Advertisement

ಶಿರೂರುಗುಡ್ಡ ಕುಸಿತ ಸ್ಥಳ ತಲುಪಿದ ಡ್ರೆಜ್ಜಿಂಗ್‌ ಯಂತ್ರ-3 ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ!

06:05 PM Sep 20, 2024 | Team Udayavani |

ಉದಯವಾಣಿ ಸಮಾಚಾರ
ಗೋಕರ್ಣ: ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಮಣ್ಣಿನಡಿ ಸಿಲುಕಿಕೊಂಡು ಎರಡು ತಿಂಗಳು ಕಳೆದರೂ ಇನ್ನುವರೆಗೂ ಅವರ ಶೋಧಕಾರ್ಯ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಾಸಕ ಸತೀಶ ಸೈಲ್‌ ನೇತೃತ್ವದಲ್ಲಿ ಗೋವಾದ ಬಾರ್ಜ್‌ ಮೂಲಕ ಡ್ರೆಜ್ಜಿಂಗ್‌ ಯಂತ್ರ ತರಿಸಲಾಗಿದ್ದು, ಗುರುವಾರ ಮಂಜಗುಣಿಗೆ ಬಂದು ತಲುಪಿದೆ.

Advertisement

ಮಂಜಗುಣಿ-ಗಂಗಾವಳಿ ನಡುವೆ ಸೇತುವೆ ನಿರ್ಮಾಣಗೊಂಡಿದ್ದು, ಇದರ ನಿರ್ಮಾಣಕ್ಕೆ ಮಣ್ಣು ಹಾಕಿದ್ದರಿಂದಾಗಿ ಸತತ 3 ವರ್ಷ ನೆರೆ ಉಂಟಾಗಿತ್ತು. ನಂತರ ಮಂಜಗುಣಿ ಮತ್ತು ಶಿರೂರು ಗ್ರಾಮಸ್ಥರ ನಿರಂತರ ಹೋರಾಟಕ್ಕೆ ಮಣಿದ ಅಧಿಕಾರಿಗಳು ಗಂಗಾವಳಿ ಮತ್ತು ಮಂಜಗುಣಿಯಲ್ಲಿ ಹಿಟಾಚಿ ಮೂಲಕ ಮಣ್ಣನ್ನು ತೆರವು ಮಾಡಲಾಗಿತ್ತು. ಆದರೂ ಕೂಡ ತಕ್ಕಮಟ್ಟಿಗೆ ಮಣ್ಣು ಹಾಗೇ
ಉಳಿದುಕೊಂಡಿತ್ತು.

ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕಾರ್ಯಾಚರಣೆ ನಡೆಸಿರಲಿಲ್ಲ. ಇದೇ ಸೇತುವೆ ಕಳಗಡೆಯಿಂದಲೇ ಡ್ರೆಜ್ಜಿಂಗ್‌ ಬಾರ್ಜ್‌ ತೆರಳಬೇಕಾಗಿರುವುದರಿಂದ ಅದು ಪೂರ್ಣ ಪ್ರಮಾಣದ ನೀರು ಕಡಿಮೆಯಾದ ನಂತರ ತೆರಳಬೇಕಾಗಿ ಬಂದಿದ್ದರಿಂದ
ಗುರುವಾರ ಸಂಜೆವರೆಗೆ ಕಾದರೂ ಪ್ರವೇಶ ಸಾಧ್ಯವಾಗಲಿಲ್ಲ. ಹೀಗಾಗಿ ಸಂಜೆ 5 ರ ನಂತರ ಇಲ್ಲಿಂದ ಶಿರೂರಿನತ್ತ ಪ್ರಯಾಣ ಬೆಳೆಸಿತ್ತು. ಇದರಿಂದಾಗಿ ನಾಪತ್ತೆಯಾದವರ ಶೋಧ ಕಾರ್ಯ ಶುಕ್ರವಾರದಿಂದ ಆರಂಭಗೊಳ್ಳಲಿದೆ.

ಈ ಗುಡ್ಡ ಕುಸಿತ ದುರಂತದಲ್ಲಿ 8 ಜನ ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದರು. ಅವರಲ್ಲಿ ಕೇರಳದ ಬೆಂಜ್‌ ಲಾರಿ ಚಾಲಕ ಅರ್ಜುನ ಡಿ, ಶಿರೂರಿನ ಜಗನ್ನಾಥ ನಾಯ್ಕ, ಗೋಕರ್ಣ ಸಮೀಪದ ಗಂಗೆಕೊಳ್ಳದ ಲೋಕೇಶ ನಾಯ್ಕ ನಾಪತ್ತೆಯಾಗಿದ್ದರು. ಅವರು ಈ ಗುಡ್ಡ ಕುಸಿತದ ಸಂದರ್ಭದಲ್ಲಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಜು.16 ರಂದು ಈ ಗುಡ್ಡ ಕುಸಿತ ದುರಂತ ನಡೆದಿತ್ತು. ಎರಡು ತಿಂಗಳಿನ ನಂತರ ಈಗ ಗೋವಾದಿಂದ ಬಾರ್ಜ್‌ ಮೂಲಕ ಬಂದ ಡ್ರೆಜ್ಜಿಂಗ್‌ ಯಂತ್ರ ಶುಕ್ರವಾರದಿಂದ ಕಾರ್ಯಾರಂಭ ಮಾಡಲಿದೆ.

ಮಂಜಗುಣಿ-ಗಂಗಾವಳಿ ನಡುವಿನ ಸೇತುವೆಗೆ ಹಾಕಲಾಗಿದ್ದ ಮಣ್ಣನ್ನು ತೆರವುಗೊಳಿಸುವಂತೆ ಅನೇಕ ಬಾರಿ ಹೋರಾಟ ನಡೆಸಲಾಗಿತ್ತು. ಆದರೆ ಹಿಟಾಚಿ ಮೂಲಕ ತೆರವುಗೊಳಿಸಿದ್ದರು. ಈಗ ಶಿರೂರು ದುರಂತದ ಕಾರ್ಯಾಚರಣೆ ಮುಗಿದ ಮೇಲೆ ಈ ಸೇತುವೆ ಕೆಳಗಡೆ ಇರುವ ಮಣ್ಣನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ.
●ಶ್ರೀಪಾದ ಟಿ. ನಾಯ್ಕ, ಅಧ್ಯಕ್ಷರು,
ಜಿಲ್ಲಾ ಜನಪರ ವೇದಿಕೆ ಅಂಕೋಲಾ.

Advertisement

ಈ ಗುಡ್ಡ ದುರಂತದಲ್ಲಿ 8 ಜನ ಮೃತಪಟ್ಟಿದ್ದು, ಅವರಿಗೆ ರಾಜ್ಯ ಸರಕಾರದಿಂದ 5 ಲಕ್ಷ ಹಾಗೂ ಕೇಂದ್ರ ಸರಕಾರದಿಂದ 2 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಆದರೆ ನಾಪತ್ತೆಯಾದ ಮೂವರ ಕುಟುಂಬಕ್ಕೆ ಸರಕಾರ ಯಾವುದೇ ಪರಿಹಾರ ನೀಡಿಲ್ಲ. ಕನಿಷ್ಠ ಪಕ್ಷ ಅವರ ಮೂಳೆಯಾದರೂ ದೊರೆತರೆ ಡಿಎನ್‌ಎ ಮೂಲಕ ಯಾರು ಎನ್ನುವುದನ್ನು ಖಚಿತಪಡಿಸಿ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ನಾಪತ್ತೆಯಾದ ಮೂವರ ಪತ್ತೆ ಕಾರ್ಯ ಮಾಡಬೇಕಾಗಿದೆ. ಇಲ್ಲದಿದ್ದರೆ ನೊಂದ ಕುಟುಂಬಗಳಿಗೆ ಇತ್ತ ಯಜಮಾನನೂ ಇಲ್ಲ, ಅತ್ತ ಪರಿಹಾರವೂ ಇಲ್ಲ ಎನ್ನುವಂತಾಗುತ್ತದೆ.
●-ದಾಮೋದರ ಜಿ. ನಾಯ್ಕ, ಅಧ್ಯಕ್ಷರು, ರಾಷ್ಟ್ರೀಯ ಈಡಿಗ ಮಹಾಮಂಡಳಿ ಅಂಕೋಲಾ

Advertisement

Udayavani is now on Telegram. Click here to join our channel and stay updated with the latest news.

Next