ಮಂಗಳೂರು: ಕರಾವಳಿ ಭಾಗಕ್ಕೆ ಈ ಬಾರಿ ಮುಂಗಾರು ಉತ್ತಮವಾಗಿತ್ತು. ಆದರೆ ಹಿಂಗಾರು ಕೈ ಕೊಟ್ಟಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ.
ಉಭಯ ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆ ಮಳೆ ಸುರಿಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಬಾರಿ ಮಳೆ ಕೊರತೆ ಉಂಟಾಗಿದೆ.
ಹವಾಮಾನ ಇಲಾಖೆ ಮಾಹಿತಿಯಂತೆ ಕರಾವಳಿ ಭಾಗದಲ್ಲಿ ಶೇ.14ರಷ್ಟು ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 376 ಮಿ.ಮೀ. ವಾಡಿಕೆ ಮಳೆಯಲ್ಲಿ 361 ಮಿ.ಮೀ. ಮಳೆಯಾಗಿ ಶೇ.4ರಷ್ಟು ಮಳೆ ಕೊರತೆ ಉಂಟಾಗಿದೆ. ಉಡುಪಿ ಜಿಲ್ಲೆಯಲ್ಲಿ 312 ಮಿ.ಮೀ. ವಾಡಿಕೆ ಮಳೆಯಲ್ಲಿ 241 ಮಿ.ಮೀ. ಮಳೆಯಾಗಿ ಶೇ.23ರಷ್ಟು ಮಳೆ ಕೊರತೆ ಉಂಟಾಗಿದೆ.
ಹವಾಮಾನದಲ್ಲಿ ಏರು ಪೇರು
ಕರಾವಳಿ ಭಾಗದಲ್ಲಿ ಹವಾಮಾನದಲ್ಲಿಯೂ ಏರುಪೇರು ಉಂಟಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಾದ್ಯಂತ ಭಾರೀ ಚಳಿ ಇತ್ತು. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿಯೂ ಏರಿಳಿತ ಆಗುತ್ತಿದೆ. ಸದ್ಯ ಚಳಿಯ ತೀವ್ರತೆ ತುಸು ಕಡಿಮೆಯಾಗಿದ್ದು, ಸೆಕೆಯ ಅನುಭವವೂ ಆಗುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆಯತೆ ಚಳಿ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.