Advertisement
ಅನ್ನದಾತರ ಒಗ್ಗಟ್ಟಿನ ಧ್ವನಿಯಾಗಿ, ರೈತ ಸಮೂಹದ ದೊಡ್ಡ ಶಕ್ತಿಯಾಗಿ ರಾಜ್ಯವ್ಯಾಪಿ ಪ್ರಜ್ವಲಿಸುತ್ತಾ ಚಳವಳಿ, ಹೋರಾಟಗಳಿಗೆ ದಿವ್ಯ ಶಕ್ತಿಯನ್ನು ತುಂಬಿ ಯಶಸ್ಸಿನ ದಿಕ್ಕಿನೆಡೆಗೆ ಮುನ್ನಡೆಸುತ್ತಿದ್ದ ರೈತಸಂಘ ಮತ್ತೆ ಮತ್ತೆ ವಿಭಜನೆಗೊಳ್ಳುತ್ತಿರುವುದು ಹೋರಾಟದ ಅಬ್ಬರವನ್ನು ಕುಗ್ಗಿಸುವಂತೆ ಮಾಡಿದೆ. ಆಳುವ ಸರ್ಕಾರಗಳು ರೈತ ಹೋರಾಟ, ಚಳವಳಿಗಳನ್ನು ಸುಲಭವಾಗಿ ದಮನ ಮಾಡಲು ಎಡೆಮಾಡಿಕೊಟ್ಟಿದೆ.
Related Articles
Advertisement
ಪ್ರಬಲ ಧ್ವನಿ ಕಣ್ಮರೆ: ಸಂಘಟನೆ, ಹೋರಾಟದ ಮೂಲಕವಾಗಿ ನಾಯಕರಾಗಿ ಬೆಳವಣಿಗೆ ಕಂಡ ಕೆ.ಎಸ್.ಪುಟ್ಟಣ್ಣಯ್ಯನವರ ನಿಧನದೊಂದಿಗೆ ರೈತಸಂಘದ ದೊಡ್ಡ ಶಕ್ತಿ ಕಣ್ಮರೆಯಾಯಿತು. ಅವರು ಬದುಕಿದ್ದ ಸಮಯದಲ್ಲೂ ರೈತಸಂಘ ವಿಭಜನೆಯಾಗಿದ್ದರೂ ಹೋರಾಟದ ಧ್ವನಿ ಸಂಪೂರ್ಣ ಅಡಗಿರಲಿಲ್ಲ. ಈಗ ಆ ಧ್ವನಿಯೇ ಸಂಪೂರ್ಣ ದಮನವಾಗಿರುವಂತೆ ಜನಮಾನಸದಲ್ಲಿ ಭಾಸವಾಗುತ್ತಿದೆ.
ವೀರಾವೇಶದ ಹೋರಾಟದೊಂದಿಗೆ ಆಳುವವರ ತೊಡೆತಟ್ಟಿ ನಿಲ್ಲುವ ಎದೆಗಾರಿಕೆಯನ್ನು ಬೆಳೆಸಿಕೊಂಡಿದ್ದ ರೈತಸಂಘದೊಳಗೆ ನಾಯಕತ್ವವೇ ಇಲ್ಲದಂತಾಗಿದೆ. ರೈತ ಸಂಘದ ಸಿದ್ಧಾಂತಗಳಿಗೆ ಅನುಗುಣವಾಗಿ ಕೆಲಸ ಮಾಡುವವರ ಸಂಖ್ಯೆಯೂ ಕ್ಷೀಣಿಸಿದೆ. ವ್ಯಕ್ತಿಗತ ಹಾಗೂ ವ್ಯಕ್ತಿ ಆಧಾರಿತ ಕೆಲಸಗಳು ಹೆಚ್ಚಾಗಿವೆ.
ಇದೇ ಕಾರಣಕ್ಕೆ ಹೋರಾಟಗಳು ವ್ಯಕ್ತಿ ಆಧಾರಿತವಾಗಿಯೇ ತಿರುವು ಪಡೆದುಕೊಳ್ಳುತ್ತಿವೆ. ಇವೂ ಸಹ ರೈತಸಂಘದ ಪ್ರಾಬಲ್ಯ ಕುಗ್ಗುವುದಕ್ಕೆ ಕಾರಣ ಎನ್ನುವುದು ಸಂಘಟನೆಯೊಳಗೆ ಹಲವರು ಹೇಳುವ ಮಾತಾಗಿದೆ.
ಸಾಮೂಹಿಕ ನಾಯಕತ್ವವಿಲ್ಲ: ವ್ಯಕ್ತಿಗತ ಸ್ವರೂಪವನ್ನು ಬಿಟ್ಟು ಸಮಸ್ಯೆ ಆಧಾರಿತವಾಗಿ ಚಳವಳಿಗಳು ನಡೆದರೆ ಅಲ್ಲಿ ಯಾವ ಸಮಸ್ಯೆಯೂ ಎದುರಾಗುವುದಿಲ್ಲ. ಇದಕ್ಕೆ ಸಾಮೂಹಿಕ ನಾಯಕತ್ವದ ದೊಡ್ಡ ಕೊರತೆ ಎದ್ದು ಕಾಣುತ್ತಿದೆ. ಸಿದ್ಧಾಂತ ಹಾಗೂ ವಿಚಾರದ ಮೇಲೆ ಸಮಸ್ಯೆ ನಾಯಕನಾಗದೆ ವ್ಯಕ್ತಿ ನಾಯಕತ್ವದ ಪ್ರತಿಷ್ಠೆಯೊಳಗೆ ಹೋರಾಟಗಳು ನೆಲಕಚ್ಚುವಂತಾಗಿರುವುದು ವಿಪರ್ಯಾಸದ ಸಂಗತಿ.
ಯುವಕರನ್ನು ಸೆಳೆಯುತ್ತಿಲ್ಲ: ರೈತಸಂಘ ಶಕ್ತಿಯುತವಾಗಿದ್ದ ಸಮಯದಲ್ಲಿ ಹೊಸ ನಾಯಕತ್ವ ಹುಟ್ಟಿಗೆ ಪ್ರೇರಣೆ ನೀಡುತ್ತಿತ್ತು. ಯುವಕರನ್ನು ಸಂಘಟಿಸಿ ಹೋರಾಟಕ್ಕೆ ಶಕ್ತಿ ಕರೆತರಲಾಗುತ್ತಿತ್ತು. ಹಳ್ಳಿ ಹಳ್ಳಿಗಳಿಗೆ ಹೋಗಿ ಜನರನ್ನು ಜಾಗೃತಿಗೊಳಿಸುವ, ಸಂಘಟಿಸುವ ಕೆಲಸ ನಿರಂತರವಾಗಿ ನಡೆದಿತ್ತು.
ಕಾರ್ಯಕರ್ತರಿಗೆ ಕಾರ್ಯಾಗಾರಗಳು, ಅಧ್ಯಯನ ಶಿಬಿರಗಳನ್ನು ನಡೆಸಿ ಸರ್ಕಾರಗಳ ಆರ್ಥಿಕ ನೀತಿಗಳು ಹೇಗಿವೆ, ರೈತರ ಸಮಸ್ಯೆಗಳು ಏನಿವೆ, ಸರ್ಕಾರದ ಲೋಪದೋಷಗಳೇನು, ನಮ್ಮ ಹೋರಾಟ ಹೇಗಿರಬೇಕು ಎಂಬ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿತ್ತು. ಈಗ ಅವೆಲ್ಲಾ ಚಟುವಟಿಕೆಗಳು ಸಂಪೂರ್ಣ ನಿಂತುಹೋಗಿರುವುದರಿಂದ ರೈತಸಂಘ ಶಕ್ತಿ ಕುಗ್ಗುವಂತಾಗಿದೆ. ಸಂಘಟನೆ ನಿಂತ ನೀರಾಗಿದೆ.
ಕಾಲಕ್ಕೆ ಅನುಗುಣವಾಗಿ ರೈತಸಂಘ ಹೊಸತನವನ್ನು ಕಂಡುಕೊಂಡು ದಿಟ್ಟ ಹೋರಾಟ ನಡೆಸುವ ಯುವ ಮನಸ್ಸುಗಳನ್ನು ಜಾಗೃತಗೊಳಿಸಿ, ಅವರಿಗೆ ಅನ್ನದಾತರ ಸಮಸ್ಯೆಗಳನ್ನು ಅರಿವು ಮಾಡಿಕೊಟ್ಟು ಸಂಘಟನಾ ಶಕ್ತಿಯೊಂದಿಗೆ ರೈತ ಹೋರಾಟವನ್ನು ಹೊಸ ದಿಕ್ಕಿನಲ್ಲಿ ಸಮರ್ಥವಾಗಿ ಮುನ್ನಡೆಸಬೇಕಿತ್ತು. ರೈತಸಂಘದೊಳಗಿನ ಆಂತರಿಕ ಸಂಘರ್ಷ ಹೋರಾಟವನ್ನು ದಿಕ್ಕೆಡಿಸಿದೆ.
ಹಸಿರು ಟವಲ್ ರೈತಸಂಘದ ಸ್ವತ್ತಲ್ಲ: ಹಸಿರು ಟವೆಲ್ ಇಂದು ರೈತಸಂಘದ ಸ್ವತ್ತಾಗಿ ಉಳಿದಿಲ್ಲ. ಯಾರು ಬೇಕಾದರೂ ಪರಿಸ್ಥಿತಿಗೆ ಅನುಗುಣವಾಗಿ, ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದಾಗಿದೆ. ಹಸಿರು ಟವಲ್ ಧರಿಸುವವರು ರೈತಸಂಘದ ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆಯೇ ಎನ್ನುವ ಪ್ರಶ್ನೆಯೂ ಇದೇ ಸಂದರ್ಭದಲ್ಲಿ ಉದ್ಭವಿಸುತ್ತಿದೆ.
ಸಿದ್ಧಾಂತ, ಚಳವಳಿ, ವಿಚಾರ ಬಿಟ್ಟವರೂ ರೈತಸಂಘದವರು ಎಂದು ಹೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ನಾಯಕತ್ವದ ಮೇಲಿನ ಅನ್ನದಾತರ ನಂಬಿಕೆ ಕಳೆದುಕೊಳ್ಳುತ್ತಾ, ಅವಿಶ್ವಾಸ ಮೂಡುತ್ತಿದೆ. ಗೊಂದಲಮಯ ಪರಿಸ್ಥಿತಿ ಇಂದು ರೈತಸಂಘದೊಳಗೆ ನಿರ್ಮಾಣವಾಗಿದೆ. ಯಾರಿಗೂ ಯಾರ ಮೇಲೂ ನಂಬಿಕೆ ಇಲ್ಲದಂತಹ ಸನ್ನಿವೇಶದೊಳಗೆ ರೈತಸಮೂಹ ಸಿಲುಕಿದೆ.
ರೈತಸಂಘದೊಳಗೆ ಎರಡನೇ ಹಂತದ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಇಂದೂ ಸಹ ಹೋರಾಟವನ್ನು ಸಮರ್ಥವಾಗಿ ಮುನ್ನಡೆಸುವ ತಾಕತ್ತನ್ನು ಹೊಂದಿರುವ ನಾಯಕರು ರೈತಸಂಘದಲ್ಲಿದ್ದಾರೆ. ಅವರೆಲ್ಲರೂ ಪ್ರತ್ಯೇಕವಾಗಿದ್ದಾರೆ. ಅವರನ್ನು ಒಂದೇ ವೇದಿಕೆಗೆ ತರುವ ಪರಿಸ್ಥಿತಿಯೂ ಈಗಿಲ್ಲ. ಅವರೊಳಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಒಂದುಗೂಡಿಸಲಾಗದಷ್ಟು ದೂರಕ್ಕೆ ಅವರನ್ನು ಎಳೆದೊಯ್ದಿವೆ.
* ಮಂಡ್ಯ ಮಂಜುನಾಥ್