Advertisement

ಕೃಷಿ ಕಾರ್ಯದತ್ತ ರೈತನ ಚಿತ್ತ

10:14 AM Jun 02, 2019 | Team Udayavani |

ಗದಗ: ಸತತ ಐದು ವರ್ಷಗಳಿಂದ ವರುಣ ದೇವನ ಕಣ್ಣಾಮುಚ್ಚಾಲೆಯಿಂದ ನೇಗಿಲ ಯೋಗಿ ನಲುಗಿ ಹೋಗಿದ್ದಾನೆ. ಆದರೆ, ಈ ಬಾರಿ ಮುಂಗಾರು ಕೈಹಿಡಿಯುವ ಭರವಸೆಯೊಂದಿಗೆ ರೈತಾಪಿ ಜನರು ಮತ್ತೆ ಜಮೀನಿನತ್ತ ಮುಖ ಮಾಡಿದ್ದಾರೆ. ಮಳೆರಾಯನ ಆಗಮನದ ನಿರೀಕ್ಷೆಯೊಂದಿಗೆ ಮತ್ತೆ ಕೃಷಿ ಚಟುವಟಿಕೆ ಆರಂಭಿಸುತ್ತಿದ್ದು, ಮುಂಗಾರು ಬಿತ್ತನೆಗೆ ಜಮೀನು ಸಿದ್ಧಗೊಳಿಸುತ್ತಿದ್ದಾರೆ.

Advertisement

ಕಳೆದ ಐದು ವರ್ಷಗಳಿಂದ ಕೈಕೊಟ್ಟಿರುವ ಮಳೆರಾಯ ಈ ಬಾರಿ ಕೈಹಿಡಿಯುವ ನಿರೀಕ್ಷೆಯೊಂದಿಗೆ ರೈತಾಪಿ ಜನರು ಮತ್ತೆ ಮುಂಗಾರು ಹಂಗಾಮಿಗೆ ಸಿದ್ಧಗೊಳ್ಳುತ್ತಿದ್ದಾರೆ. ಉತ್ಸಾಹದಿಂದಲೇ ಭೂಮಿಗಳನ್ನು ಕೃಷಿ ಚಟುವಟಿಕೆಗೆ ಅಣಿಗೊಳಿಸುತ್ತಿದ್ದಾರೆ. ಈಗಾಗಲೇ ಜಮೀನುಗಳನ್ನು ಹದಗೊಳಿಸುವುದು, ಕಸಕಡ್ಡಿ ಆರಿಸಿ ಹೊಲವನ್ನು ಸ್ವಚ್ಛಗೊಳಿಸಿದ್ದಾರೆ. ಬಿತ್ತೆನೆಗೆ ಅನುಕೂಲವಾಗುವಂತೆ ಮಾಡಿದ್ದರೆ. ಇನ್ನೂ ಕೆಲವರು ಅದಾಗಲೇ ಜಮೀನುಗಳನ್ನು ಹರಗಿ ಸಮತಟ್ಟುಗೊಳಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ನಿರೀಕ್ಷಿತ ಬಿತ್ತನೆ ಗುರಿ ಸಾಧಿಸಿಲ್ಲ. ಇದೀಗ ಅಲ್ಲಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷಿ ಇಲಾಖೆಯಲ್ಲೂ ಉತ್ಸಾಹ ಮೂಡಿಸಿದೆ. ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ.

ಮಳೆ ಪ್ರಮಾಣ: ಸತತ ಐದು ವರ್ಷಗಳಿಂದ ಜಿಲ್ಲೆಯ ರೈತಾಪಿ ಜನರು ಬರಗಾಲದಿಂದ ಬಸವಳಿದಿದ್ದಾರೆ. ಇತ್ತೀಚೆಗೆ ಅಲ್ಲಲ್ಲಿ ಮಳೆ ಸುರಿಸಿದ್ದಾನೆ. ಜನವರಿಯಿಂದ ಮೇ ಅಂತ್ಯದವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 81.4 ಮಿ.ಮೀ. ನಲ್ಲಿ 21 ಮಿ.ಮೀ. (ಶೇ.25.8) ಮಳೆಯಾಗಿದೆ. ಗದಗ ತಾಲೂಕಿನಲ್ಲಿ 44.7 ಮಿ.ಮೀ., ಮುಂಡರಗಿಯಲ್ಲಿ 5.6 ಮಿ.ಮೀ., ನರಗುಂದದಲ್ಲಿ 20.2, ರೋಣ ತಾಲೂಕಿನಲ್ಲಿ 24 ಮಿ.ಮೀ. ಹಾಗೂ ಶಿರಹಟ್ಟಿಯಲ್ಲಿ 10.4 ಮಿ.ಮೀ. ಮಳೆಯಾಗಿದೆ. ಮುಂಗಾರು ಹಂಗಾಮಿಗೆ ದಿನಗಣನೆ ಶುರುವಾಗಿದ್ದರೂ ಬಿಸಿಲಿನ ಪ್ರಖರ ಕಡಿಮೆಯಾಗುತ್ತಿಲ್ಲ. ಮತ್ತೂಂದೆಡೆ ಮಳೆರಾಯನ ಸುಳಿವಿಲ್ಲದೇ, ರೈತರು ಮೋಡಗಳ ದರ್ಶನಕ್ಕಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತುಕೊಳ್ಳುವಂತಾಗಿದೆ.

ಸತತ ಬರಗಾಲದ ಸುಳಿಗೆ ಸಿಲುಕಿ ನಲುಗಿರುವ ರೈತ ಸಮುದಾಯ ಇದೀಗ ಮತ್ತೇ ಹೊಸ ಭರವಸೆಯೊಂದಿಗೆ ಮಳೆರಾಯನ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿತ್ತನೆಗಾಗಿ ಭೂಮಿ ಹದಗೊಳಿಕೊಂಡಿದ್ದಾರೆ. ಜಮೀನಿನಲ್ಲಿನ ಕಲ್ಲು-ಕಸ-ಕಟ್ಟಿಗೆ ಆರಿಸಿ ಫಲವತ್ತತೆಗೆ ತಿಪ್ಪೆ ಗೊಬ್ಬರ ಸೂರು ಮಾಡಿದ್ದಾರೆ. ಈಗ ಮಳೆ ಬಂದರೆ ಬಹುತೇಕ ರೈತರು ಮುಂಗಾರಿನ ಹೆಸರು, ಶೇಂಗಾ, ಗೋವಿನಜೋಳ, ಜೋಳ, ಅಲಸಂದಿ, ಈರುಳ್ಳಿ ಬಿತ್ತನೆಗೆ ದಾರಿ ಕಾಯುತ್ತಿದ್ದು, ಅದಕ್ಕಾಗಿ ಕೂರಿಗೆ, ಕುಂಟಿ ಸೇರಿ ಎಲ್ಲ ಕೃಷಿ ಪರಿಕರಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.

Advertisement

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಕೆರೆ ಸಂಜೀವಿನಿ ಯೋಜನೆ, ಎನ್‌ಆರ್‌ಇಜಿ, ಕೃಷಿಭಾಗ್ಯ ಯೋಜನೆಯಡಿ ಜಮೀನಿಗೆ ಇಳಿಜಾರು ಬದುವು-ಒಡ್ಡು ನಿರ್ಮಾಣ ಮತ್ತು ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ನೀರಾವರಿ ಜಮೀನು 7000 ಹೆಕ್ಟೇರ್‌ ಮತ್ತು ಖುಷ್ಕಿ ಜಮೀನು 62600 ಹೆಕ್ಟೇರ್‌ ಸೇರಿ ಒಟ್ಟು 69600 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ 13500 ಹೆಕ್ಟೇರ್‌ ಪ್ರದೇಶದಲ್ಲಿ ತೃಣ ಧಾನ್ಯಗಳು, 23300 ಹೆಕ್ಟೇರ್‌ ಪ್ರದೇಶದಲ್ಲಿ ದ್ವೀದಳ ಧಾನ್ಯಗಳು 20800 ಹೆಕ್ಟೇರ್‌ ಪ್ರದೇಶದಲ್ಲಿ ಎಣ್ಣೆ ಕಾಳು ಮತ್ತು 12000 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದೆ.

ಇದರಲ್ಲಿ ಲಕ್ಷ್ಮೇಶ್ವರ ತಾಲೂಕಿನ ಕೃಷಿ ವಲಯ ಅರೆ ಮಲೆನಾಡು ಪ್ರದೇಶವಾಗಿದ್ದು, ತಾಲೂಕಿನಲ್ಲಿ ಶೇ.60 ಕೆಂಪು ಭೂಮಿ, ಶೇ.40 ಕಪ್ಪುಭೂಮಿಯಿದ್ದು, ಶೇ. 94ರಷ್ಟು ಕ್ಷೇತ್ರ ಮಳೆಯಾಶ್ರಿತವಾಗಿದೆ. ವಾರ್ಷಿಕ ವಾಡಿಕೆ ಮಳೆ 714 ಮಿ.ಮೀ ನಷ್ಟಿದೆ. ಪ್ರಸಕ್ತ ಮುಂಗಾರು ಪೂರ್ವದಲ್ಲಿ ಕೇವಲ 1 ಮಿ.ಮೀ ನಷ್ಟು ಮಳೆಯಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿಯೇ 184 ಮಿ.ಮೀ ನಷ್ಟು ಮಳೆಯಾಗಿತ್ತು. ಆದರೆ ಇದುವರೆಗೂ ಮಳೆಯಾಗದ್ದರಿಂದ ಬಹುತೇಕ ಬಿತ್ತನೆಗೆ ಎಲ್ಲಿ ಹಿನ್ನಡೆಯಾಗಲಿದೆಯೋ ಎಂಬ ಭೀತಿ ರೈತರನ್ನು ಕಾಡುತ್ತಿದೆ.

ಅದೇ ರೀತಿ ಕೃಷಿ ಇಲಾಖೆಯೂ ರೈತರ ಬೇಡಿಕೆಗಳಿಗನುಗುಣವಾಗಿ ಮುಂಗಾರಿನ ಪ್ರಮುಖ ಬೆಳೆಗಳ ಬೀಜ, ಕ್ರಿಮಿನಾಶಕಗಳು, ಕೃಷಿ ಪರಿಕರಗಳನ್ನು ಸಹಾಯಧನದಡಿ ವಿತರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದಲ್ಲಿ 15 ಕ್ವಿಂಟಲ್ ಹೆಸರು, 1.80 ಕ್ವಿ ತೊಗರಿ, 2.40 ಕ್ವಿ ಹೈಬ್ರೀಡ್‌ ಜೋಳದ ಬಿತ್ತನೆ ಬೀಜಗಳು, ಕ್ರಿಮಿನಾಶಕಗಳು ಹಾಗೂ ಕೃಷಿ ಪರಿಕರಗಳು ಲಭ್ಯವಿವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದ್ದಾರೆ.

ಬಿತ್ತನೆಗಾಗಿ ಈಗಾಗಲೇ ಭೂಮಿ ಹದಗೊಳಿಸಿ ಸಿದ್ಧರಾಗಿ ಮಳೆರಾಯನ ಆಗಮನಕ್ಕಾಗಿ ಕಾತುರರಾಗಿದ್ದೇವೆ. ಈ ವರ್ಷವಾದರೂ ಉತ್ತಮ ಮಳೆ-ಬೆಳೆ ಬಂದು ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲಿ ಎಂಬ ಮಹದಾಸೆಯಿದೆ.•ಚಂದ್ರಣ್ಣ ಮೆಕ್ಕಿ, ಪ್ರಗತಿಪರ ರೈತ

ಸತತ ಬರಗಾಲದಿಂದ ರೈತಾಪಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಜೂ. 8 ರಿಂದ ಮುಂಗಾರು ಪ್ರವೇಶವಾಗಲಿದೆ ಎಂದು ಹೇಳಲಾಗಿದೆ. ಈ ಬಾರಿಯಾದರೂ ಉತ್ತಮ ಮಳೆ-ಬೆಳೆಯಾದಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಸಮಸ್ಯೆಯಾಗದಂತೆ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.• ಸಿ.ಬಿ. ಬಾಲರಡ್ಡಿ, ಜಂಟಿ ಕೃಷಿ ನಿರ್ದೇಶಕ

ಎಲ್ಲೆಲ್ಲಿ ಎಷ್ಟೆಷ್ಟು ಬಿತ್ತನೆ?:

ಪ್ರಸಕ್ತ ಸಾಲಿನಲ್ಲಿ 44,000 ನೀರಾವರಿ ಹಾಗೂ 2,01,000 ಖುಷ್ಕಿ ಸೇರಿದಂತೆ ಒಟ್ಟು 2,45,000 ಪ್ರದೇಶದಲ್ಲಿ ಬಿತ್ತನೆಯಾಗಲಿದೆ. ಅದರಲ್ಲಿ 19,500 ನೀರಾವರಿ, 35000 ಖುಷ್ಕಿ ಸೇರಿದಂತೆ ಒಟ್ಟು 54,500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ರಾಗಿ, ಗೋವಿನ ಜೋಳ, ಹೈಬ್ರಿಡ್‌ ಜೋಳ, ಸಜ್ಜೆ, ಇತರೆ ಸೇರಿದಂತೆ ತೃಣ ಧಾನ್ಯ ಬೆಳೆ ಬಿತ್ತನೆ ಗುರಿ ಹೊಂದಿದೆ. 10 ಸಾವಿರ ನೀರಾವರಿ, 93,900 ಖುಷ್ಕಿ ಸೇರಿದಂತೆ ಒಟ್ಟು 1,03,900 ಹೆಕ್ಟೇರ್‌ ಕ್ಷೇತ್ರದಲ್ಲಿ ತೊಗರಿ, ಹೆಸರು, ಹುರುಳಿ, ಉದ್ದು, ಮಡಿಕೆ, ಅಲಸಂದಿ ಸೇರಿದಂತೆ ಇತರೆ ದ್ವಿದಳ ಧಾನ್ಯ ಬಿತ್ತನೆಯಾಗುವ ಸಾಧ್ಯತೆಯಿದೆ. 3,500 ಸಾವಿರ ನೀರಾವರಿ, 47,100 ಸಾವಿರ ಖುಷ್ಕಿ ಸೇರಿದಂತೆ ಒಟ್ಟು 50,600 ಹೆಕ್ಟೇರ್‌ನಲ್ಲಿ ಶೇಂಗಾ, ಸೂರ್ಯಕಾಂತಿ, ಎಳ್ಳು ಸೇರಿದಂತೆ ಇತರೆ ಎಣ್ಣೆಕಾಳು ಹಾಗೂ 11,000 ನೀರಾವರಿ, 25,000 ಖುಷ್ಕಿ ಸೇರಿದಂತೆ ಒಟ್ಟು 36,000 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳಾದ ಬಿಟಿ ಹತ್ತಿ, ಕಬ್ಬು ಬಿತ್ತನೆ ಗುರಿ ಹೊಂದಿದೆ.
25 ಸಾವಿರ ಕ್ವಿ. ಬಿತ್ತನೆ ಬೀಜಕ್ಕೆ ಬೇಡಿಕೆ:

ಬೇಡಿಕೆಗೆ ತಕ್ಕಂತೆ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಮತ್ತು ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಳ್ಳುವತ್ತ ಗಮನ ಹರಿಸಿದೆ. ಈ ಪೈಕಿ ಹೈಬ್ರಿಡ್‌ ಜೋಳ, ಮು.ಜೋಳ, ಸಜ್ಜೆ, ಹೆಸರು, ತೊಗರಿ, ಶೇಂಗಾ, ಸೂರ್ಯಕಾಂತಿ, ಹೈಬ್ರಿಡ್‌ ಹತ್ತಿ ಸೇರಿದಂತೆ ಸುಮಾರು 22 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಬರಲಿದ್ದು, ಈಗಾಗಲೇ ಇಲಾಖೆಯಿಂದ 540 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಮಳೆ ಪ್ರಮಾಣ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಮತ್ತಷ್ಟು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ ಕೃಷಿ ಜಂಟಿ ನಿರ್ದೇಶಕ ಸಿ.ಬಿ. ಬಾಲರಡ್ಡಿ. ಬಿತ್ತನೆ ಬೀಜದೊಂದಿಗೆ ಅಗತ್ಯ ರಸಗೊಬ್ಬರ ದಾಸ್ತಾನಿಗೂ ಇಲಾಖೆ ಸಿದ್ಧತೆ ನಡೆಸಿದೆ. ಯೂರಿಯಾ, ಡಿಎಪಿ, ಪೊಟ್ಯಾಶ್‌, ಕಾಂಪ್ಲೆಕ್ಸ್‌ ಗೊಬ್ಬರಕ್ಕೆ ಬೇಡಿಕೆ ಇದೆ. ಸದ್ಯ ಖಾಸಗಿ ಮಳಿಗೆಗಳಲ್ಲಿ 3,835.82, ಸಹಕಾರ ಸಂಘಗಳಲ್ಲಿ 369.53 ಸೇರಿದಂತೆ ಒಟ್ಟು 5666.34 ಟನ್‌ ರಸಗೊಬ್ಬರ ದಾಸ್ತಾನಿದ್ದು, ಇದಲ್ಲದೇ, ಮುಂಗಾರು ಹಂಗಾಮಿಗೆ ಒಟ್ಟಾರೆ 37292 ಟನ್‌ ರಸ ಗೊಬ್ಬರ ಪೂರೈಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ.
•ವೀರೇಂದ್ರ ನಾಗಲದಿನ್ನಿ
Advertisement

Udayavani is now on Telegram. Click here to join our channel and stay updated with the latest news.

Next