Advertisement

ಸಮ್ಮಾನಕ್ಕೆ ಇದ್ದ ಉತ್ಸಾಹ ಗೌರವಧನ ನೀಡುವಲ್ಲಿಲ್ಲ !

01:43 AM Dec 02, 2021 | Team Udayavani |

ಕಾರ್ಕಳ: ಸರಕಾರ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿದ 66 ಮಂದಿ ಸಾಧಕರಿಗೆ ನ. 1ರ ಕರ್ನಾಟಕ ರಾಜ್ಯೋತ್ಸವ ದಿನದಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Advertisement

ಆದರೆ ಪುರಸ್ಕೃತರಿಗೆ ನೀಡಲಾಗುವ ನಗದು ರೂಪದ ಒಂದು ಲಕ್ಷ ರೂ. ಗೌರವಧನ ಒಂದು ತಿಂಗಳಾದರೂ ಇನ್ನೂ ಅವರಿಗೆ ತಲುಪಿಲ್ಲ.

ಈ ಪ್ರಶಸ್ತಿಯನ್ನು ಪ್ರತಿ ವರ್ಷ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೇಷ್ಠ ಸಾಧಕರಿಗೆ ನೀಡಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿಶೇಷವಾಗಿ ಪ್ರಶಸ್ತಿ ಪುರಸ್ಕೃತರನ್ನು ಗುರುತಿಸಿ 66 ಮಂದಿಯನ್ನು ಆಯ್ಕೆ ಮಾಡಿತ್ತು.

ನ. 1ರಂದು ಬೆಂಗಳೂರಿನ ರವೀಂದ್ರ ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. 25 ಗ್ರಾಂ. ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.

ಈ ಹಿಂದೆ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿಯೇ ನಗದು ಗೌರವಧನ ನೀಡಲಾಗುತ್ತಿತ್ತು. ಆದರೆ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದವರು ಬರದೇ ಬದಲಿಗೆ ಅವರ ಪ್ರತಿನಿಧಿಗಳು ಬಂದು ಸ್ವೀಕರಿಸುವ ಸಂದರ್ಭ ಸಮಸ್ಯೆಗಳಾಗುತ್ತವೆ ಎನ್ನುವ ಕಾರಣಕ್ಕೆ ಈಗ ಪ್ರಶಸ್ತಿ ಪುರಸ್ಕೃತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಈ ಬಾರಿ ಪ್ರಶಸ್ತಿ ಪ್ರದಾನ ಸಂದರ್ಭ ಅವರ ಬ್ಯಾಂಕ್‌ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆಯವರು ಪಡೆದುಕೊಂಡಿದ್ದರಲ್ಲದೇ ಖಾತೆಗೆ ಹಣ ಸಂದಾಯ ಮಾಡುವುದಾಗಿ ಹೇಳಿದ್ದರು. ಆದರೇ ಗೌರವಧನ ಮೊತ್ತ ಇನ್ನೂ ಬಂದಿಲ್ಲ.

Advertisement

ಇದನ್ನೂ ಓದಿ:ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ಪ್ರಶಸ್ತಿ ಪುರಸ್ಕೃತರು ಊರಿಗೆ ಮರಳಿ ಹಲವು ಸಲ ಖಾತೆಯನ್ನು ಪರಿಶೀಲಿಸಿದ್ದಾರೆ. ಆದರೇ ಹಣ ಇನ್ನೂ ಜಮೆಯಾಗಿಲ್ಲ. ಈ ಬಗ್ಗೆ ಇಲಾಖೆಗೆ ಸಂಪರ್ಕಿಸಿ ವಿಚಾರಣೆ ನಡೆಸಿದರೂ ಹಣ ಬಾರದಿರುವುದು ಪ್ರಶಸ್ತಿ ಪುರಸ್ಕೃತರನ್ನು ಅಸಮಾಧಾನಗೊಳಿಸಿದೆ. ಪ್ರಶಸ್ತಿ ಸ್ವೀಕರಿಸಲು ತೆರಳುವ ಸಂದರ್ಭ ಬಹಳಷ್ಟು ಕಾಳಜಿ ವಹಿಸಿದ್ದರು. ಆದರೆ ಇದೀಗ ಗೌರವಧನಕ್ಕಾಗಿ ಅಂಗಲಾಚುವ ಸ್ಥಿತಿ ಬಂದಿದೆ. ಈ ಮೂಲಕ ಪ್ರಶಸ್ತಿ ಪುರಸ್ಕೃತರಿಗೆ ಅವಮಾನ ಮಾಡಲಾಗಿದೆ ಎಂದು ಪ್ರಶಸ್ತಿ ಪುರಸ್ಕೃತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಕಾರ ಮುಂದಿನ ವರ್ಷದಿಂದ ಗೌರವಧನ 5 ಲಕ್ಷ ರೂ. ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. 1 ಲಕ್ಷ ನೀಡುವುದಕ್ಕೆ ಇಷ್ಟು ವಿಳಂಬವಾಗುತ್ತಿದೆ. ಇನ್ನು 5 ಲಕ್ಷ ರೂ. ಭರವಸೆಯ ಕಥೆ ಏನೋ ಎನ್ನುವ ಸಂದೇಹ ಈಗಲೇ ವ್ಯಕ್ತವಾಗಿದೆ.

ಗೌರವಧನವನ್ನು ಬ್ಯಾಂಕ್‌ ಖಾತೆಗೆ ಹಾಕುವುದಾಗಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಹೇಳಿದ್ದರು. ದಾಖಲೆಯನ್ನು ಪಡೆದುಕೊಂಡಿದ್ದರು. ಆದರೆ ಖಾತೆಗೆ ಬಂದಿಲ್ಲ. ಗೌರವಧನಕ್ಕಾಗಿ ಇಷ್ಟೊಂದು ಕಾಯಬೇಕಾಗಿ ಬಂದಿರುವುದು ಸಾಧಕರಾದ ನಮ್ಮ ದುರ್ದೈವವಾಗಿದೆ.
-ಜಯಲಕ್ಷ್ಮೀ ಮಂಗಳಮೂರ್ತಿ ರಾಯಚೂರು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು (ಸಾಹಿತ್ಯ)

ಸರಕಾರದಿಂದ ಹಣ ಡೈರೆಕ್ಟರಿಗೆ ಬಿಡುಗಡೆಯಾಗುತ್ತದೆ. ಆ ಹಣ ಖಜಾನೆ -ಟು ಮುಖಾಂತರ ಪಾವತಿ ಆಗಲಿದ್ದು ನೇರವಾಗಿ ಖಾತೆಗೆ ಹೋಗುತ್ತದೆ. ಬಿಲ್‌ ಟ್ರೆಸರರ್‌ಗೆ ಈಗಾಗಲೇ ಸಲ್ಲಿಸಲಾಗಿದೆ. ಅಲ್ಲಿ ಸ್ವಲ್ಪ ವಿಳಂಬವಾದರೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವೆ. ಗೌರವಧನ ಪಾವತಿಗೆ ತಡವಾಗಿರುವುದು ನಿಜ. ಇನ್ನೆರಡು ದಿನಗಳಲ್ಲಿ ಪಾವತಿಗೆ ಕ್ರಮ ವಹಿಸುವೆ.
– ಡಾ| ಎನ್‌. ಮಂಜುಳಾ ( ಭಾ.ಆ.ಸೇ.)
ಸರಕಾರದ ಮುಖ್ಯ ಕಾರ್ಯದರ್ಶಿಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

-ಬಾಲಕೃಷ್ಣ ಭೀಮಗುಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next