ವಾಡಿ: ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಎಸಿಸಿ ಕಾರ್ಮಿಕ ಸಂಘ (ಎಐಟಿಯುಸಿ) ಸಂಪೂರ್ಣ ವಿಫಲವಾಗಿದ್ದು, ಸಂಘದ ಚುನಾಯಿತ ಪದಾಧಿಕಾರಿಗಳ ವಿರುದ್ಧ ಹೋರಾಟ ರೂಪಿಸಲಾಗುತ್ತಿದೆ ಎಂದು ಕಾರ್ಮಿಕ ಶಿಕ್ಷಕ ಪಿ.ಕ್ರಿಸ್ಟೋಫರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಮಿಕರ ಹಿತ ಕಾಯಬೇಕಾದ ಯೂನಿಯನ್ ಪದಾಧಿಕಾರಿಗಳು, ಕಂಪನಿ ಆಡಳಿತದೊಂದಿಗೆ ಸೇರಿಕೊಂಡು ಕಾರ್ಮಿಕರ ಹಕ್ಕುಗಳನ್ನು ಸಮಾಧಿ ಮಾಡಿದ್ದಾರೆ. ಸಂಘದ ಪದಾಧಿ ಧಿಕಾರಿಗಳನ್ನು ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿರುವ ಎಸಿಸಿ ಆಡಳಿತ, ನಮ್ಮ ಹಲವು ಬೇಡಿಕೆಗಳನ್ನು ಕಡೆಗಣಿಸುತ್ತಿದೆ.
ಎಸಿಸಿ ಕಂಪನಿ ಮುಖ್ಯಸ್ಥರು ಹಾಗೂ ಎಸಿಸಿ ಯೂನಿಯನ್ ಪದಾಧಿಕಾರಿಗಳು ಒಂದುಗೂಡಿ ಕಾರ್ಮಿಕರನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದರು. ಕಂಪನಿಯಲ್ಲಿ ಸದ್ಯ ಒಟ್ಟು 680 ಕಾರ್ಮಿಕರು ದುಡಿಯುತ್ತಿದ್ದಾರೆ. ಅನೇಕ ಕಾರ್ಮಿಕರು ನಿವೃತ್ತಿ ಹಂತಕ್ಕೆ ತಲುಪಿದ್ದಾರೆ. 2018ರಲ್ಲಿ 80 ಕಾರ್ಮಿಕರು ನಿವೃತ್ತಿ ಹೊಂದಲಿದ್ದಾರೆ.
ನಿವೃತ್ತಿಯಾದ ಕಾರ್ಮಿಕನ ಸ್ಥಾನಕ್ಕೆ ಅವರ ಮಕ್ಕಳನ್ನು ನೇಮಿಸಿಕೊಳ್ಳಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆಯಾಗಿದೆ ಎಂದರು. ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ ಚುನಾಯಿತರಾದ ಸಂಘದ ಸದಸ್ಯರು, ಎರಡು ವರ್ಷದ ನಂತರ ಈಗ ಉಲ್ಟಾ ಹೊಡೆದಿದ್ದಾರೆ. ಈ ಕುರಿತು ವಿಚಾರಿಸಿದರೆ ಸಂಘದ ಅಧ್ಯಕ್ಷ ಶಿವಾಜಿ ಕೋಮಟೆ ಇನ್ನೊಬ್ಬರತ್ತ ಬೊಟ್ಟು ಮಾಡಿ ತೋರಿಸುತ್ತಾರೆ.
ಪ್ರಧಾನ ಕಾರ್ಯದರ್ಶಿ ಅನುರಾಗ ದ್ವಿವೇದಿ ದರ್ಪದಿಂದ ಮಾತನಾಡುತ್ತಾರೆ ಎಂದು ದೂರಿದರು. ಬೇಡಿಕೆ ಈಡೇರಿಸುವುದಾಗಿ ಹಲವು ಗಡುಗಳನ್ನು ಮೀರಿದ ಎಸಿಸಿ ಸಂಘ, ಕಾರ್ಮಿಕರ ಹೋರಾಟವನ್ನು ಅತ್ಯಂತ ನಿರ್ಲಕ್ಷತನದಿಂದ ಕಾಣುತ್ತಿದೆ. ಕಾರ್ಮಿಕ ನಾಯಕರಿಗೆ ಕಾರ್ಮಿಕರ ಸಂಕಟ ಅರ್ಥವಾಗುತ್ತಿಲ್ಲ.
ಕಂಪನಿಯ ಹಿತಾಸಕ್ತಿಯೇ ಇವರಿಗೆ ಮುಖ್ಯವಾಗಿದೆ. ಸಂಘಕ್ಕೆ ಮಧ್ಯಂತರ ಚುನಾವಣೆ ಘೋಷಿಸಿ, ಕಾರ್ಖಾನೆಯ ಮುಖ್ಯದ್ವಾರದ ನಾಮಫಲಕಕ್ಕೆ ನೋಟಿಸ್ ಅಂಟಿಸಿದ್ದ ಯೂನಿಯನ್, ಅದನ್ನು ತಾನೇ ಹರಿದು ಹಾಕಿದೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಮಾಡುವುದಿಲ್ಲ ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಎಂದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ,
ಸಂಘವೇ ಕೈಗೊಂಡ ತೀರ್ಮಾನದಂತೆ ಮಧ್ಯಂತರ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು. ನಿರ್ಲಕ್ಷಿಸಿದರೆ ಫೆ.13 ರಂದು ಯೂನಿಯನ್ ವಿರುದ್ಧ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಕಾರ್ಮಿಕ ಮುಖಂಡರಾದ ಬಾಬು ನಾಯಕ, ಅಂಬಣ್ಣಾ ಬಿರಾದಾರ, ಭೀಮರಾವ ಬಡಿಗೇರ ಇದ್ದರು.