Advertisement

ಅಕ್ಕ ಕೇಳವ್ವ: ಸಂಸಾರ ಸಾರ

06:00 AM Apr 13, 2018 | Team Udayavani |

ಬೊಮ್ಮಿಯೆಂಬವಳಿದ್ದಳು. ಇವಳು ಕೂಲಿನಾಲಿ ಮಾಡಿ ಅವರಿವರ ಗದ್ದೆಗಿಳಿದು ನಾಟಿಕೊಯ್ಲು ಮಾಡಿ ಅಕ್ಕಿಕಾಳು ದಿನಸಿಸಾಮಾನು ತಂದಿಟ್ಟರೆ ಕುಡುಕ ಗಂಡ ಅದನ್ನು ಮಾರಿ ಶರಾಬು ಕುಡಿದು ಡಿಂಗಾಗಿ ಎಲ್ಲೆಂದರಲ್ಲಿ ಬಿದ್ದುಕೊಳ್ಳುತ್ತಿದ್ದ. ಕಾಲದೊಡನೆ ಓಡೋಡುತ್ತಲೇ ದೇಹ ಮುದಿಯಾದರೂ ಮಗಳಿಗೊಂದು ಮದುವೆ ಮಾಡಬೇಕೆಂಬ ಆಸೆ ಆಳಕಂಗಳಿಂದ ಜೀವ ಒರತೆಯಂತೆ ಉಕ್ಕುತ್ತಲೇ ಇತ್ತು. ಅದಕ್ಕಾಗಿಯೇ  ತನ್ನ  ಮುರುಕು ಗುಡಿಸಲಿನ ಅಡುಗೆ ಮನೆಯ ಮಣ್ಣನೆಲವನ್ನು ಅಗೆದು ಗುಂಡಿತೋಡಿ ಆಗಾಗ ಚಿಲ್ಲರೆ ಪಲ್ಲರೆ ಪುಡಿಕಾಸು ಹಾಕಿ ಮುಚ್ಚಿಡುತ್ತಿದ್ದಳು. ಚಿಂವ್‌ಗುಡುವ  ಕೋಳಿಮರಿಗಳನ್ನು ಬುಟ್ಟಿ ಕವುಚಿಹಾಕಿ ಮುಚ್ಚಿಟ್ಟರೆ ಹದ್ದಿಗೇನು ಗೊತ್ತಾಗುವುದಿಲ್ಲವೇ? ಸಮಯನೋಡಿ ಗಪ್ಪೆಂದು ಹಿಡಿದು ಅವಳ ಕೈಯಿಂದ ಕಿತ್ತುಕೊಂಡು ಒಧ್ದೋಡುತ್ತಿದ್ದ. ಇದ್ದೊಬ್ಬ ಮಗನೂ ಶತಸೋಂಬೇರಿ, ಬೀದಿಬಸವ, ಬೇಜವಾಬ್ದಾರಿಯ ಮುದ್ದೆ. ಪಾಪದ ಬೊಮ್ಮಿ ಆಗಾಗ, “”ಏನು ಮಾಡುದು ಅಕ್ಕೆರೆ (ಅಕ್ಕ)? ಅಕ್ಕಿಯ ಅರಳಿಲ್ಲ, ಉಪ್ಪಿನ ಹರಳಿಲ್ಲ, ಮೆಣಸಿನ ತೊಟ್ಟಿಲ್ಲ, ಎಣ್ಣೆಯ ಪಸೆಯಿಲ್ಲ. ಹಾಗಂತ ಮಣ್ಣು ತಿನ್ಲಿಕ್ಕಾಗ್ತದಾ?” ಎಂದು ಹೊಟ್ಟೆಹಸಿವಿನ ಕರ್ಮಕ್ಕೆ ಅತ್ತು ಕರೆದು ಏನಾದರೂ ಹೊತ್ತುಕೊಂಡು ಹೋಗುವುದಿತ್ತು. “”ಏನು ಬೊಮ್ಮಿ? ನಿನ್ನ ಮಗನಿಗೆ ಕಣ್ಣಿಲ್ವ? ಈ ಮುದಿ ಪ್ರಾಯದಲ್ಲಿ ನೀನೇ ದುಡಿದು ಅವನ ಹೊಟ್ಟೆ ತುಂಬಿಸಬೇಕಾ? ಮೈಬಗ್ಗಿಸಿ ದುಡಿದು ತಿನ್ನಲಿಕ್ಕೇನು ಧಾಡಿ?” ಎಂದರೆ “”ಹಲಸಿನಬೀಜವನ್ನು ಮಡಿಲಿಗೆ ಕಟ್ಟಿಕೊಳ್ಳಬಹುದು ಅಕ್ಕೆರೆ, ಹಲಸಿನಕಾಯಿಯನ್ನು ಕಟ್ಟಿಕೊಳ್ಳಲಿಕ್ಕಾಗ್ತದಾ ಹೇಳಿ?” ಎಂದು ಕಣ್ಣೊರೆಸಿಕೊಳ್ಳುತ್ತಿದ್ದಳು ಹರಿದ ಸೆರಗಂಚಿನಲ್ಲಿ.

Advertisement

ಮುನ್ನೂರು ರೂಪಾಯಿ ದಿನಗೂಲಿಯಲ್ಲಿ ಸ್ವಂತಮನೆ ಬಿಡಿ, ನಾಳೆಯ ಕನಸ್ಸಿನ ಸೌಧವನ್ನೂ ಕಟ್ಟುವಂತಿಲ್ಲ. ಬಯಸಿದ್ದು ಹೇಗೂ ದಕ್ಕುವುದಿಲ್ಲ. ಇಂದಿನ ದಿನ ಕಳೆದರಾಯಿತೆಂದು ಜೂಜು-ಹೆಂಡ-ದುಶ್ಚಟಗಳ ದಾಸರಾಗಿ ಕಳೆದುಹೋಗುವುದು. ಇಂತಹ ಸಂಸಾರಗಳಲ್ಲಿ ಹೆಂಡತಿ, ಸೊಸೆ, ಅತ್ತಿಗೆ, ನಾದಿನಿ, ಅಕ್ಕ, ತಂಗಿ, ಮಗಳು, ತಾಯಿ ಮಾಯಿಯೆಂದು ಬೇರೆ ಬೇರೆ ರೂಪದಲ್ಲಿ ಬಲಿಪಶು ಆಗುವವಳು ಹೆಣ್ಣೇ ಅಲ್ಲವೇ? “ಬಗ್ಗಿದವನಿಗೆ ನಾಲ್ಕು ಗುದ್ದು ಹೆಚ್ಚು’. ಗಂಡ ಎಷ್ಟೇ ಹಿಂಸೆ ಕೊಡಲಿ, ಬೇಕಾದರೆ ಅವ ಕೊಂದೇ ಹಾಕಲಿ, ಕಷ್ಟವನ್ನೇ ಸುಖವೆಂದುಕೊಂಡು ಅಥವಾ ಕಷ್ಟ ಎಂದುಕೊಂಡು ಹಣೆಯಲ್ಲಿ ಬರೆದದ್ದನ್ನು ಎಲೆಯಲ್ಲಿ ಒರೆಸಿದರೆ ಹೋಗುತ್ತ? “ಪ್ರಾರಬ್ಧಕರ್ಮ ಬೆನ್ನುಬಿಡದು’ ಎನ್ನುತ್ತ ಅದಕ್ಕೆ ಯಾರನ್ನೂ ಹೊಣೆಯಾಗಿಸದೆ ಅವನೊಡನೆ, ಅತ್ತೆ-ಮಾವನೊಡನೆ ಹೊಂದಿಕೊಂಡು ಜೀವನ ಮಾಡುವುದು ಬಿಟ್ಟರೆ ಹೆಂಡತಿಯು ಮನೆಬಿಟ್ಟು ಹೋಗುವ ಪ್ರಸಂಗ ಬಹಳ ಕಮ್ಮಿಯಾಗಿದ್ದವು ಹಿಂದೆ. ಹೋಗುವುದಾದರೂ ಎಲ್ಲಿಗೆ? ಮಧ್ಯಮ ಕುಟುಂಬಗಳಲ್ಲಿ ಮಂತ್ರಹೇಳಿ ಗೋತ್ರ ಕಡಿದ ಮೇಲೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು, ಇನ್ನೊಂದು ಮನೆಯ ಸ್ವತ್ತು ಎಂಬ ಮನಃಸ್ಥಿತಿಯಿಂದಾಗಿ ಅವಳಿಗೆ ತವರಿನ ಬೆಂಬಲ ಸಿಗುವುದಿಲ್ಲ, ಅವಳನ್ನು ಕರೆದು ಕೇಳುವವರಿಲ್ಲ. ಅಂತರ್ಜಾತಿ ವಿವಾಹವಾದರಂತೂ ಎಳ್ಳುನೀರು ಬಿಟ್ಟಂತೆಯೇ. ಅವಳಿಗೊಂದು ಕೆಲಸವಿದೆ ತನ್ನ ಕಾಲಲ್ಲೇ ನಿಂತಿದ್ದಾಳೆ ಎಂದಾದರೆ ಮಾತ್ರ ಜೀವನವಿದೆ. ಹೆಂಡತಿ ಸತ್ತರೆ ಹನ್ನೆರಡನೆಯ ದಿನವೇ ಮದುವೆಯಾಗುವ ಗಂಡಂದಿರೂ ಇದ್ದಾರೆ, ಜೀವಮಾನವಿಡೀ ಅವಳ ನೆನಪಲೇ ಒಂಟಿಯಾಗಿಬಿಡುವ ಮಿಡುಕುಜೀವಗಳೂ ಇವೆ. “ಸಂಸಾರಗುಟ್ಟು ವ್ಯಾಧಿ ರಟ್ಟು’ ಎಂದುಕೊಂಡು ಗಂಡ ಸತ್ತಬಳಿಕ ಮಾವನೋ ಭಾವನೋ ಅಥವಾ ಹೊರಗಿನ ಇನ್ನಾರೋ ದೈಹಿಕ ಮಾನಸಿಕ ಕಿರುಕುಳ ಕೊಟ್ಟರೂ ಮರ್ಯಾದೆಗೆ ಹೆದರಿ ನುಂಗಿಕೊಂಡು ಮೂಕೆತ್ತಿನ ತರಹ ಬದುಕುವ ಹೆಣ್ಣುಜೀವಗಳು ಈಗಲೂ ಇವೆ. ಎಂತೆಂಥ‌ ಹಿಂಸೆಯಲ್ಲಿ ಬದುಕಿದರು ಹೆಂಗಸರು! ಹಸಿದಹೊಟ್ಟೆಗೆ ಬಟ್ಟೆಯನ್ನು ಗಟ್ಟಿಯಾಗಿ ಸುತ್ತಿಕೊಂಡು ಒಂದು ಸೇರು ಅಕ್ಕಿಬೇಯಿಸಿ ಹತ್ತು-ಹನ್ನೆರಡು ಮಕ್ಕಳಿಗೆ ಬಡಿಸಿ ಅದರ ತಿಳಿನೀರು ಕುಡಿಯಲೂ ಗತಿಯಿಲ್ಲದೆ ಬದುಕಿದರೆಂದರೆ ಸಾಮಾನ್ಯವೆ? ಮಕ್ಕಳನ್ನು ದಡ ಮುಟ್ಟಿಸಿದರೂ ಕೊನೆಗೆ ಯಾವ ಸುಖವಿತ್ತು ಅವರಿಗೆ?

ಸಂ-ನಲ್ಲಿ ಸೊನ್ನೆಯಿದ್ದರೆ ಮಾತ್ರವಲ್ಲವೇ ಸಂ-ಸಾರ? ಸೊನ್ನೆ ತೆಗೆದರೆ “ಸಸಾರ’ (ತಾತ್ಸಾರ). ಸಂಸಾರದೊಳಗಿನ ಒಂದು ಸೊನ್ನೆಯೆಂದರೆ ನಾಣ್ಯ, ದುಡ್ಡು. ಅದಿಲ್ಲದಿದ್ದರೆ ಸಸಾರವೆನ್ನುವ ಆರ್ಥಿಕವಾಗಿ ಹಿಂದುಳಿದಿರುವ ಎಷ್ಟೋ ಕುಟುಂಬಗಳು ಇವೆ. ಗುಣವನ್ನೇ ಹಣವೆಂದು ಭಾವಿಸಿ “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು’ ಎಂದು ಬಾಳುತ್ತಿರುವ ಮಾದರಿ ಸಂಸಾರಗಳೂ ಬೇಕಾದಷ್ಟು ಇವೆ. ಸಂಸಾರವೇ ಸೊನ್ನೆಯೆಂದು ಅನುಭವದಿಂದ ಅರಿತು ತೊರೆದು “ಭವಸಾಗರದಿಂದ ಪಾರುಮಾಡೋ ದೇವರೇ’ ಎನ್ನುತ್ತ ಅಧ್ಯಾತ್ಮದ ಶೂನ್ಯದತ್ತ ನಡೆದವರ ಹೆಜ್ಜೆಗುರುತುಗಳೂ ಇವೆ. ಸೆರೆ ಸಿಕ್ಕ ಹಟಮಾರಿ ಯುದ್ಧಾಳುವಿನಂತೆ ಹಿಂಸೆಯನ್ನು ನುಂಗಿಕೊಂಡು “ಸಂಸಾರವೆಂಬಂಥ ಭಾಗ್ಯವಿರಲಿ, ಕಂಸಾರಿಯ ನೆನೆಯೆಂಬ ಸೌಭಾಗ್ಯವಿರಲಿ’ ಎಂದು ನನ್ನಮ್ಮ ಭಾಗೇಶ್ರೀ ರಾಗದಲ್ಲಿ ಹಾಡುವಾಗೆಲ್ಲ  ಮುಳ್ಳುಬೇಲಿಯಾಚೆ ಅರಳಿ ಈಚೆಯಿಣುಕಿ ಸಾಂತ್ವನ ಹೇಳುತ್ತಿದ್ದ ಹೂಗಳ ನೆನಪೂ ಇವೆ.

ಸಂಸಾರದಲ್ಲಿ “ಅಹಂ’ ತೊರೆದರದು ಸಾರ. ಯಾರಾದರೊಬ್ಬರು ತಗ್ಗಲೇಬೇಕು. ಎರಡು ಕುದುರೆಗಳು ತಮ್ಮಿಷ್ಟದ ದಿಕ್ಕಿಗೆ ಎಳೆದಾಡಿದರೆ ಸಂಸಾರವೆಂಬ ಬಂಡಿ ನುಚ್ಚುನೂರು. ಇತ್ತೀಚೆಗೆ ವಿಚ್ಛೇದನವೆಂಬ ಮನುಷ್ಯ ಹಕ್ಕಿನ ದುರುಪಯೋಗವಾಗುತ್ತಿದೆ. ಇದಕ್ಕೆ ಕಾರಣ ಅತಿಬುದ್ಧಿವಂತರೆಂಬ ಹಾಂಕಾರಹೂಂಕಾರ ಹಮ್ಮಬಿಮ್ಮು. ನಾನು ನನ್ನದು ನನಗೆ ಮಾತ್ರವೆಂಬ ಸ್ವಾರ್ಥ. ಇನ್ನೊಂದು ಜೀವದ ನೋವು-ನಲಿವು ಅರ್ಥಮಾಡಿಕೊಳ್ಳದ ಸ್ಪಂದನವೇ ಇಲ್ಲದ ನಿಷ್ಕರುಣಿ ಯಂತ್ರಹೃದಯ. ಒಂದು ಬೆಳಗಾತ ಬಟ್ಟೆಯೊಳಗೆ ಮೈತೂರಿ ಹೊರಟರೆಂದರೆ ಧಾವಂತದ ಸ್ಪರ್ಧಾತ್ಮಕ ಬದುಕು. ಒಟ್ಟಿಗೆ ಕುಳಿತು ಕತೆಮಾತಾಡುತ್ತ ಉಣ್ಣುವ ಯೋಗವಿಲ್ಲ.  ಗಂಡನಿಗೊಂದು, ಹೆಂಡತಿಗೊಂಡು, ಮಗುವಿಗೊಂದು ಮೊಬೈಲ್‌. ಪ್ರೀತಿನೋಟ, ಅಪ್ಪುಗೆ, ಸ್ಪರ್ಶ ಸಿಗದ ಮಕ್ಕಳಲ್ಲಿ, ಹೆಣ್ಣು-ಗಂಡು ಜೀವಗಳಲ್ಲಿ ಖುಷಿಹೂ ಅರಳುವುದುಂಟೆ? ರಕ್ಷಣಾಭಾವದ ಕೊರತೆಯಿಂದ ಹೊರಗೆ ಖುಷಿಯನ್ನು ಹುಡುಕುತ್ತ ಹೋಗಿ ಭ್ರಮೆಯನ್ನೇ ವಾಸ್ತವ ಎಂದುಕೊಂಡು ಸಂಸಾರ ಕಳಕೊಂಡವರು ಕಮ್ಮಿಯೇ? ಹೆಂಡತಿ ಮಕ್ಕಳಿಗೆ ವಿಷಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಮಹಾನುಭಾವರು, ಯಾರೊಂದಿಗೋ ಮನೆಬಿಟ್ಟು ಓಡಿಹೋಗುವ ಹೆಂಡತಿಯರು, ಕಟ್ಟಿಕೊಂಡಿದ್ದವಳಿದ್ದರೂ ಇಟ್ಟುಕೊಳ್ಳುವ ಸಿರಿಪುರುಷರು, ಅಡ್ಡಹಾದಿ ಹಿಡಿಯುವ ಮಕ್ಕಳು, ಲೀವಿಂಗ್‌ ಟುಗೆದರ್‌, ಡೇಟಿಂಗ್‌… ಆಧುನಿಕ ಕೊಳ್ಳುಬಾಕ ಸಂಸ್ಕೃತಿಯ ವಿಷಫ‌ಲಗಳು. ತಮ್ಮಿಷ್ಟದ ಮೇರುನಟರು ಅಭಿನಯಿಸಿದ ಹಳೆಯ ಚಲನಚಿತ್ರಗಳಲ್ಲಿ ಸುಖಸಂಸಾರದ ಸಾರವಿದೆ; ಸಾಹಿತ್ಯ ಕೃತಿಗಳಲ್ಲಿ, ಲಲಿತಕಲೆಗಳಲ್ಲಿ ಅಭಿವ್ಯಕ್ತವಾಗಿರುವ ಸಂಸಾರಗಳ  ಸಂಕಲನ-ವ್ಯವಕಲನ ನೋವು-ನಲಿವುಗಳಿವೆ ಎಂದರಿತು ನೀತಿಸಂಹಿತೆಗಳನ್ನಾಗಿಸಿಕೊಂಡು ಬದುಕನ್ನು ಪ್ರೀತಿಯ ಸೂತ್ರದಿಂದ ಮೌಲಿಕವಾಗಿಸಿ ಕೊಂಡವರಿದ್ದಾರೆ.

ಕಾತ್ಯಾಯಿನಿ ಕುಂಜಿಬೆಟ್ಟು

Advertisement
Advertisement

Udayavani is now on Telegram. Click here to join our channel and stay updated with the latest news.

Next