ಹರಿಸಿ ಬೆಳೆದು ನಿಂತ ಬೆಳೆಗಳ ರಕ್ಷಣೆ ಮಾಡುವಂತೆ ರೈತಸಂಘದ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಈ ಮಧ್ಯೆ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ. ಕೆಆರ್‌ಎಸ್‌ನಲ್ಲಿರುವ ನೀರು ಕುಡಿಯುವ ನೀರಿಗಷ್ಟೇ ಮೀಸಲಿಡಲಾಗಿದೆ ಎಂದು ಜಿಲ್ಲಾಡಳಿತ ದೃಢವಾಗಿಹೇಳಿದೆ. ನೀರಿಗಾಗಿ ಜಿಲ್ಲಾಡಳಿತ ಹಾಗೂ ರೈತರ ನಡುವಿನ ಕದನ ದಿನೇ ದಿನೆ ಕಾವೇರುತ್ತಿದೆ.
ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಸ್ಥಳದಲ್ಲೇ ಅಡುಗೆ ತಯಾರಿಸಿ, ಊಟ ಮಾಡಿ ಅಲ್ಲೇ ಮಲಗುವ ಮೂಲಕ ಧರಣಿಯನ್ನು ಮುಂದುವರಿಸಿದ್ದಾರೆ. ರೈತರು ನೀರಿನ ಬೇಡಿಕೆಯೊಂದಿಗೆ ಧರಣಿ ನಡೆಸುತ್ತಿರುವ ವಿಚಾರವನ್ನು ಈಗಾಗಲೇ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸರ್ಕಾರ ಮತ್ತು ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ನೀರು ಬಿಡುಗಡೆ ಸಾಧ್ಯವಿಲ್ಲವೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದು, ನಾಲೆಗಳಿಗೆ ನೀರು ಹರಿಸುವವರೆಗೂ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲವೆಂದು ರೈತರು ದೃಢ ನಿರ್ಧಾರ ಮಾಡಿದ್ದಾರೆ.
ಪ್ರತಿಭಟನೆ ನೇತೃತ್ವ ವಹಿಸಿರುವ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಈಗಾಗಲೇ ಕಾವೇರಿ ಜಲಾನಯನ ವ್ಯಾಪ್ತಿಯ ರಾಜ್ಯದ ಪಾಲಿನ ನೀರನ್ನು ಬಿಡುಗಡೆ ಮಾಡಲಾಗಿದೆ. ಹಾಲಿ ಬೆಳೆದು ನಿಂತಿರುವ ಬೆಳೆಗಳಿಗೆ ಹೆಚ್ಚುವರಿ ನೀರಿನ ಅಗತ್ಯತೆ ಇರುವುದರಿಂದ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಏನೂ ಮಾಡಲಾಗದ ಸ್ಥಿತಿಯಲ್ಲಿದೆ. ಜೂ.25ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ರಾಜ್ಯದ ಪರವಾಗಿ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ರೈತರ ಸಂಕಷ್ಟವನ್ನು ಪ್ರಾಧಿಕಾರದ ಮುಂದೆ ಇಟ್ಟು ನೀರು ಬಿಡಿಸುವ ಬಗ್ಗೆ ಆಸಕ್ತಿ ವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪ್ರಾಧಿಕಾರದ ಸಭೆ ನಡೆದು ನಾಲೆಗಳಲ್ಲಿ ನೀರು ಹರಿಸುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಒತ್ತಡ ಹೇರಿದ್ದರೂ ಅದನ್ನು ನಿರಾಕರಿಸಲಾಗಿದೆ. ನೀರು ಬಿಡುವವರೆಗೂ ಹೋರಾಟ ಮುಂದುವರೆಯುವುದು ನಿಶ್ಚಿತ ಎಂದು ಸ್ಪಷ್ಪಪಡಿಸಿದರು.
ಡಾ.ರವೀಂದ್ರ, ಸಿದ್ದರಾಮಯ್ಯ ಬೆಂಬಲ: ರೈತರ ಅಹೋರಾತ್ರಿ ಧರಣಿಗೆ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ರವೀಂದ್ರ ಹಾಗೂ ಜಿಲ್ಲಾ ಬಿಜೆಪಿ ಮುಖಂಡ ಡಾ. ಸಿದ್ದರಾಮಯ್ಯ ಅವರು ಮೂರನೇ ದಿನದ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಡಾ. ಸಿದ್ದರಾಮಯ್ಯ ಅವರು, ಇದು ಜಿಲ್ಲೆಯ ರೈತರ ಜೀವನ್ಮರಣದ ಪ್ರಶ್ನೆಯಾಗಿದೆ. ಜಿಲ್ಲೆಯಲ್ಲಿ 60 ಲಕ್ಷ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದು ನಿಂತಿದೆ. ತಕ್ಷಣ ನೀರು ಒದಗಿಸದಿದ್ದಲ್ಲಿ ಒಣಗುವ ಸಾಧ್ಯತೆ ಇದೆ. ಈಗಾಗಲೇ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಬೆಳೆಗಳಿಗೆ ನೀರು ಒದಗಿಸದಿದ್ದಲ್ಲಿ ಕಬ್ಬು ಒಣಗಿ ಭಾರೀ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ತಕ್ಷಣವೇ ನಾಲೆಗಳಲ್ಲಿ ನೀರು ಹರಿಸುವ ಮೂಲಕ ರೈತರನ್ನು ಉಳಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ರೈತರ ಸಾಮೂಹಿಕ ಆತ್ಮಹತ್ಯೆಗಳು ನಡೆಯುವ ಸಂಭವವಿದೆ ಎಂದು ಎಚ್ಚರಿಸಿದರು.
ಡಾ. ರವೀಂದ್ರ ಅವರು ಮಾತನಾಡಿ, ಈ ಹಿಂದೆ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಚಳವಳಿಗಳು ನಡೆದಾಗ ತಕ್ಷಣ ಎಚ್ಚೆತ್ತುಕೊಳ್ಳುತ್ತಿದ್ದ ಸರ್ಕಾರಗಳು ನಾಲೆಗಳಲ್ಲಿ ನೀರು ಹರಿಸುವ ಮೂಲಕ ರೈತರ ನೆರವಿಗೆ ಧಾವಿಸುತ್ತಿದ್ದವು. ಆದರೆ, ರಾಜ್ಯದ ಮೈತ್ರಿ ಸರ್ಕಾರ ಈಬಗ್ಗೆ ಯಾವುದೇ ನಿಲುವನ್ನು ತಾಳದೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಜಿಲ್ಲೆಯ ಜೀವನಾಡಿಯಾಗಿರುವ ಮೈಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಗಳನ್ನು ಪ್ರಾರಂಭಿಸುವ ಕೆಲಸ ಶೀಘ್ರ ಆಗಬೇಕಿದೆ ಎಂದರು. ಶಂಭೂನಹಳ್ಳಿ ಸುರೇಶ್, ಲಿಂಗಪ್ಪಾಜಿ, ರಾಮಕೃಷ್ಣಯ್ಯ, ವಿಜಯಕುಮಾರ್, ಅಶೋಕ, ನಾಗರಾಜು, ಲತಾ ಶಂಕರ್ ಮತ್ತಿತರರಿದ್ದರು.