ಬದಿಯಡ್ಕ: ಬದಿಯಡ್ಕ- ಪೆರ್ಲ ರಸ್ತೆಯ ಕರಿಂಬಿಲದಲ್ಲಿ ಗುಡ್ಡೆ ಕುಸಿತದಿಂದ ಉಂಟಾದ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಮಾಡುವ ಉದ್ದೇಶದಿಂದ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಆಶ್ರಯದಲ್ಲಿ ಆಗೋಸ್ತು 15ರಂದು ಬೆಳಗ್ಗೆ 11.30ರಿಂದ 1ಗಂಟೆಯ ತನಕ ಧರಣಿ ನಡೆಸಲು ವ್ಯಾಪಾರಿ ಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿಗಳು, ವ್ಯಾಪಾರಿಗಳು, ಕೂಲಿ ಕೆಲಸಗಾರರು ಸೇರಿದಂತೆ ಈ ಭಾಗದ ಎಲ್ಲರೂ ರಸ್ತೆ ತಡೆ ಉಂಟುಮಾಡಿದ ಸಮಸ್ಯೆಯಿಂದ ಕಂಗೆಟ್ಟಿದ್ದು ಸೂಕ್ತ ಕ್ರಮ ಕೈಗೊಂಡು ಪರಿಹಾರ ಕಾಣದಿದ್ದಲ್ಲಿ ಜನಜೀವನ ಸಂಕಷ್ಟಕರವಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಧರಣಿಯಲ್ಲಿ ಶಾಲಾ ವಿದ್ಯಾರ್ಥಿಗಳ ರಕ್ಣಕರು, ವ್ಯಾಪರಿಗಳು ಸೇರಿದಂತೆ ಬದಿಯಡ್ಕ ಪ್ರದೇಶದ ಜನರು ಪಾಲ್ಗೊಳ್ಳಲಿದ್ದಾರೆ.
ಈ ಹಿಂದೆಯೇ ಕುಸಿದ ಮಣ್ಣು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡುವಂತೆ ಕೋರಿ ಜಿಲ್ಲಾಧಿಕಾರಿ, ಶಾಸಕರು, ಪಿಡ್ಜ್ಲುಡಿ ಆಫೀಸರುಗಳು, ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೂ ಮನವಿ ಸಲ್ಲಿಸಲಾಗಿದ್ದು ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಇದುವರೆಗೂ ಲಭಿಸಿಲ್ಲ. ಸಚಿವರಿಗೆ ಹಾಗೂ ಇಲಾಖಾ ಅಧಿಕಾರಿಗಳಿಗೆ ಕೈಯಾರೆ ಮನವಿ ಸಲ್ಲಿಸಿದ್ದರೂ ಏನೂ ಉಪಯೋಗ ಆಗಲಿಲ್ಲ.
ಬದಿಯಡ್ಕ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಕುಂಜಾರು ಮೊಹಮ್ಮದ್ ಹಾಜಿ, ರಾಜ್ಯ ಸಮಿತಿಯ ಉಪಾಧ್ಯಕ್ಷ ಎಸ್.ಎನ್.ಮಯ್ಯ, ಕಾರ್ಯದರ್ಶಿ ನರೆಂದ್ರ.ಬಿ ಬದಿಯಡ್ಕ, ಜತೆ ಕಾರ್ಯದರ್ಶಿ ಹಮೀದ್, ಉಪಾಧ್ಯಕ್ಷರುಗಳಾದ ಉದಯ, ರಾಜು ಸ್ಟೀಫನ್, ರವಿ ನವಶಕ್ತಿ, ಖಜಾಂಚಿ ಜ್ಞಾನದೇವ ಶೆಣೈ ಮುಂತಾದವರು ಉಪಸ್ಥಿತರಿದ್ದರು.
ಸಮೀಪದ ಕಾಡಮನೆ ಮೂಲಕ ಹಾದುಹೋಗುವ
ಬದಿಗಳಲ್ಲಿರುವ ಕಾಡುಪೊದೆಗಳನ್ನು ಸರಿಸಿ ತಾತ್ಕಾಲಿಕ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ಕರಿಂಬಿಲ ಗುಡ್ಡ ಜಾರಿ ನಿಂತಿರುವ ಕಾರಣ ಇನ್ನಷ್ಟು ಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಸಧ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳುವುದು ಕಷ್ಟಸಾಧ್ಯ
– ಕೃಷ್ಣ ಭಟ್, ಅಧ್ಯಕ್ಷರು ಬದಿಯಡ್ಕ ಗ್ರಾಮ ಪಂಚಾಯತ್