Advertisement

ದೇಶದಲ್ಲೇ ರಾಜ್ಯದ ಘನತೆ ಹೆಚ್ಚಿತ್ತು, ಆದರೆ ಬಿಜೆಪಿ…. : ಎಂ.ಬಿ.ಪಾಟೀಲ್ ಕಿಡಿ

03:28 PM Sep 12, 2022 | Team Udayavani |

ವಿಜಯಪುರ: ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಅವರಂಥ ಮುಖ್ಯಮಂತ್ರಿಗಳ ಅವಧಿಯಲ್ಲಿ ದೇಶದಲ್ಲೇ ರಾಜ್ಯದ ಘನತೆ ಹೆಚ್ಚಿತ್ತು. ಆದರೆ ಬಿಜೆಪಿ ಹಾಲಿ ರಾಜ್ಯ ಸರ್ಕಾರದ ಕಮಿಷನ್ ದಂಧೆಯಿಂದ ಕರ್ನಾಟಕದ ಘನತೆಗೆ ಚ್ಯುತಿ ಬಂದಿದೆ. ಆದಷ್ಟು ಶೀಘ್ರವಾಗಿ ರಾಜ್ಯದ ಮತದಾರ ಈ ಕೆಟ್ಟ ಸರ್ಕಾರವನ್ನು ಕಿತ್ತು ಎಸೆಯಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೋಮವಾರ ಕಿಡಿಕಾರಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ”ರಾಜ್ಯದಲ್ಲಿ ಶೇ.40 ಕಮಿಷನ್ ಸರ್ಕಾರ ಇದ್ದು, ಬಿಬಿಎಂಪಿ ವ್ಯವಸ್ಥೆಯಲ್ಲಿ ಇದು ಶೇ. 50 ರಷ್ಟಿದೆ ಎಂದು ಗುತ್ತಿಗೆದಾರರು ಸ್ವಯಂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇನ್ನು ಶಾಸಕರು ಪಿಎಸ್ಐ ನೇಮಕಾತಿ ವಿಷಯಕ್ಕೆ ಹಣ ಪಡೆಯುವುದು ಅವರ ಮಟ್ಟಿಗೆ ದೊಡ್ಡದೇನಲ್ಲಎಂದು ಕನಕಗಿರಿ ಶಾಸಕ ದಡೇಸಗೂರು ಲಂಚದ ಹಗರಣದ ಪ್ರಕರಣ ಪ್ರಸ್ತಾಪಿಸಿದರು. ಪಿಎಸ್ಐ ನೇಮಕಾತಿ ಹಗರಣ ಮಾತ್ರವಲ್ಲ ಇನ್ನೂ ಹಲವು ಇಲಾಖೆಯ ಭ್ರಷ್ಟಾಚಾರದ ಹಗರಣ ಹೊರ ಬರುತ್ತಿವೆ. ಯಾರೋ ಕೆಲವರು ಮಾಡಿದ ತಪ್ಪಿನಿಂದ ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಎದುರಿಸಿದ ಅರ್ಹರಿಗೆ ಅನ್ಯಾಯ ಆಗದಂತೆ ತ್ವರಿತವಾಗಿ ತನಿಖೆ ಪೂರ್ಣಗೊಳಿಸಿ ಸರ್ಕಾರ ಕೂಡಲೇ ನೇಮಕ ಪ್ರಕ್ರಿಯೆ ಮುಗಿಸಬೇಕು” ಎಂದು ಆಗ್ರಹಿಸಿದರು.

”ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಹಗುರವಾಗಿ ಮಾತನಾಡಿರುವುದು ಮಾಧ್ಯಮಗಳಿಂದ ನನ್ನ ಗಮನಕ್ಕೆ ಬಂದಿದೆ. ಸಿ.ಟಿ.ರವಿ ಕೂಡಲೇ ನಾಡಿನ‌ ಜನತೆ ಮುಂದೆ ಸಿದ್ದರಾಮಯ್ಯ ಅವರ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದರು.

”ತಮ್ಮ ಬಳಿ = ಬಿಜೆಪಿ ಭ್ರಷ್ಟಾಚಾರದ ದಾಖಲೆಗಳಿದ್ದು, ಬಿಡುಗಡೆ ಮಾಡಲು ಕಾಂಗ್ರೆಸ್ ಸಹಕಾರ ಬೇಕು ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ವಿಶ್ವಾಸಾರ್ಹವಲ್ಲ. ರಾಜ್ಯದ ವಿಧಾನಸಭೆ ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುತ್ತಾರೆ. ಮತ್ತೊಂದೆಡೆ ಅಧಿಕಾರಕ್ಕಾಗಿ ಮೈಸೂರಿನಲ್ಲಿ ಬಿಜೆಪಿ ಜತೆ ಕೈ ಜೋಡಿಸುತ್ತಾರೆ. ಹೀಗಾಗಿ ಅಧಿಕಾರಕ್ಕಾಗಿ ಅನುಕೂಲ ಸಿಂಧು ರಾಜಕೀಯ ಮಾಡುವ ಜೆಡಿಎಸ್ ರಾಜಕೀಯ ವಿಶ್ವಾಸಾರ್ಹವಲ್ಲ” ಎಂದು ಕುಟುಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next