Advertisement

ಸದ್ಯ ಕೋವಿಡ್ ದಿಂದ ಮುಕ್ತವಾಗಿದೆ ಜಿಲ್ಲೆ; ಮೈ ಮರೆಯುತ್ತಿರುವ ಜನ

05:25 PM Jan 08, 2022 | Team Udayavani |

ಹಾವೇರಿ: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಕೊರೊನಾ ಮೂರನೇ ಅಲೆ ಪ್ರಕರಣಗಳು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದ್ದು, ಕೊರೊನಾ ನಿಯಂತ್ರಿಸಲು ಸರ್ಕಾರ ರಾತ್ರಿ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಸದ್ಯ ಜಿಲ್ಲೆ ಕೊರೊನಾ ಸೋಂಕಿನಿಂದ ಮುಕ್ತವಾಗಿರುವುದು ಜಿಲ್ಲೆಯ ಜನರಲ್ಲಿ ನೆಮ್ಮದಿ ಮೂಡಿಸಿದೆ. ಜಿಲ್ಲಾಡಳಿತ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಿ ಕೊರೊನಾ ಮೂರನೇ ಅಲೆ ಜಿಲ್ಲೆಗೆ ಕಾಲಿಡದಂತೆ ಕ್ರಮ ಕೈಗೊಳ್ಳಬೇಕಿದೆ.

Advertisement

ಜಿಲ್ಲೆಯ ಸವಣೂರಿನಲ್ಲಿ ಕಳೆದ 2020ರ ಮೇ 5ರಂದು ಮೊದಲ ಕೇಸ್‌ ಕಾಣಿಸಿಕೊಂಡು 20 ತಿಂಗಳ ಕಾಲ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದ ಕೊರೊನಾ ಸೋಂಕಿನ ಪ್ರಕರಣಗಳು ಶೂನ್ಯಕ್ಕೆ ಇಳಿದಿದ್ದು, ಸದ್ಯ ಜಿಲ್ಲೆ ಕೊರೊನಾ ಮುಕ್ತವಾಗಿದೆ. ಇದುವರೆಗೆ 22,215 ಜನರಿಗೆ ಸೋಂಕು ತಗುಲಿ, 650 ಜನರನ್ನು ಬಲಿ ತೆಗೆದುಕೊಂಡು ಆರ್ಥಿಕತೆಯನ್ನೇ ಕೊರೊನಾ ಬುಡಮೇಲು ಮಾಡಿತ್ತು. ಒಂದು ಮತ್ತು ಎರಡನೇ ಅಲೆಯಿಂದ ಜಿಲ್ಲೆಯನ್ನು ತಲ್ಲಣಗೊಳಿಸಿತ್ತು. ಈಗ ಎಲ್ಲೆಡೆ ಓಮೆಕ್ರಾನ್‌ ಒಕ್ಕರಿಸಿದ್ದರೆ, ಜಿಲ್ಲೆಯಲ್ಲಿ ಸದ್ಯ ಕೈಗೊಂಡಿರುವ ಕ್ರಮಗಳಿಂದಾಗಿ ಕೊರೊನಾ ನಿಯಂತ್ರಣದಲ್ಲಿದೆ.

22215 ಜನರಿಗೆ ಕೋವಿಡ್ ಸೋಂಕು: ಕೋವಿಡ್ ಒಂದು ಮತ್ತು ಎರಡನೇ ಅಲೆ ಸೇರಿ 22215 ಕೊರೊನಾ ದೃಢಪಟ್ಟಿವೆ. ಇದುವರೆಗೆ 650 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. 21565 ಜನರು ಕೋವಿಡ್ ಸೋಂಕು ತಗುಲಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ರಾಣಿಬೆನ್ನೂರು ತಾಲೂಕಿನಲ್ಲಿ ಅತ್ಯ ಧಿಕ 5359 ಜನರಿಗೆ ಕೊರೊನಾ ತಗಲಿತ್ತು. ಹಾವೇರಿ ತಾಲೂಕಿನಲ್ಲಿ 4849 ಕೇಸ್‌ ದೃಢಪಟ್ಟಿದ್ದರೆ, ಬ್ಯಾಡಗಿ ತಾಲೂಕಿನಲ್ಲಿ 2061, ಹಾನಗಲ್ಲ ತಾಲೂಕಿನಲ್ಲಿ 2804 ಪ್ರಕರಣ ದೃಢಪಟ್ಟಿವೆ.

ಹಿರೇಕೆರೂರು ತಾಲೂಕಿನಲ್ಲಿ 3063, ಸವಣೂರು ತಾಲೂಕಿನ 1307 ಜನರಿಗೆ, ಶಿಗ್ಗಾವಿ ತಾಲೂಕಿನ 2542 ಜನರಿಗೆ ಕೊರೊನಾ ಸೋಂಕು ತಗಲಿತ್ತು. ಇತರೆ 230 ಕೇಸ್‌ ದಾಖಲಾಗಿದ್ದವು.

ಸಾವಿನ ಸರಣಿಗೆ ಬ್ರೇಕ್‌: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 650 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳು, ವೃದ್ಧರು, ಮಹಿಳೆಯರು, ಯುವಕರು ಸೇರಿದಂತೆ ಯಾರನ್ನೂ ಕೊರೊನಾ ಬಿಟ್ಟಿರಲಿಲ್ಲ. ಕೊರೊನಾ ಸೋಂಕು ಬಂದರೆ ಸಾವು ನಿಶ್ಚಿತ ಎಂಬ ರೀತಿಯಲ್ಲಿ ಜನರು ಆತಂಕಗೊಂಡಿದ್ದರು. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಿದ ಸೂಕ್ತ ಚಿಕಿತ್ಸೆಯಿಂದ ಗುಣಮುಖರಾದವರ ಸಂಖ್ಯೆಯೂ ಹೆಚ್ಚಿದೆ. ಆದರೂ, ಇನ್ನಿತರ ಜಿಲ್ಲೆಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಿತ್ತು. ಇದು ಆತಂಕಕ್ಕೆ ಕಾರಣವಾಗಿತ್ತು.

Advertisement

ಆಕ್ಸಿಜನ್‌ ಕೊರತೆ, ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆಯದೇ ಇರುವುದು, ಸೋಂಕು ತಗಲಿದರೂ ಆಸ್ಪತ್ರೆಗೆ ಬಾರದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಜನರು ಕೊರೊನಾದಿಂದ ತತ್ತರಿಸಿದ್ದರು. ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ ಹುಡುಕಲೆಂದೇ ತಜ್ಞರ ಸಮಿತಿ ರಚಿಸಲಾಗಿತ್ತು. ತಜ್ಞರ ಸಮಿತಿ ವರದಿ ನೀಡಿತ್ತು. ಆದರೂ, ಸಾವಿನ ಸಂಖ್ಯೆ ಏರುತ್ತಲೇ ಇತ್ತು. ಅಂತೂ ಈಗ ಸಾವಿನ ಸರಣಿಗೆ ಬ್ರೇಕ್‌ ಬಿದ್ದಂತಾಗಿದೆ.

650 ಜನರು ಬಲಿ: ಜಿಲ್ಲೆಯ ಹಾವೇರಿ ಜಿಲ್ಲಾಸ್ಪತ್ರೆಯಲ್ಲೇ 194 ಜನರು ಕೊರೊನಾದಿಂದ ಗುಣಮುಖರಾಗದೇ ಕೊನೆಯುಸಿರೆಳೆದಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 59, ಹಾನಗಲ್ಲ ತಾಲೂಕಿನಲ್ಲಿ 69, ರಾಣೆಬೆನ್ನೂರು 144, ಹಿರೇಕೆರೂರು 78, ಸವಣೂರು 42, ಶಿಗ್ಗಾವಿ 57 ಹಾಗೂ ಇತರೆ 7 ಜನರು ಸೇರಿದಂತೆ 650 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆ ಕೊರೊನಾ ಮುಕ್ತಗೊಂಡಿದ್ದು, ಸಂಭಾವ್ಯ ಮೂರನೇ ಅಲೆ ಬಗ್ಗೆ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಸಂಭವನೀಯ ಕೊರೊನಾ 3ನೇ ಅಲೆ ನಿಯಂತ್ರಿಸಲು ಜಿಲ್ಲಾಡಳಿತ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಮೈ ಮರೆಯುತ್ತಿರುವ ಜನ
ರಾಜ್ಯದಲ್ಲಿ ಮತ್ತೆ ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದೆ. ಆದರೆ, ಜಿಲ್ಲೆಯ ಜನರು ಮಾಸ್ಕ್, ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕೊರೊನಾ ದೂರವಾಯಿತು ಎಂದು ಮಾಸ್ಕ್ ಧರಿಸುವುದನ್ನು ಜನರು ಕೈಬಿಟ್ಟಿದ್ದಾರೆ. ಪೊಲೀಸರು ಸಹ ಸರ್ಕಾರದ ನಿಯಮಗಳನ್ನು ಪಾಲಿಸಲು ಜನರಿಗೆ ಅರಿವು ಮೂಡಿಸುತ್ತಿಲ್ಲ, ಜನತೆ ಈಗಲೇ ಎಚ್ಚೆತ್ತುಕೊಂಡು ಕೊರೊನಾ ಸೋಂಕು ಮತ್ತೆ ಜಿಲ್ಲೆಗೆ ಕಾಲಿಡದಂತೆ ನೋಡಿಕೊಳ್ಳಲು ಮುಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next