Advertisement

ಹಿರಿಯರ ಕಡೆಗಣಿಸುವ ಪಕ್ಷಕ್ಕೆ ಭವಿಷ್ಯವಿಲ್ಲ: ಎಸ್‌ಎಂಕೆ

03:45 AM Jan 30, 2017 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಹಿರಿತನಕ್ಕೆ ಗೌರವ ಇಲ್ಲ. ಯಾವ ಪಕ್ಷದಲ್ಲಿ ಹಿರಿತನ, ಅನುಭವಕ್ಕೆ ಗೌರವ ಸಿಗುವುದಿಲ್ಲವೋ, ಆ ಪಕ್ಷಕ್ಕೆ ಭವಿಷ್ಯ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಮ್ಮನ್ನು ನಿರ್ಲಕ್ಷಿಸಿರುವ ಕಾಂಗ್ರೆಸ್‌ ಪಕ್ಷದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Advertisement

ಕಾಂಗ್ರೆಸ್‌ನಿಂದ ಹೊರ ಹೋಗುತ್ತಿರುವುದು ನನ್ನ ಬದುಕಿನ ಅತ್ಯಂತ ನೋವಿನ ದಿನ. ಆದರೆ, 46 ವರ್ಷ ಬಾಳಿ ಬದುಕಿದ ಮನೆಯನ್ನು ಬಿಟ್ಟು ಹೋಗುವ ಅನಿವಾರ್ಯತೆ ಬಂದಿದೆ. ಈಗಿನ ಕಾಂಗ್ರೆಸ್‌ಗೆ ಜನ ಸಮುದಾಯದ ನಾಯಕರು ಬೇಕಾಗಿಲ್ಲ. ಪಕ್ಷದಲ್ಲಿ ಪರಿಸ್ಥಿತಿ ಮ್ಯಾನೇಜ್‌ ಮಾಡುವ ಮ್ಯಾನೇಜರ್ ಮಾತ್ರ ಬೇಕಾಗಿದ್ದಾರೆ. ಹಿರಿತನಕ್ಕೆ ಗೌರವ ಇಲ್ಲ. ಹೀಗಾಗಿ ಸ್ವಾಭಿಮಾನ ಮತ್ತು ಆತ್ಮಾಭಿಮಾನ ಇರುವ ನನ್ನಂತವರು ಪಕ್ಷದಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಭಾರವಾದ ಹೃದಯದಿಂದ ಪಕ್ಷ ತ್ಯಜಿಸಿದ್ದೇನೆ ಎಂದು ಹೇಳಿದರು.

ಶನಿವಾರ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದ ಎಸ್‌.ಎಂ.ಕೃಷ್ಣ ಅವರು ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಕಾಂಗ್ರೆಸ್‌ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಆದರೆ, ಹಿರಿತನಕ್ಕೆ ಗೌರವ ಕೊಡದಿದ್ದರೆ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅಂತಹ ಪಕ್ಷದಲ್ಲಿ ನಾನಿರುವುದು ಸೂಕ್ತ ಅಲ್ಲ ಎಂದು ತಮ್ಮ ರಾಜೀನಾಮೆಗೆ ಕಾರಣವಾಗಿರುವ ಅಂಶಗಳನ್ನು ಬಹಿರಂಗಪಡಿಸಿದರು.

ರಾಜಕೀಯ ಆರಂಭದ ದಿನಗಳಿಂದ, ರಾಜಿನಾಮೆ ನೀಡುವವರೆಗಿನ ತಮ್ಮ ರಾಜಕೀಯ ಜೀವನದ ಏಳು ಬೀಳುಗಳನ್ನು ವಿವರವಾಗಿ ಬಿಚ್ಚಿಟ್ಟ ಅವರು, ಕಾಂಗ್ರೆಸ್‌ನಲ್ಲಿ ಸಿಹಿ ಉಂಡಿದ್ದೇನೆ, ಕಹಿಯನ್ನು ಜೀರ್ಣಿಸಿಕೊಂಡಿದ್ದೇನೆ. 1962ರಲ್ಲಿ ಅಮೆರಿಕಾದಿಂದ ಭಾರತಕ್ಕೆ ವಾಪದಾಗ ಚುನಾವಣೆ ಸಿದ್ದತೆ ನಡೆದಿತ್ತು. ನಾನು ಪ್ರಜಾ ಸೋಶಿಯಲಿಸ್ಟ್‌ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ. ನನ್ನ ವಿರುದ್ಧ ಪ್ರಚಾರಕ್ಕೆ ಅಂದಿನ ಪ್ರಧಾನಿ ಜವಹರಲಾಲ್‌ ನೆಹರು ಬಂದಿದ್ದರು. ಅವರನ್ನು ನೋಡಲು 20ರಿಂದ 30 ಸಾವಿರ ಜನ ಸೇರಿದ್ದರು. ಆದರೆ, ನಾನು ಎದೆಗುಂದದೆ ಚುನಾವಣೆ ಎದುರಿಸಿ ಜಯಶಾಲಿಯಾದೆ. ನಾನು ರಾಜಕೀಯವಾಗಿ ಯಾವುದೇ ಪಕ್ಷದ ಅಲೆಯ ಜತೆ ತೇಲಿ ಬಂದವನಲ್ಲ. ಅಲೆಗಳನ್ನು ಎದುರಿಸಿ ಈಜಿ ಸಾಧನೆ ಮಾಡಿದ್ದೇನೆ ಎಂದು ಮೆಲುಕು ಹಾಕಿದರು.

ನಾನು ಮುಖ್ಯಮಂತ್ರಿಯಾದಾಗ ಒಕ್ಕಲಿಗ ನಾಯಕ ಎಂದು ಹೇಳಿದ್ದರು. ಆದರೆ, ನನ್ನ ಅಧಿಕಾರಾವಧಿ ಮುಗಿದಾಗ ಎಲ್ಲಾ ವರ್ಗದ ಜನರ ಬೆಂಬಲ ಗಳಿಸಿದ್ದೆ. ಅದೇ ರೀತಿ ಸಾರ್ವಜನಿಕ ಜೀವನದಲ್ಲಿ ಇದ್ದವರು ರಾಗ ದ್ವೇಷಗಳಿಂದ ದೂರ ಇರಬೇಕು. ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ವರ್ಗದವರನ್ನು ಸಮನಾಗಿ ಕಾಣಬೇಕು ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ತಿವಿದರು.ಎಲ್ಲದಕ್ಕೂ ವಯಸ್ಸು ಕಾರಣವಾಗಬಾರದು. ಕೆಲವರು 80 ವರ್ಷವಾದರೂ ಕ್ರಿಯಾಶೀಲರಾಗಿರುತ್ತಾರೆ. ಇನ್ನು ಕೆಲವರು 40 ವರ್ಷಕ್ಕೇ  ಸುಸ್ತಾದವರಂತೆ ಕಾಣುತ್ತಾರೆ. ವಯಸ್ಸಿನ ಕಾರಣಕ್ಕೆ ನಾನು ನಡೆಯುವುದು ನಿಧಾನವಾಗಿರಬಹುದು. ಆದರೆ, ಕೇವಲ ವಯಸ್ಸಿನ ಕಾರಣ ಒಡ್ಡಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಾಗ ಸಹಿಸಿಕೊಳ್ಳುವುದು ಕಷ್ಟ ಎಂದು ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತಮ್ಮನ್ನು ನಡೆಸಿಕೊಂಡ ರೀತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Advertisement

ತಮ್ಮ ಮಾತಿನುದ್ದಕ್ಕೂ ಜವಹರಲಾಲ್‌ ನೆಹರು, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಹೆಸರನ್ನು ಬಿಟ್ಟರೆ ಯಾವುದೇ ನಾಯಕರ ಹೆಸರನ್ನೂ ಪ್ರಸ್ತಾಪಿಸಲಿಲ್ಲ. ಅಲ್ಲದೆ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಕಾರ್ಯಚಟುವಟಿಕೆ ಕುರಿತು ಅಸಮಾಧಾನ ಇರುವುದನ್ನು ಪರೋಕ್ಷವಾಗಿ ಹೊರ ಹಾಕಿದರು.

ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಆತ್ಮಾನಂದ, ಕೆಪಿಸಿಸಿ ಕಾರ್ಯದರ್ಶಿ ಟಿ.ಎಸ್‌.ಸತ್ಯನಾರಾಯಣ ಸೇರಿದಂತೆ ಮಂಡ್ಯ ಜಿಲ್ಲಾ ಮಟ್ಟದ ಕೆಲವು ಮುಖಂಡರು ಮಾತ್ರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಉತ್ತರ ನೀಡಲು ಪತ್ನಿ ಸಾಥ್‌
ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಂದ ಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಎಸ್‌.ಎಂ.ಕೃಷ್ಣ ಅವರಿಗೆ ಪತ್ನಿ ಪ್ರೇಮಾ ಅವರು ಸಾಥ್‌ ನೀಡುತ್ತಿದ್ದರು.

ಪತ್ರಿಕಾಗೋಷ್ಠಿಯಲ್ಲಿ ತಾವು ಹೇಳಬೇಕಾದ ವಿಚಾರಗಳನ್ನು ಕೃಷ್ಣ ಅವರು ಅತ್ಯಂತ ಗಾಂಭೀರ್ಯದಿಂದ ಮತ್ತು ಯಾವುದೇ ಒತ್ತಡಕ್ಕೊಳಗಾಗದೆ ಹೇಳಿದರು. ನಂತರ ಮಾಧ್ಯಮದವರಿಂದ ಪ್ರಶ್ನೆಗಳು ಎದುರಾದಾಗ ಪ್ರೇಮಾ ಅವರು ಕ್ಯಾಮರಾ ಮರೆಯಲ್ಲಿ ಕುಳಿತುಕೊಂಡು ಉತ್ತರ ನೀಡಲು ಕೃಷ್ಣ ಅವರಿಗೆ ಸಾಥ್‌ ನೀಡುತ್ತಿದ್ದುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next