Advertisement

ಪರಿಷತ್‌ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

10:46 AM Jun 13, 2022 | Team Udayavani |

ಬೆಳಗಾವಿ: ರಾಜ್ಯದ ಗಮನ ಸೆಳೆದಿರುವ ವಾಯವ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಗಳ ಚುನಾವಣೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಎರಡೂ ಕ್ಷೇತ್ರ ಸೇರಿ ಲಕ್ಷಕ್ಕೂ ಅಧಿಕ ಮತದಾರರು ಸೋಮವಾರ ಮೇಲ್ಮನೆ ಮೆಟ್ಟಿಲು ಹತ್ತಬೇಕು ಎಂಬ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.

Advertisement

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 12 ಜನ ಅಭ್ಯರ್ಥಿಗಳು ಹಾಗೂ ಪದವೀಧರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಿಲ್ಲಾಡಳಿತ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಶಿಕ್ಷಕರ ಕ್ಷೇತ್ರದಲ್ಲಿ 25,388 ಹಾಗೂ ಪದವೀಧರ ಕ್ಷೇತ್ರದಲ್ಲಿ 99,598 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಮೂರೂ ಜಿಲ್ಲೆಗಳಲ್ಲಿ ಒಟ್ಟು 190 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಿಜೆಪಿಯಿಂದ ಶಿಕ್ಷಕರ ಕ್ಷೇತ್ರದ ಆಭ್ಯರ್ಥಿಯಾಗಿರುವ ಅರುಣ ಶಹಾಪುರ ಹ್ಯಾಟ್ರಿಕ್‌ ಗೆಲುವಿನ ಹೊಸ್ತಿಲಲ್ಲಿ ಇದ್ದಾರೆ. ತಮ್ಮ ಗೆಲುವಿಗೆ ಎಲ್ಲ ಪಟ್ಟುಗಳನ್ನು ಪರೀಕ್ಷೆಗೆ ಒಡ್ಡಿರುವ ಅರುಣ ಶಹಾಪುರ ಈ ಬಾರಿಯ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ.

ಶಹಾಪುರ ಅವರ ಈ ಪ್ರತಿಷ್ಠೆಯ ಕುಸ್ತಿಗೆ ಇಡೀ ಬಿಜೆಪಿ ಬೆಂಬಲವಾಗಿ ನಿಂತಿದೆ. ಪಕ್ಷದೊಳಗೆ ಅಸಮಾಧಾನ ಇದ್ದರೂ ಅದು ಬಹಿರಂಗವಾಗಲು ಅವಕಾಶ ಕೊಟ್ಟಿಲ್ಲ. ಶಹಾಪುರ ಅವರಿಗೆ ರಾಜಕಾರಣದಲ್ಲಿ ಸಾಕಷ್ಟು ಪಳಗಿರುವ ಪ್ರಕಾಶ ಹುಕ್ಕೇರಿ ಕಾಂಗ್ರೆಸ್‌ದಿಂದ ಪೈಪೋಟಿ ಒಡ್ಡಿದ್ದಾರೆ. ಜೆಡಿಎಸ್‌ ದಿಂದ ಚಂದ್ರಶೇಖರ ಲೋಣಿ ಮತ್ತೂಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಬಾರಿ ಕಾಂಗ್ರೆಸ್‌ದಿಂದ ಸ್ಪರ್ಧೆ ಮಾಡಿ ತೀವ್ರ ಪೈಪೋಟಿ ನೀಡಿದ್ದ ಎನ್‌.ಬಿ ಬನ್ನೂರ ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಜಯದ ನಿರೀಕ್ಷೆಯಲ್ಲಿರುವ ಹನುಮಂತ ನಿರಾಣಿ ಬಿಜೆಪಿ ಅಭ್ಯರ್ಥಿಯಾಗಿದ್ದರೆ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ದಿಂದ ನ್ಯಾಯವಾದಿ ಸುನೀಲ ಸಂಕ ಅವರು ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 11 ಜನ ಕಣದಲ್ಲಿದ್ದಾರೆ.

Advertisement

ಯಾರಿಗೆ ಯಾರು ಮುಳ್ಳು ? ವಾಯವ್ಯ ಶಿಕ್ಷಕರ ಕ್ಷೇತ್ರ ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿರುವ ಕ್ಷೇತ್ರವಾಗಿ ಬದಲಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿದಿರುವ ಅರುಣ ಶಹಾಪುರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕಾರಣ ಇವರ ಬಗ್ಗೆ ಪಕ್ಷದೊಳಗೆ ಹಾಗೂ ಹೊರಗಡೆ ಶಿಕ್ಷಕರ ವಲಯದಲ್ಲಿ ಮೂಡಿರುವ ಅಸಮಾಧಾನ.

ಟಿಕೆಟ್‌ ಹಂಚಿಕೆ ವಿಷಯದಲ್ಲಿ ಅರುಣ ಶಹಾಪುರ ಬಗ್ಗೆ ಮೂಡಿದ ಅಪಸ್ವರ ಹಾಗೆಯೇ ಮುಂದುವರಿದಿದೆ. ಇದಕ್ಕೆ ಶಿಕ್ಷಕ ಮತದಾರರ ಜೊತೆಗೆ ಬಿಜೆಪಿ ಯಲ್ಲಿನ ಕೆಲವು ನಾಯಕರು ಸಹ ದನಿಗೂಡಿಸಿದ್ದಾರೆ. ಈ ಅಪಸ್ವರದ ಗಾಯಕ್ಕೆ ಮದ್ದು ಹಚ್ಚುವ ಪ್ರಯತ್ನವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಪ್ರಚಾರದ ಮೂಲಕ ಮಾಡಿದ್ದಾರೆ.

ಇದು ಎಷ್ಟರ ಮಟ್ಟಿಗೆ ಮತದಾರರ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ನಾಳೆ ಮತದಾರರು ತಮ್ಮ ಮತ ಚಲಾಯಿಸುವ ಮೂಲಕ ತೋರಿಸಲಿದ್ದಾರೆ. ಇನ್ನೊಂದು ಕಡೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಅವರ ಮೌನ ಹಾಗೂ ಪ್ರಚಾರದಿಂದ ದೂರ ಉಳಿದಿದ್ದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕೊನೆಗೆ ಮುಖ್ಯಮಂತ್ರಿಗಳೇ ನೇರವಾಗಿ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಮತದಾನದ ಸಮಯದಲ್ಲಿ ಪ್ರಭಾಕರ ಕೋರೆ ತೆರೆಮರೆಯಲ್ಲಿ ಮತದಾರರಿಗೆ ನೀಡುವ ಸಂದೇಶ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕೆಎಲ್‌ಇ ಸಂಸ್ಥೆಯ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಮತಗಳು ಇರುವುದರಿಂದ ಕೋರೆ ಅವರ ನಡೆ ಬಹಳ ಪರಿಣಾಮ ಬೀರಲಿದೆ. ಇನ್ನು ಕಾಂಗ್ರೆಸ್‌ದಿಂದ ಸ್ಪರ್ಧೆ ಮಾಡಿರುವ ಪ್ರಕಾಶ ಹುಕ್ಕೇರಿಗೆ ರಾಜಕೀಯದ ಅನುಭವ ಸಾಕಷ್ಟಿದ್ದರೂ ಅವರು ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ. ಶಿಕ್ಷಕರ ಬೇಡಿಕೆಗಳ ಬಗ್ಗೆ ಅರಿವಿಲ್ಲ ಎಂಬ ಅಭಿಪ್ರಾಯ ಅವರಿಗೆ ಹಿನ್ನಡೆ ಉಂಟುಮಾಡಿದೆ.

ಇದರ ಜೊತೆಗೆ ಪಕ್ಷೇತರ ಅಭ್ಯರ್ಥಿ ಎನ್‌ ಬಿ ಬನ್ನೂರ ಸಹ ಮತಗಳನ್ನು ಒಡೆಯುತ್ತಾರೆ ಎಂಬ ಆತಂಕ ಇದೆ. ಬನ್ನೂರ ಅವರು ಕಾಂಗ್ರೆಸ್‌ ಜೊತೆಗೆ ಬಿಜೆಪಿ ಪಾಳೆಯದಲ್ಲೂ ಚಿಂತೆ ಹೆಚ್ಚಿಸಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ನಿರೀಕ್ಷೆ ಮಾಡಿದಂತೆ ಅಂತಹ ಪೈಪೋಟಿ ಕಾಣುತ್ತಿಲ್ಲ.

ಸತತ ಎರಡನೇ ಬಾರಿಗೆ ಜಯದ ನಿರೀಕ್ಷೆಯಲ್ಲಿರುವ ಹನುಮಂತ ನಿರಾಣಿಗೆ ಕಾಂಗ್ರೆಸ್‌ ದಿಂದ ಸುನೀಲ ಸಂಕ ಸ್ಪರ್ಧೆ ಒಡ್ಡಿದ್ದಾರೆ. ಇಬ್ಬರು ಅಭ್ಯರ್ಥಿಗಳ ಪೈಕಿ ಯಾರ ಪರ ಹೆಚ್ಚಿನ ಒಲವಿದೆ ಎಂಬುದಕ್ಕೆ ನಾಳೆ ಮತದಾರರು ಮತಪೆಟ್ಟಿಗೆಯೊಳಗೆ ಉತ್ತರ ಹಾಕಲಿದ್ದಾರೆ.

-ಕೇಶವ ಆದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next