Advertisement
ಭಾರತದ ಸಾರಿಗೆ ಇತಿಹಾಸದಲ್ಲಿ ರೈಲಿನ ನಂತರ ಅತಿ ಹೆಚ್ಚು ಜನರಿಂದ ಬಳಸಲ್ಪಡುತ್ತಿರುವ ವಾಹಿನಿಯೆಂದರೆ ಅದು ಬಸ್ಸು. ಇದು, ಮನೆಮನೆಯ ಬಾಗಿಲಿನಲ್ಲೂ ಬೈಕು, ಕಾರು, ಓಮಿನಿಗಳು ನಿಂತಿರುವ ಇಂದಿನ ಕಾಲಕ್ಕೂ ಅನ್ವಯವಾಗುವ ಸತ್ಯ. ಟಾರನ್ನೇ ಕಾಣದ ಹಳ್ಳಿಗಾಡುಗಳ ಮೂಲೆಮೂಲೆಗೂ ತಲುಪಬಲ್ಲದ್ದಾಗಿರುವುದೇ ಬಸ್ಸಿನ ಈ ಯಶಸ್ಸಿಗೆ ಕಾರಣವೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಊರಿಂದ ಹೊರಡುವ ಬಸ್ಸುಗಳದೊಂದು ಚಿತ್ರವಾದರೆ, ಊರಿಗೆ ಮರಳುವ ಬಸ್ಸುಗಳದು ಇನ್ನೊಂದು ತೆರನಾದ ಸಂಭ್ರಮ. ಅವುಗಳಿಗಾಗಿ ಕಾಯುವ ಜೀವಗಳು ಹಲವು. ಇಳಿಸಂಜೆಯ ತಂಪಿನಲ್ಲಿ ಪೋರನೊಬ್ಬ ಬಣ್ಣದ ಕಾರು ತರುತ್ತೇನೆಂದು ಮಾತು ಕೊಟ್ಟು ಪೇಟೆಗೆ ಹೋಗಿರುವ ಅಪ್ಪನ ಹಾದಿ ಕಾಯುತ್ತಿದ್ದರೆ, ಅವನ ತಾಯಿ ಅವರು ತರಲಿರುವ ಹೊಸ ಅಲ್ಯೂಮಿನಿಯಂ ಪಾತ್ರೆಗೆ ಹಾಕಲು ಮಜ್ಜಿಗೆ-ಹೆಪ್ಪನ್ನು ತಯಾರಿಟ್ಟುಕೊಂಡು ಕೂತಿದ್ದಾಳೆ. ರಿಪೇರಿಯಾಗಿ ಬರಲಿರುವ ನೀರುಣಿಸುವ ಮೋಟಾರಿಗಾಗಿ ಬಾಯಾರಿದ ತೋಟ-ಗದ್ದೆಗಳು ಕಾದಿವೆ. ಹೊಸದಾಗಿ ಮದುವೆಯಾಗಿರುವ ಹುಡುಗಿ ಪಟ್ಟಣಕ್ಕೆ ಕೆಲಸಕ್ಕೆ ಹೋಗಿರುವ ಪ್ರಿಯತಮ ತನಗಾಗಿ ತರಲಿರುವ ಮಲ್ಲಿಗೆ-ಮೈಸೂರು ಪಾಕುಗಳನ್ನೂ, ಅವುಗಳ ನಡುವಿನಿಂದ ಹಾದುಬಂದು ತನ್ನನ್ನು ತಬ್ಬಲಿರುವ ಅವನನ್ನೂ ಕಾದಿದ್ದಾಳೆ. ಈ ಎಲ್ಲ ಸಂಭ್ರಮಗಳನ್ನೂ ಹೊತ್ತು ತರುವುದು ಬಸ್ಸೇ ಎಂದು ಬೇರೆ ಹೇಳಬೇಕಿಲ್ಲವಲ್ಲಾ?
Related Articles
Advertisement
ಬಸ್ಸುಗಳ ಹೆಸರುಗಳುಬಸ್ಸು ಅದೆಷ್ಟೋ ಹಳ್ಳಿಗಳ ಮುದ್ದಿನ ಮಗ ಅಥವಾ ಮಗಳು. ಮಂದಿ ತಮ್ಮ ಮಕ್ಕಳಿಗಿಟ್ಟಷ್ಟೇ ಚಂದದ ಹೆಸರುಗಳನ್ನು ಬಸ್ಸಿಗೂ ಇಡುತ್ತಾರೆ. ಜಯರಾಮ…, ಶ್ರೀಕಂಠ, ನೀಲಕಂಠ, ಮಲ್ಲಿಕಾರ್ಜುನ, ಗಾಯತ್ರಿ, ಕೊಡಚಾದ್ರಿ, ಹನುಮಾನ್, ಗಜಾನನ, ರೋಸಿ… ಅದೇ ಹೆಸರಿನಿಂದ ಬಸ್ಸು ಊರಿನ ಜನರ ಮನೆಯ, ಮನದ ಅವಿಭಾಜ್ಯ ಅಂಗವಾಗುತ್ತದೆ. ಒಂದು ದಿನ ಬಸ್ಸು ಬಾರದಿದ್ದರೆ ಆ ದಿನವಿಡೀ ಊರು ಏನನ್ನೋ ಕಳೆದುಕೊಂಡಂತೆ ಕೊರಗುತ್ತದೆ. ಸೀನಣ್ಣನ ಕಟ್ಟಿಂಗ್ ಶಾಪಿನ ಮರದ ಬೆಂಚಿನ ಮೇಲಿರುತ್ತಿದ್ದ ತಾಜಾ ದಿನಪತ್ರಿಕೆ ಇಂದು ಕಾಣೆಯಾಗುತ್ತದೆ. ಪಕ್ಕದೂರ ಹೈಸ್ಕೂಲಿಗೆ ಹೋಗುವ ಮಕ್ಕಳೆಲ್ಲ ನಡೆದೇ ಹೊರಡುತ್ತಾರೆ. ಹೋಗುತ್ತ ಹೋಗುತ್ತ ಬಾರದ ಬಸ್ಸಿನ ದಾರಿಯನ್ನೇ ತಿರುತಿರುಗಿ ನೋಡುತ್ತಾರೆ. ಜನರು ನಿಲ್ದಾಣದೆದುರಿನ ರಸ್ತೆಯಲ್ಲಿ ನಿಂತು ಹಣೆಯೆದುರು ಕೈಯ ಚಪ್ಪರಕಟ್ಟಿ “ಬಸ್ಸು ಬಂತಾ?’ ಎಂದು ಇಣುಕುತ್ತಾರೆ. ಹುಲ್ಲೀಸರದ ಹತ್ತಿರ ಪಂಚರ್ ಆಯ್ತಂತೆ, ಹೊಳೆಮಕ್ಕಿ ಏರಲ್ಲಿ ಚರಂಡಿಗೆ ಹಾರಿತಂತೆ, ಕಂಪದಸರದ ಕೆಸರಲ್ಲಿ ಹೂತುಕೂತಿದೆಯಂತೆ, ಕೈಮರದ ತಿರ್ಕಸ್ಸಲ್ಲಿ ಮರಕ್ಕೆ ಢಿಕ್ಕಿ ಹೊಡೆಯಿತಂತೆ, ಗೂಳಿಮಕ್ಕಿಯಲ್ಲಿ ಯಾರದೋ ದನ ಅಡ್ಡ ಬಂತಂತೆ… ಹೀಗೇ ಅದು ಯಾಕೆ ಬಂದಿಲ್ಲ ಎನ್ನುವುದರ ಬಗ್ಗೆ ಇನ್ನೂ ಮುಂತಾದ ಗುಸುಗುಸು ಗಾಸಿಪ್‌ಗ್ಳು ಹರಿದಾಡುತ್ತವೆ. ತಡವಾಗಿ ಬರುವ ಬಸ್ಸುಗಳು
ಇನ್ನು ತಡವಾಗಿ ಬರುವುದು ಬಸ್ಸಿನ ಹುಟ್ಟುಗುಣಗಳಲ್ಲೊಂದು. ಎಷ್ಟೇ ಸರಿಯಾದ ಸಮಯಕ್ಕೆ ಮೊದಲ ನಿಲ್ದಾಣದಿಂದ ಹೊರಟರೂ ಅದು ಕೊನೆಯ ನಿಲ್ದಾಣ ತಲುಪುವುದು ಅರ್ಧಗಂಟೆ ತಡವಾಗಿಯೇ. ಪಾಪ, ಇದರಲ್ಲಿ ಅದರ ತಪ್ಪೇನೂ ಇಲ್ಲ. ಮಾರಿಗೆ ಒಂದರಂತಿರುವ ಪ್ರತಿಯೊಂದು ನಿಲ್ದಾಣದಲ್ಲೂ ನಿಂತು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತ ನೋಡ ನೋಡುತ್ತಲೇ ನವಮಾಸದ ತುಂಬು ಬಸುರಿಯಂತಾಗುವ ಅದು ನಿಲ್ದಾಣವೇ ಅಲ್ಲದ ಜಾಗದಲ್ಲಿ ಧುತ್ತನೆ ಪ್ರತ್ಯಕ್ಷವಾಗಿ ಕೈಚಾಚುವವರನ್ನೂ ತನ್ನೊಳಗೆ ತುಂಬಿಕೊಳ್ಳುತ್ತದೆ. ಸರಿ, ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅಗೋ ಅಲ್ಲಿ, ದೂರದ ಕಾಡಿನ ದಾರಿಯಿಂದ ಇಬ್ಬರು ಗಂಡಸರು ಈಗಷ್ಟೇ ಓಲಂಪಿಕ್ಸ್ ಮುಗಿಸಿ ಬಂದ ನುರಿತ ಓಟಗಾರರಂತೆ ಓಡಿ ಬರುತ್ತಿರುವುದು ಕಾಣುತ್ತದೆ. ಒಬ್ಬರನ್ನೊಬ್ಬರು ಮೀರಿಸುತ್ತ ಬಿರುಗಾಳಿಯಂತೆ ಧಾವಿಸಿಬರುತ್ತಿರುವ ಅವರನ್ನು ನೋಡಿ ಎರಡು ಸೀಟ್ ಹೆಚ್ಚಾಯಿತೆಂಬ ಖುಷಿಯಲ್ಲಿ ಕಂಡಕ್ಟರ್ ಸಹಾ ಸೀಟಿ ಊದಿ ಡ್ರೈವರನಿಗೆ ಕಾಯುವಂತೆ ಸೂಚನೆ ನೀಡುತ್ತಾನೆ. ಬಿಟ್ಟ ಬಾಣದಂತೆ ಓಡಿಬಂದು ಬಸ್ಸನ್ನು ಹಿಡಿದುಕೊಂಡ ಅವರು ಚಂಡಮಾರುತದಂತೆ ಏದುಸಿರು ಬಿಡುತ್ತ ಬಸ್ಸು ಹತ್ತುವವರು ತಾವಲ್ಲವೆಂದೂ, ವಯಸ್ಸಾದವರೊಬ್ಬರು ಹಿಂದೆ ಬರುತ್ತಿ¨ªಾರೆಂದೂ, ಅವರಿಗಾಗಿ ಕಾಯಬೇಕೆಂದೂ ಕೇಳಿಕೊಳ್ಳುತ್ತಾರೆ. ತಿರುಗಿ ನೋಡಿದರೆ ದೂರದಲ್ಲಿ ವಯೋವೃದ್ಧರೊಬ್ಬರು ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬರುತ್ತಿರುವುದು ಕಾಣಿಸುತ್ತದೆ. ಬಸ್ಸುಗಳಲ್ಲಿ ಮಕ್ಕಳ ಆದರ್ಶದ ವ್ಯಕ್ತಿಗಳು
“ದೊಡ್ಡವನಾದ ಮೇಲೆ ಏನಾಗ್ತಿಯ ಪುಟ್ಟೂ?’
“ಗುದುಚತ್ತೀ ಬಚ್ಚಿನ ಡ್ರೈವರ್ ಆತೀನಿ!’
ಹೀಗಂತ ಹೇಳಿ ಎದುರಿರುವವರನ್ನೆಲ್ಲ ಗೊಳ್ಳೆಂಬ ನಗೆಯಲೆಯಲ್ಲಿ ತೇಲಿಸುವ ಚಿಲ್ಟಾರಿಗಳ ಸಂಖ್ಯೆ ಅದೆಷ್ಟೋ? ನಿಜ… ಬಸ್ಸೊಂದರ ಡ್ರೈವರ್, ಕಂಡಕ್ಟರ್ ಅಥವಾ ಕ್ಲೀನರ್‌ಗಳಿಗೆ ವಿಶಿಷ್ಟ ಗೌರವವೊಂದಿದೆ. ಎಲ್ಲರಿಗಿಂತ ಹೆಚ್ಚಾಗಿ ಹಳ್ಳಿಯ ಮಕ್ಕಳ ದೃಷ್ಟಿಯಲ್ಲಿ ಅವರು ಅಘೋಷಿತ ಹೀರೋಗಳು. ಒಂದು ಕಾಲಲ್ಲಿ ಬ್ರೇಕು ಒತ್ತುತ್ತ, ಇನ್ನೊಂದರಲ್ಲಿ ಆಕ್ಸಿಲೇಟರ್ ತುಳಿಯುತ್ತ ಸರಸರನೆ ಸ್ಟೇರಿಂಗನ್ನು ಆ ಕಡೆ, ಈ ಕಡೆ ತಿರುಗಿಸುವ, ಅಷ್ಟು ದೊಡ್ಡ ಬಸ್ಸನ್ನು ಎಷ್ಟು ಸರಾಗವಾಗಿ ಹೊರಳಿಸಿ, ಚಲಾಯಿಸುವ ಡ್ರೈವರ್, “ಯಾರ್ರೀ, ಅಲ್ಲೀ ಟಿಕೇಟ್ ಟಿಕೇಟ…… ಹೋಗ್ರೀ.. ಒಳಗಡೆ ನಡೀರ್ರಿ…’ ಎಂದು ಆಜ್ಞಾಪಿಸುತ್ತಾ ಬಣ್ಣದ ಪುಸ್ತಕದಿಂದ ಟಿಕೇಟು ಹರಿದುಕೊಡುವ ಕಂಡಕ್ಟರ್ ಹಾಗೂ ಓಡುವ ಬಸ್ಸಿನ ಬಾಗಿಲಿನಲ್ಲಿ ನಿಂತು, ಬೀಸಿಬರುವ ಗಾಳಿಗೆ ತನ್ನ ಕೂದಲ ಹಾರಿಬಿಟ್ಟುಕೊಂಡು ಆರಗ, ನೊಣಬೂರ್, ಅರಳಸುರಳಿ, ಸೊನಲೆ, ಬಿಳ್ಳೋಡಿ, ಜಯನಗರ, ಹೊಸನಗರಾ ಎಂದು ವಿಶಿಷ್ಟ ರಾಗವೊಂದರಲ್ಲಿ ಕೂಗುವ ಕ್ಲೀನರ್… ಈ ಮೂವರನ್ನು ಅನುಕರಣೆ ಮಾಡದ ಹೊರತು ಊರಿನ ಯಾವೊಬ್ಬ ಪೋರನ ಬಾಲ್ಯವೂ ಸಂಪನ್ನವಾಗುವುದೇ ಇಲ್ಲ! ಅದರಲ್ಲೂ ಕಂಡಕ್ಟರ್‌ನ ಕೈಯಲ್ಲಿರುವ ಟಿಕೇಟು ಪುಸ್ತಕ ಹಾಗೂ ಅದರ ಪುಟಗಳ ನಡುವೆ ಅವಿತಿರುವ ಕಾರ್ಬನ್ ಚೀಟಿಗಳಂತೂ ಶಾಲಾ ಮಕ್ಕಳ ದೃಷ್ಟಿಯಲ್ಲಿ ಜಗತ್ತಿನ ಅದ್ಭುತಗಳ ಪಟ್ಟಿಗೆ ಸೇರುವಂಥ ವಸ್ತುಗಳು. ನಿರ್ವಾಹಕ ಎಸೆದು ಹೋಗುವ ಖಾಲಿಯಾದ ಟಿಕೆಟ್ ಪುಸ್ತಕ ಹಾಗೂ ಮಂದವಾದ ಕಾರ್ಬನ್ ಹಾಳೆಗಳನ್ನು ಎತ್ತಿಕೊಳ್ಳುವುದಕ್ಕೆ ಹುಡುಗರ ನಡುವೆ ನಡೆಯುವಷ್ಟು ಪೈಪೋಟಿ ಪ್ರಧಾನ ಮಂತ್ರಿಗಳ ಕುರ್ಚಿಗಾಗಿಯೂ ನಡೆಯಲಿಕ್ಕಿಲ್ಲ! ಹೃದಯವಂತ ಬಸ್ಸುಗಳು
ಮೇಲು-ಕೀಳುಗಳನ್ನೂ, ಪುರುಷ-ಸ್ತ್ರೀ ಎಂಬ ಭೇದ-ಭಾವಗಳನ್ನೂ ಮೌನವಾಗಿಯೇ ಮೀರುವ ಬಸ್ಸು ಕೆಳಗಿನ ಕೇರಿಯ ನಾಗಿಯನ್ನೂ ಹಾಗೂ ಮೇಲಿನಮಕ್ಕಿಯ ಶಾಂತಕ್ಕನನ್ನೂ ಒಟ್ಟಿಗೇ ಕೂರಿಸಿಕೊಂಡು ಸಂತೆಗೆ ಕರೆದೊಯ್ಯುತ್ತದೆ. ಮಹಬೂಬ ಸಾಬರ ಟೊಪ್ಪಿಯೂ, ರಾಮಾಶಾಸ್ತ್ರಿಗಳ ಶಲ್ಯವೂ ಅಡ್ಡಸೀಟಿನಲ್ಲಿ ಒಟ್ಟಿಗೆ ಕುಳಿತು ಡ್ರೈವರ್ ಡಿಸೋಜನ ಜೊತೆ ಪಟ್ಟಾಂಗ ಹೊಡೆಯುವ ಸಾಮರಸ್ಯದ ದೃಶ್ಯ ಕಂಡುಬರುವುದು ಬಸ್ಸಿನಲ್ಲೇ. ಅಷ್ಟೇ ಅಲ್ಲ, ಒಂದು ವಾರದಿಂದ ಅದೇಕೋ ಸರಿಯಾಗಿ ಮೇವು ತಿನ್ನದೆ ಕುಗುರುತ್ತಿರುವ ಊರಿನ ಕುರಿ, ಕೋಳಿ, ಟಗರುಗಳನ್ನೆಲ್ಲ ಟಿಕೆಟ್ ರಹಿತವಾಗಿ ಹೊತ್ತೂಯ್ದು ಪಶುಪಾಲನಾ ಆಸ್ಪತ್ರೆಗೆ ತಲುಪಿಸಿ ಪ್ರಾಣಿದಯೆ ಮೆರೆಯುವುದೂ ಸಹಾ ಬಸ್ಸೇ. ಇಂತಿಪ್ಪ ಅದು ಒಂದರ್ಥದಲ್ಲಿ ಭೂಮಿಯಂತೆಯೇ ಸಹನಾಮಯಿ. ಕಡಲೆಕಾಯಿ ತಿಂದು ಸಿಪ್ಪೆ ಎಸೆದರೂ, ಎಲೆಡಕೆ ಉಗುಳಿ ತನ್ನ ಹೊರಮೈಯನ್ನು ಗಲೀಜು ಮಾಡಿದರೂ, ಸೀಟಿನ ಸ್ಪಂಜು ಕಿತ್ತು ಗಾಯಗೊಳಿಸಿದರೂ ಅದು ಕೋಪಿಸಿಕೊಳ್ಳುವುದಿಲ್ಲ. ತಾವೇ ಎಲೆಅಡಿಕೆ, ಪಾನ್ ಪರಾಗ್, ಗುಟ್ಕಾ ಅಗಿದು ಉಗುಳಿ ಅಂದಗೆಡಿಸಿದ ಬಸ್ಸನ್ನು ಹೊರಗಿನಿಂದ ನೋಡಿದ ಜನ “ಥೂ ಎಷ್ಟು ಗಲೀಜಾಗಿದೆ’ ಎಂದು ತಾವೇ ತೆಗಳಿ ಅವಮಾನಿಸಿದಾಗಲೂ ಅದು ಬೇಸರಗೊಳ್ಳುವುದಿಲ್ಲ. ಮಳೆಯ ಹನಿಗೋ, ಹೊಳೆಯ ನೀರಿಗೋ ತನ್ನನ್ನು ಒಡ್ಡಿಕೊಂಡು ಸ್ವತ್ಛವಾಗಿ ಮತ್ತದೇ ಪ್ರಯಾಣಿಕರ ಬಳಿಗೆ ಮರಳಿಬರುತ್ತದೆ. ಹೀಗೆ ಸಮತೆ, ಸಹನೆ ಮೆರೆಯುವ ಬಸ್ಸಿನ ಹೃದಯ ಅಷ್ಟೇ ಗಾಢವಾಗಿ ಪ್ರೀತಿ-ಪ್ರೇಮಗಳಿಗೂ ಮಿಡಿಯುತ್ತದೆ. ಪ್ರತಿದಿನವೂ ಅದರ ಸೀಟುಗಳ ಬೆನ್ನಿನಲ್ಲಿ ನೂರಾರು ಪ್ರೀತಿಯ ಅಕ್ಷರಗಳು ಅಚ್ಚಾಗುತ್ತವೆ. ಹತಾಶ ಪ್ರೇಮಿಯೊಬ್ಬ ತಾನು ಮನದಲ್ಲೇ ಆರಾಧಿಸುತ್ತಿರುವ ಪ್ರೇಯಸಿಗೆ ಕೊನೆಗೂ ಹೇಳಲಾಗದ ಮಾತೊಂದನ್ನು ಬಸ್ಸಿನ ಸೀಟಿನ ಹಿಂಭಾಗದಲ್ಲಿ ಕೆತ್ತಿ ಹಗುರಾಗುತ್ತಿದ್ದರೆ ಅವನ ವೇದನೆಗಳನ್ನು ತನ್ನ ಹೃದಯಕ್ಕೆ ಬಸಿದುಕೊಳ್ಳುವ ಬಸ್ಸು ಹೃದಯತುಂಬಿ ಭಾರವಾಗುತ್ತದೆ. ಮುಂದೊಂದು ದಿನ ಅದೇ ಸೀಟಿನಲ್ಲಿ ಕುಳಿತ ಅವನ ಪ್ರೇಯಸಿ ಹುಡುಗಿ ಅದು ತನಗಾಗಿಯೇ ಬರೆದ ಸಾಲೆಂಬುದು ಗೊತ್ತಿಲ್ಲದೆಯೇ ಆ ಅಕ್ಷರಗಳ ಮೇಲೆ ಕೈಯಾಡಿಸಿ ಮುಗುಳ್ನಕ್ಕಾಗ ಬಸ್ಸಿನ ಗಾಜುಗಣ್ಣುಗಳ ಮೇಲೆ ಹನಿಗಳೆರಡು ಮೂಡಿ ಜಾರುತ್ತವೆ. ವಿನಾಯಕ ಅರಳಸುರಳಿ