Advertisement

ಶಹಾಪುರ ಕ್ವಾರಂಟೈನ್‌ನಲ್ಲಿಯೇ ಕೋವಿಡ್ ಮಹಾ ಸ್ಫೋಟ

12:31 PM May 24, 2020 | mahesh |

ಶಹಾಪುರ: ಮಹಾರಾಷ್ಟ್ರ ರಾಜ್ಯದ ಮುಂಬೈ ನಗರಕ್ಕೆ ವಲಸೆ ಹೋಗಿದ್ದ ತಾಲೂಕಿನ ವಿವಿಧ ಗ್ರಾಮದ ನಿವಾಸಿಗಳು ಶಹಾಪುರಕ್ಕೆ ಆಗಮಿಸಿದ್ದು, ಇವರನ್ನೆಲ್ಲ ಜಿಲ್ಲಾಡಳಿತ ಕ್ವಾರಂಟೈನ್‌ನಲ್ಲಿಡುವ ವ್ಯವಸ್ಥೆ ಮಾಡಿತ್ತು. ಆದರೆ ಇದೀಗ ಕ್ವಾರಂಟೈನ್‌ ಕೇಂದ್ರದಿಂದಲೇ ಕೋವಿಡ್ ಮಹಾ ಸ್ಫೋಟಗೊಂಡಿದೆ.

Advertisement

ಮೇ 18ರಂದು ಕನ್ಯಾಕೋಳೂರ ಗ್ರಾಮದಲ್ಲಿ ಎರಡು ಪ್ರಕರಣ ಮತ್ತು ತಾಲೂಕಿನ ಚಂದಾಪುರ ಗ್ರಾಮದಲ್ಲಿ ಒಂದು ಪ್ರಕರಣ ಪತ್ತೆಯಾಗಿತ್ತು. ಇದೀಗ ಶಹಪುರ ಹೊರವಲಯದ ಕನ್ಯಾಕೋಳೂರ ಗ್ರಾಮ ರಸ್ತೆಯಲ್ಲಿರುವ ಬಿಸಿಎಂ ವಸತಿ ನಿಲಯದಲ್ಲಿ ಸ್ಥಾಪಿಸಿದ್ದ ಕ್ವಾರಂಟೈನ್‌ ಕೇಂದ್ರದಲ್ಲಿಯೇ ಮೇ 19ರಂದು 2 ಪ್ರಕರಣಗಳು ಪತ್ತೆಯಾಗಿದ್ದು, ಶನಿವಾರವೂ 8 ಮಕ್ಕಳು ಸೇರಿದಂತೆ 54 ಜನರಿಗೆ ಕೊರೊನಾ ದೃಢಪಟ್ಟಿದೆ. ಇದರಿಂದಾಗಿ ಶನಿವಾರ ಪತ್ತೆಯಾದ 54 ಪ್ರಕರಣಗಳು ಸೇರಿದಂತೆ ಒಟ್ಟು ಶಹಾಪುರ ತಾಲೂಕಿನಲ್ಲಿ 59 ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು 87 ಪ್ರಕರಣಗಳು ದೃಢಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ತಿಳಿಸಿದೆ.

ಶಹಾಪುರದ ಕ್ವಾರಂಟೈನ್‌ನಲ್ಲಿ ಶನಿವಾರ ದೃಢಪಟ್ಟ ಒಟ್ಟು 54 ಹೊಸ ಪ್ರಕರಣಗಳು ಯಾದಗಿರಿ ತಾಲೂಕಿನ ಅಲಿಪುರ ತಾಂಡಾ ನಿವಾಸಿಗಳೆಂದು ತಿಳಿದು ಬಂದಿದೆ. ಕಳೆದೆರಡು ವಾರಗಳಿಂದ ಇವರನ್ನು ಕನ್ಯಾಕೋಳೂರ ಗ್ರಾಮಕ್ಕೆ ತೆರಳುವ ವಸತಿ ನಿಲಯದ ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿತ್ತು. ಒಂದೇ ಕೇಂದ್ರದಲ್ಲಿ 107 ಜನರಿದ್ದು ಅದರಲ್ಲಿ 54 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ತಿಳಿದು ಬಂದಿದೆ. ಇನ್ನಿಬ್ಬರು ಕನ್ಯಾಕೋಳೂರ ಗ್ರಾಮದಲ್ಲಿ ಎರಡು ದಿನ ಉಳಿದಿದ್ದ ಕಾರ್ಮಿಕರಿಬ್ಬರಿಗೂ ಸೋಂಕು ತಗುಲಿರುವುದು ವರದಿಯಾಗಿತ್ತು. ಅವರು ಎರಡು ದಿನ ಗ್ರಾಮದಲ್ಲಿ ಓಡಾಡಿದ್ದರು. ನಂತರ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು. ಕಿತ್ತೂರ ರಾಣಿ ಚನ್ನಮ್ಮ ಕ್ವಾರಂಟೈನ್‌ ನಲ್ಲಿ ಓರ್ವ ಕಾರ್ಮಿಕನಿಗೆ, ಚಂದಾಪುರ ಗ್ರಾಮದವನಿಗೆ ಸೋಂಕು ತಗುಲಿತ್ತು. ಇದೀಗ ಒಟ್ಟು ಶಹಾಪುರದಲ್ಲಿ ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next