Advertisement

ಅಭ್ಯರ್ಥಿಗಳ ಚುನಾವಣಾ ವೆಚ್ಚ 28 ಲಕ್ಷಕ್ಕೆ ಏರಿಕೆ

06:15 AM Jan 11, 2018 | Team Udayavani |

ಬೆಂಗಳೂರು: ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 28 ಲಕ್ಷ ರೂ.”ಚುನಾವಣಾ ವೆಚ್ಚ ಭಾಗ್ಯ’ ಸಿಗಲಿದೆ. ಅಂದರೆ, ಚುನಾವಣೆಗೆ ಒಬ್ಬ ಅಭ್ಯರ್ಥಿ ಗರಿಷ್ಠ 28 ಲಕ್ಷ ಖರ್ಚು ಮಾಡಬಹುದು.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮಹಾನಿರ್ದೇಶಕ (ಚುನಾವಣಾ ವೆಚ್ಚ) ದಿಲೀಪ್‌ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದರು. 

ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣೆ ವೆಚ್ಚದ ಗರಿಷ್ಠ ಮಿತಿ 7.50 ಲಕ್ಷ ರೂ.ಇತ್ತು ಅದನ್ನು 2014ರಲ್ಲಿ
ಪರಿಷ್ಕರಿಸಲಾಗಿತ್ತು. ಆದರೆ, 2013ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಹೋಗಿತ್ತು.

ಹಾಗಾಗಿ, ಆಗ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಗರಿಷ್ಠ ಮಿತಿ 7.50 ಲಕ್ಷ ರೂ. ಇತ್ತು. 2018ರ
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಗರಿಷ್ಠ 28 ಲಕ್ಷ ರೂ.ವೆಚ್ಚ ಮಾಡುವ ಅವಕಾಶ ಸಿಗಲಿದೆ ಎಂದರು.

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ಆಯೋಗ ಹದ್ದಿನ ಕಣ್ಣು ಇಡಲಿದೆ. ಪ್ರತಿ ಜಿಲ್ಲೆಯಲ್ಲಿ ಚುನಾವಣಾ ವೆಚ್ಚ ನಿರ್ವಹಣಾ ಸಮಿತಿ ರಚಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ ಮೂರು ಸಂಚಾರಿ ವಿಚಕ್ಷಣ ದಳ ಮತ್ತು ಮೂರು ವಿಶೇಷ ತಂಡಗಳನ್ನು ರಚಿಸಲಾಗುತ್ತದೆ. ಎಲ್ಲ ವಿಮಾನ ನಿಲ್ದಾಣಗಳಲ್ಲಿ ವಿಚಕ್ಷಣ ತಂಡಗಳನ್ನು ರಚನೆ ಮಾಡಲಾಗುವುದು. ಕಾಸಿಗಾಗಿ ಸುದ್ದಿ (ಪೇಡ್‌ ನ್ಯೂಸ್‌) ಬಗ್ಗೆ ನಿಗಾ ಇಡಲು ಜಿಲ್ಲಾಮಟ್ಟದಲ್ಲಿ ಮೀಡಿಯಾ ವಾಚ್‌ ಸಮಿತಿಗಳನ್ನು ರಚಿಸಲಾಗುವುದು ಎಂದರು.

Advertisement

ಅಂತರರಾಜ್ಯ ಗಡಿಗಳಲ್ಲಿ ಕಟ್ಟೆಚ್ಚರ: ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣದ ಹರಿವು ತಡೆಗಟ್ಟಲು ಅಂತರರಾಜ್ಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ನೀತಿ ಸಂಹಿತೆ ಜಾರಿಗೆ ಬಂದ ತಕ್ಷಣ ಗಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ನೆರೆ ರಾಜ್ಯಗಳಿಂದ ಅಕ್ರಮ ಹಣ ವರ್ಗಾವಣೆ ಆಗದಂತೆ ನಿಗಾ ವಹಿಸಲಾಗುವುದು. ಜೊತೆಗೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ನೀಡುವ ಗಿಫ್ಟ್ ಮತ್ತು ಕೂಪನ್‌ಗಳ ಬಗ್ಗೆಯೂ ನಿಗಾ ಇಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್‌ ಸಿನ್ಹಾ ಇದೇ ವೇಳೆ ತಿಳಿಸಿದರು.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ?: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಜ.12 ಕೊನೇ ದಿನ ಆಗಿತ್ತು. ಆದರೆ,ಅವಧಿ ವಿಸ್ತರಿಸುವಂತೆ ರಾಜಕೀಯ ಪಕ್ಷಗಳ ಮುಖಂಡರು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕೆಲವರು ಒಂದು ಹಂತದಲ್ಲಿ ಮತ್ತು ಕೆಲವರು ಎರಡು ಹಂತಗಳಲ್ಲಿ ಮತದಾನ ನಡೆಸುವಂತೆ ಮನವಿ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇವಿಎಂ ದೋಷ ಈಗ ಮುಗಿದ ಅಧ್ಯಾಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್‌ ಸೇರಿ ಕೇಂದ್ರ ತಂಡದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಮೊದಲ ಬಾರಿಗೆ “ಎಲೆಕ್ಟ್ರಾನಿಕ್‌ ಬ್ಯಾಲೆಟ್‌’
ಬೆಂಗಳೂರು
: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವರಿಗೆ(ಸರ್ವಿಸ್‌ ವೋಟರ್) ಅನುಕೂಲ ಮಾಡಿಕೊಡಲು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ “ಎಲೆಕ್ಟ್ರಾನಿಕ್‌ ಬ್ಯಾಲೆಟ್‌’ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಲ್ಲಿ ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿಕೊಳ್ಳುವ ಸರ್ವಿಸ್‌ ವೋಟರ್ಗೆ ವಿದ್ಯುನ್ಮಾನ ಕೋಡ್‌ ಆಧರಿತ ಬ್ಯಾಲೆಟ್‌ನ್ನು ಆನ್‌ ಲೈನ್‌ ಮೂಲಕ ಕಳಿಸಲಾಗುತ್ತದೆ. ಅದನ್ನು ಅವರು ಡೌನ್‌ಲೋಡ್‌ ಮಾಡಿಕೊಂಡು ವೋಟ್‌ ಹಾಕಿದ ಮೇಲೆ ಸ್ಪೀಡ್‌ ಪೋಸ್ಟ್‌ ಮೂಲಕ ವಾಪಸ್‌ ಕಳಿಸುತ್ತಾರೆ ಎಂದು ಸಂದೀಪ್‌ ಸೆಕ್ಸೇನಾ ತಿಳಿಸಿದರು.

ಅನಿವಾಸಿ ಭಾರತೀಯರಿಗೂ ಈ ವ್ಯವಸ್ಥೆಅನ್ವಯವಾಗಲಿದೆ. ಆ್ಯಪ್‌ ಆಧರಿತ ಕುಂದುಕೊರತೆ ಮತ್ತು ದೂರು ನಿವಾರಣ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಸಾಮಾನ್ಯ ವ್ಯಕ್ತಿಗಳು, ರಾಜಕೀಯ ಪಕ್ಷಗಳು ದೂರು ಕೊಟ್ಟರೆ ಕಾಲಮಿತಿಯೊಳಗೆ
ಕ್ರಮ ಕೈಗೊಳ್ಳಲಾಗುವುದು. ಅಭ್ಯರ್ಥಿಗಳ ಚುನಾವಣಾ ಪ್ರಚಾರದ ಅನುಮತಿಗೆ ಏಕಗವಾಕ್ಷಿ ಪದ್ದತಿ ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಸಂದೀಪ್‌ ಸೆಕ್ಸೇನಾ ತಿಳಿಸಿದ್ದಾರೆ.

ಇದೇ ವೇಳೆ, 9731979899 ಮೊಬೈಲ್‌ ಸಂಖ್ಯೆಗೆ ಎಪಿಕ್‌ ಸಂಖ್ಯೆ ಹಾಕಿ ಎಸ್‌ಎಂಎಸ್‌ ಕಳಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವ, ಕ್ಷೇತ್ರ ಯಾವುದು, ಮತಗಟ್ಟೆ ಎಲ್ಲಿದೆ ಎಂದು ತಿಳಿದುಕೊ ಳ್ಳುವ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next