Advertisement

ಚಾಲಕ-ಕ್ಲೀನರ್‌ಗಳಿಗೆ ಮುಷ್ಕರದ ಬಿಸಿ

12:51 PM Apr 07, 2017 | |

ದಾವಣಗೆರೆ: ಥರ್ಡ್‌ ಪಾರ್ಟಿ ಪೀÅಮಿಯಂ ಹೆಚ್ಚಳ ವಿರೋಧಿಸಿ, ಲೋಡಿಂಗ್‌, ಅನ್‌ ಲೋಡಿಂಗ್‌ ಹಮಾಲಿ ಮಾಮೂಲಿ ಕಡ್ಡಾಯವಾಗಿ ನಿಲ್ಲಿಸಲು ಒತ್ತಾಯಿಸಿ ಏ.1ರಿಂದ ಪ್ರಾರಂಭಗೊಂಡಿರುವ ಲಾರಿಗಳ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಹೊರ ಊರು, ರಾಜ್ಯದ ಕೆಲ ಲಾರಿ ಮಾಲೀಕರು, ಚಾಲಕ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ.

Advertisement

ಹೊರ ರಾಜ್ಯದ ಲಾರಿ ಚಾಲಕರು, ಕ್ಲೀನರ್‌ ಇತರರಿಗೆ ಜಿಲ್ಲಾ ಲಾರಿ ಮಾಲಿಕರ ಸಂಘದಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗ್ಗೆ ತಿಂಡಿ, ರಾತ್ರಿ ಊಟ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಕೈಯಲ್ಲಿರುವ ಹಣ ಖಾಲಿಯಾಗುತ್ತಿದ್ದು ಮುಂದೇನು, ಯಾರ ಬಳಿ ಹಣ ಪಡೆಯುವುದು ಎಂಬ ಚಿಂತೆ ಅವರಿಗೆ ಕಾಡುತ್ತಿದೆ.  

ಮುಷ್ಕರ ಪ್ರಾರಂಭದ ದಿನವೇ ದಾವಣಗೆರೆಗೆ ಬಂದಂತಹ ಲಾರಿಗಳು ಹೊರ ಹೋಗುತ್ತಿಲ್ಲ. ಟ್ರಾನ್ಸ್‌ಪೊàರ್ಟ್‌ ಕಂಪನಿ ಕಚೇರಿ, ಸರಕು ತಂದಿದ್ದ ಅಂಗಡಿ, ಗೋಡೌನ್‌ ಮುಂದೆಯೂ ನಿಲ್ಲಿಸಿಕೊಳ್ಳಲಿಕ್ಕೆ ಆಗದೆ ಎಪಿಎಂಸಿ ಆವರಣದಲ್ಲಿ ನಿಲ್ಲಿಸಿಕೊಳ್ಳಲಾಗಿದೆ. ಬೆಳಗ್ಗೆ ಬಿಸಿಲು, ರಾತ್ರಿ ಸೆಖೆ, ಸೊಳ್ಳೆಗಳ ಕಾಟದ ನಡುವೆಯೇ ಚಾಲಕರು ಮತ್ತು ಕ್ಲೀನರ್‌ ದಿನದೂಡುವಂತಾಗಿದೆ. 

ತಂದಂತಹ ಸರಕು ಅನ್‌ಲೋಡ್‌ ಮಾಡಿದ ಲಾರಿಯವರು ಹೇಗೋ ಕಾಲ ಕಳೆಯತ್ತಿದ್ದಾರೆ. ಲಾರಿಯಲ್ಲೇ ಸರಕಿರುವ ಚಾಲಕರು, ಕ್ಲೀನರ್‌ ರಾತ್ರಿಯಿಡೀ ಮೈಯೆಲ್ಲಾ ಕಣ್ಣಾಗಿಸಿಕೊಂಡು ಮಾಲು ಕಾಯುವಂತಾಗಿದೆ. ಒಂದೊಮ್ಮೆ ಏನಾದರೂ ಹೆಚ್ಚು ಕಡಿಮೆಯಾದರೆ ತಮ್ಮ ತಲೆಗೇ ಬರುತ್ತದೆ ಎಂಬ ಆತಂಕ ಅವರದ್ದು.

ದೂರದಲ್ಲಿ ನಿಲ್ಲಿಸಿಕೊಂಡವರಿಗೆ ಬೇರೆಯದ್ದೇ ಕಾಟ, ಸಮಸ್ಯೆಯೇ ಬೇರೆ. ಹಾಗಾಗಿ ಎಷ್ಟೋ ಲಾರಿ ಮಾಲಿಕರು, ಚಾಲಕರು, ಕ್ಲೀನರ್‌ ಮುಷ್ಕರ ಮುಗಿಯುವ ಕ್ಷಣಕ್ಕೆ ಚಾತಕಪಕ್ಷಿಗಳಂತೆ ಕಾಯುವಂತಾಗಿದೆ. ದಿನ ಬೆಂಗಳೂರಿನಿಂದ ಬೆಳಗಾವಿಗೆ ಲೋಡ್‌ ಮಾಡುತ್ತಿದ್ದೆ. ದಾವಣಗೆರೆಯಲ್ಲಿ ಮಾಲು ಡಂಪ್‌ ಮಾಡಿ, ಬೆಳಗಾವಿಗೆ ಹೋಗಬೇಕಿತ್ತು.

Advertisement

ಸೈಕ್‌ ದಿನಾನೇ ಇಲ್ಲಿಗೆ ಬಂದ್ವಿ. ಮುಂದಕ್ಕೆ ಹೋಗೋಕೆ ಅವಕಾಶವೇ ಇಲ್ಲ. ಮನೆ-ಮಠ ಬಿಟ್ಟು 3-4 ದಿನಾ ಆಯ್ತು. ಅತ್ಲಾಗೆ ಮನೆಗೆ ಹೋಗೊಂಗಿಲ್ಲ. ಇತ್ಲಾಗೆ ಇಲ್ಲಿ ಇರುವಂತಾಗುತ್ತಿಲ್ಲ. ಸಾಕ್‌ ಸಾಕಾಗಿ ಹೋಗೈತಿ… ಎಂದು ಬೇಸರ  ವ್ಯಕ್ತಪಡಿಸುತ್ತಾರೆ ಹಾವೇರಿಯ ಚಾಲಕ ಯೋಗೇಶ್‌. ಆಂಧ್ರಪ್ರದೇಶದ ನಲ್ಲೂರುನಿಂದ  ದಾವಣಗೆರೆಗೆ ಭತ್ತ ತಂದಿರುವ ರೈತ ಪ್ರಭಾಕರ್‌ ಅವರಿಗೆ ಭತ್ತದ ಚಿಂತೆ. 

ಬರಗಾಲದಾಗೆ ಏನೋ ಕಷ್ಟಪಟ್ಟು ಭತ್ತ ಬೆಳೆದು, ಇಲ್ಲಿಗೆ ತಂದೀವಿ. ಅನ್‌ಲೋಡ್‌ ಆಗುತ್ತಿಲ್ಲ. ಭತ್ತ ಸ್ವಲ್ಪ ಹಸಿಯಾಗಿದೆ. ಐದು ದಿನ ಆಗಿದೆ. ಕೂಡಲೇ ಅನ್‌ಲೋಡ್‌ ಮಾಡದೇ ಹೋದರೆ ಭತ್ತ ಮುಗ್ಗು ಬರುತ್ತದೆ. ರೇಟ್‌, ತೂಕ ಎಲ್ಲಾ ಕಡಿಮೆ ಆಗುತ್ತದೆ. ಅಲ್ಲಿಂದ ಇಲ್ಲಿಗೆ ತಂದ ಖರ್ಚು ಕೂಡಾ ಸಿಗಲ್ಲ. ಬೇರೆ ರಾಜ್ಯದವರ ಕಷ್ಟ ಅರ್ಥ ಮಾಡಿಕೊಂಡು ಅನ್‌ಲೋಡ್‌ ಮಾಡಲು ಅವಕಾಶ ಕೊಟ್ಟರೆ ಸಾಕು ಎಂದು ಕೇಳಿಕೊಳ್ಳುತ್ತಾರೆ.

ರೈಸ್‌ಮಿಲ್‌, ಮಂಡಕ್ಕಿ ಭಟ್ಟಿ, ಅವಲಕ್ಕಿ ಮಿಲ್‌ನವರು ಸಹ ಅನ್‌ ಲೋಡಿಂಗ್‌ಗೆ ಅವಕಾಶ ಮಾಡಿಕೊಡಬೇಕು ಎನ್ನುತ್ತಾರೆ. ನಮಗೂ ಕಷ್ಟ ಅರ್ಥವಾಗುತ್ತದೆ. ಯಾರಿಗೇನೂ ಸುಖಾ ಸುಮ್ಮನೆ ತೊಂದರೆ ಕೊಡಲೇಬೇಕು ಎಂಬುದು ನಮ್ಮ ಉದ್ದೇಶ ಅಲ್ಲ. ಈಗ ಲಾರಿಗಳಿಗೆ ಬಾಡಿಗೆ ಸಿಗುವುದೇ ಕಷ್ಟ,.

ಬಾಡಿಗೆ ಸಿಕ್ಕರೂ ಡೀಸೆಲ್‌, ಡ್ರೈವರ್‌ ಸಂಬಳ, ಬ್ಯಾಟ, ಕ್ಲೀನರ್‌ ಖರ್ಚು, ಸಾವಿರಾರು ರೂಪಾಯಿ ಟೋಲ್‌  ಕಟ್ಟೋದು, ಊಟ, ತಿಂಡಿ, ಲೋಡ್‌, ಅನ್‌ ಲೋಡ್‌ ಹಮಾಲಿ, ಮಾಮೂಲು… ಎಲ್ಲಾ ತೆಗದರೆ ನಮಗೆ ಏನು ಸಿಗೊಲ್ಲ. ಅದ್ರಾಗೆ ಥರ್ಡ್‌ ಪಾರ್ಟಿ ಇನ್ಸೂರೆನ್ಸ್‌, ಟ್ಯಾಕ್ಸ್‌ ಹೆಚ್ಚಿಗೆ ಮಾಡಿದ್ದಾರೆ.

ಇದೆಲ್ಲಾ ನೋಡಿದರೆ ಲಾರಿ-ಗೀರಿ ಏನೂ ಬೇಡ ಅನ್ನೊಂಗೆ  ಆಗೈತೆ. ಸರ್ಕಾರನೂ ಜಲ್ದಿ ಏನಾದ್ರೂ ಮಾಡಿ, ಮುಷ್ಕರ ಮುಗಿಸಬೇಕು ಎನ್ನುತ್ತಾರೆ ಅನೇಕ ಲಾರಿ ಮಾಲಿಕರು. ಸೂರ್ಯನ ಬಿಸಿಲಿನ ಝಳದ ಜತೆ ಮುಷ್ಕರದ ಬಿಸಿಯೂ ಲಾರಿ ಚಾಲಕರು, ಕ್ಲೀನರ್‌ಗಳನ್ನು ಮತ್ತಷ್ಟು ಪರದಾಡುವಂತೆ  ಮಾಡಿದೆ.   

Advertisement

Udayavani is now on Telegram. Click here to join our channel and stay updated with the latest news.

Next