Advertisement

ಕಾವೇರಿ ಪ್ರತಿಮೆ ಸ್ಥಾಪನೆ ಅಪಾಯಕಾರಿ

06:00 AM Nov 21, 2018 | Team Udayavani |

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆ ಸಮೀಪ ಬೃಹತ್‌ ಕಾವೇರಿ ಪ್ರತಿಮೆ ಸ್ಥಾಪಿಸುವ ರಾಜ್ಯ ಸರ್ಕಾರದ ಪ್ರಸ್ತಾವ ಅವೈಜ್ಞಾನಿಕ ಹಾಗೂ ಅಪಾಯಕಾರಿ ಎಂಬುದು ತಜ್ಞರ ಅಭಿಮತ. ಕೆಆರ್‌ಎಸ್‌ನ ಸುತ್ತ 20 ಕಿ.ಮೀ.ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಈಗಾಗಲೇ ಅಣೆಕಟ್ಟೆಗೆ ಅಪಾಯವಿರುವ ಮುನ್ಸೂಚನೆಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತನ್ನ ವರದಿಯಲ್ಲಿ ನೀಡಿದೆ. ಇದನ್ನು ಆಧರಿಸಿ ಜಿಲ್ಲಾಡಳಿತ 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿ ಚಟುವಟಿಕೆಗಳನ್ನು ಬಂದ್‌ ಮಾಡಿ, ನಿಷೇಧಾಜ್ಞೆ ಜಾರಿಗೊಳಿಸಿದೆ.

Advertisement

ಕೆಆರ್‌ಎಸ್‌ ಅಣೆಕಟ್ಟೆಯನ್ನು ಚಾವಣಿ ವಲಯ (ವಾಲ್ಟ್ ಝೋನ್‌) ಅಂದರೆ, ಭೂಕಂಪನ ವಲಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಯಾವುದೇ ಯೋಜನೆ ಕೈಗೊಳ್ಳುವುದಕ್ಕೂ ಮುಂಚೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ, ಸಲಹೆ ಅಗತ್ಯವಿದೆ. ಜೊತೆಗೆ,  ಭಾರತೀಯ ಭೌಗೋಳಿಕ ಸರ್ವೆ ಇಲಾಖೆಯ ಅನುಮತಿಯೂ ಕಡ್ಡಾಯವಾಗಿದೆ. ಸುಪ್ರೀಂಕೋರ್ಟ್‌ ತೀರ್ಪಿನಂತೆ ಜಲಾಶಯ ಈಗಾಗಲೇ ಕಾವೇರಿ ನೀರು ನಿರ್ವಹಣಾ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದೆ. ಕೇಂದ್ರ ನೀರಾವರಿ ಇಲಾಖೆಯ ಅನುಮತಿಯೂ ಕಾವೇರಿ ಪ್ರತಿಮೆಗೆ ಅತ್ಯವಶ್ಯವಾಗಿದೆ.

“ಡ್ಯಾಮ್‌ ಬ್ರೇಕ್‌’ ಅವಲೋಕನ ನಡೆಸುವ ಅವಶ್ಯಕತೆ ಇದೆ. ಅಣೆಕಟ್ಟು 124 ಅಡಿ ತುಂಬಿದ ನಂತರ, ಎಲ್ಲಾ ಗೇಟ್‌ಗಳನ್ನು ತೆರೆದ ಮೇಲೆ ಹೆಚ್ಚಿನ ನೀರು ಡ್ಯಾಂಗೆ ಹರಿದು ಬಂದರೆ ಬೃಂದಾವನ ಪ್ರದೇಶಕ್ಕೆ ನೀರು ಸೇರುವುದರಿಂದ ಈ ಜಾಗವನ್ನು ಕೆರೆಯ ಅಂಗಳದಂತೆ ನಿರ್ಮಿಸಲಾಗಿದೆ. ಆ ಕಾರಣದಿಂದ ಇಲ್ಲಿ ಕಟ್ಟಡ ಸೇರಿದಂತೆ ಇನ್ನಿತರ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಅವಕಾಶವೇ ಇರುವುದಿಲ್ಲ.

ಸೂಕ್ಷ್ಮ ಪ್ರದೇಶಕ್ಕೆ ಅಪಾಯ: ಕೆಆರ್‌ಎಸ್‌ ಬಳಿ 125 ಅಡಿಯ ಎತ್ತರದ ಪ್ರತಿಮೆ ನಿರ್ಮಿಸಬೇಕಾದರೆ ಕನಿಷ್ಠ 30 ಅಡಿ ಆಳಕ್ಕೆ ಅಸ್ಥಿಭಾರ ಹಾಕುವ ಅಗತ್ಯವಿದೆ. ಕೆಆರ್‌ಎಸ್‌ ಸುತ್ತಲಿರುವ ಪ್ರದೇಶ ಬಂಡೆಕಲ್ಲುಗಳಿಂದ ಕೂಡಿದ್ದು, ಅಸ್ಥಿಭಾರ ಹಾಕಲು ಬಂಡೆಕಲ್ಲುಗಳನ್ನು ಒಡೆಯಬೇಕು. ಕಲ್ಲು ಬಂಡೆಗಳನ್ನು ಒಡೆಯಬೇಕಾದರೆ ಸ್ಫೋಟಕಗಳನ್ನು ಸಿಡಿಸಲೇಬೇಕು. ಅದನ್ನು ಸಿಡಿಸುವಾಗ ಅಣೆಕಟ್ಟೆಗೆ ಅಪಾಯವಾಗುವುದು ನಿಶ್ಚಿತ. ಡ್ಯಾಂನ ಮೂಗಿನ ಭಾಗವನ್ನು ಜಾರ್ಜ್‌ ಎಂದು ಹೆಸರಿಸಲಾಗಿದ್ದು, ಈ ಭಾಗವು ಅಣೆಕಟ್ಟೆಯ ಕೆಳಭಾಗದಲ್ಲಿದೆ. ಕಾವೇರಿ ಪ್ರತಿಮೆಯಂತಹ ಯೋಜನೆಗಳನ್ನು ನಿರ್ಮಿಸುವುದರಿಂದ ಈ ಸೂಕ್ಷ್ಮ ಪ್ರದೇಶಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ, ಅಣೆಕಟ್ಟೆ ಭದ್ರತೆಯನ್ನು ನೋಡಿಕೊಳ್ಳುತ್ತಿರುವ ಕೇಂದ್ರ ಕೈಗಾರಿಕಾ ವಿಶೇಷ ಪಡೆ ಒಂದು ತಿಂಗಳ ಹಿಂದೆಯಷ್ಟೇ ಕೇಂದ್ರದ ನೀರಾವರಿ ಇಲಾಖೆಗೆ ಪತ್ರ ಬರೆದಿದ್ದು, ಕೆಆರ್‌ಎಸ್‌ ನಿರ್ಬಂಧಿತ ಪ್ರದೇಶವಾಗಿರುವ ಕಾರಣ ಹೆಚ್ಚಿನ
ಜನರನ್ನು ಆಕರ್ಷಿಸುವ ಯೋಜನೆಯನ್ನು ರೂಪಿಸಬಾರದು ಎಂದು ಸಲಹೆ ರವಾನಿಸಿದೆ. ಈ ಎಲ್ಲಾ ಅಂಶಗಳನ್ನು ಕಡೆಗಣಿಸಿ, ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿಲುವಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದೊಂದು ಜನಾಂದೋಲನವಾಗಿ ರೂಪುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಯೋಜನೆ ಏನು?
ನರ್ಮದಾ ನದಿ ತೀರದಲ್ಲಿ ಐಕ್ಯತೆಯ ಪ್ರತೀಕವಾದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಪ್ರತಿಮೆ ನಿರ್ಮಿಸಿದ ಮಾದರಿಯಲ್ಲೇ
ರಾಜ್ಯ ಸರ್ಕಾರ ಕೆಆರ್‌ಎಸ್‌ ಬೃಂದಾವನ ಉದ್ಯಾನದಲ್ಲಿ ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಪ್ರತಿಮೆಗೆ ಐಫೆಲ್‌ ಟವರ್‌ನ ರೂಪ ನೀಡಲಾಗುವುದು. ಎಲಿವೇಟರ್‌ ಮೂಲಕ ಪ್ರವಾಸಿಗರನ್ನು ಪ್ರತಿಮೆಯ ಹಂತಕ್ಕೆ ಕರೆದೊಯ್ದು ಸುತ್ತಲಿನ ರಮಣೀಯ ದೃಶ್ಯಾವಳಿ ಹಾಗೂ ಪ್ರತಿಮೆಯ ಮೇಲಿಂದ ನೀರು ಕೆಳಕ್ಕೆ ಬೀಳುವ ಅಪೂರ್ವ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುವಂತೆ
ಯೋಜನೆ ರೂಪಿಸಲಾಗಿದೆ. ಮ್ಯೂಸಿಯಂ ಕಾಂಪ್ಲೆಕ್ಸ್‌ ಹಾಗೂ ಅಕ್ಷಿಪಟಲ ಮಾದರಿಯ ಎರಡು ಗಾಜಿನ ಟವರ್‌ಗಳಿಂದ ಕೆಆರ್‌ಎಸ್‌ ಜಲಾಶಯದ ಸೌಂದರ್ಯ ವೀಕ್ಷಣೆಗೆ ಅವಕಾಶ ವನ್ನು ನೀಡಲಾಗುವುದು. ಈ ಯೋಜನೆಯ ಅಂದಾಜು ವೆಚ್ಚ 1,200 ಕೋಟಿ ರೂ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಕಾವೇರಿ ಮೇಲೆ ಅಭಿಮಾನವಿದ್ದರೆ ಕೆಆರ್‌ಎಸ್‌ ಅಣೆಕಟ್ಟೆಯಿಂದ ದೂರ ಪ್ರತಿಮೆ ನಿರ್ಮಾಣ ಮಾಡಲಿ. ಕೆಆರ್‌ಎಸ್‌ ಬುಡದಲ್ಲೇ ಮಾಡಲುದ್ದೇಶಿಸಿರುವ
ಯೋಜನೆ ಮೂರ್ಖತನದ್ದು. ಮೂರ್ತಿ ಸ್ಥಾಪಿಸಲು ಅಸ್ಥಿಭಾರಕ್ಕೆ ಬಂಡೆಗಳನ್ನು ಒಡೆಯಬೇಕು. ಸ್ಫೋಟಕಗಳನ್ನು ಸಿಡಿಸದೆ
ಬಂಡೆಗಳನ್ನು ಒಡೆಯಲಾಗದು. ಅದರಿಂದ ಅಣೆಕಟ್ಟೆಗೆ ಅಪಾಯವಾಗುವುದು ಖಚಿತ.
● ಎಂ.ಲಕ್ಷ್ಮಣ್‌, ಕಾವೇರಿ ತಾಂತ್ರಿಕ ಸಲಹಾ ಸಮಿತಿ.

Advertisement

ಇದು ಜನಸಾಮಾನ್ಯರ ಬೇಡಿಕೆಯಲ್ಲ. ಇದಕ್ಕೆ ತಗಲುವ ವೆಚ್ಚವನ್ನು ಕಾವೇರಿ ಕಣಿವೆ ಪ್ರದೇಶದ ಕೆರೆಗಳನ್ನು ತುಂಬಿಸಲು ಬಳಸಲಿ. ತಮಿಳುನಾಡಿಗೆ ವ್ಯರ್ಥವಾಗಿ ಹರಿಯುವ ನೀರನ್ನು ಹಿಡಿದಿಡುವುದರಿಂದ ಅಂತರ್ಜಲ ವೃದಿಟಛಿಯಾಗುತ್ತದೆ. ಒಳಚರಂಡಿ ನೀರು ಸೇರಿ ಮಲಿನಗೊಳ್ಳುತ್ತಿರುವ ಕಾವೇರಿಯನ್ನು ಶುದ್ಧಿಕರಣಗೊಳಿಸಲು ಯೋಜನೆಗಳು ರೂಪುಗೊಳ್ಳಬೇಕು.
● ಪ್ರೊ.ಹೆಚ್‌.ಟಿ.ಬಸವರಾಜಪ್ಪ, ಅರ್ಥ್ಸೈನ್ಸ್‌ ವಿಭಾಗದ ಮುಖ್ಯಸ್ಥರು, ಮಾನಸಗಂಗೋತ್ರಿ

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next