ಮೈಸೂರು: ಮಾನಸಿಕ ಸಮಸ್ಯೆಯಿಂದ ಕಳೆದ ಎರಡು ವರ್ಷಗಳಿಂದ ಶಿಮ್ಲಾದ ಮಾನಸಿಕ ಆಸ್ಪತ್ರೆ ಸೇರಿದ್ದ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪದ್ಮಾರನ್ನು ಮೈಸೂರಿಗೆ ಕರೆತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಪತಿಯಿಂದ ಪರಿತ್ಯಕ್ತಳಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದ ಪದ್ಮಾ, ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಪತ್ತೆಯಾಗಿದ್ದರು.
ನಂತರ ಅವರನ್ನು ಅಲ್ಲಿನ ಮಾನಸಿಕ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಪದ್ಮಾ ಅವರು ಶಿಮ್ಲಾದಲ್ಲಿ ಸಿಲುಕಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಪದ್ಮಾ ಅವರನ್ನು ಶಿಮ್ಲಾದಿಂದ ಕರೆತರಲು ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದು,
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಪದ್ಮಾ ಅವರಿಗೆ ಬೀಳ್ಕೊಡುಗೆ ನೀಡಿದ್ದು, ಅಧಿಕಾರಿಗಳು, ವೈದ್ಯರ ತಂಡದೊಂದಿಗೆ ಬೆಂಗಳೂರಿಗೆ ಕಳುಹಿಸಿಕೊಡಲಾಗುತ್ತಿದೆ. ತಡರಾತ್ರಿ ಈ ತಂಡ ಮೈಸೂರು ತಲುಪುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಪದ್ಮಾರನ್ನು ಮೈಸೂರಿಗೆ ಕರೆತರುತ್ತಿರುವ ಮೈಸೂರು ಜಿಲ್ಲಾಡಳಿತದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಹಿಳೆಯನ್ನು ಆಸ್ಪತ್ರೆಯಲ್ಲಿ ಆರೈಕೆ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.
ಅಲ್ಲದೆ, ಮಹಿಳೆಯನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯವರ ಕಾಳಜಿಯನ್ನು ಶ್ಲಾ ಸಿದ್ದಾರೆ. ರಾಜ್ಯಕ್ಕೆ ಹಿಂತಿರುಗುತ್ತಿರುವ ಮಹಿಳೆಯನ್ನು ಭೇಟಿ ಮಾಡುವುದಾಗಿ ಹೇಳಿರುವ ಕುಮಾರಸ್ವಾಮಿ, ಮಹಿಳೆಯ ಮುಂದಿನ ಜೀವನಕ್ಕೆ ಅಗತ್ಯ ನೆರವು ನೀಡುವಂತೆ ಮೈಸೂರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ.