ಹಳೆಯಂಗಡಿ: ಇಲ್ಲಿನ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಹಳೆಯಂಗಡಿಯ ಲೈಟ್‌ಹೌಸ್ ಬಳಿಯಲ್ಲಿ ಮಳೆ ನೀರು ಹರಿಯಲು ಅಡ್ಡಿಯಾಗಿದ್ದ ಚರಂಡಿಯ ಹೂಳನ್ನು ಗ್ರಾಮಸ್ಥರೇ ತೆರವು ಮಾಡಿ ಸ್ವಚ್ಛಗೊಳಿಸಿದರು. ಈ ರಸ್ತೆಯು ಸ್ಥಳೀಯರಿಗೆ ಪಕ್ಷಿ ಕೆರೆಯ ಪೇಟೆಯನ್ನು ತಲುಪಲು ಏಕೈಕ ಸಂಪರ್ಕದ ರಸ್ತೆಯಾಗಿದೆ.
ರಸ್ತೆ ಇಳಿಜಾರಾಗಿರುವುದರಿಂದ ಚರಂಡಿಗೆ ಅಳವಡಿಸಿರುವ ಸಿಮೆಂಟ್‌ನ ಬೃಹದಾಕಾರದ ಪೈಪ್‌ನಲ್ಲಿ ಮೇಲ್ಮುಖವಾಗಿ ಬಂದಂತಹ ಕಸ ಕಡ್ಡಿಗಳು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಲುಷಿತ ಮಣ್ಣಿನಿಂದ ಕೂಡಿದ ಹೂಳು ತುಂಬಿತ್ತು. ಹೂಳನ್ನು ತೆರವು ಮಾಡದಿದ್ದಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದು ರಸ್ತೆಯಲ್ಲಿ ಹೊಂಡ ಗುಂಡಿಗಳು ಬೀಳುವ ಆತಂಕವಿದ್ದುದರಿಂದ ಗ್ರಾಮಸ್ಥರೇ ಶ್ರಮದಾನ ನಡೆಸಿದರು.
ಪ್ರಸ್ತುತ ಈ ರಸ್ತೆಯು ಲೋಕೋ ಪಯೋಗಿ ಇಲಾಖೆಗೆ ಸೇರಿದ್ದಾದರೂ ಇಲಾಖೆಯ ಗಮನಕ್ಕೆ ಪ್ರತೀ ವರ್ಷವು ತರುತ್ತಿದ್ದೇವೆ ಅದರೆ ಹೂಳು ತೆಗೆಯುವ ಯಾವುದೇ ಮುನ್ಸೂಚನೆ ಇಲ್ಲ.ಮಳೆಗಾಲವು ಸನ್ನಿಹಿತವಾಗಿದ್ದರಿಂದ ಈ ವಿಶೇಷ ಶ್ರಮದಾನ ನಡೆಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶ್ರಮದಾನದಲ್ಲಿ ಪಡುಪಣಂಬೂರು ಗ್ರಾ.ಪಂ. ಸದಸ್ಯ ದಿನೇಶ್ ಕುಲಾಲ್, ಗ್ರಾಮಸ್ಥರಾದ ಪದ್ಮನಾಭ, ವೆಂಕಟೇಶ್, ಶ್ರೀಧರ್, ಬಾಲಕೃಷ್ಣ, ಚರಣ್, ಅಶೋಕ್ ಮತ್ತಿತರರು ಭಾಗವಹಿಸಿದ್ದರು.
ಶ್ರಮದಾನದ ನೇತೃತ್ವ ವಹಿಸಿದ್ದ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಸದಸ್ಯ ದಿನೇಶ್ ಕುಲಾಲ್ ಪ್ರತಿಕ್ರಿಯಿಸಿ, ಕಳೆದ ಬಾರಿಯೂ ಈ ಚರಂಡಿಯ ಹೂಳನ್ನು ಗ್ರಾಮಸ್ಥರೊಂದಿಗೆ ತೆರವು ಮಾಡಿದ್ದೆವು ಆಗ ರಸ್ತೆಯ ಮೇಲೆ ನೀರು ಹರಿಯದೇ ಮಳೆ ನೀರು ಸರಾಗವಾಗಿ ಹರಿದಿತ್ತು. ಈ ಬಾರಿಯೂ ಇಲಾಖೆಗೆ ಮಾಹಿತಿ ನೀಡಿದ್ದರೂ ಪ್ರಯೋಜನವಿಲ್ಲವಾದ್ದರಿಂದ ಗ್ರಾಮಸ್ಥರೊಂದಿಗೆ ಹೂಳನ್ನು ತೆರವು ಮಾಡಲಾಗಿದೆ ಎಂದರು.