ನವದೆಹಲಿ: ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಬಿಗಡಾಯಿಸಿದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಆದರೆ ಇದೇ ವೇಳೆ ಎರಡೂ ರಾಷ್ಟ್ರಗಳ ನಡುವೆ ಸೌಹಾರ್ದತೆ ಮೂಡಬೇಕು, ಗಡಿಯಲ್ಲಿ
ಗುಂಡಿನ ಮೊರೆತ ಮರೆಯಾಗಿ ಶಾಂತಿ ಮನೆ ಮಾಡಬೇಕು ಹಾಗೂ ಎರಡೂ ದೇಶಗಳು ಒಟ್ಟಾಗಿ ಪ್ರಗತಿ ಹೊಂದಬೇಕು ಎಂಬುದು ಕೋಟ್ಯಂತರ ಭಾರತೀಯರು ಹಾಗೂ ಪಾಕಿಸ್ತಾನ ಪ್ರಜೆಗಳ ಹೆಬ್ಬಯಕೆ.
ಭಾರತ ಹಾಗೂ ಪಾಕಿಸ್ತಾನ 70ನೇ ಸ್ವಾತಂತ್ರೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಸೋದರ ರಾಷ್ಟ್ರಗಳ ನಡುವೆ ಸೌಹಾರ್ದತೆ ಯನ್ನು ಸಾರುವಂತಹ ವಿಡಿಯೋವೊಂದು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಎರಡೂ ದೇಶಗಳ ನಡುವೆ ಶಾಂತಿ ಮೂಡಿಸುವ ಪ್ರಯತ್ನ ದಲ್ಲಿ ಸದಾ ಕ್ರಿಯಾಶೀಲರಾಗಿರುವ ರಾಮ್ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಈ ವಿಡಿಯೋ ಭಾರತ ಹಾಗೂ ಪಾಕಿಸ್ತಾನಗಳ ರಾಷ್ಟ್ರಗೀತೆಗಳನ್ನು ಒಟ್ಟಿಗೇ ತಂದಿದೆ. ಈ ಮೂಲಕ ಗಡಿ ಕಲಹದಾಚೆ ಸಾಗಿ ಸೋದರತ್ವದ ಸಂದೇಶ ಸಾರಿದೆ.
ಯೂಟ್ಯೂಬ್‌ನ “ವಾಯ್ಸ ಆಫ್ ರಾಮ್’ ಚಾನೆಲ್‌ನಲ್ಲಿ ಎರಡು ದಿನಗಳ ಹಿಂದಷ್ಟೇ ಅಪ್‌ಲೋಡ್ ಆದ ವಿಡಿಯೋವನ್ನು 30 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಒಮ್ಮೆ ಈ ವಿಡಿಯೋ ನೋಡಲು ಆರಂಭಿಸಿದರೆ ಅದನ್ನು ನಿಲ್ಲಿಸಲು ನಿಮಗೆ ಮನಸೇ ಆಗುವುದಿಲ್ಲ.
ಅಲ್ಲಿನ ಸಂಗೀತ, ಸುಶ್ರಾವ್ಯ ಗಾಯನ ಅಷ್ಟೊಂದು ಸೊಗಸಾಗಿ ಮೂಡಿಬಂದಿದೆ. ಹಾಗೇ ವಿಭಿನ್ನವಾಗಿ ಮೂಡಿಬಂದಿರುವ ಎರಡೂ ದೇಶಗಳ ರಾಷ್ಟ್ರಗೀತೆ ಕೇಳುತ್ತಿದ್ದರೆ ದೇಶಭಕ್ತಿ ಉಕ್ಕುವ ಜೊತೆಗೆ, ರೋಮಾಂಚನದೊಂದಿಗೆ ಕಣ್ಣಾಲಿಗಳು ತುಂಬಿಬರುತ್ತವೆ.
“ಕಲೆಗಾಗಿ ನಾವು ನಮ್ಮ ಗಡಿಯನ್ನು ಮುಕ್ತ ಗೊಳಿಸಿದಾಗ ಶಾಂತಿ ಕೂಡ ಹಿಂಬಾಲಿಸುತ್ತದೆ’ ಎಂಬ ಸಾಲಿನೊಂದಿಗೆ ಆರಂಭವಾಗುವ “ಪೀಸ್ ಆಂಥಮ್’ ಹೆಸರಿನ ವಿಡಿಯೋದಲ್ಲಿ ಭಾರತದ ನಿಖೀಲ್ ಡಿಸೋಜಾ ಮತ್ತು ಪಾಕಿಸ್ತಾನದ ಅಲೈ ಸಿಯಾ ದಿಯಾಸ್ ಭಾರತ ಹಾಗೂ ಪಾಕಿಸ್ತಾನದ ರಾಷ್ಟ್ರಗೀತೆಗಳನ್ನು ಹಾಡಿದ್ದಾರೆ. ನಮ್ಮಲ್ಲಿನ ವೈಮನಸ್ಸನ್ನು ಬದಿಗೊತ್ತಿ ನಾವು ಜೊತೆಯಾಗಿ ನಿಂತರೆ ಎಂಥ ಅದ್ಭುತ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಈ “ಇಂಡೋ-ಪಾಕ್’ ರಾಷ್ಟ್ರಗೀತೆ ಸಾಕ್ಷಿಯಾಗಿ ನಿಲ್ಲುತ್ತದೆ. ಈ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.