Advertisement

ರಾಷ್ಟ್ರಧ್ವಜ ತಯಾರಿಕೆಗೆ ನಾರಿಯರ ಉತ್ಸಾಹ!

05:36 PM Aug 09, 2022 | Team Udayavani |

ಮಲೇಬೆನ್ನೂರು: ಹರಿಹರ ತಾಲೂಕು ಭಾನುವಳ್ಳಿ ಗ್ರಾಮದ ಈಶ್ವರ್‌ ಅಲ್ಲಾ ಸ್ವಸಹಾಯ ಸಂಘದ ಸದಸ್ಯೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವ ಜೊತೆಗೆ ರಾಷ್ಟ್ರಧ್ವಜ ತಯಾರಿಕೆಗೂ ಮುಂದಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Advertisement

ಸ್ತ್ರೀಶಕ್ತಿ ಯೋಜನೆಯಡಿ 2000ರಲ್ಲಿ 20 ಜನ ಸದಸ್ಯೆಯರೊಂದಿಗೆ ಈಶ್ವರ್‌ ಅಲ್ಲಾ ಸ್ವಸಹಾಯ ಸಂಘ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೂ ವಿವಿಧ ರೀತಿಯ ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟ ಮಾಡುವುದರೊಂದಿಗೆ ಲಾಭ ಮತ್ತು ನಷ್ಟ ಎರಡನ್ನೂ ಕಂಡಿದ್ದಾರೆ.

ಪ್ರಾರಂಭದಲ್ಲಿ ಧ್ವಜ ತಯಾರಿಸುವುದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆದು ಎರಡು ಧ್ವಜಗಳನ್ನು ತಯಾರಿಸಿದೆವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಪುನಃ 100 ಧ್ವಜಗಳನ್ನು ತಯಾರಿಸಿ ಮಾರಾಟ ಮಾಡಿದಾಗ ಸ್ಪಂದನೆ ಚೆನ್ನಾಗಿತ್ತು. ಇದರಿಂದ ಪ್ರೇರೇಪಿತರಾದ ನಾವು ದಾವಣಗೆರೆಯಿಂದ ಕಾಟನ್‌ ಮತ್ತು ಪಾಲಿಸ್ಟರ್‌ ಬಟ್ಟೆಗಳನ್ನು ಖರೀದಿಸಿ ಧ್ವಜ ತಯಾರಿಸಲು ಮುಂದಾದೆವು ಎಂದು ಸಂಘದ ಸದಸ್ಯೆ ದೇವೀರಮ್ಮ ಮಾಹಿತಿ ನೀಡಿದರು.

ಪ್ರಸ್ತುತ ನಂದಿಗಾವಿ, ಕೊಕ್ಕನೂರು, ಭಾನುವಳ್ಳಿ ಮತ್ತು ಹೊಳೆಸಿರಿಗೆರೆ ಗ್ರಾಮ ಪಂಚಾಯಿತಿಗಳಿಂದ 1200 ಮತ್ತು ದಾವಣಗೆರೆ ಮಹಾನಗರಪಾಲಿಕೆಯಿಂದ 9000 ಧ್ವಜಕ್ಕೆ ಬೇಡಿಕೆ ಬಂದಿದೆ. ಒಟ್ಟು 4000 ಮೀಟರ್‌ ಬಟ್ಟೆ ಖರೀದಿಸಿ ಧ್ವಜ ತಯಾರಿಕೆಯಲ್ಲಿ ತೊಡಗಿದ್ದೇವೆ. ಧ್ವಜ ಮಾರಾಟದಿಂದ ಲಾಭ ನಿರೀಕ್ಷಿಸುತ್ತಿಲ್ಲ. ದೇಶಸೇವೆ ಎಂದು ಭಾವಿಸಿ ಧ್ವಜ ತಯಾರಿಕೆಯಲ್ಲಿ ತೊಡಗಿದ್ದೇವೆ ಎಂದು ಸಂಘದ ಪ್ರತಿನಿಧಿ ಆಯಿಷಾ, ಅಲ್ಮಾಸ್‌, ಅರಿಫಾ ಬಾನು ಹೇಳಿದರು.

ಸಂಘದಲ್ಲಿ 20 ಸದಸ್ಯೆಯರಿದ್ದು, 10 ಜನರು ಮಾತ್ರ ಧ್ವಜ ತಯಾರಿಯಲ್ಲಿ ತೊಡಗಿದ್ದೇವೆ. ಮನೆಯಲ್ಲಿನ ದೈನಂದಿನ ಕೆಲಸ ಮುಗಿಸಿ ಆರು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ದಿನವೊಂದಕ್ಕೆ 500 ಧ್ವಜ ತಯಾರಿಸಲು ಸಾಧ್ಯವಾಗುತ್ತಿದೆ. ಬೇಡಿಕೆಗೆ ತಕ್ಕಂತೆ ಬಟ್ಟೆಗಳ ಪೂರೈಕೆ ಇಲ್ಲವಾದ್ದರಿಂದ ಧ್ವಜಕ್ಕೆ ಬೇಡಿಕೆ ಬಂದರೂ ಪೂರೈಸುವುದು ಕಷ್ಟವಾಗುತ್ತದೆ. ಹಾಗಾಗಿ ಮೊದಲು ಬೇಡಿಕೆ ಸಲ್ಲಿಸಿದವರಿಗೆ ವಿತರಿಸುತ್ತೇವೆ. ಜಿಪಂ ಸಿಇಒ ಡಾ| ಚನ್ನಪ್ಪ ಹಾಗೂ ಸ್ಥಳೀಯರು ಹೊಲಿಗೆ ಕೇಂದ್ರಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸದಸ್ಯೆಯರಾದ ಖತ್ಮುನ್ನಿಸಾ, ಬಲ್‌ಕಿಶ್‌ ಬಾನು, ರುಹಿನಾ ಕೌಸರ್‌, ರುಕ್ಸಾನಾ, ಈರಬಸಮ್ಮ, ಚಂದ್ರಮ್ಮ, ರತ್ನಮ್ಮ, ಗೀತಾ ಸಂತಸ ವ್ಯಕ್ತಪಡಿಸಿದರು.

Advertisement

*ರಾಮ ಶೆಟ್ಟಿ ಎಂ.ಕೆ.

Advertisement

Udayavani is now on Telegram. Click here to join our channel and stay updated with the latest news.

Next