ಧಾರವಾಡ: ಬೇಂದ್ರೆಯವರ ಕಾವ್ಯದುದ್ದಕ್ಕೂ ಮಹಿಳಾ ಅಂತಃಕರಣದ ನೈಜ ಛಾಪು, ದಿಟ್ಟತನದ ಧಾಟಿ ಗಮನಿಸಿದರೆ ಅದು ತಾಯಿಗೆ, ಮಾಯಿಗೆ, ಮಾಯೆಗೆ ಮುಡಿಪಾಗಿ, ತಲೆಬಾಗಿ, ಶರಣಾಗಿ ಹರಿಯುವ ಭಾವ ಗಂಗಾ ನದಿಯಂತೆ. ಅದರಲ್ಲೂ ಉಕ್ಕಿ ಉಕ್ಕಿ ಹರಿಯುವುದೇ ಈ ಅಂತಃಕರಣದ ಛಾಯೆಯ ವಿಶ್ವಕವಿಯಾಗುವ ಎಲ್ಲ ಲಕ್ಷಣಗಳು ಬೇಂದ್ರೆಯವರಿಗಿತ್ತು ಎಂದು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಪ್ರಾಧ್ಯಾಪಕಿ, ಲೇಖಕಿ ಡಾ| ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.
ನಗರದ ಬೇಂದ್ರೆ ಭವನದಲ್ಲಿ ಡಾ| ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಕನ್ನಡಕ್ಕಾಗಿ ನಾನು ಅಭಿಯಾನ, ಆಜಾದಿಕಾ ಅಮೃತ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ದ.ರಾ. ಬೇಂದ್ರೆಯವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬೇಂದ್ರೆ ಸಖ್ಯಯೋಗದ ಕುರಿತು ಅವರು ಮಾತನಾಡಿದರು. ಬೇಂದ್ರೆಯವರು ತಮ್ಮ ಹೆಂಡತಿಗೆ ತಮ್ಮ ಸಮಾನವಾದ ಪ್ರಾಶಸ್ತ್ಯ ನೀಡಿ, ತಮ್ಮ ಸಖೀಗೀತ ಖಂಡ ಕಾವ್ಯದಲ್ಲಿ ಸ್ತ್ರೀಯನ್ನ ಸಖೀ ಎಂದು ವ್ಯಾಖ್ಯಾನಿಸುವ ಮೂಲಕ ಸ್ತ್ರೀಗೆ ಪುರುಷ ಸಮಾನ ಭಾವವನ್ನು ತೋರಿದ ಮೇರು ವ್ಯಕ್ತಿತ್ವದ ಕವಿಯಾಗಿದ್ದರು. ಬೇಂದ್ರೆಯವರು ತಮ್ಮ ವಿವಾಹದಿಂದ ಹಿಡಿದು ಸಖೀಗೀತ ಕವನ ಬರೆಯುವ ಕಾಲಘಟ್ಟದವರೆಗಿನ ಆತ್ಮಕಥನದ ತುಣಕನ್ನಾಗಿ ಸಖೀಗೀತವನ್ನು ಕಾಣಬಹುದಾಗಿದೆ ಎಂದರು.
ಅತ್ಯಂತ ಸುಂದರವಾದ ಭಾವನೆಗಳೊಂದಿಗೆ ಸಖೀಗೀತವನ್ನು ಆರಂಭಿಸುತ್ತ ತಮ್ಮ ಯೌವ್ವನದ ಸಹಜವಾದ ಸ್ಥಿತಿಯಲ್ಲಿ ಮದುವೆಯ ಕಾಲಘಟ್ಟದ ರೋಮಾಂಚನವನ್ನು ಬಣ್ಣಿಸುತ್ತ ಹೋಗ್ತಾರೆ. ಅಷ್ಟು ಸುಂದರವಾಗಿ ತಮ್ಮ ಪ್ರೇಮಾಭಿವ್ಯಕ್ತಿತನವನ್ನು, ಸೂಕ್ಷ್ಮ ಸಂವೇದನೆಗಳ ಜತೆಗೆ ಎಲ್ಲೂ ಅತಿರೇಕಕ್ಕೆ ಹೋಗದೆ, ಒಂದು ಹದವಾದ ಚೌಕಟ್ಟಿನಲ್ಲಿ ಇಡುವ ಮೂಲಕ ದಾಂಪತ್ಯದ ಸುಖವನ್ನು ತೋರ್ಪಡಿಸುವ ರೀತಿ ಅಪ್ರತಿಮವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ| ಡಿ.ಎಂ. ಹಿರೇಮಠ ಮಾತನಾಡಿ, ಬೇಂದ್ರೆಯವರು ನಮ್ಮನ್ನಗಲಿ 40 ವರ್ಷಗಳಾದವು. ಆದರೆ ಈಗಲೂ ನಿತ್ಯನೂತನವಾಗಿ ಅವರ ಸಾಹಿತ್ಯ ಜನರ ಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತಿದೆ. ಯಾವುದೇ ಕನ್ನಡದ ಕವಿಯನ್ನು ನಾವು ಸ್ಮರಣೆ ಮಾಡಿದಾಗ ಬೇಂದ್ರೆ ಮತ್ತು ಕುವೆಂಪು ನವೋದಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಾಗಿವೆ ಎಂದರು.
ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಮಾಧವ ಗಿತ್ತೆ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಛಾಪು ಮೂಡಿಸುವ ಮೂಲಕ ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಕವನಗಳನ್ನು ಮತ್ತೆ-ಮತ್ತೆ ಕೇಳಬೇಕೆನ್ನುಸುತ್ತದೆ ಎಂದರು. ಗಾಯಕಿ ಮೇಘಾ ಹುಕ್ಕೇರಿ ಮತ್ತು ಸಾಕ್ಷೀ ಹುಕ್ಕೇರಿ ಅವರು, ಬೇಂದ್ರೆಯವರ ಹಾಡುಗಳನ್ನು ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಸುರೇಶ ನಿಡಗುಂದಿ ಹಾರ್ಮೋನಿಯಂದಲ್ಲಿ ಮಹಮ್ಮದ ಶಫೀ ನೂಲಕರ ಸಾಥ್ ಸಂಗತ ನೀಡಿದರು. ಡಾ| ಧನವಂತ ಹಾಜವಗೋಳ, ಅನಂತ ದೇಶಪಾಂಡೆ, ಅರವಿಂದ ಕುಲಕರ್ಣಿ, ಜಿ.ಕೆ. ಹಿರೇಮಠ, ಜಯತೀರ್ಥ ಜಹಗೀರದಾರ, ಡಾ| ಶ್ರೀಧರ ಕುಲಕರ್ಣಿ, ಪ್ರೇಮಾ ನಡುವಿನಮನಿ, ದ್ವಾರಪಾಲಕ, ಹಾವನೂರ, ಶ್ರೀನಿವಾಸ ಕಾಂತನವರ, ಕಿರಣ ತೋಟಗಂಟಿ, ಬಾಬು ಬೆಣ್ಣಿ, ಎಸ್.ಎಸ್. ಬಂಗಾರಿಮಠ, ಎಂ.ಎಂ. ಮಾನೆ ಇದ್ದರು. ಸತೀಶ ಜಾಧವ ನಿರೂಪಿಸಿದರು.ಮಾಧವ ಗಿತ್ತೆ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.