Advertisement
ಮನುಜನಾಗಿ ಹುಟ್ಟಿದ ಪ್ರತಿಯೊಬ್ಬನಲ್ಲೂ ಆಶೆ ಇರುವುದು ಸಹಜ. ಆದರೆ ಅದು ದೂರಗಾಮಿ ದುಷ್ಪರಿಣಾಮ ಬೀರುವ ದುರಾಸೆಯಾದರೆ ಅದರ ಪರಿಣಾಮ ಒಬ್ಬಿಬ್ಬರ ಮೇಲೆ ಮಾತ್ರವಲ್ಲ; ಸಮಸ್ತ ಸಮಾಜದ ಮೇಲೆ ಆಗುತ್ತದೆ.
Related Articles
Advertisement
ಒಂದು ಕಾಲದಲ್ಲಿ ಮಳೆಗಾಲ ಬರುವ ಮೊದಲೇ ಕಪ್ಪೆಗಳ ವಟರ್ ವಟರ್ ಇಳೆ ತಂಪಾಗಲಿರುವುದರ ಮುನ್ಸೂಚನೆಯಾಗಿರುತ್ತಿತ್ತು. ಆದರೆ ಮನುಷ್ಯನ ದುರಾಸೆ ಕಪ್ಪೆಗಳನ್ನೂ ಬಿಡಲಿಲ್ಲ. ವಿದೇಶಗಳಲ್ಲಿ ಕಪ್ಪೆ ಮಾಂಸಕ್ಕೆ ಇರುವ ಬೇಡಿಕೆ ಕಪ್ಪೆಗಳ ಸಾಮೂಹಿಕ ಸಂಹಾರಕ್ಕೆ ಕಾರಣವಾಯಿತು. ಇಂದು ಸೊಳ್ಳೆಯೇ ಮುಂತಾದ ರೋಗ ಹರಡುವ ಕೀಟ,ಕ್ರಿಮಿಗಳು ಹೆಚ್ಚಲು ಪ್ರಮುಖ ಕಾರಣಗಳಲ್ಲಿ ಕಪ್ಪೆಗಳ ಸಂತತಿ ವಿನಾಶದಂಚಿಗೆ ತಲುಪಿರುವುದೂ ಒಂದಾಗಿದೆ. ಇನ್ನಾದರೂ ಕಪ್ಪೆ ಸಂತತಿ ಉಳಿಸಿ, ಬೆಳೆಸಲು ಜಾಗೃತಿ ಮೂಡಿಸುವ ಕೆಲಸವಾಗಬೇಕು
ಎಷ್ಟೇ ಕಠಿಣ ಕಾನೂನು ತಂದರೂ ಮುಂದಾಗುವ ದುಷ್ಪರಿಣಾಮಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಅವೈಜ್ಞಾನಿಕ ರೀತಿಯಲ್ಲಿ ಕೊಳವೆ ಬಾವಿ ತೋಡುವುದರಿಂದ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.
ಮಳೆ ಕ್ಲಪ್ತ ಕಾಲದಲ್ಲಿ ಬರದಿದ್ದರೆ ಗಂಭೀರ ಪ್ರಾಕೃತಿಕ ಅಸಮತೋಲನ ಮತ್ತು ಆ ಮೂಲಕ ಬಹಳಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಮಳೆ ವ್ಯತ್ಯಯಕ್ಕೆ ನಿಜವಾದ ಕಾರಣಗಳನ್ನು ಅರಿತು ಅದಕ್ಕೆ ಪರಿಹಾರೋಪಾಯಗಳನ್ನು ಅಳವಡಿಸುವ ಬದಲು ಪೂಜೆ, ಹವನ, ಕಪ್ಪೆಗಳ ಮದುವೆ ಇನ್ನೂ ಏನೇನೋ ಮಾಡುವುದು ಎಷ್ಟರಮಟ್ಟಿಗೆ ಸರಿ? ಈ ನಡುವೆ ಮನುಷ್ಯ ಎಷ್ಟು ಸ್ವಾರ್ಥಿ ಆಗುತ್ತಾನೆಂದರೆ, ತಮ್ಮ ಮನೆಯಲ್ಲಿ ಯಾವುದೋ ಸಮಾರಂಭವಿದ್ದು ಅದು ಮುಗಿಯುವ ತನಕ ಮಳೆ ಬರದಿರಲಿ ಎಂದು ಹರಕೆ ಹೊರುವ ಮೂರ್ಖರೂ ಇದ್ದಾರೆ ಈ ಕಾಲದಲ್ಲಿ? ವಾಸ್ತವ ಸ್ಥಿತಿಯನ್ನು ಅರಿತು ಕ್ರಿಯಾತ್ಮಕವಾದ್ದನ್ನೇ ಮಾಡುವ ಮನೋಭಾವ ನಮ್ಮದಾಗಬೇಕು.
ನಮ್ಮ ಮನೆಯ ಕಸವೊಮ್ಮೆ ತೊಲಗಿದರೆ ಸಾಕೆಂಬ ಧೋರಣೆ. ಎಗ್ಗಿಲ್ಲದೇ ಪ್ಲಾಸ್ಟಿಕ್ ಉಪಯೋಗ, ಕಸವನ್ನು ಹೆದ್ದಾರಿಯಲ್ಲಿ, ಹೊಳೆಗೆ, ನದಿಗೆ ಎಸೆಯುವ ಪ್ರವೃತ್ತಿ, ಇದರಿಂದ ನೀರಿನ ಹರಿವಿಗೆ ತಡೆ, ದಾರಿಯಲ್ಲಿ ಎಸೆದ ಕಸವನ್ನು ಪ್ರಾಣಿಗಳು ತಿಂದು ಸಾವಿಗೀಡಾಗುವುದು, ತೈಲದ ಜಿಡ್ಡನ್ನು ಕಡಲಿಗೆ ಸುರಿದು ಮತ್ಸ್ಯ ಸಂತತಿ ನಾಶ ಮಾಡುವುದು ಇವೆಲ್ಲವೂ ಮಾನವನ ದುರಾಸೆಯಿಂದ ಸಾಮಾಜಿಕ ಸ್ವಾಸ್ಥ್ಯದ ಮೇಲಾಗುವ ಪರೋಕ್ಷ ದುಷ್ಪರಿಣಾಮಗಳು.
ಮಳೆ ನೀರು ಹರಿದು ಹೋಗಲು ನಿರ್ಮಿಸುವ ಚರಂಡಿಯಲ್ಲಿ ನಾಲ್ಕು ಸುತ್ತಲೂ ಕಾಂಕ್ರೀಟ್ ರಚನೆ ಮಾಡುವ ಪದ್ಧತಿ ಬಹಳಷ್ಟು ಕಡೆ ಇದೆ. ಜತೆಗೆ ಈ ಚರಂಡಿಗೆ ಅಲ್ಲಲ್ಲಿ ಸೇರುವ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ, ನೀರಿಂಗಲು ಒಂದಿಷ್ಟೂ ಅವಕಾಶ ಕೊಡದ ಕಾರಣ, ಅತ್ತ ನೀರು ಹರಿದೂ ಹೋಗದೆ, ಇತ್ತ ಭೂಮಿಗೂ ಇಂಗದೆ ಒಟ್ಟಾರೆ ವ್ಯವಸ್ಥೆ ಹದಗೆಡುವ ವಾತಾವರಣ ನಿರ್ಮಾಣವಾಗುತ್ತದೆ.
ಹಿಂದಿನ ಕಾಲದಲ್ಲಿ ಉಪಯೋಗಿಸುವ ಸಾವಯವ ಗೊಬ್ಬರಗಳ ಸ್ಥಾನದಲ್ಲಿ ಬೆಳೆಗಳನ್ನು ಆವರಿಸುವ ಕೀಟಗಳ ಬಾಧೆಯನ್ನು ನಿವಾರಿಸಲು ಬಳಸುವ ಕೀಟನಾಶಕ, ಇಳುವರಿ ಹೆಚ್ಚಿಸಲು ಬಳಸುವ ರಾಸಾಯನಿಕ ಗೊಬ್ಬರಗಳು, ಮೇಲ್ನೋಟಕ್ಕೆ ಪರಿಣಾಮಕಾರಿಯೆಂದು ಕಂಡು ಬಂದರೂ ಅವುಗಳು ಆರೋಗ್ಯಕರ ಫಸಲನ್ನಂತೂ ನೀಡುವುದಿಲ್ಲ. ಬದಲಾಗಿ ಎಂಡೋಸಲ್ಫಾನ್ ನಂತಹ ಜನಜೀವನವನ್ನು ಭಯಾನಕ ಸ್ಥಿತಿಗೆ ತಳ್ಳಿದ ಉದಾಹರಣೆ ನಮ್ಮ ಕಣ್ಣೆದುರೇ ಇದೆ. ಹಣ್ಣುಹಂಪಲುಗಳನ್ನು ತ್ವರಿತವಾಗಿ ಮಾಗುವಂತೆ ಮಾಡುವುದಕ್ಕೂ ರಾಸಾಯನಿಕಗಳನ್ನು ಉಪಯೋಗಿಸುವ ಮನುಷ್ಯನ ಸ್ವಾರ್ಥ ಒಟ್ಟಾರೆ ಮನುಕುಲದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕಿಂತ ಹೆಚ್ಚಿನ ದೌರ್ಬಾಗ್ಯ ಬೇಕೇ?
ಒಟ್ಟಿನಲ್ಲಿ ನಾವು ಬದಲಾಗಬೇಕು, ದೇಶವಲ್ಲ. ಒಮ್ಮೆ ನಾವು ಬದಲಾದಾಗ ದೇಶವು ತನ್ನಿಂದ ತಾನೇ ಬದಲಾಗುತ್ತದೆ. ಒಬ್ಬ ನಾಯಕನಿಂದ ಮಾತ್ರ ದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಮತ್ತು ನಾವು ಬದಲಾಗುವ ಮೂಲಕ ನಮ್ಮ ರಾಷ್ಟ್ರವನ್ನು ಬದಲಾಯಿಸಲು ಸಾಧ್ಯ. ನಮ್ಮ ಮಕ್ಕಳು ಸ್ವಚ್ಛ ಮತ್ತು ಸುರಕ್ಷಿತ ವಾತಾವರಣದಲ್ಲಿ ಬದುಕಬೇಕೆಂದಿದ್ದರೆ ಅದಕ್ಕೆ ನಾವೇ ಅಡಿಪಾಯ ಹಾಕಿಕೊಡಬೇಕು. ಆಗ ಮಾತ್ರ ನಾವೂ ಉಳಿಯಬಹುದು, ದೇಶವೂ ಉಳಿಯಬಹುದು.
ಮೋಹನದಾಸ ಕಿಣಿ, ಕಾಪು