Advertisement
ಎಚ್.ಎಸ್.ಬಿ.ಸಿ ಬ್ಯಾಂಕ್ 1987ರಲ್ಲಿ ಮೊದಲ ಬಾರಿಗೆ ಎಟಿಎಂ ಸೌಲಭ್ಯವನ್ನು ಭಾರತಕ್ಕೆ ಪರಿಚಯಿಸಿತು. ಇಂದು ದೇಶಾದ್ಯಂತ 2,31,000 ಎಟಿಎಂಗಳಿದ್ದು, ಪ್ರತಿ 1,00,000 ವಯಸ್ಕರಿಗೆ ಸರಾಸರಿ 21 ಎಟಿಎಂಗಳು ದೇಶದಲ್ಲಿ ಇವೆ. ಎಟಿಎಂಗಳ ಬಳಕೆ ಹೆಚ್ಚಾದಂತೆ, ಅವುಗಳ ದುರುಪಯೋಗವೂ ಹೆಚ್ಚುತ್ತಿದೆ. ಈ ವರ್ಷ ಬ್ಯಾಂಕಿಂಗ್ ಉದ್ಯಮಕ್ಕೆ 75,000 ಕೋಟಿ ವಂಚಿಸಲಾಗಿದ್ದು, ಇದರಲ್ಲಿ ಎಟಿಎಂ ಸಂಬಂಧಿ ವ್ಯವಹಾರಗಳೂ ಸಾಕಷ್ಟು ಇವೆ. ಎಟಿಎಂ ದರೋಡೆ, ಲೂಟಿ ಮತ್ತು ಎಟಿಎಂಗೆ ಹಣ ಪೂರೈಸುವವರ ವಂಚನೆಯಿಂದ ಜರ್ಝರಿತವಾದ ಬ್ಯಾಂಕಿಂಗ್ ಉದ್ಯಮ, ಎಟಿಎಂ ಕಾರ್ಡ್‌ಗಳ ದುರುಪಯೋಗದಿಂದಲೂ ಸಾಕಷ್ಟು ನಷ್ಟ ಅನುಭವಿಸಿದೆ. ಗ್ರಾಹಕರ ರಕ್ಷಣೆಯ ನಿಟ್ಟಿನಲ್ಲಿ ಬ್ಯಾಂಕುಗಳು ಈ ವ್ಯವಸ್ಥೆಯನ್ನು ಬಲಪಡಿಸುತ್ತ, ಹೊಸ ಹೊಸ ಮಾರ್ಗಗಳನ್ನು ಜಾರಿಗೆ ತರುತ್ತಿವೆ.
ಈ ರೀತಿಯ ವ್ಯವಸ್ಥೆಗಳನ್ನು ರೂಪಿಸುವುದು ಭಾರೀ ವೆಚ್ಚದಾಯಕವಾಗಿರುವುದರಿಂದ, ಮುಂದಿನ ದಿನಗಳಲ್ಲಿ ಇದರ ಸ್ವಲ್ಪ ಭಾಗವನ್ನು ಬ್ಯಾಂಕುಗಳು ಗ್ರಾಹಕರ ತಲೆಗೆ ಕಟ್ಟಿದರೆ ಆಶ್ಚರ್ಯವಿಲ್ಲ. ಎಟಿಎಂ ವ್ಯವಸ್ಥೆಯಲ್ಲಿ ಗ್ರಾಹಕರ ವಿಶ್ವಾಸ ಕಡಿಮೆಯಾದರೆ, ಇದರ ಪರಿಣಾಮ ನೇರವಾಗಿ ಬ್ಯಾಂಕ್‌ನ ಕ್ಯಾಶ್ ಕೌಂಟರ್‌ನ ಮೇಲೆ ಆಗುತ್ತದೆ. ಗ್ರಾಹಕರು ಬ್ಯಾಕ್ ಟು ಪೆವಿಲಿಯನ್ ಆಗಿ ಕ್ಯಾಶ್ ಕೌಂಟರಿನಲ್ಲಿ ಕ್ಯೂ ಕಾಣಬಹುದು. ಎಟಿಎಂಗಳಲ್ಲಿ ವಂಚನೆ ತಡೆಯಲು, ಆ ಮೂಲಕ ಎಟಿಎಂ ವ್ಯವಸ್ಥೆ ಮೇಲಿನ ವಿಶ್ವಾಸಾರ್ಹತೆ ಹೆಚ್ಚಿಸುವ ಉದ್ದೇಶದಿಂದಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟಿಪಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಏನಿದು ಓಟಿಪಿ ವ್ಯವಸ್ಥೆ?
ಎಟಿಎಂ ಮೂಲಕ ಹಣ ಡ್ರಾ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನವರಿ 1, 2020ರಿಂದ , ಎಟಿಎಂ ಮೂಲಕ, ರಾತ್ರಿ 8ರಿಂದ ಮುಂಜಾನೆ 8 ಗಂಟೆವರೆಗೆ 10,000 ಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ಓಟಿಪಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಅವಧಿಯಲ್ಲಿ ಹಣ ಹಿಂಪಡೆಯುವವರು ತಮ್ಮ ಡೆಬಿಟ್ ಕಾರ್ಡ್ ಜೊತೆಗೆ , ಸಂಬಂಧಪಟ್ಟ ಬ್ಯಾಂಕ್ ಖಾತೆಗೆ ನೋಂದಣಿಯಾದ ಮೊಬೈಲನ್ನೂ ಒಯ್ಯಬೇಕು.
Related Articles
Advertisement
ರಾತ್ರಿ 8ರಿಂದ ಬೆಳಿಗ್ಗೆ 8ಈ ವ್ಯವಸ್ಥೆ ರಾತ್ರಿ 8ರಿಂದ ಮುಂಜಾನೆ 8ರವರೆಗೆ ಮಾತ್ರ ಬಳಕೆಯಲ್ಲಿರುತ್ತದೆ. ದಿನದ ಉಳಿದ ಸಮಯದಲ್ಲಿ ಹಳೇ ವ್ಯವಸ್ಥೆಯೇ ಜಾರಿಯಲ್ಲಿರುತ್ತದೆ. ಹಾಗೆಯೇ 10,000 ರೂ.ಗಿಂತ ಕಡಿಮೆ ಹಣ ಡ್ರಾ ಮಾಡುವುದಾದರೆ ಹೊಸ ವ್ಯವಸ್ಥೆ ಅನ್ವಯವಾಗುವುದಿಲ್ಲ. ಸದ್ಯ, ಇದು ಕೇವಲ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದಲ್ಲಿ ಮಾತ್ರ ಇದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್‌ಗಳಿಗೆ ಮತ್ತು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಎಟಿಎಂಗಳಿಗೆ ಮಾತ್ರ ಅನ್ವಯಿಸುತ್ತದೆ. ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕಿನಲ್ಲೂ ಈ ವ್ಯವಸ್ಥೆ ಇದ್ದು, 2019ರ ಅಗಸ್ಟ್‌ನಿಂದಲೇ ಜಾರಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಇದೊಂದು ಮಹತ್ವ ಪೂರ್ಣ, ಭಾರೀ ಪರಿಣಾಮಕಾರಿ ಮತ್ತು ದೂರಗಾಮಿ ಸುರಕ್ಷತಾ ವಿಧಾನವಾಗಿದ್ದು, ಉಳಿದ ಬ್ಯಾಂಕುಗಳು ಇದನ್ನು ಅತಿ ಶೀಘ್ರವಾಗಿ ಅಳವಡಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. – ರಮಾನಂದ ಶರ್ಮಾ