Advertisement

ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಬೇಕು: ಅದೇ ಕತೆ ಪುನರಾವರ್ತನೆ

08:03 AM Aug 21, 2017 | |

ರೈಲ್ವೇ ಯಾವಾಗ ರಾಜಕೀಯ ಪಕ್ಷಗಳಿಗೆ ಮತಗಳಿಸಿಕೊಡುವ ವ್ಯವಸ್ಥೆಯಾಗಿ ಬದಲಾಯಿತೋ ಅಂದಿನಿಂದ ರೈಲ್ವೆ ಇಲಾಖೆಯ ದಕ್ಷತೆ ಕಡಿಮೆಯಾಗಿದೆ. 

Advertisement

ಶನಿವಾರ ಉತ್ತರ ಪ್ರದೇಶದ ಮುಜಾಫ‌ರ್‌ ನಗರದಲ್ಲಿ ರೈಲು ಅಪಘಾತ ಸಂಭವಿಸಿದೆ. ಕಳೆದ ವರ್ಷ ಉತ್ತರ ಪ್ರದೇಶದಲ್ಲೇ ಕಾನ್ಪುರ ಬಳಿ ರೈಲೊಂದು ಹಳಿಯಿಂದ ಕೆಳಗುರುಳಿ 150ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ನೆನಪಾದದ್ದು ಶನಿವಾರ ಅಪಘಾತ ನಡೆದಾಗ. ಎರಡೂ ಘಟನೆಗಳಿಗೆ ರೈಲು ಹಳಿ ತಪ್ಪಿದ್ದೇ ಕಾರಣ. ಆದರೆ ಹೀಗೊಂದು ಭೀಕರ ಘಟನೆ ನಡೆದ ಬಳಿಕವೂ ರೈಲ್ವೇ ಇಲಾಖೆ ಅಪಘಾತಗಳನ್ನು ತಪ್ಪಿಸಲು ಪರಿಣಾಮಕಾರಿಯಾದಂತಹ ಯಾವ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಸಾಬೀತಾಗಿದೆ. ಕಳೆದ ಐದು ವರ್ಷಗಳಲ್ಲಿ 586 ರೈಲು ಅಪಘಾತಗಳು ಸಂಭವಿಸಿವೆ ಎನ್ನುತ್ತದೆ ವರದಿ. ಈ ಪೈಕಿ ಶೇ. 53 ಅಪಘಾತಗಳಿಗೆ ರೈಲು ಹಳಿ ತಪ್ಪಿದ್ದು ಕಾರಣ. 2014ರ ನವಂಬರಿನಿಂದೀಚೆಗೆ 20ಕ್ಕೂ ಹೆಚ್ಚು ರೈಲು ಅಪಘಾತಗಳು ಸಂಭವಿಸಿವೆ. ಪ್ರತಿ ಸಲ ಅಪಘಾತವಾದಾಗ ಮೃತರ ಬಂಧುಗಳಿಗೆ, ಗಾಯಾಳುಗಳಿಗೆ ಸರಕಾರ ಒಂದಷ್ಟು ಲಕ್ಷ ಪರಿಹಾರ ಕೊಟ್ಟು ಕೈತೊಳೆದು ಕೊಳ್ಳುತ್ತದೆ. ಇಷ್ಟರಿಂದಲೇ ತಮ್ಮ ಮನೆಯವರನ್ನು,  ಬಂಧುಗಳನ್ನು ಕಳೆದುಕೊಂಡವರಿಗೆ ನ್ಯಾಯ ಒದಗಿಸಿದಂತಾಯಿತೆ? 

 ಒಂದು ಕುತೂಹಲಕಾರಿ ಅಂಶ ಏನೆಂದರೆ ಬಹುತೇಕ ಅಪಘಾತಕ್ಕೆ ಈಡಾಗುವುದು ಬಡವರು ಪ್ರಯಾಣಿಸುವ ರೈಲುಗಳು. ಅಂದರೆ ರಾಜಧಾನಿ, ಶತಾಬ್ಧಿಯಂತಹ ಶ್ರೀಮಂತರೇ ಹೆಚ್ಚಾಗಿ ಪ್ರಯಾಣಿಸುವ ರೈಲುಗಳು ಅಪಘಾತಕ್ಕೊಳಗಾಗುವುದು ಬಹಳ ಅಪರೂಪ. ಹಾಗೆಂದು ಶ್ರೀಮಂತರು ಪ್ರಯಾಣಿಸುವ ರೈಲುಗಳು ಹೆಚ್ಚು ಸುರಕ್ಷಿತ ಎಂದಲ್ಲ. ಅವುಗಳು ಓಡುವುದು ಕೂಡ ಅದೇ ಹಳಿಯಲ್ಲಿ, ಅವುಗಳನ್ನು ನಿಯಂತ್ರಿಸುವುದು ಕೂಡ ಅದೇ ಸಿಗ್ನಲ್‌ ವ್ಯವಸ್ಥೆ. ಆದರೆ ಈ ರೈಲುಗಳು ಓಡುವಾಗ ಇಡೀ ವ್ಯವಸ್ಥೆ ಒಂದು ರೀತಿಯ ಕಟ್ಟೆಚ್ಚರದ ಸ್ಥಿತಿಯಲ್ಲಿರುತ್ತದೆ. ಈ ರೈಲುಗಳು ಅತ್ಯಾಧುನಿಕ ಬೋಗಿಗಳನ್ನು ಹೊಂದಿವೆ, ಇಂಜಿನ್‌ ಉತ್ತಮವಾಗಿದೆ. ಈ ರೈಲುಗಳು ಓಡುವಾಗ  ಸಿಬಂದಿಗಳು ಭಾರೀ ಎಚ್ಚರಿಕೆಯಿಂದ ಕರ್ತವ್ಯ ನಿಭಾಯಿಸುತ್ತಾರೆ ಮತ್ತು ಹಳಿಗಳ ತಪಾಸಣೆಯನ್ನೂ ಉತ್ತಮವಾಗಿ ಮಾಡಲಾಗುತ್ತದೆ. ಇದು ಭಾರತದ ನೌಕರಶಾಹಿಯ ಮನೋಧರ್ಮವನ್ನು ತಿಳಿಸುವ ಒಂದು ಚಿಕ್ಕ ಅಂಶ ಮಾತ್ರ.  ಪ್ರತಿ ಸಲ ಅಪಘಾತವಾದಾಗ ಸಚಿವರು ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಮಾಮೂಲು ಹೇಳಿಕೆಯನ್ನು ನೀಡುತ್ತಾರೆ? ಆದರೆ ತಪ್ಪಿತಸ್ಥರು ಯಾರು? ಎಂದಾದರೂ ರೈಲು ಅಪಘಾತಕ್ಕೆ ಕಾರಣರಾದ ತಪ್ಪಿತಸ್ಥರಿಗೆ ಶಿಕ್ಷೆಯಾದ ಬಗ್ಗೆ ಕೇಳಿದ್ದೇವೆಯೇ? ಇಷ್ಟಕ್ಕೂ ಯಾರನ್ನು ತಪ್ಪಿತಸ್ಥರು ಎನ್ನುವುದು? ಬಡಪಾಯಿ ಗ್ಯಾಂಗ್‌ಮನ್‌ಗಳನ್ನಾಗಲಿ, ರೈಲು ಚಾಲಕರನ್ನಾಗಲಿ ಶಿಕ್ಷಿಸಿದರೆ ಈ ಸಮಸ್ಯೆ ಬಗೆಹರಿಯಲಂತೂ ಸಾಧ್ಯವಿಲ್ಲ. 150ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿರುವ ರೈಲ್ವೆಗೆ ಇನ್ನೂ ಆಧುನಿಕತೆಯ ಸ್ಪರ್ಷ ಕೊಡುವ ಕೆಲಸ ಸಮರ್ಪವಾಗಿ ಆಗುತ್ತಿಲ್ಲ. ಇದನ್ನು ಮಾಡಲಿಕ್ಕೆ ರೈಲ್ವೇ ಬಳಿ ಹಣವಿಲ್ಲ. ಇಂಡಿಯನ್‌ ಏರ್‌ಲೈನ್ಸ್‌ ಬಳಿಕ ದಿವಾಳಿಯಾಗುವ ಸರದಿಯಲ್ಲಿ ರೈಲ್ವೇ ಇದೆ ಎನ್ನುವುದು ಪೂರ್ತಿ ಉತ್ಪ್ರೇಕ್ಷಿತ ಮಾತಂತೂ ಅಲ್ಲ.     ರೈಲ್ವೇ ನಷ್ಟದಲ್ಲಿ ಓಡಲು ತೊಡಗಿ ಹಲವು ವರ್ಷಗಳಾಗಿವೆ. ಸಿಬಂದಿಗಳಿಗೆ ಸಂಬಳ ಬಟವಾಡೆ ಮಾಡಲು ಸಾಲ ಪಡೆಯುವ ಸ್ಥಿತಿ ಬಂದಿದೆ ಎನ್ನುವುದು ರೈಲ್ವೇ ದಯನೀಯ ಸ್ಥಿತಿಯನ್ನು ತಿಳಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗದೆ ರೈಲ್ವೇಯನ್ನು ಸುರಕ್ಷಿತಗೊಳಿಸುವ ವಿಧಾನಗಳನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ರೈಲ್ವೇ ಸುರಕ್ಷಿತವಾಗಬೇಕಾದರೆ ಮೊದಲು ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಬೇಕು. ಜಗತ್ತಿನ ಅತ್ಯುತ್ತಮ ರೈಲ್ವೇ ಜಾಲದಲ್ಲಿ ಭಾರತವೂ ಸೇರಿದೆ ಎನ್ನುವುದು ನಾವು ಹೆಮ್ಮೆ ಪಡಬೇಕಾದ ವಿಚಾರ. ಆದರೆ ರೈಲ್ವೇ ಯಾವಾಗ ರಾಜಕೀಯ ಪಕ್ಷಗಳಿಗೆ ಮತಗಳಿಸಿಕೊಡುವ ವ್ಯವಸ್ಥೆಯಾಗಿ ಬದಲಾಯಿತೋ ಅಂದಿನಿಂದ ರೈಲ್ವೆ ಇಲಾಖೆಯ ದಕ್ಷತೆ ಕಡಿಮೆಯಾಗಿದೆ. ರೈಲ್ವೆಯನ್ನು ರಾಜಕೀಯ ಲೆಕ್ಕಾಚಾರದಿಂದ ಹೊರಗಿಟ್ಟು ಸುಧಾಕರಣಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next