Advertisement

ಸದ್ಗುಣಗಳಿದ್ದಾಗ ಭೂಮಿಯೇ ಸ್ವರ್ಗ

12:47 AM Mar 16, 2020 | Sriram |

ಬಟ್ಟೆಯಲ್ಲಿನ ಗಾಢ ಕೊಳೆಯ ಮುಂದೆ ಸಾಬೂನು ಸೋಲುವಂತೆ ದುರ್ಗುಣಗಳ ಮುಂದೆ ಸದ್ಗುಣಗಳು ಸೋಲುತ್ತವೆ. ಬಣ್ಣದ ಮಾತುಗಳ ಮುಂದೆ ಸತ್ಯ ವಾಕ್ಯಗಳು ಧ್ವನಿ ಕಳೆದುಕೊಳ್ಳುತ್ತವೆ. ಕುಕರ್ಮಗಳ ಮುಂದೆ ಸತ್ಕರ್ಮಗಳು ಗೌಣವಾಗುತ್ತವೆ. ಆದರೂ ಸುದೈವವಶಾತ್‌ ಅಂತಿಮ ವಿಜಯವು ವಿರುದ್ಧ ರೀತಿಯದ್ದಾಗಿರುತ್ತದೆ. ಏಕೆಂದರೆ, ಸಾಬೂನು ಸೋತರೂ ಕಲೆ, ಕೊಳೆಯ ಅಸ್ತಿತ್ವವು ಅತ್ಯಲ್ಪ ಕಾಲದ್ದು. ಹಾಗೆಯೇ ದುರ್ಗುಣಗಳು, ಕುಕರ್ಮಗಳು, ಬಣ್ಣದ ಮಾತುಗಳು. ಒಳಿತಿಗೆ ಬಾಳಿಕೆ ಹೆಚ್ಚು.

Advertisement

ಡಿ.ವಿ.ಜಿ. ಹೇಳುತ್ತಾರೆ:
ಸತ್ಯವಂತನನರಸಲೆನುತ ಪೇಟೆಗಳೊಳಗೆ |
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು ||
ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು |
ತಾತ್ತಿÌಕ ಡಯೋಜೆನಿಸ್‌-ಮಂಕುತಿಮ್ಮ ||
ಕ್ರಿ.ಶ. 412-322 ರ ಕಾಲದಲ್ಲಿ ಗ್ರೀಸ್‌ ದೇಶದ ಡಯೋಜೆನಿಸ್‌ ಎಂಬವನು ಸತ್ಯವಂತನಾದವನನ್ನು ಕಾಣಬೇಕೆಂದು ನಡುಹಗಲಿನಲ್ಲಿ ದೀವಟಿಗೆ ಹಿಡಿದು ಹುಡುಕಾಡಿ, ಸತ್ಯವಂತರು ಎಲ್ಲೂ ಕಾಣ ಸಿಗಲಿಲ್ಲ, ಇಂತಹ ಈ ಲೋಕದ ಸಹವಾಸ ನನಗೆ ಬೇಡ ಎಂದು ಲೋಕಸಂಪರ್ಕದಿಂದ ದೂರವಾಗುವುದಕ್ಕಾಗಿ ಒಂದು ತೊಟ್ಟಿಯ ಒಳಗೆ ವಾಸ ಮಾಡಿದನಂತೆ.

ಆ ಕಾಲದಲ್ಲಿಯೇ ಸತ್ಯವಂತರು ಆತನಿಗೆ ಕಾಣಸಿಗಲಿಲ್ಲ. ಆದರೂ ಕಾಲ ಪೂರ್ತಿ ಕೆಟ್ಟುಹೋಗಿಲ್ಲ. ಒಳಿತು ಅಲ್ಲೊ ಇಲ್ಲೊ ಆದರೆ ಎಲ್ಲೆಲ್ಲೂ ಇದೆ. ಸತ್ಯವಂತರು ಭರವಸೆ ಕಳೆದುಕೊಳ್ಳಬೇಕಾಗಿಲ್ಲ. ದೀವಟಿಗೆ ಹಿಡಿದು ಹುಡುಕಿದರೆ ಸತ್ಯವಂತರು ಸಿಗುತ್ತಾರೋ ಇಲ್ಲವೋ; ಅಂತರಂಗದ ಕಣ್ಣು ತೆರೆದು ನೋಡಿದರೆ ಸತ್ಯವಂತರೇ ಏಕೆ? ಸತ್ಯವೇ ಗೋಚರಿಸುತ್ತದೆ. ಸದ್ಗುಣಗಳು, ನಮಗೆ ಒಳಿತನ್ನೇ ನೀಡುತ್ತವೆ. ಸತ್ಕರ್ಮಗಳನ್ನು ಮಾಡುವುದು ನಮ್ಮ ಸ್ವಭಾವವಾಗಬೇಕು.

ನರಕ ತಪ್ಪಿತು ಧರ್ಮಜಂಗೆ, ದಿಟ, ಆದೊಡೇಂ |
ನರಕದರ್ಶನದುಃಖ ತಪ್ಪದಾಯಿತಲ? ||
ದುರಿತತರುವಾರು ನೆಟ್ಟುದೊ, ನಿನಗಮುಂಟು ಫ‌ಲ |
ಚಿರಋಣದ ಲೆಕ್ಕವದು-ಮಂಕುತಿಮ್ಮ ||
ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ “ಹತೋಶ್ವತ್ಥಾಮೋ ನಾಮ ಕುಂಜರಃ’ ಎಂದು ಧರ್ಮರಾಜನ ಬಾಯಿಯಿಂದ ಕೂಗಿಸಿ, “ಹತೋಶ್ವತ್ಥಾಮೋ..’ ಎಂದ ಕೂಡಲೇ ಪಾಂಚಜನ್ಯ ಮೊಳಗಿಸಿದ್ದರಿಂದ ದ್ರೋಣರು ತನ್ನ ಮಗ ಅಶ್ವತ್ಥಾಮನೇ ಸತ್ತನೆಂದು ಭ್ರಮಿಸಿ ಶಸ್ತ್ರಸಂನ್ಯಾಸ ಮಾಡಿ ಶತ್ರುಗಳಿಂದ ಹತನಾಗುತ್ತಾನೆ. ಇದರಿಂದ ಧರ್ಮರಾಜನಿಗೆ ಮೊದಲು ನರಕದರ್ಶನ ಮಾಡಿ ಬಳಿಕ ಸ್ವರ್ಗಕ್ಕೆ ಹೋಗಬೇಕಾಯಿತು. ಜೀವನ ಪೂರ್ತಿ ಸತ್ಯಸಂಧನಾಗಿದ್ದು, ಇಲ್ಲಿ ಪೂರ್ತಿ ಸತ್ಯವೂ ಅಲ್ಲದ, ಪೂರ್ತಿ ಸುಳ್ಳೂ ಅಲ್ಲದ ಮಾತನ್ನು ಆಡಿದುದಕ್ಕಾಗಿ ಈ ಪ್ರಮೇಯ ಎದುರಾಯಿತು. ಹಾಗಾಗಿ ಸ್ವರ್ಗ ಸಿಗುತ್ತದೆಯೋ ಇಲ್ಲವೋ, ಸತ್ಯ, ಸದ್ಗುಣಗಳಿದ್ದಾಗ ಜೀವನವೇ ಸ್ವರ್ಗ.

- ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next