Advertisement

ಮೂಕಜ್ಜಿಯ ಅರಳಿಮರ ಪ್ರಸಂಗ

10:24 AM Dec 08, 2019 | mahesh |

ಡಾ.ಕೆ. ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’ ಈಗ ಸಿನಿಮಾ ತೆರೆಯ ಮೇಲೆ ಎದ್ದುಬಂದಿದ್ದಾಳೆ. ಆ ಚಿತ್ರದಲ್ಲಿ ಆಕೆಯ ಪಾಲಿಗೆ ಧ್ಯಾನಪೀಠವೇ ಆಗಿಹೋಗಿರುವುದು, ಒಂದು ಬೃಹತ್‌ ಅರಳಿಮರ. ನಿರ್ದೇಶಕ ಪಿ. ಶೇಷಾದ್ರಿ ಅವರು ಕಾರಂತರ ಕಾಲ್ಪನಿಕ ಜಗತ್ತಿಗೆ ಹೊಂದುವಂಥ ಅರಳಿ ವೃಕ್ಷವನ್ನು ಹುಡುಕಾಡಿದ್ದರ ಹಿಂದೊಂದು ಚೆಂದದ ಕತೆಯಿದೆ…

Advertisement

“ಮೂಕಜ್ಜಿಯ ಕನಸುಗಳು ಸಿನಿಮಾಗೆ ಹಳೇ ಸಾಂಪ್ರದಾಯಿಕ ಮನೆ, ಆ ಮನೆ ಮುಂದೆ ದೊಡ್ಡದೊಂದು ಅರಳೀಮರ ಬೇಕಿತ್ತು’ ಎನ್ನುವ ಆಶಯದಿಂದ ಪಿ. ಶೇಷಾದ್ರಿ ಅವರು ವರ್ಷದ ಹಿಂದೆ ನಮ್ಮೂರಿಗೆ ಬಂದಿದ್ದರು.

ದೂರದಿಂದ ಬೆಟ್ಟದ ಸಾಲುಗಳು ಕಾಣುವ, ಸುತ್ತಲೂ ಮೈಗೆಲ್ಲಾ ಹಸಿರ ಹಚ್ಚೆ ಹಚ್ಚಿ ನಿಂತಿರುವ ಬಸದಿ ಬೀಡಿನ ದಾರಿಯಲ್ಲೊಂದು ದೊಡ್ಡ ಅರಳಿಮರವಿತ್ತು. ಅಲ್ಲೇ ತುಸು ದೂರದಲ್ಲಿ ಗತದ ಗುಂಗಲ್ಲಿ ನಿಂತಿದ್ದ ಸಾಂಪ್ರದಾಯಿಕ ಮನೆ. ಮೂಕಜ್ಜಿಗೆ ಕನಸು ಕಾಣಲು ಈ ಜಾಗ ಸೂಕ್ತವಾಗಬಹುದೆಂದು ನಿರ್ದೇಶಕ ಪಿ. ಶೇಷಾದ್ರಿ ಅವರಿಗೆ ತೋರಿಸಿದೆ. ಅವರೂ, ಅವರ ತಂತ್ರಜ್ಞರೂ ಆ ಅರಳಿಮರ, ಆ ಮನೆ, ಆ ಪರಿಸರದ ಇಂಚಿಂಚನ್ನೂ ಅರಳುಗಣ್ಣುಬಿಡುತ್ತಾ ಅಳೆದು ತೂಗಿದ್ದರು. ಇಲ್ಲೇ ಚಿತ್ರೀಕರಣವಾದರೆ, ಮೂಕಜ್ಜಿ ತೆರೆಗೆ ಬರುವ ಮೊದಲೇ ನಾನವಳನ್ನು ನೋಡಬಹುದೆಂದು ಒಳಗೊಳಗೇ ಖುಷಿಪಟ್ಟೆ. ಆದರೆ, ನಿರ್ದೇಶಕರು: “ಈ ಮರ, ಮನೆ ಎಲ್ಲಾನೂ ಸೂಕ್ತವಾಗಿದೆ. ಆದ್ರೆ ಮರದ ಪಕ್ಕದಲ್ಲೇ ದೊಡ್ಡದೊಂದು ಲೈಟು ಕಂಬವಿದೆ. ಅಲ್ಲದೆ, ಆಧುನಿಕತೆಯ ಚಾಪು ಚೂರು ಎದ್ದು ಕಾಣಿ¤ದೆ. ಯಾವ ಆಧುನಿಕತೆಯ ಸುಳಿವೂ ಕಾಣದ ಜಾಗಬೇಕು ನಮ್ಮ ಕನಸಿನ ಮೂಕಜ್ಜಿಗೆ’ ಅಂದರು.

ನನಗೆ ಅವರು ಯಾವಾಗ ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’ ಕಾದಂಬರಿಯ ಸಿನಿಮಾ ಮಾಡಿ ಮುಗಿಸುತ್ತಾರೋ ಅಂತ ಆಸೆಯಾಗಿತ್ತು.

Advertisement

ಅರಳಿಮರವೂ, ಸಿನಿಮಾದಲ್ಲಿ ಬರಬಹುದಾದ ಮೂಕಜ್ಜಿಯೂ ನನ್ನೊಳಗೆ ಕಾಡುತ್ತಿದ್ದಳು. ಇನ್ನಷ್ಟು ಕಾಡುವ ಹೊತ್ತಿಗೆ ಬ್ರಹ್ಮಾವರದ ಕಡೆ ಸಿನಿಮಾ ತಂಡ, ಶೂಟಿಂಗ್‌ ಮುಗಿಸಿದ್ದೂ ಆಯ್ತು. ಚಿತ್ರ ಬಿಡುಗಡೆಗೂ ಸಿದ್ಧವಾಯಿತು. ಆ ಚಿತ್ರದ ಪೋಸ್ಟರ್‌ ನೋಡುವಾಗೆಲ್ಲಾ ಅಲ್ಲಿರುವ ಅರಳಿಮರ ಕಾಡುತ್ತಿತ್ತು. ಅದು ನಾನು ತೋರಿಸಿದ ಅರಳಿಮರವಲ್ಲವಾದರೂ, ಅದರ ತಂಗಾಳಿ ಮೈಸೋಕಿದಂತಾಗಿ ದೊಡ್ಡ ಪರದೆಯಲ್ಲಿ ಆ ಅರಳಿಮರವನ್ನೂ, ಅದರ ಕೆಳಗೆ ಕೂತ ಮೂಕಜ್ಜಿಯನ್ನು ಕಣ್ತುಂಬಿಕೊಳ್ಳಬೇಕು ಎಂದು ನಮ್ಮೂರಿನ ಪುಟ್ಟ ಚಿತ್ರಮಂದಿರದತ್ತ ಹೋಗಿ ಉಬ್ಬಿದ್ದೇ ಆಯ್ತು… “ಜನ ಇಲ್ಲ, ಇವತ್ತು ಶೋ ಇಲ್ಲ’ ಎಂದರು ಥಿಯೇಟರ್‌ನವರು. ನಿರಾಶನಾಗಿ ಶನಿವಾರ ಹೋದ್ರೆ “ಇವತ್ತೇನೋ ಟೆಕ್ನಿಕಲ್‌ ಇಶ್ಶೂ, ನಾಳೆ ನೋಡ್ವ’ ಅಂದುಬಿಟ್ರಾ. ಮೂಕಜ್ಜಿಯ ನಿರೀಕ್ಷೆ ವಿಪರೀತವಾಗಿ ಮರುದಿನವೂ ಹೋದೆ. “ಸ್ವಲ್ಪ ಹೊತ್ತು ಕಾಯಿರಿ. ಜನ ಬರ್ತಾರೋ ನೋಡ್ವಾ, ಬಂದ್ರೆ ನಿಮ್‌ ಅದೃಷ್ಟ’ ಅಂದ್ರು. ಕೆಲವೇ ಕ್ಷಣದಲ್ಲಿ ಗಂಡ- ಹೆಂಡತಿ ಜೋಡಿ ಬಂದ್ರು.

“ಕನಿಷ್ಠ ಹತ್ತು ಜನಾನಾದ್ರೂ ಬಂದ್ರೆ ಸಿನಿಮಾ ಹಾಕ್ತೇವೆ. ಕರೆಂಟ್‌ ಖರ್ಚಾದ್ರೂ ಬರುತ್ತೆ. ಇನ್ಯಾರಾದ್ರೂ ಇದ್ದಾರಾ ನೋಡಿ’ ಅಂದ್ರು ಸಿಬ್ಬಂದಿ. ಅಷ್ಟೊತ್ತಿಗೆ ಆರು ಜನ ಕಾಲೇಜು ಹುಡುಗ್ರು, ಇನ್ನೊಂದಿಬ್ಬರು ಗಂಡಸರು ಭರವಸೆಯಂತೆ ಬಂದುಬಿಟ್ಟಿದ್ದೇ ಮೂಕಜ್ಜಿಯ ಕನಸು ನೋಡೋ ನನ್ನ ಕನಸು ನನಸಾಯ್ತು.

ಆಹಾ! ಬೆಳ್ಳಿ ಪರದೆಯಲ್ಲಿ ವಿಶಾಲವಾಗಿ ಚಾಚಿ ನಿಂತಿದೆ ಅರಳೀಮರ. ಆಕಾಶಕ್ಕೂ ಕನಸು ಕಾಣಿಸುತ್ತಾ ಹೊಳೆಯೋ ಅದರ ಎಲೆಗಳು! ಕತೆ ಹೇಳುವ ದಷ್ಟಪುಷ್ಟ ಕಾಂಡ, ಅಬ್ಟಾ! ಆ ಮರ ನೋಡುವ ಪುಳಕ ಹೇಳುವುದು ಬೇಡ… ಅಷ್ಟು ಚಂದವಿತ್ತು.

ರೆಂಬೆಯಡಿಯಿಂದ ಮೂಕಜ್ಜಿಯ ನೋಡಿ ಧನ್ಯನಾಗುವ ಆ ಅರಳಿಮರ ನಮ್ಮ ಪಕ್ಕದೂರಿನದ್ದು ಎಂದು ತಿಳಿದು ವಿಸ್ಮಿತನಾದೆ. ನಾನು ತೋರಿಸಿದ್ದ ಅರಳಿಮರವಾದರೇನು? ಪಕ್ಕದೂರಿನ¨ªಾದರೇನು? ಎಲ್ಲ ಅರಳಿಮರಕ್ಕೂ ಒಂದೇ ಭಾಷೆ, ಆಕಾಶಕ್ಕೆ ಚಾಚುವ ಒಂದೇ ಕನಸಲ್ಲವಾ? ಅಂದುಕೊಂಡು ಅರಳಿಮರವನ್ನೂ, ಮೂಕಜ್ಜಿಯನ್ನೂ ಕಣ್ತುಂಬಿಕೊಂಡೆ. ಸಿನಿಮಾ ಮುಗಿದ ನಂತರವೂ, ಅರಳಿಮರದಲ್ಲೆಲ್ಲಾತುಂಬಿಕೊಂಡ ಗಾಳಿಯ ಬೀಸು ಕಾಡುತ್ತಿತ್ತು.

ಅದೇ ಗುಂಗಲ್ಲಿ ಮಾತಿಗೆ ಸಿಕ್ಕ ನಿರ್ದೇಶಕ ಪಿ. ಶೇಷಾದ್ರಿಯವರಿಗೆ, “ನಿಮಗ್ಯಾಕೆ ಅದೇ ಅರಳಿಮರ, ಆ ಮನೆ ಇಷ್ಟವಾಯ್ತು?’ ಎಂದು ಕೇಳಿದೆ. ಅವರು ಹೇಳುತ್ತಾ ಹೋದರು…

“ಮೂಕಜ್ಜಿಗೋಸ್ಕರ ಉಡುಪಿಯ ಆಸುಪಾಸಿನಲ್ಲಿ ಸುಮಾರು 200 ಮರಗಳನ್ನು ನೋಡಿದ್ದೇನೆ. ಅರಳಿಮರಗಳೆಲ್ಲಾ ಒಂದೇ ಆಗಿದ್ದರೂ ನನ್ನ ಕಲ್ಪನೆಯ ಅರಳಿಮರವೇ ಬೇರೆಯಾಗಿತ್ತು, ಅದು ಬೇರು ತುಂಬಿಕೊಂಡು ಕತೆ ಹೇಳುವಂತಿರಬೇಕು, ಎಲೆಗಳನ್ನು ಫ‌ೂರ್ತಿ ಹರಡಿ ಮೈತುಂಬಿಕೊಂಡು ವಿಶಾಲವಾಗಿರಬೇಕು. ಸುತ್ತಲೂ ಯಾವುದೇ ಆಧುನಿಕತೆ ಕಾಣಬಾರದು, ಮರದಿಂದ ಸ್ವಲ್ಪ ದೂರದಲ್ಲಿ ಚಂದದ ಮನೆಯಿರಬೇಕು ಅಂತೆಲ್ಲಾ ಕಲ್ಪಿಸಿದ್ದೆ. ಕೊನೆಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಪರಿಸರದಲ್ಲಿ ನನ್ನ ಕಲ್ಪನೆಗೆ ಹತ್ತಿರಾಗಿರುವ ಅರಳೀಮರವೂ, ಮನೆಯೂ ಸಿಕ್ಕಿತು’.

ತಾನು ಬೇರೆಯಲ್ಲ, ಆ ಮರ ಬೇರೆಯಲ್ಲ ಎಂಬಂತೆ ಬದುಕಿದ ಮೂಕಜ್ಜಿ ಒಂದು ಪಾತ್ರವೆಂದು ಅನ್ನಿಸದೇ ನಮ್ಮ ಮನೆ ಜಗುಲಿಯ ಜೀವ ಅಂತ ಅನ್ನಿಸೋ ಆ ಕ್ಷಣ ಅಮೂರ್ತ.

ಅರಳಿಮರ ಅನ್ನೋದು ದೊಡ್ಡ ರೂಪಕ. ಅದರ ಒಂದೊಂದು ಬಿಳಲುಗಳೂ, ಎಲೆಗಳೂ ನಮ್ಮ ಮನಸ್ಸಿನ, ಭಾವನೆಗಳ ಸಂಕೇತದಂತಿದೆ. ನಾನು ನೋಡಿದ 200 ಮರಗಳ ಗಾಳಿಯ ಆಹ್ಲಾದವೂ ರೆಂಬೆಕೊಂಬೆಗಳ ಘಮವೂ ನನ್ನೊಳಗೆ ಕಾಡಿದೆ. ಆದರೆ, ಮೂಕಜ್ಜಿಯ ವಿಷಯ ಬಂದಾಗ ಮಾತ್ರ, ಬ್ರಹ್ಮಾವರದ ಈ ಮರವೇ ತುಂಬಾ ಇಷ್ಟವಾಯ್ತು.
– ಪಿ. ಶೇಷಾದ್ರಿ, ಚಿತ್ರ ನಿರ್ದೇಶಕ

– ಪ್ರಸಾದ್‌ ಶೆಣೈ ಆರ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next