ಸುರಪುರ: ಜಿಲ್ಲೆಯಲ್ಲಿ ಆನೆಕಾಲು ರೋಗದ ಅತೀಹೆಚ್ಚು ಪ್ರಕರಣಗಳು ಕಂಡುಬಂದಿವೆ. ಇದು ನಿರ್ಲಕ್ಷ್ಯ ಸಲ್ಲದು. ಆನೆಕಾಲು ರೋಗವು ವ್ಯಕ್ತಿಯನ್ನು ದೈಹಿಕ ಮತ್ತು ಮಾನಸಿಕ ಅಸ್ವಸ್ಥನನ್ನಾಗಿಸಿ ಖನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಕಾರಣ ರೋಗ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಆರ್.ವಿ. ನಾಯಕ ಹೇಳಿದರು.
ಇಲ್ಲಿಯ ಶ್ರೀಪ್ರಭು ಕಾಲೇಜಿನ ಆವರಣದಲ್ಲಿ ಆನೆಕಾಲು ರೋಗ ನಿವಾರಣೆ ಸಾಮೂಹಿಕ ಔಷಧ ನುಂಗಿಸುವ ಜಾಗೃತಿ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜ.5 ರಿಂದ 17 ರವರೆಗೆ ಆನೆಕಾಲು ರೋಗ ನಿವಾರಣೆ ಮಾತ್ರೆಗಳಾದ ಐವರ್‌ಮೇಕ್ಟಿನ್ ಜೊತೆ ಡಿಇಸಿ ಮಾತ್ರೆಗಳನ್ನು ನಮ್ಮ ಸಿಬ್ಬಂದಿ ಮನೆ ಮನೆಗೆ ಹೋಗಿ ನೀಡುತ್ತಾರೆ. ಸಾರ್ವಜನಿಕರು ಮಾತ್ರೆ ಸೇವಿಸುವ ಮೂಲಕ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ಆನೆಕಾಲು ರೋಗ ನಿವಾರಣೆಗೆ ಸರಕಾರ ಹಲವು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ಈ ರೋಗವನ್ನು ಸವಾಲಾಗಿ ಸ್ವೀಕರಿಸಿದ್ದು, ಇದು 18ನೇ ಸುತ್ತಿನ ಸಾಮೂಹಿಕ ಔಷಧ ನುಂಗಿಸುವ ಕಾರ್ಯಕ್ರಮವಾಗಿದೆ. ಶೇ.92 ಜನ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಕ್ಷೇತ್ರದಲ್ಲಿ 4.47 ಲಕ್ಷ ಜನರಿಗೆ ಮಾತ್ರೆ ನುಂಗಿಸುವ ಗುರಿ ಹೊಂದಲಾಗಿದೆ. ಗರ್ಭಿಣಿ ಮತ್ತು 2 ವರ್ಷದ ಮಕ್ಕಳಿಗೆ ಮಾತ್ರೆ ಕೊಡುವುದಿಲ್ಲ ಎಂದು ತಿಳಿಸಿದರು.
ಎತ್ತರಕ್ಕೆ ಅನುಗುಣವಾಗಿ ಒಟ್ಟು 8 ಮಾತ್ರೆಗಳನ್ನು ನೀಡಲಾಗುತ್ತಿದೆ 2 ರಿಂದ 5 ವರ್ಷ ಮತ್ತು ಮೇಲ್ಪಟ್ಟವರಿಗ ಮಾತ್ರೆ ತೆಗೆದುಕೊಳ್ಳಬೇಕು ಕೆಲವರಿಗೆ ಜ್ವರ, ತಲೆ, ಮೈ-ಕೈ ನೋವು, ಮೈ ಉರಿತ, ಕೆರೆತ ಆಗಬಹುದು ಇದು ತಾತ್ಕಾಲಿಕವಾಗಿದ್ದು ಭಯಗೊಳ್ಳುವ ಅಗತ್ಯವಿಲ್ಲ ತಾನಾಗಿ ವಾಸಿಯಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾಪಂ ಇಒ ಅಮರೇಶ ಮೂಡಲದಿನ್ನಿ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಪಾಂಶುಪಾಲ ಡಾ| ಎಸ್.ಎಚ್. ಹೊಸ್ಮನಿ, ಉಪ ಪ್ರಾಂಶುಪಾಲ ಪ್ರೊ| ವೇಣುಗೋಪಾಲ ಜೇವರ್ಗಿ, ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ.ಡಿ.ವಾರೀಸ್, ಆರೋಗ್ಯ ಸಹಾಯಕ ಸಂಗಪ್ಪ ಚೆಟ್ಟಿ ಇತರರಿದ್ದರು.