Advertisement

ಜಿಲ್ಲೆಯ ಜನರ ಬಾಧಿಸುತ್ತಿದೆ ಸಾಂಕ್ರಾಮಿಕ ರೋಗ

12:25 PM Jul 29, 2019 | Suhan S |

ತುಮಕೂರು: ಜಿಲ್ಲೆಯಲ್ಲಿ ವಾಡಿಕೆ ಮಳೆ ಬಾರದೆ ರೈತರು ಕಂಗಾಲಾಗಿರುವುದು ಒಂದೆಡೆಯಾದರೆ, ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನೀರು ಒಂದೆಡೆ ನಿಂತು, ಸ್ವಚ್ಛತೆ ಕೊರತೆಯಿಂದ ರೋಗ-ರುಜಿನುಗಳು ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳ ಮುಂದೆ ಜನರು ಸಾಲು ನಿಲ್ಲುವಂತಾಗಿದೆ.

Advertisement

ಹಿಂದೆ ಜಿಲ್ಲೆಯಲ್ಲಿ ಮಲೇರಿಯಾ ಮಹಾಮಾರಿ ವ್ಯಾಪಕವಾಗಿ ಕಂಡು ಬರುತ್ತಿತ್ತು. ಚಿಕ್ಕನಾಯಕನಹಳ್ಳಿ ಮಲೇರಿಯಾ ತವರೆಂದೇ ಹೆಸರಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಪ್ರಭಾವ ಕಡಿಮೆಯಾಗಿದ್ದು, ಹಿಂದಿನ ಅಂಕಿ ಅಂಶಗಳಿಗಿಂತ ತೀರಾ ಕನಿಷ್ಠವಾಗಿದೆ.

ಕಾಡುತ್ತಿದೆ ಡೆಂಘೀ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜ್ವರ ಬಾಧೆಯಿಂದ ಜನರು ಬಳಲುತ್ತಿದ್ದಾರೆ. ತುಮಕೂರು ತಾಲೂಕಿನಲ್ಲಿ ಹೆಚ್ಚು ಜನರು ಜ್ವರಕ್ಕೆ ತುತ್ತಾಗಿದ್ದಾರೆ. ಹೆಚ್ಚಿನವರಲ್ಲಿ ಡೆಂಘೀ ಲಕ್ಷಣ ಕಂಡುಬಂದಿರುವುದರಿಂದ ಜಿಲ್ಲಾಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 30 ಜನರು ಡೆಂಘೀಯಿಂದ ಬಳಲುತ್ತಿದ್ದಾರೆ. ಅದರಲ್ಲಿ ತುಮಕೂರು ತಾಲೂಕಿನಲ್ಲಿಯೇ 14 ಜನರಿಗೆ ಡೆಂಘೀ ಬಾಧಿಸಿದೆ. ಅದರಲ್ಲಿ 12 ಜನ ನಗರದವರೇ ಆಗಿದ್ದಾರೆ. ನಗರದಲ್ಲಿ ಸೊಳ್ಳೆಗಳ ಕಾಟ ತೀವ್ರವಾಗಿದೆ. ಜಿಲ್ಲೆಯಲ್ಲಿ ಚಿಕೂನ್‌ಗುನ್ಯಾದಿಂದ 24 ಜನ, ಮಲೇರಿಯಾದಿಂದ 19 ಜನ ಬಳಲುತ್ತಿದ್ದಾರೆ.

ಮುಂಗಾರು ವಿಫ‌ಲವೇ ಕಾಯಿಲೆಗೆ ಕಾರಣ: ಜೂನ್‌ ತಿಂಗಳಲ್ಲಿ ಈ ಭಾಗದಲ್ಲಿ ಮಳೆ ಆರಂಭವಾಗಬೇಕು. ಆದರೆ ಈ ಬಾರಿ ಜೂನ್‌, ಜುಲೈ ಕಳೆದು ಆಗಸ್ಟ್‌ ಬರುತ್ತಿದ್ದರೂ, ನಿಂತಿರುವ ಕೊಳಕು ನೀರು ಕೊಚ್ಚಿ ಹೋಗುವ ರೀತಿಯಲ್ಲಿ ಮಳೆ ಬಂದಿಲ್ಲ. ತುಂತುರು ಮಳೆಯಿಂದ ಅಲ್ಲಲ್ಲಿ ಗುಂಡಿಗಳಲ್ಲಿ ನೀರು ನಿಂತು, ಮಳೆ ನೀರು ಮಲೀನವಾಗಿ ಸೊಳ್ಳೆಗಳ ಉಗಮಸ್ಥಾನಗಳಾಗಿರುವುದು ವಿವಿಧ ಸಾಂಕ್ರಾಮಿಕ ರೋಗಗಳಿಗೆ ಕಾರಣವೂ ಆಗಿದೆ.

ಸ್ವಚ್ಛತೆ ಇಲ್ಲ: ಗ್ರಾಮಗಳು ಸ್ವಚ್ಛತೆ ಇಲ್ಲದಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು ಉಲ್ಬಣವಾಗಲು ಕಾರಣವಾಗಿದೆ. ಗ್ರಾಮದ ಒಳಗೆಯೇ ತಿಪ್ಪೆಗುಂಡಿಗಳು, ಚರಂಡಿಗಳು, ಅಲ್ಲಲ್ಲಿ ಬಚ್ಚಲು ನೀರು, ತೆಂಗಿನ ಚಿಪ್ಪು ಮತ್ತು ಟೈರ್‌ ಒಳಗೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿಗಳು ವಿಫ‌ಲವಾಗಿದ್ದು, ಜನರೂ ಸ್ವಚ್ಛತೆಗೆ ಮನಸ್ಸು ಮಾಡಿಲ್ಲ.

Advertisement

ಕ್ರಮ ಕೈಗೊಳ್ಳದ ಜಿಲ್ಲಾಡಳಿತ: ಜಿಲ್ಲೆಯಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಜನರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಮುಂದೆ ಸಾಲು ನಿಲ್ಲುತ್ತಿದ್ದಾರೆ. ಇನ್ನೂ ಕೆಲವರು ಬೆಂಗಳೂರು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಜಿಲ್ಲೆಯಲ್ಲಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಹಲವು ನಾಗರಿಕರ ಆರೋಪ.

ಮುಂಜಾಗ್ರತಾ ಕ್ರಮ ಅಗತ್ಯ: ಜಿಲ್ಲೆಯಲ್ಲಿ ಈಗಾಗಲೇ ಹತ್ತು ಹಲವು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯವಾಗಿದೆ. ಈ ಬಗ್ಗೆ ಗ್ರಾಮಗಳ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಮುಂದಾಗಬೇಕಾಗಿದೆ. ಜ್ವರ ಪೀಡಿತ ಗ್ರಾಮಗಳಲ್ಲಿ ಅಗತ್ಯವಾಗಿರುವ ಚಿಕಿತ್ಸೆ ನೀಡುವುದರ ಜೊತೆಗೆ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಸ್ವಚ್ಛತೆಗೆ ಗಮನಹರಿಸಲಿ: ತುಮಕೂರು ನಗರ ಸ್ಮಾರ್ಟ್‌ಸಿಟಿಯಾಗುತ್ತಿದೆ. ಆದರೆ ಈ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳ ನಿಯಂತ್ರಣ ಮಾಡುವಲ್ಲಿ ಮಹಾನಗರ ಪಾಲಿಕೆ ವಿಫ‌ಲವಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ಚರಂಡಿಗಳು ಸ್ವಚ್ಛತೆಯಿಲ್ಲದೇ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿವೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಹೆಚ್ಚು ಗಮನಹರಿಸಿ ಸ್ವಚ್ಛತೆಗೆ ಒತ್ತುನೀಡಿ, ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಪ್ಲೇಟ್ಲೆಟ್ ಕೇಂದ್ರಗಳು:

ಡೆಂಘೀ ಹೆಚ್ಚು ಉಲ್ಬಣಿಸಿದವರಲ್ಲಿ ಕೆಲವು ಮಂದಿಗೆ ಬಿಳಿರಕ್ತಕಣ ಕಡಿಮೆಯಾಗಿರುತ್ತದೆ. ರೋಗ ನಿರೋಧಕ ಶಕ್ತಿ ಹೊಂದಿರುವ ಈ ಬಿಳಿರಕ್ತಕಣಗಳನ್ನು ರೋಗಿಗಳಿಗೆ ವರ್ಗಾಯಿಸುವ ಅಗತ್ಯ ಪ್ರಯೋಗಾಲಯ ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಇರಲಿಲ್ಲ. ಬಿಳಿ ರಕ್ತಕಣ ವರ್ಗಾವಣೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಬೇಕಿತ್ತು. ಅಷ್ಟರೊಳಗೆ ರೋಗಿಗೆ ಪ್ರಾಣಾಪಾಯ ಬಂದೊದಗುವ ಸಂಭವವೂ ಹೆಚ್ಚಿತ್ತು. ಆದರೆ ಈಗ ತುಮಕೂರಿನಲ್ಲಿಯೇ ಪ್ಲೇಟ್ಲೆಟ್ ಕೇಂದ್ರಗಳು ಪ್ರಾರಂಭವಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆ, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಜನ ಡೆಂಘೀಗೆ ಆತಂಕಪಡುವ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ಅಧಿಕಾರಿಗಳು.
ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ಜು.31ರಂದು ಬೆಳಗ್ಗೆ 10.30ಕ್ಕೆ ಪಾಲಿಕೆ ಆವರಣದಲ್ಲಿ ಡೆಂಘೀ ವಿರೋಧಿ ಮಾಸಾಚರಣೆ ಹಮ್ಮಿಕೊಂಡಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ಮುಂಜಾಗ್ರತಾ ಕ್ರಮಗಳ ಬಗ್ಗೆ ನಗರ ವ್ಯಾಪ್ತಿಯಲ್ಲಿರುವ ಶಾಲಾ ಮಕ್ಕಳು ತಯಾರಿಸಿದ ಮಾದರಿ ಪ್ರದರ್ಶಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್‌.ಕಾಮಾಕ್ಷಿ ತಿಳಿಸಿದ್ದಾರೆ.
● ಚಿ.ನಿ. ಪುರುಷೋತ್ತಮ್‌
Advertisement

Udayavani is now on Telegram. Click here to join our channel and stay updated with the latest news.

Next