Advertisement

ಅಪರಾಧಗಳ ಹಿಂದೆ ಮಾದಕ ವಸ್ತು ನಶೆ !

01:26 AM Nov 01, 2021 | Team Udayavani |

ಮಂಗಳೂರು: ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಮಾದಕ ದ್ರವ್ಯದ ನಶೆಯ ಪ್ರಭಾವ ಹೆಚ್ಚಾಗಿ ಕಂಡುಬಂದಿದ್ದು, ಪೊಲೀಸರಿಗೆ ಹೊಸ ಸವಾಲಾಗಿದೆ.

Advertisement

ಕೇರಳ, ಆಂಧ್ರಪ್ರದೇಶ, ಗೋವಾ ಮೊದಲಾದ ಭಾಗಗಳಿಂದ ಪೂರೈಕೆಯಾಗಿ ಮಂಗಳೂರು ಕೇಂದ್ರೀಕೃತವಾಗಿ ಮಾದಕದ್ರವ್ಯ ಮಾರಾಟ, ಸಾಗಾಟ ಜಾಲ ಸಕ್ರಿಯವಾಗಿದೆ. ಮುಖ್ಯವಾಗಿ ಗಾಂಜಾ ಯುವಕರ ಕೈಗೆ ಸುಲಭವಾಗಿ ಸಿಗುತ್ತಿದೆ ಎನ್ನಲಾಗಿದ್ದು, ಇದರ ನಶೆಯಲ್ಲಿ ಅನೇಕ ಮಂದಿ ಸಮಾಜಘಾತಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಹಿಂದೆ ಮದ್ಯ ಸೇವಿಸಿ ಕೆಲವರು ದುಷ್ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ ಈಗ ಗಾಂಜಾದಂಥ ಮಾದಕದ್ರವ್ಯಗಳ ಮೊರೆ ಹೋಗುತ್ತಿದ್ದಾರೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.

ಶೇ. 10ಕ್ಕಿಂತ ಅಧಿಕ ಮಂದಿ ಪಾಸಿಟಿವ್‌!
ಮಂಗಳೂರು ನಗರ ಮತ್ತು ಹೊರವಲಯದಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ಆರೋಪಿಗಳ ಪೈಕಿ ಶೇ. 10ಕ್ಕಿಂತ ಅಧಿಕ ಮಂದಿ ಮಾದಕದ್ರವ್ಯ ಸೇವನೆ ಮಾಡಿರುವುದು ಗೊತ್ತಾಗಿದೆ. ಮಾದಕದ್ರವ್ಯ ಸೇವನೆ ಮದ್ಯಸೇವನೆಗಿಂತಲೂ ಅಪಾಯಕಾರಿ. ಮದ್ಯಸೇವನೆ ಮಾಡಿದರೆ ಆ ಕ್ಷಣದಲ್ಲಿ ಅಪರಾಧ ಮಾಡಬಹುದು. ಆದರೆ ಗಾಂಜಾದಂಥ ಮಾದಕ ನಶೆಯಿಂದ ಯೋಜಿತವಾಗಿ ಗಂಭೀರ ಅಪರಾಧಗಳನ್ನು ಮಾಡುವ ಅಪಾಯ ಹೆಚ್ಚು. ಇತ್ತೀಚೆಗೆ ಮಂಗಳೂರಿನ ಪೊಲೀಸ್‌ ಮೇಲೆ ನಡೆದ ಹಲ್ಲೆ ಪ್ರಕರಣದ ಬಾಲ ಆರೋಪಿಯೂ ಮಾದಕ ದ್ರವ್ಯ ಸೇವಿಸಿರುವುದು ಪತ್ತೆಯಾಗಿತ್ತು. ಹಾಗಾಗಿ ಮಾದಕದ್ರವ್ಯದ ಬಗ್ಗೆ ಇಡೀ ಸಮಾಜ ಗಂಭೀರವಾಗಿ ಚಿಂತಿಸಿ ಇದರ ವಿರುದ್ಧ ಕಾರ್ಯಾಚರಣೆ ನಿರತವಾಗಿರುವ ಪೊಲೀಸರಿಗೆ ಸಹಕರಿಸಬೇಕು ಎನ್ನುತ್ತಾರೆ ಮಂಗಳೂರು ಡಿಸಿಪಿ ಹರಿರಾಂ ಶಂಕರ್‌.

ಶಂಕಾಸ್ಪದ ಆರೋಪಿಗಳ ಪರೀಕ್ಷೆ
ಈಗ ಹೆಚ್ಚಿನ ಪ್ರಕರಣಗಳಲ್ಲಿ ಮಾದಕವಸ್ತು ಸೇವನೆಯ ಪ್ರಭಾವ ಕಂಡುಬರುತ್ತಿರುವುದರಿಂದ ಹೆಚ್ಚಿನ ಆರೋಪಿಗಳನ್ನು ಪೊಲೀಸರು ಮಾದಕ ದ್ರವ್ಯ ಸೇವನೆ ಪತ್ತೆಗಾಗಿ ವೈದ್ಯಕೀಯ ಪರೀಕ್ಷೆಗೆb ಒಳಪಡಿಸುತ್ತಿದ್ದಾರೆ. ಮಾದಕವಸ್ತು ಸೇವನೆ ದೃಢಪಟ್ಟರೆ ಮಾದಕ ದ್ರವ್ಯ ನಿಷೇಧ ಕಾಯಿದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಜಮ್ಮು- ಕಾಶ್ಮೀರ: 3 ವಾರದಲ್ಲಿ 25 ಶಂಕಿತರ ಬಂಧನ: ಎನ್‌ಐಎ

Advertisement

276 ಕೆ.ಜಿ. ಗಾಂಜಾ ವಶ
ಮಾದಕ ದ್ರವ್ಯ ಸೇವನೆ ಮತ್ತು ಅಪರಾಧ ಚಟುವಟಿಕೆಗಳಿಗೆ ನಿಕಟ ಸಂಬಂಧವಿದೆ. ಹಾಗಾಗಿ ಡ್ರಗ್ಸ್‌ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಈ ವರ್ಷ ಆರಂಭದಿಂದ ಇದುವರೆಗೆ 230ಕ್ಕೂ ಅಧಿಕ ಪ್ರಕರಣಗಳಲ್ಲಿ ಒಟ್ಟು 276 ಕೆ.ಜಿ.ಗೂ ಅಧಿಕ ಗಾಂಜಾ ಮತ್ತಿತರ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಡ್ರಗ್ಸ್‌ ಸೇವನೆಗೆ ಸಂಬಂಧಿಸಿ ಇದುವರೆಗೆ 378ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ಡ್ರಗ್ಸ್‌ ಚಟಕ್ಕೆ ಬಿದ್ದವರಿಗೆ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡವರ ಪರಿಚಯವಾಗುವುದು ಹೆಚ್ಚು. ಅನೇಕ ಬಾರಿ ಮಾದಕ ದ್ರವ್ಯ ವ್ಯಸನಿಗಳನ್ನು ಅಪರಾಧ ಚಟುವಟಿಕೆಗಳಲ್ಲಿ ಬಳಸುವವರೂ ಇದ್ದಾರೆ. ಅಲ್ಲದೆ ಡ್ರಗ್ಸ್‌ ವ್ಯಸನಿಗಳಿಗೆ ಹಣದ ಅಗತ್ಯವಿರುವುದರಿಂದ ಇದಕ್ಕಾಗಿಯೂ ಅಪರಾಧ ಚಟುವಟಿಕೆ ಮಾಡುವ ಅಪಾಯ ಹೆಚ್ಚು. ಮಿದುಳಿನ ಮೇಲೆಯೂ ಡ್ರಗ್ಸ್‌ ದುಷ್ಪರಿಣಾಮ ಬೀರುವುದರಿಂದ ಅದು ಅಪರಾಧ ಚಟುವಟಿಕೆಗಳತ್ತ ಸೆಳೆಯುತ್ತದೆ.
– ಗುರುಪ್ರಸಾದ್‌,
ಆಪ್ತ ಸಮಾಲೋಚಕರು,
“ಬಾರ್ಕ್‌’ ಸೆಂಟರ್‌, ಮಂಗಳೂರು

ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 6 ತಿಂಗಳಲ್ಲಿ ನಡೆದಿರುವ ಅಪರಾಧ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಪೈಕಿ 12 ಮಂದಿ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಇದಲ್ಲದೆ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ 7 ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
– ಹೃಷಿಕೇಶ್‌ ಸೋನಾವಣೆ,
ಎಸ್‌ಪಿ, ದಕ್ಷಿಣ ಕನ್ನಡ

Advertisement

Udayavani is now on Telegram. Click here to join our channel and stay updated with the latest news.

Next