ಹುನಗುಂದ: ಸೊಲ್ಲಾಪುರ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 50ರ ಸಂಗಮ ಕ್ರಾಸ್ ಮತ್ತು ಬೆಳಗಲ್ಲ ಕ್ರಾಸ್ ಮಧ್ಯ ಇರುವ ಹಳೆಯ ಬ್ರಿಜ್ ಶಿಥಿಲಗೊಂಡಿದೆ. ಬ್ರಿಜ್ ದುರಸ್ತಿಗಾಗಿ ಒಂದು ರಸ್ತೆ ಬಂದ್ ಮಾಡಿ, ಒನ್ ವೇ ವ್ಯವಸ್ಥೆ ಮಾಡಿದ್ದರಿಂದ ಸದ್ಯ ರಾಷ್ಟ್ರೀಯ ಹೆದ್ದಾರಿ ಅಪಘಾತಕ್ಕೆ ಆಹ್ವಾನಿಸುವಂತಿದೆ.
ಹೌದು. ಕಳೆದ 40 ವರ್ಷಗಳ ಹಿಂದೆ ನಿರ್ಮಾಣಗೊಂಡ ಬೆಳಗಲ್ಲ ಮತ್ತು ಸಂಗಮ ಕ್ರಾಸ್ ಮಧ್ಯದ ಸೇತುವೆ ಶಿಥಿಲಗೊಂಡಿದ್ದು. ನಾಮಕಾವಸ್ತೆ ದುರಸ್ತಿ ಮಾಡಲಾಗುತ್ತಿದೆ. ನಿತ್ಯ ಈ ಮಾರ್ಗವಾಗಿ ಬಾರಿ ಪ್ರಮಾಣದ ವಾಹನಗಳು ಸಂಚರಿಸುತ್ತಿದ್ದು, ಹೆದ್ದಾರಿ ಪ್ರಾಧಿ ಕಾರದವರು ದುರಸ್ತಿಗೆ ತೆಪೆ ಹಚ್ಚುತ್ತಿರುವುದರಿಂದ ರಸ್ತೆ ಮತ್ತೇ ಕಿತ್ತು ಹೋಗಿದೆ. ಇದರಿಂದ ಬ್ರಿಜ್‌ನ ಮಧ್ಯೆ ತಗ್ಗು-ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ಸಂಚಕಾರ ಉಂಟು ಮಾಡುತ್ತಿದೆ. ಹಲವು ಬಾರಿ ದುರಸ್ತಿಗೊಳಿಸಿದರೂ ಸಹ ಪ್ರಯೋಜನ ಆಗಿಲ್ಲ. ದುರಸ್ತಿ ಕಾರ್ಯ ಮಾಡಿದಾಗಲೊಮ್ಮೆ ಒಂದು ಬದಿಯ ರಸ್ತೆ ಬಂದ್ ಮಾಡುತ್ತಿರುವುದರಿಂದ ಹಲವಾರು ಅಪಘಾತಗಳು ಸಂಭವಿಸಿವೆ. ಇದರಿಂದ ಈ ಮಾರ್ಗವಾಗಿ ಸಂಚರಿಸುವ ಲಘು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಎರ್ರಾಬಿರ್ರಿ ವಾಹನಗಳ ಓಡಾಟ- ಕ್ರಾಸ್ ದಾಟಲು ವಾಹನಗಳ ಸವಾರ ಪರದಾಟ: ಚತುಷ್ಪಥದ ರಸ್ತೆ ನಿರ್ಮಾಣಗೊಂಡ ಬಳಿಕ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಹಸ್ರಾರು ವಾಹನಗಳು ರಸ್ತೆ ಸಂಚಾರದ ನಿಯಮ ಗಾಳಿಗೆ ತೂರಿ ಎರ್ರಾಬಿರ್ರಿಯಾಗಿ ವಾಹನಗಳ ಓಡಾಟ ನಡೆಯುತ್ತಿದೆ. ಇದರಿಂದ ಸೊಲ್ಲಾಪುರದಿಂದ ಹೊಸಪೇಟೆವರೆಗೆ ನೂರಾರು ಗ್ರಾಮೀಣ ಭಾಗಗಳಿಗೆ ಹೋಗುವ ಕ್ರಾಸ್‌ಗಳಿವೆ. ಅವುಗಳನ್ನು ಲೆಕ್ಕಿಸದೇ ಬಾರಿ ಪ್ರಮಾಣದ ವಾಹನಗಳ ಓಡಾಟದಿಂದ ನಿತ್ಯ ಈ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅದರಲ್ಲೂ ಸಂಗಮ ಕ್ರಾಸ್ ಮತ್ತು ಬೆಳಗಲ್ಲ ಕ್ರಾಸ್ ಈ ಎರಡು ಪ್ರದೇಶದಲ್ಲಿ ಸಾಕಷ್ಟು ಅಪಘಾತ ಸಂಭವಿಸಿ ಮೃತ್ಯುಕೂಪವನ್ನೇ ಸೃಷ್ಟಿಸುವಂತಿದ್ದು, ಕ್ರಾಸ್ ದಾಟಲು ವಾಹನ ಸವಾರರು ಜೀವ ಭಯದಲ್ಲಿ ದಾಟುವ ಸ್ಥಿತಿ ಇದೆ.
ಚತುಷ್ಪಥ ರಸ್ತೆ ನಿರ್ಮಾಣದ ಬಳಿಕವೂ ಅಪಘಾತ ನಿಂತಿಲ್ಲ: ಕಳೆದ 2013-14ರಲ್ಲಿ ದ್ವಿಪಥ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಚತುಷ್ಪಥ ರಸ್ತೆಯನ್ನಾಗಿ ನಿರ್ಮಾಣ ಮಾಡಲಾಗಿದೆ. ಈ ಮೊದಲು ದ್ವಿಪಥ ರಸ್ತೆ ಇದ್ದಾಗ ಸಂಗಮ ಕ್ರಾಸ್ ಮತ್ತು ಬೆಳಗಲ್ಲ ಕ್ರಾಸ್ ಬಳಿ ನಿತ್ಯ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದವು. ಆದರೆ, ಇದಕ್ಕೆ ಬ್ರೇಕ್ ಹಾಕಿ ಅಪಘಾತ ಕಡಿಮೆ ಮಾಡಿ, ಸುರಕ್ಷಿತ ಚತುಷ್ಪಥ ರಸ್ತೆ ನಿರ್ಮಿಸಿದರೂ ಸಹ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಮೂರರಿಂದ ಆರು ತಿಂಗಳಿಗೊಮ್ಮೆ ಬೆಳಗಲ್ಲ ಬ್ರಿಜ್ ದುರಸ್ತಿ ಸಂಬಂಧ ಒಂದು ಕಡೆಯ ರಸ್ತೆ ಬಂದ್ ಮಾಡುತ್ತಿರುವುದರಿಂದ ಮತ್ತಷ್ಟು ಅಪಘಾತ ಸಂಭವಿಸುತ್ತಿವೆ ಎನ್ನುತ್ತಾರೆ ಸಾರ್ವಜನಿಕರು.
ವಿದ್ಯುತ್ ದೀಪವಿಲ್ಲದೇ ಕಗ್ಗತ್ತಲಾದ ಕ್ರಾಸ್‌ಗಳು: ಹೆದ್ದಾರಿಯಲ್ಲಿ ಬರುವ ಕ್ರಾಸ್‌ಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದೇ ಕತ್ತಲಿನಲ್ಲಿಯೇ ಕ್ರಾಸ್ ದಾಟಲು ಹೋಗಿ ಅದೆಷ್ಟೋ ಸಣ್ಣ ಸಣ್ಣ ವಾಹನ ಸವಾರ ಮೃತಪಟ್ಟ ಘಟನೆ ಈ ಹೆದ್ದಾರಿಯಲ್ಲಿ ನಡೆದಿವೆ. ಸೇತುವೆ ದುರಸ್ತಿಗಾಗಿ ಚತುಷ್ಪಥ ರಸ್ತೆ ಒಂದು ಕಡೆಯ ರಸ್ತೆ ಬಂದ್ ಮಾಡುವುದರಿಂದ ಒನ್ ವೇ ಆಗಿ ಎಲ್ಲಿ ಅಪಘಾತವಾಗುತ್ತದೇ ಎನ್ನುವ ಜೀವ ಭಯದಲ್ಲಿ ದ್ವಿಚಕ್ರ ವಾಹನ ಮತ್ತು ಲಘು ವಾಹನ ಸವಾರರು ಸಂಚಾರ ಮಾಡುವಂತಾಗಿದೆ.