Advertisement

15 ವರ್ಷಗಳಿಂದ ಕಚೇರಿ ಅಲೆಯುತ್ತಿದ್ದ ಆದಿವಾಸಿ ವೃದ್ದೆಯ ಸಮಸ್ಯೆ ಪರಿಹರಿಸಿದ ಜಿಲ್ಲಾಧಿಕಾರಿ

09:31 PM Jan 21, 2023 | Team Udayavani |

ಹುಣಸೂರು: ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಮುಕ್ತಿ ದೊರಕಿಸಿದರೆ. ಆಗುವಂತದ್ದನ್ನು ಅಧಿಕಾರಿಗಳು 15 ದಿನಗಳಲ್ಲಿ ಮಾಡಿಕೊಡಲಿದ್ದಾರೆ, ಉಳಿದವನ್ನು ಉಪ ವಿಭಾಗಾಧಿಕಾರಿಗಳು ನಿಗಾವಹಿಸುವರು. ಕೈಗೊಂಡಿರುವ ಪರಿಹಾರ ಕುರಿತು ಅನುಪಾಲನಾ ವರದಿಯನ್ನು ಪಡೆಯುತ್ತೇನೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದರು.

Advertisement

ಹುಣಸೂರು ತಾಲೂಕಿನ ನಾಗರಹೊಳೆ ಉದ್ಯಾನದಂಚಿನಗ್ರಾಮ ಪಂಚಾಯ್ತಿ ಕೇಂದ್ರವಾದ ನೇರಳಕುಪ್ಪೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಸಕ ಎಚ್.ಪಿ.ಮಂಜುನಾಥರ ಮನವಿ ಮೇರೆಗೆ ಗಡಿಯಂಚಿನ ಈ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ಇಲ್ಲಿ ಹೆಚ್ಚು ಆದಿವಾಸಿ ಹಾಡಿಗಳಿರುವುದರಿಂದ ಹಾಗೂ ಉದ್ಯಾನದಂಚಿನಲ್ಲಿರುವುದರಿಂದ ಈ ಗ್ರಾಮ ಆಯ್ಕೆ ಮಾಡಿದ್ದು ಸ್ವಾಗತಾರ್ಹ, ಗ್ರಾಮಗಳ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಲಾಗುವುದು, ಕಾನೂನು ತೊಡಕು, ವಿವಾದಿತ ಪ್ರಕರಣಗಳಿದ್ದಲ್ಲಿ ಪರಿಶೀಲಿಸಿ ಕ್ರಮವಹಿಸಲಾಗುವುದು, ಸಣ್ಣಪುಟ್ಟ ರಸ್ತೆ ಮತ್ತಿತರ ಸಮಸಸ್ಯೆಗಳಿಗೆ ಮಳೆ ಹಾನಿ ಯೋಜನೆಯಡಿಯಲ್ಲಿ ನಿರ್ಮಿಸಲು ಸೂಚಿಸಲಾಗುತ್ತದೆ, ಹೆಚ್ಚಿನ ಅನುದಾನ ಬೇಕಿದ್ದಲ್ಲಿ ಶಾಸಕರ ಗಮನಕ್ಕೆ ತಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಕೆರೆ, ಸ್ಮಶಾನ, ರಸ್ತೆ ಒತ್ತುವರಿಯನ್ನು ಅಧಿಕಾರಿಗಳ ತಂಡ ಪರಿಶೀಲಿಸಿ ಕಾಲಮಿತಿಯೊಳಗೆ ಬಿಡಿಸಲು ಕ್ರಮವಹಿಸಲಾಗುವುದು.

ಆದಿವಾಸಿ ಭೂಮಿ ಸಮಸ್ಯೆಗೆ ಸ್ಪಂದನೆ
ನೇರಳಕುಪ್ಪೆ ಬಿ.ಹಾಡಿಯ ವೃದ್ದೆ ಕೆಂಪಮ್ಮ ಮತ್ತಿತರೆ 6 ಮಂದಿ ಆದಿವಾಸಿಗಳು ತಮಗೆ ಸ.ನಂ.23,24 ಮತ್ತು 16ರಲ್ಲಿನ ಭೂಮಿಯನ್ನು ಕಳೆದ 70 ವರ್ಷಗಳಿಂದಲೂ ನಾವೇ ಉಳುಮೆ ಮಾಡುತ್ತಿದ್ದರೂ ಬೇರೆಯವರ ಹೆಸರಿಗೆ ಆರ್‌ಟಿಸಿ ಮಾಡಿದ್ದಾರೆ. ನಾವು ಸಾಯುವ ಮುನ್ನವೇ ನಮ್ಮ ಭೂಮಿಯ ಒಡೆತನ ಕೊಡಿಸಿ, ದಾಖಲಾತಿ ಮಾಡಿಕೊಡಿರೆಂಬ ಮನವಿಗೆ ಗಿರಿಜನರು ಸ್ವಾದೀನದಲ್ಲಿರುವುದರಿಂದ ಉಚಿತ ಕಾನೂನು ನೆರವು ಕಲ್ಪಿಸುವುದು, ಇದೇ ಭೂಮಿಯನ್ನು ವಾಲ್ಮಿಕಿ ನಿಗಮದವತಿಯಿಂದ ಖರೀದಿ ಮಾಡಿ ಗಿರಿಜನರಿಗೆ ವಿತರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿ, ಈ ಬಗ್ಗೆ ಕ್ರಮವಹಿಸಲು ಗ್ರಾಮದ ಮುಖಂಡರಿಗೆ ಸೂಚಿಸಿದರು.

ಗಂಟೆಯಲ್ಲೇ ಮಾಶಾಸನ ಮಂಜೂರು
ವಿಧವೆ ಮತ್ತೊಬ್ಬ ವೃದ್ದರು ತಮಗೆ ಮಾಶಾಸನ ಬಂದಿಲ್ಲವೆಂಬ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೇವಲ ಒಂದು ಗಂಟೆಯಲ್ಲೇ ತಾವೇ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಮಾಶಾಸನದ ಮಂಜೂರಾತಿ ಪತ್ರ ವಿತರಿಸಿದರು.

ಸಂಜೆಯೊಳಗೆ ಆಧಾರ್- ವೋಟರ್ ಐಡಿ ತಿದ್ದುಪಡಿ
ಗಿರಿಜನ ಕುಟುಂಬದ ಕರಿಯಪ್ಪ, ಸುಜಾತ, ಪಾರ್ವತಿ ಓಟರ್ ಐಡಿ ಮಾಡಿಕೊಡಲು, ಆಧಾರ್ ಕಾರ್ಡ್ ನೀಡಲು ಅಲೆದಾಡಿಸುತ್ತಿದ್ದಾರೆಂಬ ದೂರನ್ನಾಲಿಸಿ ಪಿರಿಯಾಪಟ್ಟಣ ವಿಳಾಸ ವಿದ್ದುದ್ದನ್ನು ಪರಿಶೀಲಿಸಿ, ಇದೀಗ ಇಲ್ಲಿ ವಾಸವಿರುವುದರಿಂದ ವಾಸಸ್ಥಳ ದೃಡೀಕರಣ ಪತ್ರ ಪಡೆದು ಸಂಜೆಯೊಳಗೆ ಓಟರ್ ಐಡಿ ಮತ್ತು ಆಧಾರ್ ಕಾರ್ಡ್ ನೀಡಲು ಆದೇಶಿಸಿದರು.

Advertisement

ಆದಿವಾಸಿ ಚಂದ್ರು ಎಂಬಾತ ಕಳೆದ ನಾಲ್ಕು ವರ್ಷಗಳ ಹಿಂದೆ ಮನೆ ನಿರ್ಮಿಸಿಕೊಂಡಿದ್ದು, ಮನೆಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲವೆಂಬ ದೂರಿಗೆ ಸಂಜೆಯೊಳಗೆ ಮಂಜೂರು ಮಾಡಿಸುವೆನೆಂದು ಹೇಳಿ ಅದರಂತೆ ನಡೆದುಕೊಂಡರು.

ಶಾಸಕ ಮಂಜುನಾಥ್ ಮಾತನಾಡಿ ಕಳೆದ ೧೫ ವರ್ಷಗಳಿಂದ ನಾನು ಶಾಸಕನಾಗಿದ್ದೆ, ಈ ಗ್ರಾಮಕ್ಕೆ ಯಾವೊಬ್ಬ ಜಿಲ್ಲಾಧಿಕಾರಿಯೂ ಭೇಟಿ ನೀಡುವ ಮನಸ್ಸು ಮಾಡಿರಲಿಲ್ಲ, ಬದ್ದತೆಯಿಂದ ಕೆಲಸ ಮಾಡುವ ಜಿಲ್ಲಾಧಿಕಾರಿಗಳಲ್ಲಿ ರಾಜೇಂದ್ರ ಸಹ ಒಬ್ಬರಾಗಿದ್ದು, ಇಂದು ಡಿ.ಸಿ.ಯವರ ಹಳ್ಳಿಯ ನಡಿಗೆಯಿಂದ ಅನೇಕ ಸಮಸ್ಯೆಗಳು ಬಗೆಹರಿದಿವೆ. ಈ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ವನ್ಯಜೀವಿ ಮತ್ತು ಮಾನವನ ಸಂಘರ್ಷ ಹೆಚ್ಚಿದೆ. ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಆಗಬೇಕಿದೆ, ಬಸ್ ಸಮಸ್ಯೆ ಹಾಗೂ ಭೂಮಿಯ ದುರಸ್ತು ಸಮಸ್ಯೆ ಸಾಕಷ್ಟಿದೆ. ಈ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಬೇಕೆಂದು ಸೂಚಿಸಿದರು.

255 ಮಂದಿಗೆ ಆದೇಶ ಪತ್ರವಿತರಣೆ
ಕಾರ್ಯಕ್ರಮದಲ್ಲಿ 127 ಆಧಾರ್ ಕಾರ್ಡ್, 100 ಮಂದಿಗೆ ಮಾಶಾಸನ ಆದೇಶಪತ್ರ, 20 ಮಂದಿಗೆ ಪಡಿತರ ಚೀಟಿ, 94 ಸಿ ಅಕ್ರಮ ಸಕ್ರಮ ಕಾರ್ಯಕ್ರಮದಡಿ ಇಬ್ಬರಿಗೆ ಸಕ್ರಮ ಮಂಜೂರಾತಿ ಆದೇಶಪತ್ರ ಹಾಗೂ ೬ ಮಂದಿಗೆ ಶೂನ್ಯಬ್ಯಾಲೆನ್ಸ್ನಡಿ ಬ್ಯಾಂಕ್ ಖಾತೆ ಆರಂಭದ ಆದೇಶಪತ್ರವನ್ನು ಗಣ್ಯರು ವಿತರಿಸಿದರು. ಇದಲ್ಲದೆ ಒಟ್ಟು 153 ಅರ್ಜಿಗಳು ದಾಖಲಾದವು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರುಚಿಬಿಂದಿಯಾ, ತಹಸೀಲ್ದಾರ್ ಡಾ.ಅಶೋಕ್, ಡಿಡಿಎಲ್‌ಆರ್ ಶ್ರೀಮಂತಿನಿ, ಇಓಮನು, ತಾ.ಪಂ.ಆಡಳಿತಾಧಿಕಾರಿ ನಂದ, ಕೃಷಿಇಲಾಖೆ ಜೆ.ಡಿ.ರುದ್ರೇಶ್, ಗ್ರಾ.ಪಂ.ಅಧ್ಯಕ್ಷ ಉದಯನ್, ಉಪಾಧ್ಯಕ್ಷೆ ಜವರಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next