Advertisement

ಕೋವಿಡ್‌ ವಿರುದ್ಧದ ಹೋರಾಟ ಸಹಕಾರ ಅತ್ಯಗತ್ಯ

07:38 AM Jul 18, 2020 | mahesh |

ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ ವೇಗವಾಗಿ ಏರುತ್ತಾ ಈಗ 10 ಲಕ್ಷ ದಾಟಿದೆ. 25 ಸಾವಿರಕ್ಕೂ ಅಧಿಕ ಜನ ಈ ವೈರಸ್‌ ಬಾಧೆಯಿಂದಾಗಿ ಮೃತಪಟ್ಟಿದ್ದಾರೆ. ರೋಗದೊಂದಿಗೆ ಹೋರಾಡುತ್ತಲೇ ಅದರ ಪ್ರಸರಣವನ್ನು ತಡೆಯುವ ಪ್ರಯತ್ನವೂ ನಿರಂತರ ಸಾಗಿದೆ. ಆದರೆ, ಈ ವೇಳೆಯಲ್ಲೇ ಒಟ್ಟಾರೆ ದೇಶದಲ್ಲಿ ಚೇತರಿಕೆ ಪ್ರಮಾಣ ಸುಧಾರಿಸಿದೆ ಎನ್ನುವ ಅಂಶವನ್ನೂ ಗಮನಿಸಬೇಕು.

Advertisement

ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಿರಬಹುದು. ಆದರೆ ಇದರಲ್ಲಿ 6.37 ಲಕ್ಷ ಜನ ಗುಣಮುಖರಾಗಿದ್ದಾರೆ. ಒಟ್ಟಲ್ಲಿ ಶುಕ್ರವಾರದ ವೇಳೆಗೆ ಚೇತರಿಸಿಕೊಂಡವರ ಪ್ರಮಾಣ 63 ಪ್ರತಿಶತ ತಲುಪಿದೆ. ಆದರೂ ಈಗಲೂ 3 ಲಕ್ಷಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳಿರುವುದು ಕಳವಳದ ವಿಷಯವೇ ಸರಿ.

ನೆನಪಿಡಬೇಕಾದ ಸಂಗತಿಯೆಂದರೆ ಈಗ ಭಾರತ ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿದೆ, ಅಲ್ಲದೇ, ನಿತ್ಯ ಸೋಂಕಿತರ ಪ್ರಮಾಣವೂ 30 ಸಾವಿರದ ಗಡಿ ದಾಟಿದ್ದು, ಇನ್ನೂ ಪತ್ತೆಯಾಗದ ಎಷ್ಟು ಸೋಂಕಿತರು ಇದ್ದಾರೋ ಎನ್ನುವ ಪ್ರಶ್ನೆ ಮೂಡುತ್ತಿದೆ. ಇಷ್ಟಾದರೂ ಇನ್ನೂ ದೇಶದಲ್ಲಿ ಕೋವಿಡ್‌-19 ಪೀಕ್‌ (ಉತ್ತುಂಗ) ತಲುಪಿಲ್ಲ ಎಂದೇ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ, ವೈರಾಣು ತಜ್ಞರು, ಸಾಂಕ್ರಾಮಿಕ ರೋಗ ಅಧ್ಯಯನ ಸಂಸ್ಥೆಗಳು ಹೇಳುತ್ತಿವೆ.

ಈ ಕಾರಣಕ್ಕಾಗಿಯೇ ಹಿಂದೆಂದಿಗಿಂತಲೂ ಈಗ ಕೋವಿಡ್ ವಿರುದ್ಧದ ನಮ್ಮ ಹೋರಾಟ ಬಲವಾಗಬೇಕಿದೆ. ಈ ಸಾಂಕ್ರಾಮಿಕ ಸದ್ಯಕ್ಕೆ ದೂರವಾಗುವ ಲಕ್ಷಣಗಳಿಲ್ಲ. ಹೀಗಾಗಿ, ಜನರು ಸಾಮಾಜಿಕ ಅಂತರ ಪಾಲನೆಯನ್ನು , ಸುರಕ್ಷತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

ಅದರಲ್ಲೂ ರಾಜ್ಯದಲ್ಲೀಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಶುಕ್ರವಾರದ ವೇಳೆಗೆ 51 ಸಾವಿರ ದಾಟಿದ್ದು, ಇದರಲ್ಲಿ 30 ಸಾವಿರ ಸಕ್ರಿಯ ಪ್ರಕರಣಗಳಿವೆ. ರಾಜಧಾನಿ ಬೆಂಗಳೂರಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 18 ಸಾವಿರದಷ್ಟಿವೆ. ಈ ಹಿನ್ನೆಲೆಯಲ್ಲಿಯೆ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಲಾಕ್‌ಡೌನ್‌ ಜಾರಿಗೆ ತರಲಾಗಿದೆ. ಈ ಅವಧಿಯಲ್ಲಿ ವೈದ್ಯಕೀಯ ವಲಯ, ಸರಕಾರಕ್ಕೆ ಮತ್ತಷ್ಟು ಅಗತ್ಯ ಕ್ರಮಗಳ ಜಾರಿಗೆ ಸಮಯ ಸಿಕ್ಕಂತಾಗಲಿದೆ ಅನುಕೂಲವಾಗಲಿದೆ. ರೋಗ ತಡೆಗೆ ಮುಖ್ಯವಾಗಿ ಟೆಸ್ಟಿಂಗ್‌ ಅತ್ಯಗತ್ಯ ಎನ್ನುವುದು ಈಗ ಸಾಬೀತಾಗಿದ್ದು, ರಾಜ್ಯ ಸರಕಾರ ಟೆಸ್ಟಿಂಗ್‌ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲೇಬೇಕಿದೆ.

Advertisement

ಒಟ್ಟಿನಲ್ಲಿ ಕೋವಿಡ್‌ ವಿರುದ್ಧದ ಹೋರಾಟ ಸಫ‌ಲವಾಗಬೇಕೆಂದರೆ, ಆಗಲೇ ಹೇಳಿದಂತೆ ಜನರ ಸಹಕಾರ ಅತ್ಯಗತ್ಯ. ಲಾಕ್‌ಡೌನ್‌ ಅವಧಿಯಲ್ಲೂ ಹಲವಾರು ಕಡೆಗಳಲ್ಲಿ ಜನರು ನಿಯಮ ಉಲ್ಲಂಘನೆ ಮಾಡುತ್ತಿರುವುದು ವರದಿಯಾಗುತ್ತಿದೆ. ನೆನಪಿಡಿ, ಕೊರೊನಾ ವಿರುದ್ಧದ ಹೋರಾಟ ಕೇವಲ ಆಡಳಿತ ಅಥವಾ ವೈದ್ಯಕೀಯ ವಲಯದಿಂದ ಮಾತ್ರ ಸಾಧ್ಯವಿಲ್ಲ. ಜನ ಸಹಭಾಗಿತ್ವ ಇದಕ್ಕೆ ಅತ್ಯಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next