ಮಾಗಡಿ: ಐಟಿ ಮತ್ತು ಇಡಿಗೆ ಸಂಬಂಧಿಸಿದಂತೆ ಹೋರಾಟಕ್ಕಿಳಿದಿರುವ ಕಾಂಗ್ರೆಸ್ ನಾಯಕರು, ಮೊದಲು ಎಐಸಿಸಿ ಸಮಿತಿಯಲ್ಲಿ ಕುಳಿತು ಚರ್ಚಿಸಿ ಮಾತನಾಡಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಮಾಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಮಾಂಡವ್ಯ ಕ್ಷೇತ್ರದ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಮತ್ತು ರಾಹುಲ್‌ಗಾಂಧಿ ಅವರನ್ನು ಇಡಿ ಅಧಿಕಾರಿಗಳು ತನಿಖೆಗೆ ಕರೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಿಖೆ ಎನ್ನುವುದು ಎಲ್ಲರಿಗೂ ಒಂದೇ ಇರುತ್ತದೆ.
ದೊಡ್ಡವರು, ಚಿಕ್ಕರವರು ಎಂಬ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಕಾಂಗ್ರೆಸ್ ನಾಯಕರ ಹೋರಾಟ, ಪ್ರತಿಭಟನೆಗಳಿಂದ ತಪ್ಪನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.
ಮುಸಲ್ಮಾನರನ್ನು ಉದ್ದಾರೆ ಮಾಡುತ್ತೇವೆ ಎನ್ನುವುದು ಬರೀ ಸುಳ್ಳು ಹೇಳಿಕೆ: ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ರಾಜ್ಯಸಭಾ ಚುನಾವಣೆಯಲ್ಲಿ ಮ್ಯಾಚ್ ಪಿಕ್ಸಿಂಗ್ ಎನ್ನುತ್ತಾರೆ. ಕಾಂಗ್ರೆಸ್ ನಾಯಕರು ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿದ್ದು, ಏಕೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗೆಲ್ಲಿಸಿಕೊಳ್ಳಲಿಲ್ಲ.
Related Articles
ಬಿಜೆಪಿಯಿಂದ 112 ಓಟು ಇಟ್ಟುಕೊಂಡು 2 ಸ್ಥಾನವನ್ನು ಗೆದ್ದಿದ್ದೇವೆ. ಇನ್ನೊಂದು 2ನೇ ಸ್ಥಾನದಲ್ಲಿದ್ದು ಗೆದ್ದಿದ್ದೇವೆ. ಮ್ಯಾಚ್ ಪಿಕ್ಸಿಂಗ್ ಎಲ್ಲಿಂದ ಬಂತು. ಮ್ಯಾಚ್ ಪಿಕ್ಸಿಂಗ್ ಇದ್ದಿದ್ದರೆ ಮುಸ್ಲಿಂ ಓಟು ಇಟ್ಟುಕೊಂಡು ಏಕೆ ಸೋತರು. ಕೋಮವಾದಿಯನ್ನು ಸೋಲಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಏಕೆ ಜೆಡಿಎಸ್‌ನೊಂದಿಗೆ ಒಂದಾಣಿಕೆ ಮಾಡಿಕೊಳ್ಳಲಿಲ್ಲ. ಮುಸಲ್ಮಾನರನ್ನು ಉದ್ದಾರ ಮಾಡುತ್ತೇವೆ ಎಂದು ಹೇಳುವವರು, ಜೆಡಿಎಸ್‌ನಿಂದ ಏಕೆ ಹೊರ ಬಂದರು.
ಕೋಮವಾದಿಗಳು ಎನ್ನುವವರೇ ಮುಸಲ್ಮಾನರನ್ನು ಸೋಲಿಸಿದರು. ಇದೆಲ್ಲ ರಾಜಕೀಯ ತಂತ್ರಗಾರಿಕೆಯಷ್ಟೆ ಎಂದು ಲೇವಡಿ ಮಾಡಿದರು. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಯಾವಾಗ ನಡೆಸುತ್ತೀರಿ ಎಂಬ ಪ್ರಶ್ನೆಗೆ ಚುನಾವಣೆಯ ಮೀಸಲಾತಿ ಸಂಬಂಧಿಸಿದಂತೆ ಪ್ರಕರಣ ಸುಪ್ರೀಂಕೋಟ್‌ನಲ್ಲಿದ್ದು, ಜಡ್ಜ್ಮೆಂಟ್ ಬಂದ ನಂತರ ಚುನಾವಣೆ ಯಾವಾಗ ಎಂದು ನಿರ್ಧಾರವಾಗುತ್ತದೆ ಎಂದು ಹೇಳಿದರು.
ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲಕ್ಕೆ ಭೇಟಿ: ಪ್ರಸಿದ್ಧ ಪ್ರವಾಸಿ ತಾಣ ಸಾವನದುರ್ಗದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿದ ಮಾಜಿ ಸಚಿವರು ದರ್ಶನ ಪಡೆದರು. ಸ್ಥಳೀಯ ಬಿಜೆಪಿ ನಾಯಕರು, ಮುಖಂಡರಿಗಾಗಲಿ ಈಶ್ವರಪ್ಪ ಅವರು ಮಾಗಡಿಗೆ ಬರುವ ವಿಷಯ ತಿಳಿದಿಲ್ಲದ ಕಾರಣ ಬಿಜೆಪಿಯ ಮುಖಂಡರು ಕಾಣಿಸಿಕೊಂಡಿಲ್ಲ.