ಕುಂದಾಪುರ: ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮೂಲಕ ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ 24×7 ನಿರಂತರ ಕುಡಿಯುವ ನೀರಿನ ಕಾಮಗಾರಿ 23 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿದ್ದು ಸೆಪ್ಟಂಬರ್ ವೇಳೆಗೆ ಪೂರ್ಣವಾಗಲಿದೆ ಎಂದು ಎಇಇ ರಾಮಕೃಷ್ಣ ಹೇಳಿದ್ದಾರೆ.
ಗುರುವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಪುರಸಭೆ ಮತ್ತು ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ಕ್ವಿಮಿಪ್ ಟ್ರಾಂಚ್ -2 ಅಡಿಯಲ್ಲಿ ಕುಂದಾಪುರ ಪಟ್ಟಣದಲ್ಲಿ ಕೈಗೊಳ್ಳುವ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಕಾಮಗಾರಿಗಳ ಬಗ್ಗೆ ನಗರ ಮಟ್ಟದ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ, ಚುನಾಯಿತ ಪ್ರತಿನಿಧಿ ಗಳಿಗೆ ಮಾಹಿತಿ ಕೊಡುವ ಸಲುವಾಗಿ ಸಭೆ ಕರೆಯಲಾಗಿದೆ. ಕಾಮಗಾರಿಗೆ ಏಶಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನವರು ಸಾಲ ರೂಪದಲ್ಲಿ ಹಣ ನೀಡಿದ್ದಾರೆ. ಪ್ರಸ್ತುತ ಜಪ್ತಿಯಿಂದ ಪುರಸಭೆ ವ್ಯಾಪ್ತಿಗೆ ನೀರು ಬರುತ್ತಿದ್ದು ಅದು ಕೋಡಿ ಪ್ರದೇಶಕ್ಕೆ ತಲುಪುತ್ತಿಲ್ಲ. ಆದ್ದರಿಂದ ಹೊಸ ಯೋಜನೆ ಮಾಡಲಾಗಿದೆ ಎಂದರು.
ಪುರಸಭೆ ಸದಸ್ಯರಾದ ಲಕ್ಷ್ಮೀ ಬಾಯಿ, ದೇವಕಿ ಸಣ್ಣಯ್ಯ, ಗಿರೀಶ್ ಕುಮಾರ್ ಎಚ್., ಮೋಹನದಾಸ ಶೆಣೈ, ರಾಘವೇಂದ್ರ ಖಾರ್ವಿ, ಸಂದೀಪ್ ಖಾರ್ವಿ, ಚಂದ್ರಶೇಖರ್ ಖಾರ್ವಿ, ಅಶ#ಕ್, ಅಬ್ಬು ಮಹಮ್ಮದ್, ಸಂತೋಷ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮಾಜಿ ಸದಸ್ಯರಾದ ಪುಷ್ಪಾ ಆರ್. ಶೇಟ್, ಕಲಾವತಿ, ಕೋಡಿ ಪ್ರದೇಶದ ನಾಗರಿಕ ಆರಿಫ್, ಅಬ್ದುಲ್ಲ ಕಾಮಗಾರಿಯಿಂದಾಗುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದರು.
ಒಂದಷ್ಟು ಕಾಮಗಾರಿ ಆದಮೇಲೆ ಮಾಹಿತಿ ನೀಡಲು ಕರೆಯಲಾಗುತ್ತಿದೆ. ಸಭೆ ನಡೆಯುವ ಹಿಂದಿನ ಸಂಜೆಯಷ್ಟೇ ಸದಸ್ಯರನ್ನು ಆಹ್ವಾನಿಸಲಾಗಿದೆ. ಸಾರ್ವ ಜನಿಕರ ಗಮನಕ್ಕೆ ತರದೇ ಸಭೆ ನಡೆಸ ಲಾಗಿದೆ. ಮಾಧ್ಯಮದವರಿಗೂ ಮಾಹಿತಿ ನೀಡಿಲ್ಲ. ಈಗಾಗಲೇ ಮಾಡಿದ ಕಾಮಗಾರಿ ಅಸಮರ್ಪಕವಾಗಿದೆ. ಅಗೆದು ಹಾಕಿದಲ್ಲಿ ಸರಿಯಾಗಿ ದುರಸ್ತಿ ಮಾಡಿಲ್ಲ. ಇಂಟರ್‌ಲಾಕ್ ತೆಗೆದಲ್ಲಿ ಸರಿಯಾದ ರೀತಿ ಅಳವಡಿಸದೇ ಕುಸಿಯುತ್ತಿದೆ. ಸುಂದರ ಕುಂದಾಪುರ ಬದಲು ವಿರೂಪದ ಕುಂದಾಪುರ ಆಗುತ್ತಿದೆ. ಪುರಸಭೆ ಹೊಸದಾಗಿ ಹಾಕಿದ ಇಂಟರ್‌ಲಾಕ್‌ಗಳನ್ನು ಕೀಳಲಾಗಿದೆ. ಕಿತ್ತು ಹಾಕಿದ ಇಂಟರ್‌ಲಾಕ್‌ಗಳನ್ನು ಎಲ್ಲಿ ಸಾಗಿಸಲಾಗಿದೆ. ಗುತ್ತಿಗೆದಾರರು ಜನಪ್ರತಿನಿಧಿಗಳ ದೂರಿಗೂ ಸ್ಪಂದಿಸುವುದಿಲ್ಲ ಯಾಕೆ. ಸಮಸ್ಯೆಗಳ ಕುರಿತು ಹೇಳಿದರೂ ಹಾರಿಕೆ ಉತ್ತರ ನೀಡಲಾಗುತ್ತಿದೆ. ಅಳವಡಿಸುತ್ತಿರುವ ಪೈಪ್‌ಲೈನ್ ಗಾತ್ರ ಸಣ್ಣದಾದ ಕಾರಣ ಅವಶ್ಯವುಳ್ಳಷ್ಟು ನೀರು ಪೂರೈಸಬಹುದೆ? ಎಂಬ ಪ್ರಶ್ನೆಗಳನ್ನು ಕೇಳಿದರು.
ಮರಳು ಸಮಸ್ಯೆಯಿಂದ ಕಾಮಗಾರಿ ನಿಧಾನವಾಗಿದೆ. ಸಮಸ್ಯೆಗಳಿಗೆ ಸ್ಪಂದಿ ಸುತ್ತೇವೆ. ದುರಸ್ತಿ ಕಾಮಗಾರಿ ಸರಿಯಾಗಿ ಮಾಡುತ್ತೇವೆ ಎಂದು ರಾಮಕೃಷ್ಣ ಉತ್ತರಿಸಿದರು. ಪುರಸಭೆ ಮಾಜಿ ಅಧ್ಯಕ್ಷೆ ವಸಂತಿ ಸಾರಂಗ, ಸದಸ್ಯರಾದ ರೋಹಿಣಿ ಉದಯ್, ಪ್ರಭಾಕರ ಕೆ., ಸಹಾಯಕ ಎಂಜಿನಿಯರ್ ಹರೀಶ್ ಬಿ., ಕಾಮಗಾರಿ ನಿರ್ವಹಿಸುವ ಸಂಸ್ಥೆಯ ಪ್ರಾಜೆಕ್ಟ್ ಮೆನೇಜರ್ ವರ್ಧಮಾನ್ ಉಪಸ್ಥಿತರಿದ್ದರು. ರತ್ನಾಕರ್ ನಿರ್ವಹಿಸಿದರು.
ಸಾರ್ವಜನಿಕರಿಲ್ಲ
ಸಭೆಯ ಕುರಿತು ಮಾಹಿತಿ ಕೊರತೆ ಯಿಂದಾಗಿ ಸಾರ್ವಜನಿಕರ ಸಂಖ್ಯೆ ಬೆರಳೆಣಿಕೆ ಯಲ್ಲಿತ್ತು. ಮಾತಿನ ಭರಾಟೆ ಸದಸ್ಯರು ಹಾಗೂ ಅಧಿಕಾರಿ ಮಧ್ಯೆ ತೀವ್ರವಾಗಿ ನಡೆಯಿತು.
ಯೋಜನೆಯ ಅನುದಾನ
ಹಳೆಕೋಟೆಯಲ್ಲಿ 5 ಲಕ್ಷ ಲೀ. ಸಾಮರ್ಥ್ಯ, ಕೋಡಿಯಲ್ಲಿ 4 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕಿ ರಚನೆಯಾಗುತ್ತಿದೆ. ಪೈಪ್‌ಲೈನ್ ಅಳವಡಿಕೆ ಸಂದರ್ಭ ಹಾಳಾಗುವ ಕಾಮಗಾರಿಯ ದುರಸ್ತಿಯನ್ನು ಮಾಡಿಕೊಡಲಾಗುವುದು. ಡಾಮರು, ಇಂಟರ್‌ಲಾಕ್, ಕಾಂಕ್ರೀಟ್ ರಸ್ತೆ ಅಗೆದರೆ ಅದನ್ನು ನವೀಕರಣ ಮಾಡಿ ಕೊಡಲಾಗುವುದು. ಇಂತಹ ದುರಸ್ತಿ ಕಾಮಗಾರಿಗೆ ಪುರಸಭೆಯ ಅನುದಾನ ಬಳಸುವುದಿಲ್ಲ. ಎಲ್ಲದಕ್ಕೂ ಯೋಜನೆಯ ಅನುದಾನ ಬಳಸಲಾಗುವುದು ಎಂದು ರಾಮಕೃಷ್ಣ ಹೇಳಿದರು.