Advertisement

ಪಾಲಿಕೆ ಅಧಿಕಾರಿಗಳ ವೈಫಲ್ಯ ಹಲ್ಲೆಗೆ ಕಾರಣ:ಆಯೋಗದ ಅಧ್ಯಕ್ಷ ಶಿವಣ್ಣ

05:38 PM Nov 01, 2022 | Team Udayavani |

ಬಳ್ಳಾರಿ: ಪಾಲಿಕೆ ಅಧಿಕಾರಿಗಳ ವೈಫಲ್ಯವೇ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಯಲು ಕಾರಣ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಹನುಮಾನ್‌ ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರ ಮೇಲೆ ಸ್ಥಳೀಯರು ಈಚೆಗೆ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ, ಇಂಜಿನಿಯರ್‌ಗಳು ಇರಬೇಕಿತ್ತು.

ಆದರೆ ಅವರು ಇರಲಿಲ್ಲ. ಪೌರ ಕಾರ್ಮಿಕರು ಸಾರ್ವಜನಿಕರ ಕೆಲಸ ಮಾಡುತ್ತಾರೆ. ಅದು ಅವರ ಸ್ವಂತ ಕೆಲಸವಲ್ಲ. ಮಕ್ಕಳ ಹೇಸಿಗೆ ತಾಯಿ ಬಿಟ್ಟರೆ ಬೇರಾರೂ ಮುಟ್ಟಲ್ಲ. ಅಂತಹ ಕೆಲಸವನ್ನು ಪೌರ ಕಾರ್ಮಿಕರು ಮಾಡುತ್ತಾರೆ. ಅವರಿಗೆ ರಕ್ಷಣೆ ನೀಡಬೇಕೆಂಬ ಜವಾಬ್ದಾರಿ ಪಾಲಿಕೆಗೆ ಇರಬೇಕು. ಕೂಡಲೇ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ತಾಕೀತು ಮಾಡಿದರು.

2ನೇ ಹಂತದ ನೇಮಕಾತಿ: ರಾಜ್ಯಾದ್ಯಂತ ನಗರಪಾಲಿಕೆ, ನಗರಸಭೆ, ಪುರಸಭೆ,
ಪಪಂಗಳಲ್ಲಿ ಸುಮಾರು 52 ಸಾವಿರ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಜುಲೈ ತಿಂಗಳಲ್ಲಿ ಮುಖ್ಯಮಂತ್ರಿಗಳು ಸಭೆ ಕರೆದು ಕೈಗೊಂಡ ನಿರ್ಣಯದಂತೆ 15300 ಪೌರ ಕಾರ್ಮಿಕರನ್ನು ನೇರಪಾವತಿಯಡಿ ನೇಮಕ ಮಾಡಿಕೊಳ್ಳಲಾಯಿತು. ಇದೀಗ ಉಳಿದ ಹುದ್ದೆಗಳನ್ನು ಸಹ ಡಿಸೆಂಬರ್‌ ತಿಂಗಳೊಳಗೆ ಭರ್ತಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಲೋಡರ್, ಚಾಲಕರು, ಕ್ಲೀನರ್‌ಗಳನ್ನು ಸಹ ಗುತ್ತಿಗೆ ಪದ್ದತಿಯಿಂದ ನೇರ ಪಾವತಿಯಡಿ ನೇಮಕ ಮಾಡಿಕೊಳ್ಳಲಾಗುವುದು. ಅದಕ್ಕಾಗಿ ತಜ್ಞರು ನೀಡಿದ್ದ ಸಮೀಕ್ಷಾ ವರದಿಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದವರು ಭರವಸೆ ನೀಡಿದರು.

500 ಜನಕ್ಕೆ ಒಬ್ಬರಂತೆ ನೇಮಕ: ಈವರೆಗೆ 700 ಜನರಿಗೆ ಒಬ್ಬರಂತೆ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಅದನ್ನು ಇದೀಗ 500 ಜನಕ್ಕೆ ಇಳಿಕೆ ಮಾಡಲಾಗುತ್ತಿದೆ. ಗ್ರಾಪಂ ಪೌರ ಕಾರ್ಮಿಕರಿಗೆ ಎಸ್‌ಎಫ್‌ಸಿ ಅನುದಾನದಲ್ಲಿ ವೇತನ ನೀಡುವಂತೆ ಸರ್ಕಾರ ಸೂಚಿಸಿದೆ. ರಾಜ್ಯಾದ್ಯಂತ ಸುಮಾರು 7 ಸಾವಿರ ಮ್ಯಾನ್ವಲ್‌ ಸ್ಕಾ ವೆಂಜರ್ಗಳೆಂದು ಗುರುತಿಸಲಾಗಿದ್ದು, ಅವರೆಲ್ಲರಿಗೂ ಪುನರ್ವಸತಿ ಕಲ್ಪಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ.

Advertisement

ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನವಾದ ಬಳಿಕ ಪಿಎಫ್‌ ಸೇರಿ ಎಲ್ಲ ಮಾಹಿತಿಯುಳ್ಳ ಪೇ ಸ್ಲಿಪ್‌ ನೀಡುವಂತೆಯೂ ಸಂಬಂಧಪಟ್ಟ ಅಧಿ ಕಾರಿಗಳಿಗೆ ಸೂಚಿಸಲಾಗಿದೆ ಎಂದವರು ವಿವರಿಸಿದರು. ಇದಕ್ಕೂ ಮುನ್ನ ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಹಲ್ಲೆಗೊಳಗಾದವರನ್ನು ಭೇಟಿಯಾದ ಶಿವಣ್ಣ ಅವರು, ಪರಾಮರ್ಶಿಸಿ ಸಾಂತ್ವನ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಿಸಿ ಪವನ್‌ ಕುಮಾರ್‌ ಮಾಲಪಾಟಿ, ಪಾಲಿಕೆ ಆಯುಕ್ತ ಎಸ್‌.ಎನ್‌. ರುದ್ರೇಶ್‌, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌. ಹನುಮಂತಪ್ಪ, ಹೆಚ್ಚುವರಿ ಎಸ್‌ಪಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next