ವಾಡಿ: ಅದೊಂದು ಪುರುಕಲ್ಲಿನ (ಹಾಸುಗಲ್ಲು) ಮುರುಕು ಕೋಣೆ. ಸರ್ಕಾರದ ಕಟ್ಟಡ ಎನ್ನುವ ಕಾರಣಕ್ಕೆ ಅದನ್ನೇ ಸಾರ್ವಜನಿಕ ಗ್ರಂಥಾಲಯವನ್ನಾಗಿಸಿ ದಶಕವೇ ಕಳೆದಿದೆ. ಮಾಳಿಗೆಯ ಜಂತಿ ತುಂಡುಗಳು ಹುಳು ಹತ್ತಿ ಜೋತು ಬಿದ್ದಿವೆ. ಕೋಣೆಯಲ್ಲಿ ತೆರೆದಿಟ್ಟರೆ ಹಾಳಾಗುತ್ತವೆ ಎನ್ನುವ ಕಾರಣಕ್ಕೆ ಓದುಗರಿಗೆ ಕೊಡಬೇಕಾದ ಸಾಹಿತ್ಯ ಕೃತಿಗಳ ರಾಶಿಯನ್ನು ಗಂಟು ಕಟ್ಟಿಡಲಾಗಿದೆ. ಪುಸ್ತಕಗಳು ಧೂಳಿನಲ್ಲಿ ಉಸಿರುಗಟ್ಟಿ ಬಿದ್ದಿವೆ. ಕುರ್ಚಿ, ಟೇಬಲ್‌ಗಳು ಗುಜರಿಯವನು ಖರೀದಿಸದಷ್ಟು ಕೊಳೆತು ಹೋಗಿವೆ. ಓದುಗರು ಒತ್ತಟ್ಟಿಗಿರಲಿ ಸ್ವತಃ ಗ್ರಂಥಪಾಲಕಿಯೇ ಕೋಣೆಯೊಳಗೆ ಹೋಗಲು ಹಿಂಜರಿಯುತ್ತಾರೆ. ಬೆಳಗ್ಗೆ ಬಾಗಿಲು ತೆರೆದಿಟ್ಟು ಮರದ ಕೆಳಗೆ ಕುಳಿತು ಕರ್ತವ್ಯ ನಿಭಾಯಿಸುತ್ತಿದ್ದಾರೆ.
ಚಿತ್ತಾಪುರ ತಾಲೂಕಿನ ಕಟ್ಟಕಡೆಯ ಗ್ರಾಮ ಕೊಲ್ಲೂರಿನ ಸಾರ್ವಜನಿಕ ಗ್ರಂಥಾಲಯ ಅವ್ಯವಸ್ಥೆ ಆಗರವಾಗಿದ್ದು, ಓದುಗರಿಂದ ದೂರ ಉಳಿದಿದೆ. ಗ್ರಾಮದ ಈ ಗ್ರಂಥಾಲಯಕ್ಕೆ 296ಓದುಗ ಸದಸ್ಯರಿದ್ದಾರೆ. ಒಟ್ಟು ಒಂದು ಸಾವಿರ ಪುಸ್ತಕಗಳಿವೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಕಚೇರಿ ವ್ಯಾಪ್ತಿಯಲ್ಲಿನ ಗ್ರಂಥಾಲಯಗಳಿಗೆ ನೂತನ ಕಟ್ಟಡ ಭಾಗ್ಯ ದೊರೆತಿದ್ದರೂ ಕೊಲ್ಲೂರು ಗ್ರಾಮವನ್ನು ವಂಚಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾವಂತ ಯುವಕರಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಲು ಗ್ರಂಥಾಲಯ ಸೌಲಭ್ಯ ಒದಗಿಸಲಾಗಿದೆ. ಆದರೆ ಸುಸಜ್ಜಿತ ಕಟ್ಟಡ, ಉತ್ತಮ ಕೃತಿಗಳು, ಪೀಠೊಪಕರಣ, ಶುಚಿ ಪರಿಸರ ಸೌಲಭ್ಯ ಒದಗಿಸದೇ ಜಿಲ್ಲಾ ಗ್ರಂಥಾಲಯ ಇಲಾಖೆ ಓದುಗರನ್ನು ಪರದಾಡುವಂತೆ ಮಾಡಿದೆ.
ಕಳೆದ ಹತ್ತಾರು ವರ್ಷಗಳಿಂದ ಸುಣ್ಣ-ಬಣ್ಣ ಕಾಣದ, ಸಂಪೂರ್ಣ ಮುಗುಚಿ ಬೀಳುವ ಹಂತಕ್ಕೆ ತಲುಪಿರುವ ಕೊಲ್ಲೂರು ಗ್ರಾಮದ ಗ್ರಂಥಾಲಯ ಸಮಸ್ಯೆಗಳ ಸಂಕಟದಲ್ಲಿ ನರಳುತ್ತಿದೆ. ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ, ಅನಕೃ, ಶಿವರಾಮ ಕಾರಂತ, ಮಾಸ್ತಿವೆಂಕಟೇಶ ಐಯ್ಯಂಗಾರ, ದೇವನೂರು ಮಹಾದೇವ, ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ, ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯನವರ ಸಾಹಿತ್ಯ ಕೃತಿಗಳು ಓದುಗರ ಕೃಸೇರದೆ ಕಟ್ಟಡದ ಧೂಳಿನಲ್ಲಿ ಬಿದ್ದು ಹಾಳಾಗುತ್ತಿವೆ. ಇಲಿ, ಹೆಗ್ಗಣಗಳ ಬಾಯಿಗೆ ಸಿಕ್ಕು ಹಾಳಾಗುತ್ತಿವೆ. ನಮ್ಮೂರಿನಲ್ಲಿ ಹೆಸರಿಗೆ ಮಾತ್ರ ಗ್ರಂಥಾಲಯ ತೆರೆಯಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಡಿಸಲು ರೂಪದ ಗ್ರಂಥಾಲಯ ಕಟ್ಟಡ ಬಹಳ ಹಳೆಯದ್ದಾಗಿದೆ. ಹಾಸುಗಲ್ಲಿನಿಂದ ಮೇಲ್ಚಾವಣಿ ಹೊದಿಸಲಾಗಿದ್ದು, ಜಂತಿ ಕಟ್ಟಿಗೆ ಕೊಳೆತು ಮುರಿದುಬಿದ್ದಿವೆ. ಪುಸ್ತಕ ಇಡಲು ಜಾಗವಿಲ್ಲ. ಅಪಾಯಕಾರಿ ಕೋಣೆಯಲ್ಲಿ ಓದುಗರು ಕೂಡಲು ಸಾಧ್ಯವಿಲ್ಲ. ನಾನು ಹೊಸದಾಗಿ ಸೇವೆಗೆ ಬಂದಿದ್ದೇನೆ. ಪ್ರಾಣಾಪಾಯ ಭೀತಿಯಿಂದ ನಾನೂ ಹೊರಗೆ ಕೂಡುತ್ತೇನೆ. ಹೊಸ ಕಟ್ಟಡ ಸೌಲಭ್ಯ ಒದಗಿಸಿದರೆ ಓದುಗರನ್ನು ಸೆಳೆಯಲು ಸಾಧ್ಯವಾಗುತ್ತದೆ.
–ದೇವಮ್ಮಾ ಪೂಜಾರಿ, ಗ್ರಂಥಪಾಲಕಿ, ಕೊಲ್ಲೂರು
ಸಾಹಿತ್ಯ ಓದುವ ಹವ್ಯಾಸ ಮೂಡಿಸಬೇಕಾದ ಗ್ರಾಮೀಣ ಭಾಗದ ಗ್ರಂಥಾಲಯಗಳು ಸುಸಜ್ಜಿತ ಕಟ್ಟಡ ಸೌಲಭ್ಯದಿಂದ ವಂಚಿತಗೊಂಡಿದ್ದು ಬೆಳಕಿಗೆ ಬಂದಿದೆ. ಕೆಲ ಗ್ರಾಮಗಳ ಗ್ರಂಥಾಲಯ ಕಟ್ಟಡಗಳು ಅತ್ಯಾಕರ್ಷಕವಾಗಿದ್ದು, ಓದುಗರಿಗೆ ಹತ್ತಿರವಾಗುವಲ್ಲಿ ವಿಫಲವಾಗಿವೆ. ಈ ಕುರಿತು ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ. ಕೊಲ್ಲೂರು ಗ್ರಂಥಾಲಯದ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಜಿಲ್ಲಾ ಗ್ರಂಥಾಲಯ ಇಲಾಖೆ ಮುಂದಾಗಬೇಕು.
–ದಯಾನಂದ ಖಜೂರಿ, ಪ್ರಧಾನ ಕಾರ್ಯದರ್ಶಿ, ಸಂಚಲನ ಸಾಹಿತ್ಯ ವೇದಿಕೆ, ವಾಡಿ
–ಮಡಿವಾಳಪ್ಪ ಹೇರೂರ