Advertisement

ಸ್ವಾತಂತ್ರ್ಯ ಹೋರಾಟಗಾರರ ಹಿರಿಮೆಗೆ ಗೌರವದ ಗರಿ

11:05 AM Jun 24, 2022 | Team Udayavani |

ಮುಧೋಳ: ದೇಶದ ಸ್ವಾತಂತ್ರ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ತಾಲೂಕಿನ ಹಲಗಲಿ ಬಂಡಾಯದ ರೂವಾರಿಗಳಿಗೆ ಇದೀಗ ರಾಜ್ಯ ಸರ್ಕಾರ ಗೌರವದ ಗರಿಮೆ ನೀಡುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಹಮ್ಮಿಕೊಂಡಿದೆ.

Advertisement

ಈ ಅಭಿಯಾನದ ಅಂಗವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಹೋರಾಟಗಾರರ ಸವಿನೆನಪಿಗಾಗಿ ಹಲಗಲಿ ಗ್ರಾಮದಲ್ಲಿ ಶಿಲಾನ್ಯಾಸ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಲಗಲಿ ಬೇಡರಿಗೆ ಗೌರವ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿಗಳೆನಿಸಿಕೊಂಡಿರುವ ಹಲಗಲಿ ಬೇಡರು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತಮ್ಮದೇಯಾದ ಗುರುತು ಮೂಡಿಸಿದ್ದಾರೆ. ಬ್ರಿಟಿಷ್‌ ಸರ್ಕಾರ ಜಾರಿಗೊಳಿಸಿದ್ದ ನಿಶ್ಯಸ್ತ್ರೀಕರಣ ವಿರುದ್ಧ ದಂಗೆಯೆದ್ದು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಬೇಡರ ದಂಗೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಅಚ್ಚಾಗಿದೆ. ಅಂತಹ ಹಲಗಲಿ ಬೇಡರ ದಂಗೆಯ ರೂವಾರಿಗಳನ್ನು ಸ್ಮರಿಸುವ ಉದ್ದೇಶದಿಂದ ಹಲಗಲಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶಿಲಾನ್ಯಾಸ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಲಗಲಿ ಗ್ರಾಮಸ್ಥರಿಂದ ಪುತ್ಥಳಿ ನಿರ್ಮಾಣ: ಹಲಗಲಿ ಗ್ರಾಮದ ಬಸ್‌ ನಿಲ್ದಾಣದಲ್ಲಿ ಈಗಾಗಲೇ ಜಡಗಣ್ಣ-ಬಾಲಣ್ಣ ಅವರ ಪುತ್ಥಳಿ ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಸ್ವತಃ ಗ್ರಾಮಸ್ಥರೇ ವಂತಿಗೆ ಸಂಗ್ರಹಿಸಿ ನಿರ್ಮಿಸಿರುವ ಪುತ್ಥಳಿಗಳನ್ನು ಗ್ರಾಮದ ಹೃದಯಭಾಗ ಬಸ್‌ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಗ್ರಾಮಕ್ಕೆ ಆಗಮಿಸುವ ಯಾರೇ ಆದರೂ ಸ್ವಾತಂತ್ರ್ಯ ಹೋರಾಟಗಾರರ ದರ್ಶನ ಪಡೆದೇ ಗ್ರಾಮದೊಳಗೆ ತೆರಳಬೇಕು.

ಹೀಗೆ ಪುತ್ಥಳಿ ನಿರ್ಮಾಣದಿಂದ ಹೆಸರಾಗಿದ್ದ ಗ್ರಾಮದಲ್ಲಿ ಇದೀಗ ಸರ್ಕಾರ ತನ್ನ ಅಭಿಯಾನದ ಅಂಗವಾಗಿ ಶಿಲಾನ್ಯಾಸ ನೆರವೇರಿಸುತ್ತಿರುವುದು ಗ್ರಾಮದ ಹಿರಿಮೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Advertisement

ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶಿಷ್ಠ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯ ಬಾದಾಮಿ, ಬೀಳಗಿ, ಬಾಗಲಕೋಟೆ ಹಾಗೂ ಮುಧೋಳ ತಾಲೂಕಿನ ಆಯ್ದ 4 ಭಾಗದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ. ಅದರ ಅಂಗವಾಗಿ ಹಲಗಲಿಯಲ್ಲಿ ಜೂ.25ರಂದು ದೊಡ್ಡಮಟ್ಟದ ಕಾರ್ಯಕ್ರಮ ನಡೆಯಲಿದ್ದು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಶಿಲಾನ್ಯಾಸ ಕಾರ್ಯಕ್ರಮದ ನೇತೃತ್ವ ವಹಿಸಿಕೊಳ್ಳಲಿದ್ದಾರೆ.

ರಾಜ್ಯ ಸರ್ಕಾರ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಡಿ ಸ್ವಾತಂತ್ರ್ಯ ಹೋರಾಟಗಾರರಾದ ಜಡಗಣ್ಣ-ಬಾಲಣ್ಣ ಅವರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಹಲಗಲಿ ಗ್ರಾಮದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಜಡಗಣ್ಣ-ಬಾಲಣ್ಣ ಅವರ ಹೋರಾಟ ಅವಿಸ್ಮರಣೀಯ. ಅವರ ಹೋರಾಟವನ್ನು ನೆನಪಿಸುವ ಕಾರ್ಯವನ್ನು ನಮ್ಮ ಸರ್ಕಾರ ನಿರಂತರ ಮಾಡುತ್ತದೆ. –ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ರಾಜ್ಯ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಹಾಕಿಕೊಂಡಿದೆ. ಈ ಅಭಿಯಾನದ ಹಿನ್ನೆಲೆ ತಾಲೂಕಿನ ಹಲಗಲಿ ಗ್ರಾಮದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು, ಸರ್ಕಾರದ ನಿರ್ದೇಶನದಂತೆ ಅರ್ಥಪೂರ್ಣ ಕಾರ್ಯಕ್ರಮ ನಡೆಸಲಾಗುವುದು. –ವಿನೋದ ಹತ್ತಳ್ಳಿ, ತಹಶೀಲ್ದಾರ್‌ ಮುಧೋಳ

ಸರ್ಕಾರ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಅದೇ ರೀತಿ ಗ್ರಾಮದಲ್ಲಿ ಕಂಚಿನ ಪುತ್ಥಳಿ ನಿರ್ಮಿಸಿದರೆ ಇನ್ನೂ ಹೆಚ್ಚಿನ ಮೆರಗು ಬರುತ್ತದೆ. ಈ ಬಗ್ಗೆ ಜನಪ್ರತಿನಿ ಧಿಗಳು ಗಮನ ಹರಿಸುವುದು ಅವಶ್ಯ  –ವಿಠ್ಠಲ ಕೊಳ್ಳನ್ನವರ, ಹಲಗಲಿ ಗ್ರಾಮಸ್ಥ

„ಗೋವಿಂದಪ್ಪ ತಳವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next