Advertisement
ಕಳೆದ ಹತ್ತು-ಹದಿನೈದು ದಿನಗಳಲ್ಲಿ ಪ್ರಮುಖ ಆಸ್ಪತ್ರೆಗಳಲ್ಲಿ ನಗರದಲ್ಲಿರುವ ಕೇರಳ ವಲಸಿಗರು ಅಥವಾ ಕೇರಳಕ್ಕೆ ಭೇಟಿ ನೀಡಿದವರು ರೋಗಿಗಳಾಗಿ ಚಿಕಿತ್ಸೆ ಪಡೆದವರ ಮಾಹಿತಿ ಸಂಗ್ರಹಿಸಬೇಕು. ಅಂತಹವರನ್ನು ಪ್ರತ್ಯೇಕವಾಗಿಟ್ಟು, ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ನಗರ ಜಿಲ್ಲಾಧಿಕಾರಿ ಕೆ. ದಯಾನಂದ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಈ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಮಾತ್ರವಲ್ಲದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶುಸಂಗೋಪನೆ, ಬಿಬಿಎಂಪಿ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರೋಗಿಗಳ ಪರೀಕ್ಷೆ, ಚಿಕಿತ್ಸೆ ಮತ್ತಿತರ ಕಾರಣಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಬೇಕಾಬಿಟ್ಟಿ ದರ ವಿಧಿಸುವಂತಿಲ್ಲ. “ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ’ ಜಾರಿಯಲ್ಲಿದ್ದು, ಈ ಮಸೂದೆಯ ಸೆಕ್ಷನ್ 10ರ ಪ್ರಕಾರ ಚಿಕಿತ್ಸೆಯ ದರಪಟ್ಟಿಯನ್ನು ರೋಗಿಗಳಿಗೆ ಕಾಣುವಂತೆ ಫಲಕಗಳಲ್ಲಿ ಹಾಕಿರಬೇಕು. ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಿದ್ದು ಕಂಡುಬಂದರೆ, ನಮಗೆ ದೂರು ಸಲ್ಲಿಸಬಹುದು.
ಅಂತಹ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಾಯವಾಣಿ 104ಕ್ಕೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬಹುದು ಎಂದೂ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಮೇಶ್‌ಬಾಬು, ಅಧಿಕಾರಿಗಳಾದ ಡಾ.ಷರೀಫ್, ಡಾ.ಮಹೇಶ್, ಉಲ್ಲಾಸ್ ಬಿ. ಗಂಗನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
4 ಡೆಂಘೀ, 3 ಚಿಕುನ್‌ಗುನ್ಯ ಪತ್ತೆ: ಸರ್ವೇಕ್ಷಣಾಧಿಕಾರಿ (ಸಾಂಕ್ರಾಮಿಕ ರೋಗಗಳ ವಿಭಾಗ) ಡಾ.ಟಿ.ಕೆ. ಸುನಂದ ಮಾತನಾಡಿ, ಸಾಂಕ್ರಾಮಿಕ ರೋಗ ಡೆಂಘೀ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ 12 ಶಂಕಿತ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ನಾಲ್ಕು ಪ್ರಕರಣಗಳು ದೃಢಪಟ್ಟಿವೆ.
ಇದೇ ಅವಧಿಯಲ್ಲಿ 3 ಚಿಕುನ್‌ಗುನ್ಯ ಪ್ರಕರಣಗಳು ಕೂಡ ದೃಢಪಟ್ಟಿವೆ. ಡೆಂಘೀ ನಿಯಂತ್ರಣದಲ್ಲಿ ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶಗೊಳಿಸುವುದೇ ಮೂಲಮಂತ್ರವಾಗಿದ್ದು, ಆರೋಗ್ಯ ಸಹಾಯಕರು ನಿತ್ಯ 60 ಮನೆಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುತ್ತಾರೆ. ಕಳೆದ ನಾಲ್ಕು ತಿಂಗಳಲ್ಲಿ 5.57 ಲಕ್ಷ ಮನೆಗಳಿಗೆ ಭೇಟಿ ನೀಡಿದ್ದು, 11.58 ಲಕ್ಷ ನೀರಿನ ಸಂಗ್ರಹಾಗಾರಗಳಲ್ಲಿ ಈಡಿಸ್ ಲಾರ್ವಾ ಕಂಡುಬಂದಿದೆ ಎಂದು ಮಾಹಿತಿ ನೀಡಿದರು.