Advertisement
ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆದ 1909ರಲ್ಲಿ ಆರಂಭಗೊಂಡು 110 ವರ್ಷ ಪೂರೈಸಿದೆ. ಅದೇ ರೀತಿ ಪಟ್ಟಣದ ಸರ್ಕಾರಿ ಶ್ರೀಮಹದೇಶ್ವರ ಪ್ರಥಮದರ್ಜೆ ಕಾಲೇಜು 1966ರಲ್ಲಿ ಆರಂಭಗೊಂಡು 54 ವರ್ಷ ಕಳೆದಿದೆ. ಎಂಜಿಎಸ್‌ವಿ ಜೂನಿಯರ್ ಕಾಲೇಜು 1953ರಲ್ಲಿ ಆರಂಭಗೊಂಡು 67 ವರ್ಷ ಪೂರ್ಣಗೊಂಡಿದೆ. ಆದರೆ, ಸರ್ಕಾರ ಶಾಲೆ, ಕಾಲೇಜಿನತ್ತ ಗಮನ ಹರಿಸದೇ ಶಾಲೆ, ಕಾಲೇಜು ಕಟ್ಟಡ ಹಳೇ ಮಾದರಿಯಲ್ಲೇ ಉಳಿದುಕೊಂಡಿದೆ. ಇನ್ನಾದರೂ ಸರ್ಕಾರ ಕಟ್ಟಡಗಳನ್ನು ನವೀಕರಿಸಿ, ಅದಕ್ಕೆ ಮಹತ್ವದ ರೂಪ ನೀಡಬೇಕಾಗಿದೆ.
ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ: ಕಳೆದ 5 ವರ್ಷದಲ್ಲಿ 1550 ವಿದ್ಯಾರ್ಥಿಗಳು ಇದ್ದರು. ಈಗ ಕೇವಲ 342 ವಿದ್ಯಾರ್ಥಿಗಳು ಇದ್ದಾರೆ. ಶಾಲೆಯಲ್ಲಿನ ಸೌಲಭ್ಯ ಕೊರತೆ, ಖಾಸಗಿ ಶಾಲೆಗಳ ವ್ಯಾಮೋಹದಿಂದ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಲು ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪ್ರಥಮದರ್ಜೆ ಕಾಲೇಜು: ಪಟ್ಟಣದ ಸರ್ಕಾರಿ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು 1966ರಲ್ಲಿ ಜಿ.ವಿ.ಗೌಡ ನಿರ್ಮಾಣ ಮಾಡಿಸಿದ್ದರು. ನೂತನ ಕಾಲೇಜಿನಲ್ಲಿ ಸುಮಾರು 1600 ವಿದ್ಯಾರ್ಥಿಗಳು ದ್ವಿತೀಯ ಪಿಯು ಮತ್ತು ಪದವಿ ಸೇರಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಸರ್ಕಾರ ಕಾಲೇಜನ್ನು ಪದವಿ ಕಾಲೇಜನ್ನಾಗಿ ಮಾಡಿದ ಬಳಿಕ ಪಿಯುಸಿ ರದ್ದಾಯಿತು. ಈಗ ಪದವಿ ವಿದ್ಯಾರ್ಥಿಗಳ ಸಂಖ್ಯೆ 950ಕ್ಕೆ ಬಂದು ನಿಂತಿದೆ.
Related Articles
Advertisement
ರಂಗಮಂದಿರ ಉದ್ಘಾಟಿಸಿಲ್ಲ: ಕಾಲೇಜಿನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳಿದೆ. 18.5 ಎಕರೆ ಕಾಲೇಜಿನ ವಿಸ್ತೀರ್ಣವಿದ್ದು, ಕಾಲೇಜಿನ ಆವರಣದಲ್ಲಿ ಕ್ರೀಡಾಂಗಣ, ಒಳ ಕ್ರೀಡಾಂಗಣ, ಬಯಲು ರಂಗ ಮಂದಿರ ನಿರ್ಮಾಣದ ಹಂತದಲ್ಲಿದೆ. ಇದುವರೆಗೂ ಉದ್ಘಾಟನೆ ಭಾಗ್ಯ ಕಾಣದೇ ತಟಸ್ಥಗೊಂಡಿದೆ.
ನ್ಯಾಕ್‌ಗೆ ಒಳಪಟ್ಟಿದೆ: ಕಾಲೇಜು ನ್ಯಾಕ್‌ಗೆ ಒಳಪಟ್ಟಿರುವುದರಿಂದ ಸಾಕಷ್ಟು ಅನುದಾನ ಹರಿದು ಬರುತ್ತಿದೆ. ಇದರಿಂದ ಕಾಲೇಜಿನಲ್ಲಿ ಉತ್ತಮ ಗ್ರಂಥಾಲಯ, ಲ್ಯಾಬ್, ಗಣಕಯಂತ್ರದ ಮೂಲಕ ಬೋಧನೆ ಅಳವಡಿಸಿದ್ದಾರೆ. ಇದರಿಂದ ಕಾಲೇಜಿನಲ್ಲಿ ಅಂತರಿಕ ಬೋಧನೆ ಗುಣಮಟ್ಟ ಹೊಂದಿದ್ದರೂ, ಆರಂಭದ ದಿನಗಳಲ್ಲಿ ಇದ್ದಹಾಗೆ ಇದೆ. ಹೊರಗಿನಿಂದ ನೋಡಿದವರಿಗೆ ಕಾಲೇಜು ಇದೊಂದು ಹಳೇ ಕಾಲೇಜು ಎಂದು ಗುರುತಿಸುವ ರೀತಿ ಇದೆ.
ಮದ್ರಾಸ್ ಸರ್ಕಾರ ನಿರ್ಮಾಣ: ಪಟ್ಟಣದ ಹೃದಯಭಾಗದ ಎಂಜಿಎಸ್‌ವಿ ಜೂನಿಯರ್ ಕಾಲೇಜನ್ನು 1953ರಲ್ಲಿ ಮದ್ರಾಸ್ ಸರ್ಕಾರ ನಿರ್ಮಾಣ ಮಾಡಿತ್ತು. ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ ಸೇರಿದಂತೆ 1600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲಿ ಪ್ರಸ್ತುತ 1400 ಸಂಖ್ಯೆಗೆ ಇಳಿಮುಖವಾಗಿದೆ. ಕಾಲೇಜಿನ ಮುಂಬದಿ ಹೊರತುಪಡಿಸಿ, ಹಿಂಬದಿಯಲ್ಲಿ ಕಾಂಪೌಂಡ್ ಇಲ್ಲದೇ ಮೈದಾನದಲ್ಲಿ ನಿತ್ಯ ಕುಡುಕರ ಹಾವಳಿ, ಜೂಜು ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಹೆಣ್ಣು ಮಕ್ಕಳಿಗೆ ಅವಕಾಶ ನೀಡಿ: ಸರ್ಕಾರಿ ಎಂಜಿಎಸ್‌ವಿ ಜೂನಿಯರ್ ಕಾಲೇಜಿನಲ್ಲಿ ಕೇವಲ ಗಂಡು ಮಕ್ಕಳಿಗೆ ಮಾತ್ರ ಸೀಮಿತವಾಗಿದೆ. ಹೆಣ್ಣು ಮಕ್ಕಳು ಕಾಲೇಜಿಗೆ ಸೇರುವ ಅವಕಾಶವನ್ನು ಸರ್ಕಾರ ಕಲ್ಪಿಸಿಕೊಡಬೇಕಾಗಿದೆ. ಇದರಿಂದ ಕಾಲೇಜಿನಲ್ಲಿ ಓದುಗರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ಶಿಕ್ಷಣ ತಜ್ಞರು ತಿಳಿಸಿದ್ದಾರೆ.
ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸಿದೆ. ನವೀಕರಣಕ್ಕೆ ಅಂದಾಜು ವೆಚ್ಚ ತಯಾರಿಸಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಮಂಜೂರಾತಿ ನೀಡುತ್ತಿದ್ದಂತೆ ಶಾಲೆ ಅಭಿವೃದ್ಧಿಯಾಗಲಿದೆ.-ಚಂದ್ರಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸರ್ಕಾರಿ ಪ್ರಥಮ ದರ್ಜೆ ಶ್ರೀ ಮಹದೇಶ್ವರ ಕಾಲೇಜಿಗೆ ಬೇಕಾದ ಸ್ಥಳ ಮತ್ತು ಮೈದಾನವನ್ನು ವಿವಿಧ ಕಾಮಗಾರಿಗಾಗಿ ನಗರಸಭೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರಿಂದ ಕಾಲೇಜಿಗೆ ಕಳೆ ಇಲ್ಲದಂತೆ ಆಗಿದೆ. ಅರ್ಧ ಶತಮಾನಕ್ಕೂ ಹೆಚ್ಚು ವರ್ಷ ಪೂರೈಸಿರುವ ಕಾಲೇಜಿಗೆ ನೂತನ ಶೈಲಿಯಲ್ಲಿ ಕಟ್ಟಡ ನಿರ್ಮಾಣ ಮಾಡಬೇಕಾಗಿದೆ.
-ಸೀಗನಾಯಕ, ಕಾಲೇಜಿನ ಪ್ರಾಶುಂಪಾಲ ಮಧುವನಹಳ್ಳಿ ಶತಮಾನ ಪೂರೈಸಿದ ಶಾಲೆ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಅಭಿವೃದ್ಧಿಗಾಗಿ ದತ್ತು ಪಡೆದುಕೊಂಡಿದ್ದೇವೆ. ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿಗೆ ಬೇಕಾದ ಅನುದಾನದ ಪ್ರಸ್ತಾವನೆ ತಯಾರಿಸುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದೇನೆ.
-ಎನ್.ಮಹೇಶ್, ಶಾಸಕ * ಡಿ.ನಟರಾಜು