Advertisement

ಎಂಡೋ ಸಂತ್ರಸ್ತರಿಗೆ ಹಲವು ತಿಂಗಳಿಂದ ಸಿಕ್ಕಿಲ್ಲ ಮಾಸಾಶನ

01:56 AM Jan 25, 2021 | Team Udayavani |

ಕುಂದಾಪುರ: ಸರಕಾರ ಕೊಡುವ ಮಾಸಾಶನವನ್ನೇ ನಂಬಿ ಕುಳಿತಿರುವ ನೂರಾರು ಮಂದಿ ಎಂಡೋ ಸಂತ್ರಸ್ತರು ಇದೀಗ ಸಂಕಷ್ಟದಲ್ಲಿದ್ದಾರೆ. ಕಳೆದ ಹಲವು ತಿಂಗಳಿನಿಂದ ಅನೇಕ ಮಂದಿ ಎಂಡೋ ಸಂತ್ರಸ್ತರಿಗೆ ಮಾಸಾಶನ ಸಿಗದೇ ಜೀವನ ನಿರ್ವಹಣೆಗೆ ಪರದಾಟ ನಡೆಸುವಂತಾಗಿದೆ.

Advertisement

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟಾರೆ 5,169 ಎಂಡೋ ಸಂತ್ರಸ್ತರಿದ್ದು, ಈ ಪೈಕಿ 3,937 ಮಂದಿ ಸಂತ್ರಸ್ತರಿಗೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ.

ಗೇರು ತೋಟಗಳಿಗೆ ಎಂಡೋಸಲ್ಫಾನ್‌ ಸಿಂಪಡಣೆ ಮಾಡಿದ್ದರ ಪರಿಣಾಮ ಕರಾವಳಿಯ ಬೇರೆ ಬೇರೆ ಕಡೆ ಅನೇಕ ಮಂದಿ ಅಮಾಯಕರ ಬದುಕನ್ನೇ ನುಂಗಿ ಹಾಕಿದೆ. ಇದರಿಂದಾಗಿ ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಮಕ್ಕಳು ಬೆಳೆಯುತ್ತಿದ್ದಂತೆಯೇ ತಮ್ಮ ಕೈಕಾಲುಗಳ ಸ್ವಾಧೀನ ಕಳೆದುಕೊಳ್ಳುವುದು, ಅಂಧತ್ವ, ಕ್ಯಾನ್ಸರ್‌, ಹೆಣ್ಣುಮಕ್ಕಳಲ್ಲಿ ಬಂಜೆತನ ಮುಂತಾದ ಕಾಯಿಲೆಗಳು ಕಾಣಿಸಿಕೊಂಡಿವೆ. ಅನೇಕ ಹೋರಾಟಗಳಿಂದಾಗಿ 2010ರಿಂದ ಎಂಡೋ ಸಂತ್ರಸ್ತರನ್ನು ಗುರುತಿಸಿ ಅವರಿಗೆ ಮಾಸಾಶನ ನೀಡುವ ಪ್ರಕ್ರಿಯೆ ಜಾರಿಗೊಂಡಿತು.

ಎಷ್ಟು ಮಾಸಾಶನ ? :

ಶೇ. 60ಕ್ಕಿಂತ ಹೆಚ್ಚು ಅನಾರೋಗ್ಯ ಪೀಡಿತರಿಗೆ ತಿಂಗಳಿಗೆ 3 ಸಾವಿರ ರೂ. ಹಾಗೂ ಅದಕ್ಕಿಂತ ಕೆಳಗಿನ ಪೀಡಿತರಿಗೆ 1,500 ರೂ. ಮಾಸಾಶನ ನೀಡಲಾಗುತ್ತಿದೆ. ಪ್ರತಿ ತಿಂಗಳು ಈ  ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ. ಸಚಿವರು ಸಭೆ ನಡೆಸದೇ ಇರುವುದರಿಂದ ಮಾಸಾಶನ ಸಿಗುವುದು ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.

Advertisement

ಉಡುಪಿ: 1,557;  ದ.ಕ. 3,612 ಸಂತ್ರಸ್ತರು :

ರಾಜ್ಯದಲ್ಲಿ ಉತ್ತರ ಕನ್ನಡ, ದ.ಕ. ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡಂತೆ 8,500 ಸಂತ್ರಸ್ತರನ್ನು ಗುರುತಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆ 1,557 ಮಂದಿ ಎಂಡೋ ಸಂತ್ರಸ್ತರಿದ್ದು, ಈ ಪೈಕಿ ಶೇ. 25ಕ್ಕಿಂತ ಹೆಚ್ಚು ಅನಾರೋಗ್ಯ ಪೀಡಿತರಾಗಿರುವ 1,337 ಮಂದಿಗೆ ಮಾಸಾಶನ ಸಿಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 3,612 ಎಂಡೋ ಸಂತ್ರಸ್ತರನ್ನು ಗುರುತಿಸಿದ್ದರೂ, ಅವರಲ್ಲಿ 2,600 ಜನರಿಗೆ ಮಾಸಾಶನ ಸಿಗುತ್ತಿದೆ. ಕುಂದಾಪುರದಲ್ಲಿ 1,123 ಮಂದಿ ಸಂತ್ರಸ್ತರಿದ್ದು, ಅವರಲ್ಲಿ 933 ಮಂದಿಗೆ ಮಾಸಾಶನ ಸಿಗುತ್ತಿದೆ. ಇವರಲ್ಲಿಯೂ ಅನೇಕ ಮಂದಿಗೆ ಕಳೆದ ಹಲವು ತಿಂಗಳಿನಿಂದ ಮಾಸಾಶನ ಸಿಗುತ್ತಿಲ್ಲ.

ಆದಷ್ಟು ಬೇಗ ನೀಡಿ :

ಅನೇಕ ಮಂದಿ ಎಂಡೋ ಸಂತ್ರಸ್ತರಿಗೆ ಸರಿ ಸುಮಾರು ಒಂದು ವರ್ಷದಿಂದ  ಮಾಸಾಶನ ಸಿಗುತ್ತಿಲ್ಲ. ಇದನ್ನೇ ನಂಬಿ ಕುಳಿತ ನೂರಾರು ಮಂದಿ ಸಂತ್ರಸ್ತರು ಈಗ ಸಂಕಷ್ಟದಲ್ಲಿದ್ದಾರೆ. ಸರಕಾರ ಆದಷ್ಟು ಬೇಗ ಅವರಿಗೆ ಬಾಕಿ ಇರುವ ಎಲ್ಲ ತಿಂಗಳ ಮಾಸಾಶನವನ್ನು ಬಿಡುಗಡೆ ಮಾಡಬೇಕು. ಈಗ ಗುರುತಿಸಿರುವವರು ಮಾತ್ರವಲ್ಲದೆ ಇನ್ನು ಅನೇಕ ಮಂದಿ ಅರ್ಹ ಸಂತ್ರಸ್ತರನ್ನು ಈ ಪಟ್ಟಿಯಲ್ಲಿ ಸೇರಿಸಬೇಕಿದೆ. – ವೆಂಕಟೇಶ್‌ ಕೋಣಿ, ಗೌರವಾಧ್ಯಕ್ಷರು, ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ

ಪ್ರಕ್ರಿಯೆ ನಡೆಯುತ್ತಿದೆ :

ಎಂಡೋ ಸಂತ್ರಸ್ತರಿಗೆ ಮಾಸಾಶನ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು,ಕೋವಿಡ್ ಕಾರಣಕ್ಕೆ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಹಣ ಜಮೆ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿರಬಹುದು. ಆದಷ್ಟು ಬೇಗ ಬಾಕಿ ಇರುವ ಸಂತ್ರಸ್ತರಿಗೂ ಮಾಸಾಶನ ಸಿಗುವಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಂಪರ್ಕಿಸಿ ಕ್ರಮಕೈಗೊಳ್ಳಲಾಗುವುದು.  – ಡಾ| ರಾಮಚಂದ್ರ ಬಾಯರಿ,  ಡಾ| ಸುಧೀರ್‌ಚಂದ್ರ ಸೂಡಾ, ಉಭಯ ಜಿಲ್ಲಾ ಆರೋಗ್ಯಾಧಿಕಾರಿಗಳು,ದಕ್ಷಿಣ ಕನ್ನಡ,  ಉಡುಪಿ

 

ಪ್ರಶಾಂತ್‌ ಪಾದೆ

 

Advertisement

Udayavani is now on Telegram. Click here to join our channel and stay updated with the latest news.

Next