Advertisement

ರೈತರ ಸಾಲ ಮನ್ನಾಕ್ಕೆ ಸಿದ್ದು ಷರತ್ತು

03:45 AM Jun 25, 2017 | |

ಬೆಂಗಳೂರು: ರೈತರ ಸಾಲ ಮನ್ನಾ ಘೋಷಣೆ ಮಾಡಿ ಅಧಿಕೃತ ಆದೇಶವನ್ನೂ ಹೊರಡಿಸಿರುವ ಕರ್ನಾಟಕ ಸರಕಾರ, ಸಾಲ ಮನ್ನಾದ ಪ್ರಯೋಜನ ಸಿಗಬೇಕಾದರೆ ಕೆಲವು ಷರತ್ತುಗಳಿಗೆ ಬದ್ಧವಾಗಿರಬೇಕು ಎಂದು ಖಡಕ್ಕಾಗಿ ಸೂಚನೆ ನೀಡಿದೆ. 

Advertisement

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಲ್ಯಾಂಪ್ಸ್‌ , ಡಿಸಿಸಿ ಬ್ಯಾಂಕ್‌ಗಳು ಮತ್ತು ಪಿಕಾರ್ಡ್‌ ಬ್ಯಾಂಕ್‌ಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ 2017ರ ಜೂನ್‌ 20ರ ವರೆಗೆ ಹೊಂದಿರುವ ಹೊರಬಾಕಿ ಸಾಲಕ್ಕೆ ಮಾತ್ರ ಸಾಲ ಮನ್ನಾ ಅನ್ವಯವಾಗುತ್ತದೆ. ಆದರೆ, ಕೃಷಿಯೇತರ ಸಾಲ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ, ಪಶುಭಾಗ್ಯ ಯೋಜನೆಯಡಿ ಪಡೆದ ಸಾಲಗಳಿಗೆ ಇದು ಅನ್ವಯವಾಗುವುದಿಲ್ಲ. ಹೊರಬಾಕಿ ಇರುವ ಅಲ್ಪಾವಧಿ ಸಾಲದ ಪೈಕಿ 50 ಸಾವಿರ ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಆಗುತ್ತದೆ.

ರೈತರಿಗೆ ಷರತ್ತುಗಳು
1. ಸಂಪೂರ್ಣ ಸಾಲ ಚುಕ್ತಾವಾದರೂ 
ನಿಮ್ಮ ಸಾಲದ ಮರುಪಾವತಿ ಅವಧಿ ಮುಗಿಯು ವವರೆಗೆ ಹೊಸ ಸಾಲ ಅಸಾಧ್ಯ
(ಅಂದರೆ ಕಳೆದ ಮಾರ್ಚ್‌ ಅಥವಾ ಎಪ್ರಿಲ್‌ನಲ್ಲಿ ಸಾಲ ಪಡೆದಿದ್ದು, ಅದು ಮನ್ನಾ ಆದರೂ, ಈಗಲೇ ಹೊಸ ಸಾಲ ಸಿಕ್ಕಲ್ಲ. ಏನಿದ್ದರೂ ಮುಂದಿನ ಮಾರ್ಚ್‌ ಅಥವಾ ಎಪ್ರಿಲ್‌ಗೆ ಸಿಗೋದು.)

2. ರೂ. 50 ಸಾವಿರಕ್ಕಿಂತ ಹೆಚ್ಚು ಸಾಲ ಪಡೆದವರು,ಮರು ಪಾವತಿಯ ಅವಧಿಯೊಳಗೆ 50 ಸಾವಿರ ಕ್ಕಿಂತ ಹೆಚ್ಚು ಅಸಲು ಪಾವತಿಸಿರಬೇಕು.(ಅಂದರೆ 2017ರ ಜೂನ್‌ 20ಕ್ಕೆ ಹೊರಬಾಕಿ ಇರುವ ಸಾಲ ಚಾಲ್ತಿಯಲ್ಲಿದ್ದರೆ ಸಾಲ ಪಡೆದ ರೈತರು 2017ರ ಜೂ. 20 ಅಥವಾ ಸಾಲ ಮರುಪಾವತಿಗೆ ಇರುವ ಅಂತಿಮ ಗಡುವಿನೊಳಗೆ ಈ ಮೊತ್ತ ಪಾವತಿಸಿರಬೇಕು)

3. 20-06-2017ಕ್ಕೆ ಹೊರಬಾಕಿ ಇರುವ ಸಾಲ ಸುಸ್ತಿಯಾಗಿದ್ದಲ್ಲಿ, ಈ ಅವಧಿಗೆ ಬಾಕಿ ಇರುವ ಅಸಲು ಮತ್ತು ಬಡ್ಡಿ ಸೇರಿ ರೂ. 50 ಸಾವಿರವನ್ನು ಈ ವರ್ಷಾಂತ್ಯದೊಳಗೆ ಪಾವತಿಸಬೇಕು. 

Advertisement

4. ಯಾವುದೇ ಸದಸ್ಯರು ಒಂದಕ್ಕಿಂತ ಹೆಚ್ಚು ಸಹಕಾರ ಸಂಸ್ಥೆಗಳಲ್ಲಿ ಸಾಲ ಪಡೆದಿದ್ದರೆ ಒಂದು ಸಂಸ್ಥೆಯ ಸಾಲಕ್ಕೆ ಮಾತ್ರ ಈ ಯೋಜನೆ ಅನ್ವಯ.

5. ಒಂದು ವೇಳೆ ಸಾಲ ಪಡೆದ ರೈತರು ಮೃತರಾಗಿದ್ದಲ್ಲಿ ಅವರ ವಾರಸುದಾರರು ಸಾಲ ಮರುಪಾವತಿಸಿದರೆ ಅವರಿಗೂ ಸಾಲ ಮನ್ನಾ ಸೌಲಭ್ಯ ಅನ್ವಯ.

6. ಸಾಲ ಮನ್ನಾಕ್ಕೆ ಅರ್ಹವಿರುವ 50 ಸಾವಿರ ರೂ. ಅಸಲು ಮತ್ತು ಬಡ್ಡಿಯೊಂದಿಗೆ ಜಾರಿಯಲ್ಲಿರುವ ಬಡ್ಡಿ ಸಹಾಯಧನ ಯೋಜನೆಯ ಕ್ಲೈಮ್‌ ಬಿಲ್‌ಗ‌ಳನ್ನು ಸಾಲ ಮರುಪಾವತಿಸಲು ನಿಗದಿಪಡಿಸಿದ ತಿಂಗಳಿನ 30 ದಿನಗಳೊಳಗೆ ಸಲ್ಲಿಸಬೇಕು. 

ಸಹಕಾರ ಸಂಘಗಳಿಗೆ ಷರತ್ತುಗಳು
1. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳಿಗೆ ಸಂಯೋಜನೆಯಾಗಿರುವ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್‌ಗಳು, ಡಿಸಿಸಿ ಬ್ಯಾಂಕ್‌ಗಳು ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದ ಕ್ಲೈಮ್‌ ಬಿಲ್‌ಗ‌ಳನ್ನು ತಯಾರಿಸಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಮತ್ತು ಕರ್ನಾಟಕ ರಾಜ್ಯ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಮೂಲಕ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಬೇಕು.

2. ವಾಣಿಜ್ಯ ಬ್ಯಾಂಕ್‌ಗಳಿಗೆ ಸಂಯೋಜನೆಯಾಗಿರುವ ಅಥವಾ ಸ್ವತಂತ್ರ ಕೃಷಿ ಪತ್ತಿನ ಸಹಕಾರ ಸಂಘಗಳ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದ ಕ್ಲೈಮ್‌ ಬಿಲ್‌ಗ‌ಳನ್ನು ತಯಾರಿಸಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಮೂಲಕ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಬೇಕು.

3.ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್‌) ಬ್ಯಾಂಕ್‌ಗಳು ಕ್ಲೆ „ಮ್‌ ಬಿಲ್‌ಗ‌ಳನ್ನು ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಕಸ್ಕಾರ್ಡ್‌) ಬ್ಯಾಂಕ್‌ ಮೂಲಕ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಬೇಕು.

4. ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ನಿಬಂಧಕರು ಆಡಳಿತಾತ್ಮಕ ಮಾರ್ಗಸೂಚಿಗಳನ್ನು ಹೊರಡಿಸಿ ಯೋಜನೆ ಪರಿಣಾಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next