Advertisement

ಅಶಕ್ತನಾದರೂ ಸಶಕ್ತ ಈ ಸಂಜೀವ- ಸಜ್ಜೀವ

06:28 PM Apr 09, 2022 | Team Udayavani |
ರಾಜ್ಯಪಾಲರೇ ಮೊದಲಾದವರಿಗೆ ದೂರು ಸಲ್ಲಿಸಿದರು. ಶೋಭಾ ಕರಂದ್ಲಾಜೆಯವರು ಸ್ಥಳಕ್ಕೆ ಬಂದು ಮುಖ್ಯಮಂತ್ರಿಗಳ ಸಭೆ ನಡೆಸಿದ್ದರು. 231 ಕುಟುಂಬಗಳಿಗೆ ತಲಾ 50,000 ರೂ. ಪರಿಹಾರ ಸಿಕ್ಕಿತ್ತು. 2005ರಲ್ಲಿ ಮಾಹಿತಿ ಹಕ್ಕು ಕಾಯಿದೆ ಬಂತು. 2009ರಲ್ಲಿ ಎಲ್ಲೆಲ್ಲಿ ಕೆಸಿಡಿಸಿಯವರು ಎಂಡೋಸಲ್ಫಾನ್‌ ದ್ರಾವಣವನ್ನು ಸಿಂಪಡಿಸಿದ್ದಾರೆಂದು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದರು. ಆಗ 92 ಗ್ರಾಮಗಳಲ್ಲಿ ದ್ರಾವಣ ಸಿಂಪಡಿಸಿದ್ದಾರೆಂದು ಗೊತ್ತಾಯಿತು. 1980ರಲ್ಲಿಯೇ ಪತ್ರಿಕಾ ಪ್ರಕಟನೆ ನೀಡಿ ಸಿಂಪಡಿಸಿದ 10 ದಿನಗಳ ಕಾಲ ಆ ಗೇರು ತೋಟಕ್ಕೆ ಹೋಗಬಾರದೆಂದು ಕಂಪೆನಿ ತಿಳಿಸಿತ್ತು ಎನ್ನುವುದನ್ನು ಸಂಜೀವ ತಿಳಿದುಕೊಂಡರು. ಒಂದು ಸಮಸ್ಯೆ ಕುರಿತು ಇಷ್ಟು ಆಳಕ್ಕೆ ಹೋಗಬೇಕಾದರೆ..
Now pay only for what you want!
This is Premium Content
Click to unlock
Pay with

ತೊಂದರೆ ಉಂಟುಮಾಡುವವರು, ಭ್ರಷ್ಟಾಚಾರಿಗಳು, ಭಯೋತ್ಪಾದಕರಾಗುವವರಲ್ಲಿ ಬಹುತೇಕರು ಶಿಕ್ಷಿತ ವರ್ಗದವರೇ, ಉತ್ತಮ ಕೆಲಸ ಮಾಡುವವರಲ್ಲಿಯೂ ಬಹುತೇಕರು ಶಿಕ್ಷಿತರೇ. ಕೂಲಿ ಮಾಡುವ ವ್ಯಕ್ತಿಯೊಬ್ಬ ಲಾಭದ ನಿರೀಕ್ಷೆ ಇಲ್ಲದೆ ಸಮಾಜ ಸೇವೆ ಮಾಡಿದರೆ ಆತನನ್ನು ಏನೆನ್ನಬೇಕು? ಆದ್ದರಿಂದಲೇ ಈ ಸಂಜೀವ ಸಜ್ಜೀವ…

Advertisement

ಬ್ಯೂರೋಕ್ರಸಿ ಹಿಂದೆ ಹೋದಾಗ

ಸಂಜೀವ ಕಬಕ ಓದಿದ್ದು ಕೇವಲ ಆರನೆಯ ತರಗತಿ, ಪರಿಹರಿಸಿದ ಪ್ರಕರಣಗಳ ಸಂಖ್ಯೆ ಸಾವಿರಾರು. 1990ರ ದಶಕದ ಆರಂಭದಲ್ಲಿ ಜೀವನೋಪಾಯಕ್ಕಾಗಿ ಸಿಮೆಂಟ್‌ ಕಾಂಕ್ರೀಟ್‌ನಿಂದ ಸಿದ್ಧ ವಸ್ತುಗಳನ್ನು ತಯಾರಿಸುವ (ಕಾಂಕುಡ್‌) ಕೆಲಸ ಆರಂಭಿಸಿದರು. ಮಂಗಳೂರಿನಲ್ಲಿ  ಕೆಲಸ ಮಾಡುತ್ತಿದ್ದ ಅವರು 1994-95ರಲ್ಲಿ ಉಪ್ಪಿನಂಗಡಿಗೆ ಬಂದರು. ಸ್ವಂತ ಉದ್ಯಮ ಆರಂಭಿಸುವವರಿಗೆ ಸರಕಾರದಿಂದ ಜಾಗ ಕೊಡುವ ಪ್ರಸ್ತಾವನೆ ಇತ್ತು. ಹಿರೇಬಂಡಾಡಿಯಲ್ಲಿ ಸರಕಾರದ ಜಾಗವಿದೆ ಎಂದು ತಿಳಿದು ಅರ್ಜಿ ಹಾಕಿದರು. ಸರಕಾರಿ ಕಚೇರಿ ಅದರಲ್ಲೂ ಕಂದಾಯ ಇಲಾಖೆ ಅಂದರೆ ಕೇಳಬೇಕೆ? ವಿಲೇಜ್‌ ಅಕೌಂಟೆಂಟ್‌ರಿಂದ ರೆವೆನ್ಯೂ ಇನ್‌ಸ್ಪೆಕ್ಟರ್‌, ಅಲ್ಲಿಂದ ತಹಶೀಲ್ದಾರ್‌, ಮತ್ತೆ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿಯಿಂದ ವಿಧಾನಸೌಧ, ವಾಪಸು ಅದೇ ಮಾರ್ಗದಲ್ಲಿ ಚಲನೆ, ಒಂದೊಂದು ಕೊಕ್ಕೆಗೂ ಮತ್ತೆ ಅಷ್ಟೇ ಅಲೆದಾಟ. ಇದೇನೂ ಮುಗಿಯದ ಕಥೆಯಲ್ಲ ಎಂದು ತಿಳಿಯುವಾಗ ಮೂರ್‍ನಾಲ್ಕು ವರ್ಷ ಹಿಡಿಯಿತು. 1996-97ರಲ್ಲಿ ಬಳಕೆದಾರರ ವೇದಿಕೆಯಲ್ಲಿ ಸಕ್ರಿಯರಾಗಿದ್ದ ಉಡುಪಿಯ ಡಾ|ರವೀಂದ್ರನಾಥ ಶ್ಯಾನುಭಾಗ್‌ ಮತ್ತು ಕೃಷ್ಣ ಬಳೇಗಾರ್‌ ಅವರನ್ನು ಸಂಪರ್ಕಿಸಿದರು. ಆಗ ಬಳೇಗಾರ್‌ ಮಾಸ್ಟ್ರೆ ಹೇಳಿದ್ದಿಷ್ಟು: “ನಿನಗೆ ತಿಳಿದಂತೆ ಬರೆದುಕೊಡು. ಅರ್ಜಿಯ ಪ್ರತಿಯನ್ನು ನಮಗೂ ಕಳುಹಿಸು’. ಶ್ಯಾನುಭಾಗ್‌ ಮತ್ತು ಬಳೇಗಾರ್‌ ಮಾಸ್ಟ್ರೆ ಅವರ ಒಂದೊಂದೆ ಪತ್ರದ ಬಾಣದಿಂದ 2000ರಲ್ಲಿ ಜಾಗ ಮಂಜೂರಾಯಿತು. ಆ ಹೊತ್ತಿಗೆ ಸಂಜೀವ ಅಲೆದಲೆದು ಸಂಪೂರ್ಣ ದಿವಾಳಿಯಾಗಿದ್ದರು. ಈಗಲೂ ಅದೇ ವೃತ್ತಿಯನ್ನು ಪುತ್ತೂರು ತಾಲೂಕಿನ ಕಬಕದಲ್ಲಿ ನಡೆಸುತ್ತಿದ್ದಾರೆ. ಸ್ವಂತ ಉದ್ಯಮದ ಪ್ರಯತ್ನ ಆರಂಭಿಸುವಾಗ 25ರ ಯವ್ವನವಾದರೆ, ಈಗ 55ರ ವಯಸ್ಸು. ಈ ಅನುಭವ ಮಾತ್ರ ತೊಂದರೆಯಲ್ಲಿ ಸಿಲುಕಿದ ಇತರರಿಗೆ ನೆರವಾಗಲು ಧೈರ್ಯ, ಸ್ಥೈರ್ಯ ಕೊಟ್ಟಿತು.

ಶ್ಯಾನುಭಾಗ್‌ ಥಿಯರಿ

ಸಮಸ್ಯೆ ಇದಿರಾದಾಗ ನಮ್ಮ ತಲೆಗೆ ಹೊಳೆಯುವ ಮಾರ್ಗ “ದೊಡ್ಡವರಿಗೆ’ ಇನ್‌ಫ್ಲೂಯೆನ್ಸ್‌ ಮಾಡುವುದು. ಡಾ|ಶ್ಯಾನುಭಾಗರ ಮಾರ್ಗ ಇದಲ್ಲ. ಸಂತ್ರಸ್ತನೇ ಆಕ್ಷೇಪಣೆ ಸಲ್ಲಿಸಬೇಕು, ಇವರಿಗೆ ಮಾರ್ಗದರ್ಶನ ಕೊಡುವುದು ಮಾತ್ರ ಶ್ಯಾನುಭಾಗರ ಪಾತ್ರ. ಸಂಜೀವರ ಮೊದಲ ಹೋರಾಟದ ಅನುಭವ ಕಬಕದ ಬಳಿ ಗಣಿಗಾರಿಕೆಯಲ್ಲಿ ಸಿಲುಕಿದವರಿಗೆ ಮಾರ್ಗದರ್ಶನ ಕೊಟ್ಟದ್ದು. ಸಂಜೀವರೂ ಗಣಿಗಾರಿಕೆಯ ಸಂತ್ರಸ್ತರಿಗೆ ಇದೇ ಮಾರ್ಗಸೂಚಿ ಅನುಸರಿಸಿದರು. ಕ್ರಮೇಣ ಪುತ್ತೂರು ಆಸುಪಾಸಿನವರಿಗೆ ನೆರವಾಗಲು ಶ್ಯಾನುಭಾಗರ ಮಾರ್ಗದರ್ಶನದಂತೆ ಡಾ|ನಿತ್ಯಾನಂದ ಪೈ, ಸುರೇಂದ್ರ ಕಿಣಿ, ಎಸ್‌.ಎನ್‌.ಭಟ್‌ರಂತಹವರನ್ನು ಸೇರಿಸಿಕೊಂಡು ಪುತ್ತೂರಿನಲ್ಲಿ ಗ್ರಾಹಕ ಹಿತರಕ್ಷಣ ವೇದಿಕೆ ಸಿದ್ಧಗೊಂಡಿತು.

Advertisement

ಅನುಭವದ ಜ್ಞಾನೋದಯ

ಅನುಭವ ಬಲಿತಂತೆ “ನಾವು ಅಧಿಕಾರಿಗಳ ಬಳಿ ಭಿಕ್ಷೆ ಬೇಡುವ ಅಗತ್ಯವಿಲ್ಲ, ಕುಳಿತಲ್ಲಿಂದಲೇ ನ್ಯಾಯವನ್ನು ಪಡೆದುಕೊಳ್ಳಬಹುದು’ ಎಂದು ಸಂಜೀವರಿಗೆ ಜ್ಞಾನೋದಯವಾಯಿತು. ಆಗ ಎಂಡೋಸಲ್ಫಾನ್‌ ತೊಂದರೆ ಶುರುವಾಗಿತ್ತು. ಎಂಡೋ ದುರಂತದಿಂದ ಕಣ್ಣು ಕಳೆದುಕೊಂಡು ಶಿಕ್ಷಕನಾಗಬೇಕೆಂಬ ಹಂಬಲದಿಂದ ದೂರ ಉಳಿಯಬೇಕಾಗಿ ಬಂದರೂ ಶ್ರೀಧರ ಗೌಡರು ಮಾಡಿದ ಹೋರಾಟ ಸಂಜೀವರಿಗೆ ಪ್ರೇರಣೆಯಾಯಿತು. ಆರಂಭದಲ್ಲಿ ಎಂಡೋ ಸಮಸ್ಯೆ ಇದ್ದುದು ಕೊಕ್ಕಡ, ಪಟ್ರಮೆ, ನಿಡ್ಲೆಯಲ್ಲಿ ಮಾತ್ರ. ಆಗ ಸಂಜೀವರು ಮಾನವ ಹಕ್ಕು ಆಯೋಗ, ರಾಜ್ಯಪಾಲರೇ ಮೊದಲಾದವರಿಗೆ ದೂರು ಸಲ್ಲಿಸಿದರು. ಶೋಭಾ ಕರಂದ್ಲಾಜೆಯವರು ಸ್ಥಳಕ್ಕೆ ಬಂದು ಮುಖ್ಯಮಂತ್ರಿಗಳ ಸಭೆ ನಡೆಸಿದ್ದರು. 231 ಕುಟುಂಬಗಳಿಗೆ ತಲಾ 50,000 ರೂ. ಪರಿಹಾರ ಸಿಕ್ಕಿತ್ತು. 2005ರಲ್ಲಿ ಮಾಹಿತಿ ಹಕ್ಕು ಕಾಯಿದೆ ಬಂತು. 2009ರಲ್ಲಿ ಎಲ್ಲೆಲ್ಲಿ ಕೆಸಿಡಿಸಿಯವರು ಎಂಡೋಸಲ್ಫಾನ್‌ ದ್ರಾವಣವನ್ನು ಸಿಂಪಡಿಸಿದ್ದಾರೆಂದು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದರು. ಆಗ 92 ಗ್ರಾಮಗಳಲ್ಲಿ ದ್ರಾವಣ ಸಿಂಪಡಿಸಿದ್ದಾರೆಂದು ಗೊತ್ತಾಯಿತು. 1980ರಲ್ಲಿಯೇ ಪತ್ರಿಕಾ ಪ್ರಕಟನೆ ನೀಡಿ ಸಿಂಪಡಿಸಿದ 10 ದಿನಗಳ ಕಾಲ ಆ ಗೇರು ತೋಟಕ್ಕೆ ಹೋಗಬಾರದೆಂದು ಕಂಪೆನಿ ತಿಳಿಸಿತ್ತು ಎನ್ನುವುದನ್ನು ಸಂಜೀವ ತಿಳಿದುಕೊಂಡರು. ಒಂದು ಸಮಸ್ಯೆ ಕುರಿತು ಇಷ್ಟು ಆಳಕ್ಕೆ ಹೋಗಬೇಕಾದರೆ ಅದು ಪರಿಶ್ರಮವನ್ನು ಬೇಡುತ್ತದೆ ಎಂಬ ನೀತಿ ನಮಗೆ ಸಿಗುತ್ತದೆ.

ಸಿರಿವಂತರಿಗೂ ಬಡವನ ನೆರವು

ವೈವಾಹಿಕ ಸಮಸ್ಯೆಯೂ ಸೇರಿದಂತೆ ಸಿರಿವಂತರೂ ಸಂತ್ರಸ್ತರಾದ ಸಾವಿರಾರು ಪ್ರಕರಣಗಳಿಗೆ   ಸಂಜೀವರು ಒಂದು ತಾರ್ಕಿಕ ಅಂತ್ಯ ಕಾಣಿಸಿದ್ದಾರೆ. ಎಂಟೆಕ್‌ ಓದಿದ ಬೆಳಗಾವಿ ಜಿಲ್ಲೆಯ ಯುವತಿಯೊಬ್ಬಳು ದ.ಕ. ಜಿಲ್ಲೆಯ ಯುವಕನೊಬ್ಬನ ಪ್ರೇಮ ಪಾಶಕ್ಕೆ ಸಿಲುಕಿ ಜೀವವನ್ನೇ ಬಲಿ ತೆಗೆದುಕೊಳ್ಳಲು ಹೊರಟ ಪ್ರಕರಣವೂ ಸೇರಿದಂತೆ ಅದೆಷ್ಟೋ ಜೀವಗಳನ್ನು ಉಳಿಸಿದ (ಪುಣ್ಯ)ಕೀರ್ತಿ ಆರ್ಥಿಕ-ಶೈಕ್ಷಣಿಕ “ಬಡ’ ಸಂಜೀವರ ಖಾತೆಯಲ್ಲಿದೆ. ಸಂಜೀವರು ಹೇಳುವ ಪ್ರಕಾರ ಎಲ್ಲರಿಗೂ ಇದು ಸಾಧ್ಯ. ಸಂಜೀವರ ಸಾಮರ್ಥ್ಯವೇ ಇಷ್ಟಿದ್ದರೆ, ಗುರು ಡಾ|ರವೀಂದ್ರನಾಥ ಶ್ಯಾನುಭಾಗರ ಸಾಮರ್ಥ್ಯ ಎಷ್ಟಿರಬೇಡ? ಆದರೆ ಶ್ಯಾನುಭಾಗರು ಹೇಳುವುದಿಷ್ಟು: “ನಮಗಾದರೂ ಜೀವನದ ಭದ್ರತೆ ಇದೆ. ಆತನಿಗೆ ಆ ದಿನ ದುಡಿದರೆ ಉಂಟು, ನಾಳೆಯ ಭದ್ರತೆ ಏನೂ ಇಲ್ಲ. ಆತ ಇಷ್ಟು ಮಾಡಿದ್ದು ದೊಡ್ಡದು’.

ಆಗ ಬಿಸಿರಕ್ತವಿತ್ತು. ಬೆಳಗ್ಗೆ, ಸಂಜೆ ಹೊತ್ತು ಸಮಯ ಬಿಡುವು ಮಾಡಿಕೊಂಡು ಜನರ ಕೆಲಸ ಮಾಡುತ್ತಿದ್ದೆ. ನನಗೇನೂ ಸ್ವಾರ್ಥವಿಲ್ಲ, ಪ್ರಚಾರವೂ ಬೇಡ. ನನ್ನಂತಹವರು ಬೆಳೆದದ್ದು ಶ್ಯಾನುಭೋಗ್‌ ಸರ್‌ ಅವರಿಂದ. ಸೂಕ್ತ ಕಚೇರಿಗೆ ದೂರು ಸಲ್ಲಿಸುವುದು, ಬೇಕಾದ ದಾಖಲೆಗಳನ್ನು ಸಿದ್ಧಪಡಿಸುವುದು, ಸಂತ್ರಸ್ತನೇ ದೂರು ಸಲ್ಲಿಸುವುದೇ ಮೊದಲಾದ ಕ್ರಮಗಳಿಂದ ಶೇ.100 ಪರಿಹಾರ ಸಾಧ್ಯ. ಇದರ ಬಗ್ಗೆ ಜನರಿಗೆ ತಿಳಿವಳಿಕೆ ಇಲ್ಲ. ನಾವು ಕೇವಲ ಪತ್ರ ವ್ಯವಹಾರದಲ್ಲಿಯೇ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಮುಖ್ಯವಾಗಿ ಅನ್ಯಾಯದ ವಿರುದ್ಧ ಪ್ರಶ್ನೆ ಮಾಡಲೇಬೇಕು. ಶ್ಯಾನುಭೋಗರು ದಾರಿ ತೋರಿಸದೆ ಇದ್ದರೆ ನಾವು ಬೆಳೆಯುತ್ತಿರಲಿಲ್ಲ. ಆದ್ದರಿಂದ ನಾನು ಬಯಸುವುದಿಷ್ಟೆ ಇತರರಿಗೆ ಸ್ಫೂರ್ತಿಯಾಗಬೇಕು.

– ಸಂಜೀವ ಕಬಕ, ಸಾಮಾಜಿಕ ಕಾರ್ಯಕರ್ತ

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.