Advertisement

ಘನತೆ, ಗಾಂಭೀರ್ಯದ ಲಾಲ್‌ ಕೃಷ್ಣ ಆಡ್ವಾಣಿ

03:05 PM Mar 15, 2018 | Team Udayavani |

ಮಂಗಳೂರು ಮತ್ತು ಉಡುಪಿ ಕೇಂದ್ರಗಳಾಗಿ ಕರ್ನಾಟಕ ಕರಾವಳಿ ಬಗ್ಗೆ ವಿಶೇಷ ಅಭಿಮಾನ ಹೊಂದಿದವರು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿ. ಭಾರತೀಯ ಜನಸಂಘದ ಕಾಲದಿಂದಲೇ ಅವರು ಕರಾವಳಿಗೆ ಆಗಮಿಸುತ್ತಿದ್ದವರು. ಈ ಪ್ರದೇಶದ ಸಮಗ್ರ ಮಾಹಿತಿ ಹೊಂದಿದ್ದರು. ಇಲ್ಲಿನ ಜನಸಂಘ- ಆ ಬಳಿಕ ಜನತಾ ಪಕ್ಷ- ಆ ಬಳಿಕ ಬಿಜೆಪಿಯ ನಾಯಕರೊಂದಿಗೆ ವೈಯಕ್ತಿಕವಾದ ಆತ್ಮೀಯತೆ ಹೊಂದಿದವರು ಅವರು.

Advertisement

ಚುನಾವಣೆಗಳ ಸಂದರ್ಭ ಅವರು ಚುನಾವಣಾ ಪ್ರಚಾರ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ವೇದಿಕೆ ಮೇಲಿನಿಂದ ಅಭ್ಯರ್ಥಿಗಳನ್ನು ಜನರಿಗೆ ಒಬ್ಬೊಬ್ಬರನ್ನಾಗಿ ಪರಿಚಯಿಸುತ್ತಿದ್ದರು. ಆರೆಸ್ಸೆಸ್‌ ಜತೆ ನಿಕಟ ಬಾಂಧವ್ಯ ಹೊಂದಿದ್ದವರಾದ್ದರಿಂದ ಈ ಪ್ರದೇಶದ ಬಗ್ಗೆ ಸಹಜವಾಗಿಯೇ ಅವರಲ್ಲಿ ಪ್ರೀತಿ ವಿಶ್ವಾಸ ತುಂಬಿತ್ತು.

ಆಡ್ವಾಣಿ ಅವರದ್ದು ಗಂಭೀರ ವ್ಯಕ್ತಿತ್ವ. ಚಿಂತನೆಗಳ ಜತೆ ಎಂದೂ ರಾಜಿ ಮಾಡಿಕೊಂಡವರಲ್ಲ. ಪ್ರಮುಖ ಎದುರಾಳಿ ಕಾಂಗ್ರೆಸ್‌ ಬಗ್ಗೆ ನೇರವಾಗಿ ಟೀಕಿಸುತ್ತಿದ್ದರು. ಆ ಕಾಲಕ್ಕೆ ಇಂದಿರಾಗಾಂಧಿಯವರ ಪ್ರಮುಖ ಟೀಕಾಕಾರರಾಗಿದ್ದರು. ಸ್ಪಷ್ಟ ಚಿಂತನೆ, ಗಂಭೀರ ವಿಷಯಗಳ ಮಂಡನೆ, ಸಮಕಾಲೀನ ಸಂಗತಿಗಳು, ಪ್ರಖರ ರಾಷ್ಟ್ರೀಯ ಮನೋಭಾವಗಳು ಆಡ್ವಾಣಿಯವರ ವಿಶೇಷಗಳಾಗಿದ್ದವು. ಒಂದು ಬಾರಿ ತಮ್ಮ ರಥಯಾತ್ರೆಯನ್ನು ಅವಿಭಜಿತ ಜಿಲ್ಲೆಯ ಗಡಿಯಿಂದ ಆರಂಭಿಸಿದ್ದು ಅವರ ಕರ್ನಾಟಕ ಕರಾವಳಿಯ ಅಭಿಮಾನದ ದ್ಯೋತಕವಾಗಿದೆ. ಕರಾವಳಿಯ ತಿನಿಸುಗಳ ಬಗ್ಗೆಯೂ ಅವರು ಇಷ್ಟಪಡುತ್ತಿದ್ದರು.

ಅವರ ಚುನಾವಣಾ ಪ್ರಚಾರ ಭಾಷಣಗಳು ಹಿಂದಿ-ಇಂಗ್ಲಿಷ್‌ನಲ್ಲಿರುತ್ತಿದ್ದವು. ಸ್ಥಳೀಯ ಅಭ್ಯರ್ಥಿ ಅಥವಾ ನಾಯಕರು ಕನ್ನಡಕ್ಕೆ ತರ್ಜುಮೆಗೊಳಿಸುತ್ತಿದ್ದರು. ತುರ್ತು ಪರಿಸ್ಥಿತಿಯ ಬಳಿಕದ ಸಂದರ್ಭಗಳಲ್ಲಿ ಅವರು ತುರ್ತು ಪರಿಸ್ಥಿತಿಯ ಅತೀರೇಕಗಳ ಬಗ್ಗೆ ಜನತೆಗೆ ಮಾಹಿತಿ ಒದಗಿಸುವ ಕಾರ್ಯ ನಡೆಸುತ್ತಿದ್ದರು. ಆಡ್ವಾಣಿ ಪತ್ರಿಕಾಗೋಷ್ಠಿಗಳೂ ಮಾಹಿತಿ ಪೂರ್ಣವಾಗಿರುತ್ತಿದ್ದವು. ಮಂಗಳೂರಿಗೆ ಬಂದ ಪ್ರತೀ ಸಂದರ್ಭ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅವರ ಜತೆಗಿನ ಮಾತುಕತೆ ಪತ್ರಕರ್ತರ ಪಾಲಿಗೆ ಆತ್ಮೀಯವಾಗಿರುತ್ತಿತ್ತು. ಗಾಂಭೀರ್ಯದ ಜತೆಗೆ ಕೆಲವು ಹಾಸ್ಯ ಪ್ರಸಂಗಗಳ ಉಲ್ಲೇಖ ಅಲ್ಲಿರುತ್ತಿತ್ತು.

ಜನಸಂಘದ ಗೆಲುವು: 1951ರಿಂದ 1977ರ ವರೆಗೆ ಅಸ್ತಿತ್ವದಲ್ಲಿದ್ದ ಭಾರತೀಯ ಜನಸಂಘವು ದೀಪದ ಚಿಹ್ನೆ ಹೊಂದಿತ್ತು. ದಿಲ್ಲಿ ಸಹಿತ ಉತ್ತರ ಭಾರತದ ಕೆಲವೆಡೆ ಪ್ರಾಬಲ್ಯವಿತ್ತು. ಉಡುಪಿ ನಗರಸಭೆಯ ಚುನಾವಣೆಗಳಲ್ಲಿ ಜನಸಂಘ ಅಧಿಕಾರಕ್ಕೆ ಬಂದಿತ್ತು. 1967ರ (ಮೈಸೂರು ರಾಜ್ಯ) ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಜನಸಂಘದ ಬೋಳ ರಘುರಾಮ ಶೆಟ್ಟಿ ಗೆಲುವು ಸಾಧಿಸಿದ್ದರು! 

Advertisement

„ ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next