Advertisement

ರಾಸಾಯನಿಕ ಕಾರ್ಖಾನೆ ವಿರುದ್ಧ ಹೋರಾಟ

11:20 AM Oct 03, 2017 | Team Udayavani |

ಹುಮನಾಬಾದ: ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಗಳನ್ನು ಬಂದ್‌ ಮಾಡುವಂತೆ ಆಗ್ರಹಿಸಿ ಅ.12ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ| ಜ್ಞಾನರಾಜ ಮಾಣಿಕಪ್ರಭುಗಳು ಹೇಳಿದರು.

Advertisement

ಮಾಣಿಕನಗರದ ಪ್ರಭು ಸಂಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅವರು, ರಾಸಾಯನಿಕ ಕಾರ್ಖಾನೆಗಳ ಮಾಲೀಕರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ಇದರಿಂದ ಸುತ್ತಲಿನ ಅನೇಕ ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಎಲ್ಲಾ ಗ್ರಾಮಸ್ಥರು ರಾಜಕೀಯ ರಹಿತವಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.

ಆನಂದರಾಜ ಪ್ರಭುಗಳು ಮಾತನಾಡಿ, ಭೂಮಿ, ಜಲ, ವಾಯುವಿಗೆ ಶಾಸ್ತ್ರದಲ್ಲಿ ಪೂಜ್ಯನೀಯ ಸ್ಥಾನ ನೀಡಲಾಗಿದೆ. ನೂರಾರು ಶರಣರು, ಸಂತರು ಓಡಾಡಿದ ಕೀರ್ತಿ ನಮ್ಮ ಭೂಮಿಗಿದೆ. ಆದರೆ ಇಂದು ಅನೇಕ ಕಾರ್ಖಾನೆಗಳ ಮಾಲಿನ್ಯದಿಂದ ಭೂಮಿಯ ಸ್ವರೂಪ ಬದಲಾಗುತ್ತಿದೆ. ಪಟ್ಟಣದಿಂದ 20ರಿಂದ 40 ಕಿ.ಮೀ. ದೂರದಲ್ಲಿರಬೇಕಿದ್ದ
ರಾಸಾಯನಿಕ ಕಾರ್ಖಾನೆಗಳು ಗ್ರಾಮ ಹಾಗೂ ಪಟ್ಟಣದ ಸಮೀಪದಲ್ಲಿವೆ. ಮಾಣಿಕನಗರದ ಸಂಗಮದಲ್ಲಿ ಪುಣ್ಯಸ್ಥಾನಕ್ಕೆ ಬರುವ ಜನರಿಗೆ ಆತಂಕ ಕಾಡುವಂತಾಗಿದೆ. ಗ್ರಾಮಸ್ಥರು ಈ ವಿಷಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಹೋರಾಟಕ್ಕೆ ಮೊದಲ ಆದ್ಯತೆ ನೀಡಿ ನಮ್ಮ ಪ್ರಾಣ ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಚೇತನರಾಜ ಪ್ರಭುಗಳು ಮಾತನಾಡಿ, ಕೊಳವೆ ಬಾವಿ ಹಾಗೂ ತೆರೆದ ಭಾವಿಗಳಲ್ಲಿನ ನೀರು ಶುದ್ಧೀಕರಿಸಿದರೂ ರಾಸಾಯನಿಕ ಮುಕ್ತವಾಗುತ್ತಿಲ್ಲ. ಬೇಕಾದರೆ ಶುದ್ದೀಕರಿಸಿದ ನೀರು ಕುದಿಸಿ ನೋಡಿ. ನೀರಿನ ಮೇಲೆ ರಾಸಾಯನಿಕ ಪದರು ಕಂಡುಬರುತ್ತಿದೆ. ಮೊದಲು ಗ್ರಾಮ ಪಂಚಾಯಿತಿ ಕಾರ್ಖಾನೆಗಳಿಗೆ ನೋಟಿಸ್‌ ನೀಡಿ, ಪರವಾನಗಿ ರದ್ದುಗೊಳಿಸಬೇಕು. ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ನಾವು ಒಂದಾಗಿ ಕಾರ್ಖಾನೆಗಳನ್ನು ಬಂದ್‌ ಮಾಡುವವ ವರೆಗೆ ಹೊರಾಟ ಮಾಡೊಣ ಎಂದರು.

ಇದೇ ವೇಳೆ ಪರಿಸರ ರಕ್ಷಣೆ ಹೋರಾಟ ಸಮಿತಿ ರಚನೆಗೆ ಎಲ್ಲಾ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು. ಸಮಿತಿಗೆ ಗೌರವಾಧ್ಯಕ್ಷರಾಗಿ ಡಾ| ಜ್ಞಾನರಾಜ ಮಾಣಿಕಪ್ರಭು, ಆನಂದರಾಜ ಪ್ರಭುಗಳು ಅಧ್ಯಕ್ಷರಾಗಿ ಎಲ್ಲಾ ಗ್ರಾಮದ ಒಬ್ಬ ಮುಖಂಡರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸತತ ವರದಿಗಳ ಮೂಲಕ ಜನ ಜಾಗೃತಿ ಮೂಡಿಸಿದ
ಉದಯವಾಣಿಗೆ ನೆರೆದ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ವಿವಿಧ ಗ್ರಾಮದ ನೂರಾರು ಜನರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next