ಮಂಡ್ಯ: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಜಲಸಂಘರ್ಷಕ್ಕೆ ಕಾರಣ ವಾಗಿರುವ ಕಾವೇರಿ ವಿವಾದದ ಇತ್ಯರ್ಥಕ್ಕಾಗಿ ಜಾರಿಯಾಗಿರುವ ಐ ತೀರ್ಪು ಇನ್ನೂ 15 ವರ್ಷ ಮುಂದುವರಿಯಲಿದ್ದು, ಒಂದು ವೇಳೆ ರೈತರು ಜಾಗೃತರಾಗಿ ಹೋರಾಟ ನಡೆಸದಿದ್ದರೆ ಈ ಭಾಗದ ಕೃಷಿ ಸಂಪೂರ್ಣ ನಾಶವಾಗಲಿದೆ ಎಂದು ಬರಹಗಾರ ಅರ್ಜುನಹಳ್ಳಿ ಪ್ರಸನ್ನಕುಮಾರ್ ಆತಂಕ ವ್ಯಕ್ತಪಡಿಸಿದರು.
ಕಾವೇರಿ ಪ್ರಕರಣದ ಒಳ ಸುಳಿಗಳನ್ನು ಅರ್ಥೈಸಿಕೊಳ್ಳುವ ಅನಿವಾರ್ಯತೆ ಇದೆ. ಕೇವಲ ಪ್ರತಿಭಟನೆಗಳಿಂದ ಮಾತ್ರವೇ ಪರಿಹಾರ ಸಾಧ್ಯವಾಗುವುದಿಲ್ಲ. ಆದ್ದರಿಂದ ಸೂಕ್ಷ್ಮ ನೆಲೆಯಲ್ಲಿ ತೀವ್ರತೆಯ ಹೋರಾಟ ನಡೆಸಬೇಕು ಎಂದು ಹೇಳಿದರು.
ಸಂವಿಧಾನ ಪೀಠಕ್ಕೆ ವರ್ಗಾಯಿಸಿ: ಕಾವೇರಿ ತೀರ್ಪು ಹೊರ ಬಿದ್ದ ನಂತರ ನಾವು ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಿತ್ತು. ಇಡೀ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವಂತೆ ಒತ್ತಾಯಿಸಬೇಕಿತ್ತು. ಆದರೆ, ಅಂತಹ ಯಾವುದೇ ಪ್ರಕ್ರಿಯೆಯನ್ನು ಮಾಡಲಿಲ್ಲ. ಇದು ರಾಜಕಾರಣಿಗಳ ಇಚ್ಚಾಸಕ್ತಿ ಕೊರತೆಯ ಜೊತೆಗೆ ಜನಸಾಮಾನ್ಯರಿಗೆ ಅರಿವಿಲ್ಲದಿರುವುದು ಕೂಡ ಕಾರಣವಾಗಿದೆ ಎಂದು ವಿವರಿಸಿದರು.
ಕೃಷಿ ಸ್ವಾತಂತ್ರ್ಯ ಹರಣ: ಕಾವೇರಿ ಪ್ರಾಧಿಕಾರ ಇದುವರೆಗೂ ಸಂಕಷ್ಟ ಸೂತ್ರದ ಬಗ್ಗೆ ಸ್ಪಷ್ಟತೆ ವ್ಯಕ್ತಪಡಿಸಿಲ್ಲ, ಇಂತಿಂತಹ ಕಾಲಘಟ್ಟದಲ್ಲಿ ಇಂತಹುದೇ ಬೆಳೆಯನ್ನು ಬೆಳೆಯಬೇಕೆಂಬ ನಿರ್ಬಂಧವನ್ನು ಹೇರುವುದರ ಮೂಲಕ ಕಾವೇರಿ ಅಚ್ಚುಕಟ್ಟು ಭಾಗದ ರೈತರ ಕೃಷಿ ಸ್ವಾತಂತ್ರ್ಯವನ್ನು ಹರಣ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.
Advertisement
ನಗರದ ಕೆ.ವಿ.ಶಂಕರಗೌಡ ಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಆಯೋಜಿಸಿದ್ದ ಕಾವೇರಿ ಕಗ್ಗಂಟು ಪರಿಹಾರ ಕುರಿತ ಮುಕ್ತ ಸಂವಾದದಲ್ಲಿ ಮಾತನಾಡಿದ ಅವರು, ಕರ್ನಾಟಕದ ವಕೀಲರಾದ ನಾರಿಮನ್ ಕಾವೇರಿ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಎಸಗುತ್ತಾ ಬಂದಿದ್ದಾರೆ.
Related Articles
Advertisement
ನೇಣಿನ ಕುಣಿಕೆ: ಕಾವೇರಿ ಐ ತೀರ್ಪಿನಲ್ಲಿ ತಮಿಳುನಾಡಿಗೆ ಹಂಚಿಕೆ ಮಾಡಿದ್ದ ಪಾಲಿನಲ್ಲಿ 14.75 ಟಿಎಂಸಿ ನೀರನ್ನು ಕಡಿತಗೊಳಿಸಿ ರಾಜ್ಯಕ್ಕೆ ನೀಡಿದ್ದು, ಸಂತಸ ಪಡುವುದಕ್ಕಿಂತ ರೈತರ ಪಾಲಿಗೆ ನೇಣಿನ ಕುಣಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಂಡಳಿ ಕೈಯಲ್ಲಿ ಜಲ ಹಕ್ಕು: ಅಂತಿಮ ತೀರ್ಪಿನಿಂದ ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಯ ರೈತರ ಹಕ್ಕು ಕಾವೇರಿ ನಿರ್ವಹಣಾ ಮಂಡಳಿ ಕೈಗೆ ಸೇರಿದೆ. ಇಲ್ಲಿನ ಅಂತರ್ಜಲದ ಹಕ್ಕು ಕೂಡ ಮಂಡಳಿ ಕೈಯಲ್ಲಿದೆ. ವೀಸಿ ನಾಲೆ ವ್ಯಾಪ್ತಿಯಲ್ಲಿ 4 ಲಕ್ಷ ಎಕರೆ ವ್ಯಾಪ್ತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಈಗ ನೀರು ಹಂಚಿಕೆ ಮಾಡಿರುವ ಪ್ರಕಾರ ಈ ವ್ಯಾಪ್ತಿಯಲ್ಲಿ ಕೇವಲ 40 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ವಾಣಿಜ್ಯ ಬೆಳೆ (ಕಬ್ಬು, ಬಾಳೆ, ತೆಂಗು) ಬೆಳೆಯಲು ಅವಕಾಶ ಕಲ್ಪಿಸಿದ್ದಾರೆ.
ನೀರು ಹಂಚಿಕೆ: ಹೈನುಗಾರಿಕೆ ಭತ್ತ ಒಂದು ಬೆಳೆ 1.16 ಲಕ್ಷ ಎಕರೆಯಲ್ಲಿ ಬೆಳೆಯಲು ಅವಕಾಶವಿದ್ದು, ಜೂನ್-ಸೆಪ್ಟಂಬರ್ ಖಾರೀಪ್ ಖುಷ್ಕಿ ಬೆಳೆ 20 ಸಾವಿರ ಎಕರೆ, ಅಕ್ಟೋಬರ್-ಜನವರಿ ರಾಬಿ ಖುಷ್ಕಿ 20 ಸಾವಿರ ಎಕರೆಯಲ್ಲಿ ಬೆಳೆಯಲು ಅವಕಾಶವಿದೆ. 40 ಸಾವಿರ ಎಕರೆ ಕಬ್ಬಿಗೆ 13.04 ಟಿಎಂಸಿ, ಭತ್ತಕ್ಕೆ 23.11 ಟಿಎಂಸಿ, ಖಾರೀಪ್ ಖುಷ್ಕಿಗೆ 1.09 ಟಿಎಂಸಿ, ರಾಗಿ ಖುಷ್ಕಿಗೆ 01.74 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಈ ರೀತಿ ಹಂಚಿಕೆ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಜನಜೀವನ ಅಸ್ತವ್ಯಸ್ತ: ರಾಜ್ಯದ ರೈತರಿಗೆ ನೀರು ಹಂಚಿಕೆ ಬಗ್ಗೆ ಶತಮಾನಗಳಿಂದಲೂ ನಿರ್ಲಕ್ಷ್ಯ ತೋರುತ್ತ ಬಂದಿದ್ದು, ಅದು ಇಂದು ಕೂಡ ಮುಂದುವರಿದಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದದ ಸಂದರ್ಭದಲ್ಲಿ ತಮಿಳುನಾಡಿನ ರೈತರಿಗೆ 2 ಬೆಳೆಗೆ ನೀರು ಕೊಡದಿದ್ದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂದು ಕಾಳಜಿ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ನಮ್ಮ ರಾಜ್ಯದ ಪರ ವಕೀಲರು ತುಟಿ ಬಿಚ್ಚಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂವಾದದಲ್ಲಿ ಡಾ.ಎಚ್.ಎನ್.ರವೀಂದ್ರ, ಪ್ರೊ.ಹುಲ್ಕೆರೆ ಮಹದೇವು, ಕೀಲಾರ ಕೃಷ್ಣೇಗೌಡ, ವೆಂಕಟಗಿರಿಯಯ್ಯ, ರಮೇಶ್‌ಗೌಡ, ಮಾಗಡಿ ಜಿಪಂ ಮಾಜಿ ಸದಸ್ಯೆ ಕಲ್ಪನಾ ಶಿವಣ್ಣ, ಜಿ.ಬಿ.ನವೀನ್‌ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪ್ರೊ.ಜಯಪ್ರಕಾಶ್‌ಗೌಡ, ಎಚ್.ಡಿ.ಜಯರಾಮ, ಉಮಾಶಂಕರ್, ಟಿ.ಕೆ.ಸೋಮಶೇಖರ್, ಬಿ.ಟಿ.ಮೋಹನ್‌ಕುಮಾರ್, ಎಂ.ಬಿ.ನಾಗಣ್ಣಗೌಡ, ಎಂ.ಶಿವಕುಮಾರ್, ವಿವಿಧ ಸಂಘಟನೆ ಕಾರ್ಯಕರ್ತರು, ಕೆಜೆಯುನ ಜಿಲ್ಲಾ ಹಾಗೂ ತಾಲೂಕಿನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ರಾಜ್ಯಕ್ಕೆ ಕಾವೇರಿ ವಿಷಯದಲ್ಲಿ ನ್ಯಾಯ ಸಿಕ್ಕಿಲ್ಲ:
ನ್ಯಾಯಾಲಯದಲ್ಲಿ ರಾಜ್ಯದ ಪರ ಹೋರಾಟ ಮಾಡಿದ ನ್ಯಾಯವಾದಿ ನಾರಿಮನ್, ರಾಜ್ಯಕ್ಕೆ ನ್ಯಾಯ ಕೊಡಿಸಬೇಕೆಂಬ ಮನಸ್ಸು ಹೊಂದಿರಲಿಲ್ಲ. ನಮ್ಮ ರಾಜ್ಯ ಸರ್ಕಾರ ಕೂಡ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆಂಬಂತೆ ನಡೆದುಕೊಂಡರು.
ನೀರು ಸಂಗ್ರಹ ನೆಪದಲ್ಲಿ ಮೇಕೆದಾಟು ಸದ್ದು:
ಸದ್ಯ ಹೆಚ್ಚುವರಿ ನೀರು ಸಂಗ್ರಹ ನೆಪದಲ್ಲಿ ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸದ್ದು ಮಾಡುತ್ತಿದೆ. ಆದರೆ, ಇದರಿಂದ ಕಾವೇರಿ ಕೊಳ್ಳದ ಜನತೆಗೆ ಯಾವುದೇ ಪ್ರಯೋಜನವಾಗದು. ಈಗಾಗಲೇ ಹಂಚಿಕೆ ಮಾಡಿರುವ ನೀರಿಗಿಂತ ಹೆಚ್ಚು ನೀರು ಪಡೆಯುವ ಅಧಿಕಾರ ರಾಜ್ಯಕ್ಕಿಲ್ಲ. ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಗಂಭೀರವಾಗಿ ಹೋರಾಟ ಮಾಡಿಲ್ಲ. 1991ರಲ್ಲಿ ನ್ಯಾಯಾಧಿ ಕರಣಕ್ಕೆ ಕಾವೇರಿ ಕೊಳ್ಳದಲ್ಲಿ 1.25 ಕೋಟಿ ಜನರಿದ್ದಾರೆ ಎಂದು ಪ್ರಮಾಣ ಪತ್ರ ಸಲ್ಲಿಸಿದರು. ಜತೆಗೆ ಕುಡಿಯುವ ನೀರಿನ ಅವಲಂಬನೆಗೆ ನಗರ ಪ್ರದೇಶಗಳನ್ನು ಮಾತ್ರ ಪರಿಗಣಿಸಿದರು.
ಕಾವೇರಿ ಕಣಿವೆ ಭಾಗದವರಿಗೆ ಅನ್ಯಾಯ:
ಆದರೆ, ಗ್ರಾಮೀಣ ಪ್ರದೇಶಗಳ ಜನ-ಜಾನುವಾರುಗಳ ಬಗ್ಗೆ ಚಕಾರ ಎತ್ತಲ್ಲಿಲ್ಲ. ಅಂತಿಮ ತೀರ್ಪು ಹೊರ ಬೀಳುವ ವೇಳೆಗೆ ಕಾವೇರಿ ಕಣಿವೆ ಅವಲಂಬಿಸಿರುವ ಜನಸಂಖ್ಯೆ 3 ಕೋಟಿ ಆಗಿದ್ದು, ಅದನ್ನು ಪರಿಷ್ಕರಿಸಿ ಪ್ರಮಾಣ ಪತ್ರ ಸಲ್ಲಿಸುವ ಗೊಡವೆಗೆ ಹೋಗದ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ಜನರಿಗೆ ಅನ್ಯಾಯ ಮಾಡಿದರು ಎಂದು ಅರ್ಜುನಹಳ್ಳಿ ಪ್ರಸನ್ನಕುಮಾರ್ ಕಿಡಿಕಾರಿದರು.