Advertisement

ಬೆಳೀರಿ ಬಟಾಣಿ

12:30 AM Jan 21, 2019 | |

ಬಟಾಣಿಯನ್ನು ಒಣಗಿಸಿಯೂ ಮಾರಬಹುದು. ಹಸಿಯಾಗಿರುವಾಗಲೂ ಮಾರಬಹುದು. ತರಕಾರಿಯ ರೂಪದಲ್ಲಿ ಮಾರಾಟ ಮಾಡುವುದಾದರೆ ಬೆಳೆಗೆ ಕೋಲಿನ ಆಶ್ರಯ ಕೊಡುವುದು ಒಳ್ಳೆಯದು. ಹೀಗೆ ಮಾಡಿದರೆ, ಒಳ್ಳೆಯ ಇಳುವರಿ ಪಡೆಯಬಹುದು.  

Advertisement

ಬಟಾಣಿಗೆ, ಇತರೆ ದ್ವಿದಳ ಧಾನ್ಯಗಳಂತೆ ತನ್ನಿಂದ ಸಾಧ್ಯವಾದಷ್ಟನ್ನೂ ಭೂಮಿಗೆ ಮರಳಿ ಕೊಟ್ಟು ಹೋಗುವ ಗುಣವಿದೆ. ಸಸಾರಜನಕ, ಶರ್ಕರಪಿಷ್ಟ, ‘ಸಿ’ ಅನ್ನಾಂಗ ಮತ್ತು ಲವಣಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಇದನ್ನು ಬೆಂಗಳೂರು, ಕೋಲಾರ, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಬಯಲು ಸೀಮೆಯ ಇತರೆ ಜಿಲ್ಲೆಗಳಲ್ಲಿ ಬೆಳೆಯಬಹುದಾದರೂ ರೈತರು ಇನ್ನೂ ಮನಸ್ಸು ಮಾಡಿಲ್ಲ. ಜೂನ್‌- ಜುಲೈ ಹಾಗೂ ಅಕ್ಟೋಬರ್‌- ನವೆಂಬರ್‌ ತಿಂಗಳಲ್ಲಿ ಬಿತ್ತನೆ ಮಾಡಬಹುದು. ಕೆಂಪು ಮಣ್ಣಿನಲ್ಲಿ ಬಟಾಣಿ ಚೆನ್ನಾಗಿ ಬೆಳೆಯುತ್ತದೆ. ಕಪ್ಪು ಮಣ್ಣಲ್ಲೂ ಇದನ್ನು ಬೆಳೆಯಬಹುದು. ಆದರೆ  ನೀರು ನಿಲ್ಲುವ ಮಣ್ಣಿನಲ್ಲಿ ಇದು ಇಳುವರಿ ಬರುವುದಿಲ್ಲ.

ಮೊದಲು ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ, ಎರಡು ಟನ್‌ ಕೊಟ್ಟಿಗೆ ಗೊಬ್ಬರ, ಎರಡು ಟನ್‌ ಕುರಿ ಅಥವಾ ಕೋಳಿ ಗೊಬ್ಬರವನ್ನು ಮಣ್ಣಲ್ಲಿ ಬೆರೆಸಬೇಕು. ನಂತರ ಒಂದು ಅಡಿಗೆ ಒಂದರಂತೆ ಜಾಗ ಬಿಟ್ಟು ಅರ್ಧ ಅಡಿಗೊಂದು ಬೀಜ ಊರಬೇಕು. ಕೋಲಿನ ಆಶ್ರಯ ಕೊಡುವ ಪ್ಲಾನ್‌ ಇದ್ದರೆ ಸ್ವಲ್ಪ ದೂರ ದೂರ ಬೀಜ ಹಾಕಬೇಕು. ಜಮೀನು ಫ‌ಲವತ್ತಾಗಿದ್ದರೆ ಯಾವುದೇ ರಾಸಾಯನಿಕ ಗೊಬ್ಬರ ಬೇಡ. ಒಂದು ವೇಳೆ ಹಾಗಿರದಿದ್ದರೆ ಅರ್ಧ ಪ್ಯಾಕೆಟ್‌ ನಷ್ಟು 17-17-17 ಗೊಬ್ಬರವನ್ನು ಬಿತ್ತನೆಗೂ ಮೊದಲು ಸಾಲುಗಳಲ್ಲಿ ಹಾಕಬೇಕು.

ಮಳೆಗಾಲದ ಬೆಳೆಯಾಗಿದ್ದರೆ ಮಳೆ ಬರದ ಸಮಯದಲ್ಲಿ ನೀರು ಕೊಡಬೇಕು, ಚಳಿಗಾಲದ ಬೆಳೆಯಾಗಿದ್ದರೆ 4-5 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಬಿತ್ತಿದ ಇಪ್ಪತ್ತು ದಿನಕ್ಕೆ ಹರಗಿ ಕಳೆ ಇರದಂತೆ ಸ್ವತ್ಛಗೊಳಿಸಬೇಕು. ನಂತರ ಮತ್ತೆರಡು ಸಲ ಹೀಗೇ ಎಡೆಕುಂಟಿ ಹೊಡೆದು ಬುಡಗಳಿಗೆ ಮಣ್ಣು ಏರಿಸಬೇಕು.

ಕೆಲವರು ಬಟಾಣಿಯನ್ನು ಒಣಗಿಸಿ ಮಾರುತ್ತಾರೆ. ಇನ್ನೂ ಕೆಲವರು ಹಸಿಯಾಗಿರುವಾಗಲೇ ತರಕಾರಿ ರೂಪದಲ್ಲಿ ಮಾರಾಟ ಮಾಡುತ್ತಾರೆ. ಹಾಗೆ ಮಾಡುವುದಾಗಿದ್ದರೆ ಬೆಳೆಗೆ ಕೋಲಿನ ಆಶ್ರಯ ಕೊಡುವುದು ಒಳ್ಳೆಯದು. ಟೊಮೆಟೊಗೆ ಕೊಟ್ಟ ಹಾಗೆ ಆಸರೆ ಕೊಟ್ಟರೆ ಬಟಾಣಿ ಗುಣಮಟ್ಟ ಚೆನ್ನಾಗಿರುತ್ತದೆ. ಇಳುವರಿ ಹೆಚ್ಚುವುದು. ಹಸಿ ಬಟಾಣಿಯನ್ನು 4 – 5 ಸಲ ಕೊಯ್ಲು ಮಾಡಬಹುದು.

Advertisement

ಪ್ರತಿ ಹದಿನೈದು ದಿನಕ್ಕೊಮ್ಮೆ ಎರಡು ಕ್ವಿಂಟಲ್‌ ನಂತೆ ಎರೆಹುಳು ಗೊಬ್ಬರ ಕೊಡುತ್ತಾ ನೀಟಾಗಿ ನಿರ್ವಹಣೆ ಮಾಡಿದರೆ ಅಧಿಕ ಇಳುವರಿ ಪಡೆಯಬಹುದು. 3 – 4 ಸಲ ಹಸಿಯಾಗಿ ಹರಿದು ಉಳಿದ ಕಾಯಿಗಳನ್ನು ಒಣಗಿಸಿ ಮಾರಬಹುದು. ಒಣಗಿದ ಬೀಜಗಳನ್ನು ನೇರವಾಗಿ ಗ್ರಾಹಕರಿಗೆ ಅಥವಾ ಸ್ಥಳೀಯ ಪ್ರಾವಿಷನ್‌ ಸ್ಟೋರ್‌ಗಳಲ್ಲೇ ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು.

ರೋಗ – ಕೀಟ 
ಬಟಾಣಿ ಬೆಳೆಗೆ ಅಗ್ರೊಮೈಜಿಡ್‌ ನೊಣ, ಕಾಯಿ ಕೊರೆಯುವ ಹುಳ ಮತ್ತು ಹೇನಿನ ಕಾಟ ಇರುತ್ತದೆ. ಆದರೆ ನಿರಂತರ ಜೀವಾಮೃತ ಸಿಂಪರಣೆ, ಹಾಗೂ ಹಸುವಿನ ಗಂಜಲು – ಅರಿಷಿಣ ಪುಡಿ, ಹಸಿಮೆಣಸಿನಕಾಯಿ ಕಷಾಯ ಇತ್ಯಾದಿ ಸಿಂಪರಿಸುತ್ತಾ ಇದ್ದರೆ ಈ ಥರದ ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.  ತೀರಾ ನಿಯಂತ್ರಿಸಲಾಗದಿದ್ದರೆ ಮಾತ್ರ ಸಸ್ಯಹೇನಿಗೆ ಡೈಮಿಥೋಯೇಟ್‌ ಮತ್ತು ಕಾಯಿಕೊರಕ ಹುಳುವಿಗೆ ಕಾರ್ಬಾರಿಲ್‌ನಂಥ ರಾಸಾಯನಿಕಗಳನ್ನು ಸ್ಪ್ರೆ ಮಾಡಬಹುದು. ರೋಗದ ವಿಷಯಕ್ಕೆ ಬಂದರೆ ಬೂದಿರೋಗ, ಕಾಂಡ ಮತ್ತು ಬೇರು ಕೊಳೆಯುವ ರೋಗ ಹಾಗೂ ತುಕ್ಕು ರೋಗ ಬಟಾಣಿಗೆ ಬಾಧಿಸುವುದುಂಟು. ಎರೆಹುಳು ಗೊಬ್ಬರ ಹಾಕುವಾಗ ಅದರ ಜೊತೆ ಬೇವಿನ ಹಿಂಡಿ ಬೆರೆಸಿ ಹಾಕಿದರೆ ಬೇರು ಕೊಳೆ ರೋಗವನ್ನು ನಿಯಂತ್ರಿಸಬಹುದು ಅಥವಾ ಒಂದು ಲೀಟರ್‌ ನೀರಿಗೆ ಒಂದು ಗ್ರಾಂ ಕಾರ್ಬನ್‌ ಡೈಜಿಂ ಹಾಕಿ ಬುಡದ ಸುತ್ತ ಹಾಕಬೇಕು. ಬೂದಿರೋಗ ಕಾಣಿಸಿಕೊಂಡರೆ ಒಂದು ಲೀಟರ್‌ ನೀರಿಗೆ ಮೂರು ಗ್ರಾಂ. ನೀರಿನಲ್ಲಿ ಕರಗುವ ಗಂಧಕ ಬೆರೆಸಿ ಸಿಂಪರಿಸಬೇಕು.

ಆದರೆ ತರಕಾರಿ ಬೆಳೆಗಳಿಗೆ ರಾಸಾಯನಿಕ ವಿಷ ಸುರಿಯುವುದು ತಪ್ಪು. ಸಾಧ್ಯವಾದಷ್ಟು ಜಮೀನು ಫ‌ಲವತ್ತಾಗಿಟ್ಟುಕೊಂಡು ಸಾವಯವದಲ್ಲೇ ಬೆಳೆದರೆ ಸಣ್ಣ ಪುಟ್ಟ ರೋಗಗಳಿಗೆ ಬೆಳೆ ಬಗ್ಗಲ್ಲ. ಕೇವಲ ಜೀವಾಮೃತ ಸಿಂಪರಣೆ ನಿರಂತರ ಮಾಡುತ್ತಾ ಇದ್ದರೆ ರೋಗಗಳನ್ನೂ ನಿಯಂತ್ರಿಸಬಹುದು ಹಾಗೂ ಇಳುವರಿಯೂ ಅಧಿಕವಾಗುವುದು.

ಸರಿಯಾಗಿ ನಿರ್ವಹಣೆ ಮಾಡಿದ ಒಂದು ಎಕರೆ ಜಮೀನಿನಲ್ಲಿ ಅತ್ಯಧಿಕ ಎಂಟು ಟನ್‌ ನಷ್ಟು ಹಸಿ ಬಟಾಣಿ ಪಡೆಯಬಹುದು. 

– ಎಸ್‌.ಕೆ ಪಾಟೀಲ್‌

Advertisement

Udayavani is now on Telegram. Click here to join our channel and stay updated with the latest news.

Next