ನಿಸ್ಸಂಶಯವಾಗಿ ಇದೊಂದು ಚುನಾವಣಾ ಬಜೆಟ್ ಆಗಿದ್ದು, ಚುನಾವಣೆಯಲ್ಲಿ ಮತ್ತೆ ತಮಗೆ ಮತದಾನ ಮಾಡಿದರೆ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಜಾರಿಗೊಳಿಸುತ್ತೇವೆ ಎನ್ನುವಂತಿದೆ. ಕಳೆದ ಚುನಾವಣೆ ವೇಳೆ ನೀಡಿದಂತೆ ಈ ಬಾರಿಯೂ ಸುಳ್ಳು ಆಶ್ವಾಸನೆಗಳನ್ನು ನೀಡಿದ್ದು, ಇದೊಂದು “ಚುನಾವಣೆಯ ಗಿಮಿಕ್’ ಆಗಿದೆ.
ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂ.ಗಳನ್ನು ನೀಡುವ ಯೋಜನೆ ಹಾಸ್ಯಾಸ್ಪದ ವಿಚಾರವಾಗಿದ್ದು, ಯೋಜನೆಯಂತೆ ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ 3.3 ರೂ. ನೀಡಿದಂತಾಗುತ್ತದೆ. ಬಜೆಟ್‌ನಲ್ಲಿ ಅಪೌಷ್ಟಿಕತೆಯ ಕುರಿತು ಒಂದೇ ಒಂದು ಶಬ್ದವನ್ನು ಪ್ರಸ್ತಾಪಿಸಿಲ್ಲ.
ದೇಶದ ಮುಂದಿನ ಪ್ರಜೆಗಳಾದ ಮಕ್ಕಳಿಗೆ ಕೇರ್ ಸೆಂಟರ್ ಹಾಗೂ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸುವ ಕುರಿತಂತೆ ಯಾವುದೇ ಯೋಜನೆ ಘೋಷಣೆ ಮಾಡದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ಪ್ರಸ್ತಾಪವಿಲ್ಲ.
ಇನ್ನು ಕಡ್ಡಾಯವಾಗಿ ಶಾಲೆಗಳಿಗೆ ಹೋಗಬೇಕಾದ ಮಕ್ಕಳ ಪೈಕಿ ಶೇ.50ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿ ಯುತ್ತಿದ್ದು, ಅವರನ್ನು ಶಾಲೆಗೆ ಕರೆತರುವ ಆಸಕ್ತಿ ತೋರಿಲ್ಲ. ದೇಶದಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರ, ಅಗತ್ಯ ಔಷಧಗಳು ಹಾಗೂ ಡಯಾಗ್ನಾಸ್ಟಿಕ್ ಸೇವೆಗಳಿಗೆ ಬೊಗಸೆಯಷ್ಟು ಅನುದಾನ ನೀಡಿದ್ದಾರೆ.
ಇದರೊಂದಿಗೆ ವಿಶ್ವ ಅತಿದೊಡ್ಡ ಆರೋಗ್ಯ ವಿಮಾ ಸೇವೆ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ, ಆರೋಗ್ಯ ವಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ ವ್ಯಾಪ್ತಿಗೆ 10 ಕೋಟಿ ಬಡ ಕುಟುಂಬಗಳು ಬರಲಿದ್ದು, ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ 5 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಆದರೆ, ಯೋಜನೆಗೆ ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ಸಿಕ್ಕಿಲ್ಲ.
ಅಸಂಘಟಿತ ಕಾರ್ಮಿಕರು ಸರ್ಕಾರದ ಪಿಂಚಣಿ ಸೌಲಭ್ಯ ಪಡೆಯಬೇಕಾದರೆ 60 ವರ್ಷದವರೆಗೆ ಕಾಯಬೇಕು. ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ ದೇಶದ ಪ್ರತಿಯೊಬ್ಬರಿಗೂ ಪಿಂಚಣಿ ಸೌಲಭ್ಯ ಒದಗಿಸಲು ಕನಿಷ್ಠ 3 ಲಕ್ಷ ಕೋಟಿ ಅವಶ್ಯಕತೆಯಿದೆ. ಆದರೆ, ಸರ್ಕಾರ “ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಕೇವಲ 9,975 ಕೋಟಿ ರೂ. ಮೀಸಲಿರಿಸಿದೆ.
* ಕಾತ್ಯಾಯಿನಿ ಚಾಮರಾಜ್, ಸಿವಿಕ್ ಸಂಘಟನೆ